ಬೆಂಗಳೂರು ಜನರಿಗೆ ಕೊನೆಗೂ ಸಿಕ್ತು ಸ್ಟೀಲ್ ಬ್ರಿಡ್ಜ್ ಮೇಲೆ ಓಡಾಡುವ ಭಾಗ್ಯ; ಆಗಸ್ಟ್ 15ಕ್ಕೆ ಉದ್ಘಾಟನೆ
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸೇತುವೆ ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ.
ಬೆಂಗಳೂರು: ಹಲವು ಅಡೆತಡೆಗಳ ಬಳಿಕ ರಾಜ್ಯ ರಾಜಧಾನಿ ಬೆಂಗಳೂರು (Bengaluru) ಜನರಿಗೆ ಕೊನೆಗೂ ಸ್ಟೀಲ್ ಬ್ರಿಡ್ಜ್ (Steel Bridge) ಮೇಲೆ ಓಡಾಡುವ ಭಾಗ್ಯ ದೊರಕಿದೆ. ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ಗೆ ಹೈಕೋರ್ಟ್ ಅಸ್ತು ಅಂದಿದ್ದು, ರಾಜ್ಯದ ಚೊಚ್ಚಲ ಸ್ಟೀಲ್ ಸೇತುವೆ ಮೇಲೆ ಸಂಚರಿಸಿಬಹುದು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸೇತುವೆ ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ಒಂದು ತಿಂಗಳ ಒಳಗೆ ಬಿಬಿಎಂಪಿ ಮೇಲ್ಸೇತುವೆಯ ಕಾಮಗಾರಿ ಕೆಲಸ ಮುಕ್ತಾಯಗೊಳಿಸುತ್ತದೆ.
ಇದು ರಾಜ್ಯದ ಮೊಟ್ಟ ಮೊದಲ ಸ್ಟೀಲ್ ಬ್ರಿಡ್ಜ್. ಈ ಬ್ರಿಡ್ಜ್ನ ಕಾಮಗಾರಿ ಶಿವಾನಂದ ಸರ್ಕಲ್ ಬಳಿ 2017ರ ಜೂನ್‌ನಲ್ಲಿ ಆರಂಭವಾಗಿತ್ತು. ಆದರೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ಕೇಳಿ ಬಂದ ಹಿನ್ನೆಲೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಮರಗಳ ತೆರವು, ಭೂಸ್ವಾಧೀನದಿಂದಾಗಿ ಸ್ಥಳೀಯರ ಕೆಂಗಣ್ಣಿಗೆ ಬ್ರಿಡ್ಜ್ ಗುರಿಯಾಗಿತ್ತು. ಸುಮಾರು ನಾಲ್ಕು ವರ್ಷಗಳ ಕಾಲ ಕೋರ್ಟ್ನಲ್ಲಿ ಪ್ರಕರಣ ನಡೆದಿತ್ತು. ಇದೀಗ IISC ವರದಿ ಪಡೆದುಕೊಂಡು ಸ್ಟೀಲ್ ಬ್ರಿಡ್ಜ್ ತೆರೆಯಲು ನ್ಯಾಯಾಲಯ ಅನುಮತಿ ನೀಡಿದೆ.
ಇದನ್ನೂ ಓದಿ: ಆರ್ಎಸ್ಎಸ್ ಆಳ ಮತ್ತು ಅಗಲ: ಹಕ್ಕುಸ್ವಾಮ್ಯವಿಲ್ಲದ ಕೃತಿ ರಚಿಸಿದ ದೇವನೂರು ಮಹಾದೇವ್
ಆರಂಭದಲ್ಲಿ ಬಿಬಿಎಂಪಿ 9 ತಿಂಗಳ ಅವಧಿಯಲ್ಲಿ ಸುಮಾರು 19 ಕೋಟಿ ರೂ. ಬಜೆಟ್ ಹಾಕಿತ್ತು. ಈಗ ಕಾರಣಾಂತರಗಳಿಂದ 40 ಕೋಟಿ ರೂ. ವೆಚ್ಚದಲ್ಲಿ 450 ಮೀಟರ್ ಉದ್ದದ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ. ಈ ಬ್ರಿಡ್ಜ್ನಿಂದ ಮೆಜೆಸ್ಟಿಕ್, ಚಾಲುಕ್ಯ ಸರ್ಕಲ್, ವಿಧಾನಸೌಧ, ಮಲ್ಲೇಶ್ವರ ಸೇರಿದಂತೆ ಹಲವು ಏರಿಯಾಗಳಿಗೆ ಟ್ರಾಫಿಕ್ ಇಲ್ಲದೆ ಸಂಚಾರ ಮಾಡಬಹುದು.
ರೇಸ್ ಕೋರ್ಸ್ನಿಂದ ಸಿಗ್ನಲ್ ಇಲ್ಲದೆ ಶೇಷಾದ್ರಿಪುರಕ್ಕೆ ತೆರಳಲು ಬ್ರಿಡ್ಜ್ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾದರೆ ಲೂಪಿಂಗ್ ವ್ಯವಸ್ಥೆ ಮಾಡುವಂತೆ ನಿರ್ಮಾಣ ಮಾಡಲಾಗುತ್ತಿದೆ. ಎರಡು ಕಡೆಯ ಇಳಿಜಾರಿನ ಉದ್ದದಲ್ಲಿ ಬದಲಾವಣೆ ಮಾಡಿ ಲೋಕಾರ್ಪಣೆ ಮಾಡಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
Published On - 11:04 am, Sat, 9 July 22