
ಬೆಂಗಳೂರು, ಆಗಸ್ಟ್ 30: ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲಿ ಎಚ್‌ಐವಿ (HIV) ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಈ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹೃದಯ ಸಂಬಂಧಿ ರೋಗಗಳು (Cardiovascular Diseases) ಬರುವ ಅಪಾಯ ಸಾಮಾನ್ಯರಿಗಿಂತ ಹೆಚ್ಚಾಗಿರುತ್ತದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (SJICR) ತಜ್ಞ ವೈದ್ಯರು ಎಚ್ಚರಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ವೈದ್ಯಕೀಯ ತಜ್ಞರ ಪ್ರಕಾರ, ಎಚ್‌ಐವಿ ವೈರಸ್ ದೇಹದಲ್ಲಿ ನಿರಂತರವಾಗಿ ದೀರ್ಘಕಾಲದ ಉರಿಯೂತವನ್ನು (Chronic Inflammation) ಉಂಟುಮಾಡುತ್ತದೆ. ಇದು ರಕ್ತನಾಳಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತನಾಳಗಳು ಗಟ್ಟಿಯಾಗುವ ಸ್ಥಿತಿಗೆ ಕಾರಣವಾಗುತ್ತದೆ. ಪರಿಣಾಮವಾಗಿ, ಆಂಟಿರೆಟ್ರೋವೈರಲ್ ಥೆರಪಿ ಪಡೆಯುತ್ತಿರುವ ಮತ್ತು ವೈರಸ್ ನಿಯಂತ್ರಣದಲ್ಲಿರುವ ರೋಗಿಗಳಲ್ಲಿಯೂ ಸಹ ಹೃದಯಾಘಾತ ಮತ್ತು ಪಾರ್ಶ್ವವಾಯು (Stroke) ಬರುವ ಅಪಾಯ ಹೆಚ್ಚಿರುತ್ತದೆ.
ಜಯದೇವ ಹೃದ್ರೋಗ ಸಂಸ್ಥೆಯ ಹೃದ್ರೋಗ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮುಖ್ಯಸ್ಥ ಡಾ. ಎಚ್.ಎಸ್. ನಟರಾಜ್ ಶೆಟ್ಟಿ ಅವರ ಪ್ರಕಾರ, ಸುಧಾರಿತ ಎಆರ್‌ಟಿ ಚಿಕಿತ್ಸೆಗಳಿಂದಾಗಿ ಎಚ್‌ಐವಿ ಪೀಡಿತರ ಜೀವಿತಾವಧಿ ಹೆಚ್ಚಾಗಿದೆ. ಆದರೆ, ವಯಸ್ಸಾಗುತ್ತಿದ್ದಂತೆ ಅವರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ (BP), ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳೊಂದಿಗೆ ಹೃದಯ ಸಂಬಂಧಿ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತಿವೆ.
ಎಚ್‌ಐವಿ ಪೀಡಿತರು ಕೇವಲ ವೈರಸ್ ನಿಯಂತ್ರಣಕ್ಕಷ್ಟೇ ಗಮನ ಕೊಡದೆ, ತಮ್ಮ ಹೃದಯದ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ಇಸಿಜಿ (ECG), ಲಿಪಿಡ್ ಪ್ರೊಫೈಲ್ ಮತ್ತು ರಕ್ತದ ಸಕ್ಕರೆ ಮಟ್ಟದ ತಪಾಸಣೆ ಮಾಡಿಸಿಕೊಳ್ಳಬೇಕು. ಧೂಮಪಾನ ಹಾಗೂ ಮದ್ಯಪಾನ ಸಂಪೂರ್ಣವಾಗಿ ತ್ಯಜಿಸಬೇಕು. ಪೌಷ್ಟಿಕ ಆಹಾರ ಸೇವನೆ ಮತ್ತು ನಿತ್ಯ ದೇಹದಂಡನೆ ಅಗತ್ಯ. ಹೆಚ್‌ಐವಿ ಚಿಕಿತ್ಸೆಯ ಜೊತೆಗೆ ಹೃದ್ರೋಗ ತಜ್ಞರ ಸಲಹೆಯನ್ನೂ ಪಡೆದು, ಆರಂಭಿಕ ಹಂತದಲ್ಲೇ ತೊಂದರೆಯನ್ನು ಗುರುತಿಸಿ ಚಿಕಿತ್ಸೆ ಪಡೆಯುವುದು ಪ್ರಾಣಾಪಾಯವನ್ನು ತಪ್ಪಿಸಬಹುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 am, Sun, 30 August 26