ಹಿಜಾಬ್ ಪ್ರಕರಣ- ಹೈಕೋರ್ಟ್​ನಿಂದ​ ಇಂದು ತೀರ್ಪು; ಬೆಂಗಳೂರಿನಲ್ಲಿ 1 ವಾರ ನಿಷೇಧಾಜ್ಞೆ ಜಾರಿ, ಬಿಗಿ ಬಂದೋಬಸ್ತ್

ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನಾಳೆ ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರ ಬೀಳಲಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರವರ ಪೂರ್ಣ ಪೀಠ ತೀರ್ಪು ನೀಡಲಿದೆ.

ಹಿಜಾಬ್ ಪ್ರಕರಣ- ಹೈಕೋರ್ಟ್​ನಿಂದ​ ಇಂದು ತೀರ್ಪು; ಬೆಂಗಳೂರಿನಲ್ಲಿ 1 ವಾರ ನಿಷೇಧಾಜ್ಞೆ ಜಾರಿ, ಬಿಗಿ ಬಂದೋಬಸ್ತ್
ಹಿಜಾಬ್ ಪ್ರಕರಣದ ತೀರ್ಪು ಹೈಕೋರ್ಟ್​ನಿಂದ​ ನಾಳೆ ಪ್ರಕಟ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 15, 2022 | 6:33 AM

ಬೆಂಗಳೂರು: ರಾಜ್ಯದಲ್ಲಿ ಗೊಂದಲ ಸೃಷ್ಟಿಸಿದ್ದ ಹಿಜಾಬ್ ವಿವಾದ (Hijab Controversy) ಅಂತಿಮ ಘಟ್ಟ ತಲುಪಿದ್ದು ಇಂದು (ಮಾರ್ಚ್ 15) ಹೈಕೋರ್ಟ್ ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಲಿದೆ. ಬೆಳಿಗ್ಗೆ 10.30ಕ್ಕೆ ಹೈಕೋರ್ಟ್ ತೀರ್ಪು ನೀಡಲಿದೆ. ಸಮವಸ್ತ್ರದ ಜತೆ ಹಿಜಾಬ್​ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರ ಬೀಳಲಿದೆ. ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರವರ ಪೂರ್ಣ ಪೀಠ ತೀರ್ಪು ನೀಡಲಿದೆ.

ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಹೈಕೋರ್ಟ್​ನಿಂದ ಹಿಜಾಬ್ ಪ್ರಕರಣದ ತೀರ್ಪು ಹಿನ್ನೆಲೆ ನಿನ್ನೆ ರಾತ್ರಿ 8.30ಕ್ಕೆ ಆಯಾ ಜಿಲ್ಲೆಗಳಲ್ಲಿ ಡಿಸಿ, ಎಸ್​ಪಿಗಳ ಸಭೆ ನಡೆಸಲಾಯಿತು. ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಳ್ಳಬೇಕಿರುವ ಭದ್ರತೆ ಬಗ್ಗೆ ಚರ್ಚೆ ನಡೆಸಲಾಯಿತು. ಹಿಜಾಬ್ ಪ್ರಕರಣದ ತೀರ್ಪು ಹೈಕೋರ್ಟ್​ನಿಂದ ಹೊರಬೀಳುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್​ ಮಾಡಲು ಚಿಂತಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳ ಮುಂದೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಕೈಗೊಳ್ಳವ ಬಗ್ಗೆ, ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ. ಬನವಾಸಿ, ಹೊನ್ನಾವರ, ಭಟ್ಕಳ ತಾಲೂಕಿನ ಮೇಲೆ ಹೆಚ್ಚು ನಿಗಾ ಇಡಲು ಸೂಚಿಸಲಾಗಿದೆ. ಅಹಿತಕರ ಘಟನೆಗಳು ನಡೆಸುವ ವ್ಯಕ್ತಿಗಳ ಮೇಲೆ, ಸಂಘಟನೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಲಿದೆ.

ಇಎ ನಡೆಸುತ್ತಿರುವ ಅಸಿಸ್ಟೆಂಟ್ ಪ್ರೊಫೆಸರ್​ ಪರೀಕ್ಷೆ ನಡೆಯಲಿದೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರಿಂದ ಆದೇಶ ಹೊರಡಿಸಿದ್ದಾರೆ. ಆದ್ರೆ ಕೆಇಎ ನಡೆಸುತ್ತಿರುವ ಅಸಿಸ್ಟೆಂಟ್ ಪ್ರೊಫೆಸರ್​ ಪರೀಕ್ಷೆ ನಡೆಯಲಿದೆ. ಶಿವಮೊಗ್ಗದಲ್ಲಿ ನಾಳೆ ನಡೆಯಬೇಕಿದ್ದ PU ಪೂರ್ವ ಸಿದ್ಧತಾ ಪರೀಕ್ಷೆ ಮುಂದೂಡಲಾಗಿದೆ. ಶಿವಮೊಗ್ಗದ ಹೆಚ್​ಎಸ್ಆರ್​​ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ PU ಕಾಲೇಜು ಸೇರಿದಂತೆ 3 ಕಾಲೇಜುಗಳ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿರುವ ಪರೀಕ್ಷೆ ಮುಂದೂಡಲಾಗಿದೆ.

ರಾಯಚೂರಿನಲ್ಲೂ ಹೈ ಅಲರ್ಟ್ ಹೈಕೋರ್ಟ್ ನಿಂದ ಹಿಜಾಬ್ ಕೇಸ್ ತೀರ್ಪು ಹಿನ್ನೆಲೆ ಸರ್ಕಾರ, ಜಿಲ್ಲಾಡಳಿತದ ಮಟ್ಟದಲ್ಲಿ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್​ನಲ್ಲಿ ರಾಯಚೂರು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಭಾಗಿಯಾಗಿದ್ದರು. ರಾಯಚೂರು ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗುವುದು. ಹಿಜಾಬ್-ಕೇಸರಿ ಶಾಲು ವಿವಾದದ ವೇಳೆ ನಿಯೋಜಿಸಲಾಗಿದ್ದ ರೀತಿಯಲ್ಲೇ ಬಿಗಿ ಭದ್ರತೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ತಿಳಿಸಿದ್ದಾರೆ. ರಾಯಚೂರು ತಾಲ್ಲೂಕು, ಲಿಂಗಸುಗೂರು ತಾಲ್ಲೂಕು ಹಾಗೂ ಸಿಂಧನೂರು ತಾಲ್ಲೂಕುಗಳು ಅತೀ ಸೂಕ್ಷ್ಮ ಪ್ರದೇಶ. ಇನ್ನುಳಿದ ಮಸ್ಕಿ,ಸಿರವಾರ,ಮಾನ್ವಿ ತಾಲ್ಲೂಕುಗಳು ಸೂಕ್ಷ್ಮ ಪ್ರದೇಶ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳ ಬೆಳವಣಿಗೆ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಸದ್ಯ ಈ ಬಗ್ಗೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದು ವಿಸಿ ಬಳಿಕ ಅಧಿಕಾರಿಗಳು ಸೂಚಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ಒಂದು ವಾರ ನಿಷೇಧಾಜ್ಞೆ ಇನ್ನು ಬೆಂಗಳೂರಿನ ಎಲ್ಲಾ ಡಿಸಿಪಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಮಲ್​ ಪಂತ್​ ಸಂವಾದ ನಡೆಸಿದ್ದು ಸಭೆ ಬಳಿಕ ಎಲ್ಲಾ ಶಾಲಾ ಕಾಲೇಜುಗಳ ಬಳಿ ಭದ್ರತೆ ಹೆಚ್ಚಳಕ್ಕೆ ಸೂಚಿಸಿದ್ದಾರೆ. ನಾಳೆ ತೀರ್ಪು ಹಿನ್ನೆಲೆ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಶಾಲಾ ಕಾಲೇಜುಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಹಾಗೂ ಹೆಚ್ಚಿನ ಬಂದೋಬಸ್ತ್ ಮಾಡಿಕೊಳ್ಳುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ. ಬೆಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ಒಂದು ವಾರ ನಿಷೇಧಾಜ್ಞೆ ಜಾರಿಗೊಳಿಸಿ ಕಮಿಷನರ್​ ಆದೇಶ ನೀಡಿದ್ದಾರೆ.

ಇನ್ನು ಟಿವಿ9ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿದ್ದು ಒಂದು ವಾರ ಕಾಲ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಬೆಂಗಳೂರಲ್ಲಿ ಭದ್ರತೆಗೆ 10,000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗುವುದು. ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆ, ರ್ಯಾಲಿಗೆ ಅವಕಾಶವಿಲ್ಲ. ಹೆಚ್ಚುವರಿಯಾಗಿ ಕೆಎಸ್​ಆರ್​ಪಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗುತ್ತೆ. ಹೈಕೋರ್ಟ್​ ಆದೇಶ ಎಲ್ಲರೂ ಗೌರವಿಸಬೇಕು ಎಂದರು.

ಮೈಸೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಬೆಂಗಳೂರು ಗ್ರಾಮಾಂತರ, ಗದಗ, ಕಲಬುರಗಿ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯನಗರ, ಬೆಳಗಾವಿ, ಧಾರವಾಡ, ರಾಮನಗರ, ವಿಜಯಪುರ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಧಾರವಾಡ, ಉತ್ತರ ಕನ್ನಡ, ರಾಯಚೂರು, ಶಿವಮೊಗ್ಗ, ಹಾಸನ, ತುಮಕೂರು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಬಳಿಕ ಕರ್ನಾಟಕದಾದ್ಯಂತ ಹಬ್ಬಿ ಇದೀಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡಿದೆ. ಹಿಜಾಬ್ ವಿವಾದ ಹಿನ್ನೆಲೆ ಹೈಕೋರ್ಟ್​ನಲ್ಲಿ 11 ದಿನಗಳ ಕಾಲ ಚರ್ಚೆ ನಡೆಸಿ ತೀರ್ಪು ಕಾಯ್ದಿರಿಸಲಾಗಿತ್ತು. ಸದ್ಯ ನಾಳೆ ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರ ಬೀಳಲಿದೆ. ತರಗತಿಗಳಲ್ಲಿ ಹಿಜಾಬ್‌ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಅಂಶವೇ ಎಂಬ ಬಹುಚರ್ಚಿತ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ವಿಚಾರ ಈಗ ಸಾಂವಿಧಾನಿಕ ಪ್ರಶ್ನೆಯಾಗಿ ಪರಿಣಮಿಸಿದೆ. ಹಿಜಾಬ್ ನಿರ್ಬಂಧ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಫೆಬ್ರವರಿ 26ರಂದು ಮುಕ್ತಾಯಗೊಂಡಿದ್ದು ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನಾಳೆ ಇದರ ತೀರ್ಪು ಹೊರ ಬೀಳಲಿದೆ. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕೇ ?, ಸಮವಸ್ತ್ರದ ಬಗ್ಗೆ ಸರ್ಕಾರ ನೀಡಿರುವ ಆದೇಶ ಕಾನೂನುಬದ್ದವಾಗಿದೆಯೇ ? ಕಾಲೇಜು ಅಭಿವೃದ್ದಿ ಸಮಿತಿಗೆ ಸಮವಸ್ತ್ರ ನಿಗದಿಪಡಿಸುವ ಅಧಿಕಾರವಿದೆಯೇ ಎಂಬ ಪ್ರಶ್ನೆಗಳಿಗೆ ನಾಳೆ ಉತ್ತರ ದೊರೆಯಲಿದೆ.

ಇದನ್ನೂ ಓದಿ: ದೆಹಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ; 8 ಜನರ ರಕ್ಷಣೆ, ಇನ್ನೂ ಹಲವರು ಸಿಲುಕಿರುವ ಶಂಕೆ

ಸಮವಸ್ತ್ರದ ಮೇಲೆ ಹಿಜಾಬ್​ ನಿಷೇಧ; ಸರ್ಕಾರಗಳ ಸುತ್ತೋಲೆ ಹರಿದು ಹಾಕಿ ಕೇರಳದಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಂ ಯುವತಿಯರು

Published On - 6:53 pm, Mon, 14 March 22