ಆದೇಶ ಪಾಲಿಸದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ, ಬಿಬಿಎಂಪಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್
ರಸ್ತೆ ಗುಂಡಿ ಮುಚ್ಚಲು ಕಾರ್ಯಾದೇಶ ನೀಡದ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಕೊನೆಯ ಅವಕಾಶವನ್ನ ನೀಡಿದೆ. ಅಲ್ಲದೆ ನಮ್ಮ ತಾಳ್ಮೆಯನ್ನು ಪರೀಕ್ಷಿಸದಂತೆ ಬಿಬಿಎಂಪಿಗೆ ಎಚ್ಚರಿಕೆಯನ್ನೂ ನೀಡಿದೆ.
ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ಕಾರ್ಯಾದೇಶ ನೀಡದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿರುದ್ಧ ಗರಂ ಆಗಿರುವ ಹೈಕೋರ್ಟ್(High Court), ನಮ್ಮ ತಾಳ್ಮೆಯನ್ನು ಪರೀಕ್ಷಿಸದಂತೆ ಎಚ್ಚರಿಕೆ ನೀಡಿದೆ. ಪಾಲಿಕೆಗೆ ಕೊನೆಯ ಅವಕಾಶವನ್ನು ನೀಡಲಾಗುತ್ತಿದ್ದು, ಕಡೆಗಣಿಸಿದ್ದೇ ಆದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಸೇನೆಯ ತಂತ್ರಜ್ಞರಿಗೆ ವಹಿಸಲಾಗುವುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ರಸ್ತೆ ಗುಂಡಿ ಮುಚ್ಚಲು ಕಾರ್ಯಾದೇಶ ನೀಡದ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ರಿತುರಾಜ್ ಅವಸ್ತಿ ಮತ್ತು ನ್ಯಾ.ಸಚಿನ್ ಶಂಕರ್ ಮಗದುಮ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಬಿಬಿಎಂಪಿ ಅಧಿಕಾರಿಗಳ ಚಳಿ ಬಿಡಿಸಿದೆ. ರಸ್ತೆ ಗುಂಡಿ ಮುಚ್ಚಲು ಕಾರ್ಯಾದೇಶ ನೀಡದಿದ್ದರೆ ಕಾಮಗಾರಿಯನ್ನು ಸೇನೆಯ ತಂತ್ರಜ್ಞರಿಗೆ ವಹಿಸಲಾಗುವುದು. ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಅಮಾನತಿಗೆ ಆದೇಶಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ಬ್ರ್ಯಾಂಡೆಡ್ ಬಟ್ಟೆ ಗೋದಾಮಿನ ಮೇಲೆ ಸಿಸಿಬಿ ದಾಳಿ; 4 ಲಕ್ಷ ರೂ. ಮೌಲ್ಯದ ಬಟ್ಟೆಗಳು ಸೀಜ್
ಬಿಬಿಎಂಪಿ ಮುಖ್ಯ ಇಂಜಿನಿಯರ್ ಮತ್ತು ಅಧಿಕಾರಿಗಳು ಅಸಮರ್ಥರಿದ್ದಾರೆ ಎಂದ ಪೀಠ, ಜೂನ್ 30ರಂದು ಮುಖ್ಯ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್ ಅವರು ಕೋರ್ಟ್ಗೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿದೆ. ಇನ್ನು ಪಾಲಿಕೆಗೆ ಕೊನೆಯ ಅವಕಾಶ ನೀಡಿದ ಪೀಠ, ಆದೇಶ ಪಾಲಿಸದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದೆ.
ಯಾವುದೇ ಕಾರಣಕ್ಕೂ ಅಧಿಕಾರಿಗಳನ್ನು ಪಾಲಿಕೆ ಕಚೇರಿಯಲ್ಲಿ ಆರಾಮವಾಗಿ ಕೂರಲು ಬಿಡುವುದಿಲ್ಲ ಎಂದು ಹೇಳಿದ ವಿಭಾಗೀಯ ಪೀಠವು, ರಸ್ತೆ ಗುಂಡಿಗಳನ್ನು ಮುಚ್ಚಲು ಕಾರ್ಯಾದೇಶ ನೀಡಿದ ಪ್ರತಿಯನ್ನು ಹಾಗೂ ಸರ್ವೆ ವರದಿಯನ್ನು ಜೂ.30ರಂದು ಕೋರ್ಟ್ಗೆ ಸಲ್ಲಿಸುವಂತೆ ತಾಕೀತು ಮಾಡಿದೆ.
ಇದನ್ನೂ ಓದಿ: ಗುಂಡಿ ಬಿದ್ದ ಪ್ರದೇಶದಲ್ಲಿ ಯಾವುದೇ ನೀರು ಸೋರಿಕೆ ಆಗಿಲ್ಲ, ಬಿಬಿಎಂಪಿ ನಮಗೆ ಯಾವುದೇ ಪತ್ರ ಬರೆದಿಲ್ಲ: ಬೆಂಗಳೂರು ಜಲಮಂಡಳಿ
ಬಿಬಿಎಂಪಿ ಮತ್ತು BWSSB ನಡುವೆ ಫೈಟ್
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಭೇಟಿ ವೇಳೆ ಕಳಪೆ ರಸ್ತೆ ಕಾಮಗಾರಿ ನಡೆಸಿದ ವಿಚಾರದಲ್ಲಿ ಬಿಬಿಎಂಪಿ ಮತ್ತು BWSSB ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ. ರಸ್ತೆ ಗುಂಡಿ ವಿಚಾರದಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಮೇಲೆ ಗೂಬೆ ಕೂರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತರ ಆರೋಪಕ್ಕೆ ಬಿಡಬ್ಲ್ಯೂಎಸ್ಎಸ್ಬಿ ತಿರುಗೇಟು ನೀಡಿದೆ.
ರಸ್ತೆಗಳಲ್ಲಿ ಗುಂಡಿ ಬೀಳಲು ಬಿಡಬ್ಲ್ಯೂಎಸ್ಎಸ್ಬಿ ಪೈಪ್ ಸೋರಿಕೆ ಕಾರಣ ಎಂದು ಹೇಳುತ್ತಾರೆ. ಗುಂಡಿ ಬಿದ್ದ ಪ್ರದೇಶದಲ್ಲಿ ಯಾವುದೇ ನೀರು ಸೋರಿಕೆ ಆಗಿಲ್ಲ. ಸ್ಥಳದಲ್ಲಿ ಹಾದು ಹೋದ ಕೊಳವೆ ಮಾರ್ಗಗಳಿಂದ ನೀರು ಸೋರಿಕೆ ಆಗಿಲ್ಲ. ಮಳೆಬಂದಾಗ ಸ್ಥಳದಲ್ಲಿ ನೀರು ಬರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತರಿಗೆ ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ಜಯರಾಮ್ ಅವರು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ನಗರ ಪೊಲೀಸ್ ಆಯುಕ್ತರಿಂದ ಇಂದು ಮಹತ್ವದ ಸಭೆ