
ಬೆಂಗಳೂರು, ನವೆಂಬರ್ 20: ಈ ಬಾರಿ ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಎಚ್‌ಎಂಟಿ ವತಿಯಿಂದ ‘ಗಂಡಭೇರುಂಡ ಕನ್ನಡಿಗ’ ನೂತನ ವಾಚ್ ಸರಣಿಯನ್ನು ಲೋಕಾರ್ಪಣೆ ಮಾಡಿದ್ದರು. ಈ ಬೆನ್ನಲ್ಲೇ ಒಂದು ಕಾಲದಲ್ಲಿ ದೇಶದ ಹೆಮ್ಮೆಯ ವಾಚ್ ಬ್ರ್ಯಾಂಡ್ ಆಗಿದ್ದ ಹೆಚ್ಎಮ್ಟಿ ವಾಚ್‌ಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ. ದಶಕಗಳ ಹಿಂದಿನ ಜನಪ್ರಿಯತೆ ಇದೀಗ ಹೊಸ ತಲೆಮಾರಿನ ಗ್ರಾಹಕರನ್ನೂ ಸೆಳೆಯುತ್ತಿದೆ. ಆದರೆ ಇದೇ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು ಮಾರುಕಟ್ಟೆಯಲ್ಲಿ ನಕಲಿ ಹೆಚ್ಎಮ್ಟಿ ವಾಚ್‌ಗಳ ಮಾರಾಟ ಜಾಲ ಸಕ್ರಿಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೀಗ ನಕಲಿ ವಾಚ್ ಮಾರಾಟದ ವಿರುದ್ಧ ಹೆಚ್ಎಮ್ಟಿ ಕಾನೂನು ಹೋರಾಟಕ್ಕೆ ಮುಂದಾಗಿದೆ.
ಹೆಚ್ಎಮ್ಟಿ ಕಂಪನಿ ತನ್ನ ಉತ್ಪನ್ನಗಳ ಮಾರಾಟ ಮತ್ತು ಮಾರುಕಟ್ಟೆ ಬೆಳವಣಿಗೆಯನ್ನು ಗಮನಿಸುತ್ತಿದ್ದ ವೇಳೆ, ಕಂಪನಿಯ ಬಳಿ ಸ್ಟಾಕ್ ಇಲ್ಲದ ವಾಚ್‌ಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವುದು ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಹೆಚ್ಎಮ್ಟಿ ಸಿಎಂಡಿ ರಮೇಶ್ ಅವರು ಸ್ವತಃ ಪರಿಶೀಲನೆಗೆ ಮುಂದಾಗಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮ ಹೆಸರಿನಲ್ಲೇ ವಾಚ್ ಆರ್ಡರ್ ಮಾಡಿದ್ದಾರೆ. ಆದರೆ ಮನೆಗೆ ಬಂದ ಪಾರ್ಸೆಲ್ ತೆರೆದು ನೋಡಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಕೇವಲ 290 ರೂಪಾಯಿಗೆ ಬಂದಿದ್ದ ವಾಚ್ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಅದು ಅಸಲಿ ಹೆಚ್ಎಮ್ಟಿ ವಾಚ್ ಅಲ್ಲ ಎಂಬುದು ಪತ್ತೆಯಾಗಿದೆ.
ಇದರಿಂದ ಆನ್‌ಲೈನ್‌ನಲ್ಲಿ ನಕಲಿ ವಾಚ್‌ಗಳ ಮಾರಾಟ ನಡೆಯುತ್ತಿರುವ ಬಗ್ಗೆ ಕಂಪನಿ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ನಕಲಿ ಹೆಚ್ಎಮ್ಟಿ ವಾಚ್‌ಗಳ ಮಾರಾಟ ತಡೆಯುವಂತೆ ಪ್ರತಿಷ್ಠಿತ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌ಗೆ ಹೆಚ್ಎಮ್ಟಿ ಲೀಗಲ್ ನೋಟಿಸ್ ಜಾರಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಎಮ್ಟಿ ಹೆಸರಿನಲ್ಲಿ ನಕಲಿ ವಾಚ್‌ಗಳ ಮಾರಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೆಚ್ಎಮ್ಟಿ ರಿಫರ್ಬಿಷ್ಡ್ ವಾಚ್‌ಗಳೆಂದು ಪ್ರಚಾರ ಮಾಡಿ ನಕಲಿ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಅಸಲಿ ಹೆಚ್ಎಮ್ಟಿ ವಾಚ್ ಎಂದು ನಂಬಿ ಹಲವರು ಇವುಗಳನ್ನು ಖರೀದಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಾಚ್‌ಗಳನ್ನು ಪ್ರಚಾರ ಮಾಡುತ್ತಿದ್ದ ಹಲವರಿಗೂ ಕಂಪನಿ ನೋಟಿಸ್ ನೀಡಿದೆ.
ಇನ್ನು ಬೆಂಗಳೂರಿನ ಜೆ.ಪಿ. ನಗರದ ಕ್ಲಾಸಿಕ್ ಟೈಮ್ ಮಳಿಗೆಯಲ್ಲೂ ನಕಲಿ ಹೆಚ್ಎಮ್ಟಿ ವಾಚ್‌ಗಳನ್ನು ಅಸಲಿ ಎಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಳಿಗೆಯ ಮಾಲೀಕರಿಗೂ ನೋಟಿಸ್ ನೀಡಲು ಕಂಪನಿ ಮುಂದಾಗಿದೆ.
ಹೆಚ್ಎಮ್ಟಿ ವಾಚ್‌ಗಳಿಗಿರುವ ಬೇಡಿಕೆಯನ್ನು ದುರುಪಯೋಗಪಡಿಸಿಕೊಂಡು ಚೀನಾ ಮಾರುಕಟ್ಟೆಯಿಂದ ನಕಲಿ ವಾಚ್‌ಗಳನ್ನು ತರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಹೆಚ್ಎಮ್ಟಿ ಕಂಪನಿ ಮತ್ತೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅದರ ಬ್ರ್ಯಾಂಡ್ ಮೌಲ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವನ್ನು ಕಂಪನಿ ವ್ಯಕ್ತಪಡಿಸಿದೆ. ನಕಲಿ ವಾಚ್‌ಗಳ ಮಾರಾಟದಿಂದ ಗ್ರಾಹಕರು ಮೋಸ ಹೋಗುವುದಲ್ಲದೆ, ಅಸಲಿ ಹೆಚ್ಎಮ್ಟಿ ವಾಚ್‌ಗಳ ಮೇಲಿನ ನಂಬಿಕೆಯೂ ಕಡಿಮೆಯಾಗುವ ಸಾಧ್ಯತೆಯಿದೆ.
ನಕಲಿ ವಾಚ್‌ಗಳ ಮಾರಾಟದ ವಿರುದ್ಧ ಹೆಚ್ಎಮ್ಟಿ ಕಂಪನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕಾನೂನು ಹೋರಾಟಕ್ಕೂ ಮುಂದಾಗಿದೆ. ನಕಲಿ ವಾಚ್ ಮಾರಾಟ ಮಾಡುವವರಿಗೆ ಸಿಎಂಡಿ ರಮೇಶ್ ಎಚ್ಚರಿಕೆ ನೀಡಿದ್ದಾರೆ. ಗ್ರಾಹಕರು ಅಧಿಕೃತ ಮಾರಾಟ ಮಳಿಗೆಗಳಲ್ಲೇ ವಾಚ್ ಖರೀದಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಎಂ.ಜಿ. ರಸ್ತೆ, ಬಳ್ಳಾರಿ ರಸ್ತೆ ಹಾಗೂ ಜಾಲಹಳ್ಳಿಯಲ್ಲಿರುವ ಹೆಚ್ಎಮ್ಟಿ ಮ್ಯೂಸಿಯಂನಲ್ಲಿ ಮಾತ್ರ ಅಧಿಕೃತವಾಗಿ ಹೆಚ್ಎಮ್ಟಿ ವಾಚ್‌ಗಳು ಲಭ್ಯವಿವೆ ಎಂದು ಕಂಪನಿ ಮಾಹಿತಿ ನೀಡಿದೆ. ಈ ಅಧಿಕೃತ ಮಳಿಗೆಗಳನ್ನು ಹೊರತುಪಡಿಸಿ ಬೇರೆಡೆ ಖರೀದಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Fri, 20 November 26