AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ರಾಜ್ಯೋತ್ಸವ 2026: ಎಚ್‌ಎಂಟಿ ‘ಗಂಡಭೇರುಂಡ ಕನ್ನಡಿಗ’ ವಾಚ್‌ ಸರಣಿ ಬಿಡುಗಡೆ ಮಾಡಿದ ಹೆಚ್‌.ಡಿ ಕುಮಾರಸ್ವಾಮಿ

ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಎಚ್‌ಎಂಟಿ ವತಿಯಿಂದ 'ಗಂಡಭೇರುಂಡ ಕನ್ನಡಿಗ' ನೂತನ ವಾಚ್ ಸರಣಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಕನ್ನಡಿಗರ ಅಸ್ಮಿತೆ ಸಾರುವ ಈ ವಾಚ್‌ಗಳ ವಿಶೇಷತೆ, ಬೆಲೆ ಹಾಗೂ ಎಚ್‌ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಸರ್ಕಾರದ ಮಹತ್ವದ ಪ್ರಯತ್ನಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನ್ನಡ ರಾಜ್ಯೋತ್ಸವ 2026: ಎಚ್‌ಎಂಟಿ 'ಗಂಡಭೇರುಂಡ ಕನ್ನಡಿಗ' ವಾಚ್‌ ಸರಣಿ ಬಿಡುಗಡೆ ಮಾಡಿದ ಹೆಚ್‌.ಡಿ ಕುಮಾರಸ್ವಾಮಿ
ಎಚ್‌ಎಂಟಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಗಂಡಭೇರುಂಡ ಕನ್ನಡಿಗ ವಾಚ್‌ ಸರಣಿ ಬಿಡುಗಡೆImage Credit source: HD Kumaraswamy X account
ಭಾವನಾ ಹೆಗಡೆ
|

Updated on: Nov 02, 2026 | 7:30 AM

Share

ಮುಖ್ಯಾಂಶಗಳು

  • ಎಚ್‌ಎಂಟಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಗಂಡಭೇರುಂಡ ಕನ್ನಡಿಗ ವಾಚ್‌ ಸರಣಿ ಬಿಡುಗಡೆ.
  • 30-40 ವರ್ಷಗಳ ಹಿಂದಿನ ಕಾರ್ಖಾನೆಯ ವೈಭವ ಮರುಕಳಿಸಲು ವಿಶೇಷ ಪ್ರಯತ್ನ.
  • ವಾಚ್‌ಗಳ ಆರಂಭಿಕ ಬೆಲೆ 3,500 ರೂ. ನಿಂದ 3,600 ರೂ.

ಬೆಂಗಳೂರು, ನವೆಂಬರ್ 02: ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಹೆಮ್ಮೆಯ ಸಾರ್ವಜನಿಕ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯು ಕನ್ನಡಿಗರಿಗಾಗಿ ವಿಶೇಷವಾದ ‘ಎಚ್‌ಎಂಟಿ ಕನ್ನಡಿಗ’ ಹಾಗೂ ನಾಡಿನ ಸಾಂಸ್ಕೃತಿಕ ಅಸ್ಮಿತೆಯಾದ ‘ಗಂಡಭೇರುಂಡ’ ಲಾಂಛನವಿರುವ ನೂತನ ಕೈಗಡಿಯಾರಗಳ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಮೈದಾನದಲ್ಲಿ ನಡೆದ ವರ್ಣರಂಜಿತ ಹಾಗೂ ಅದ್ಧೂರಿ ಸಮಾರಂಭದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ನೂತನ ವಾಚ್‌ಗಳನ್ನು ಲೋಕಾರ್ಪಣೆ ಮಾಡಿದರು.

30-40 ವರ್ಷಗಳ ಹಿಂದಿನ ವೈಭವ ಮರುಕಳಿಸುವ ಗುರಿ ಎಂದ ಹೆಚ್‌ಡಿಕೆ

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇಂದು ಹೆಚ್‌ಎಂಟಿಯ ಒಟ್ಟು ನಾಲ್ಕು ಹೊಸ ಅವತರಣಿಕೆಯ ವಾಚ್‌ಗಳನ್ನು ನಾಡಿಗೆ ಸಮರ್ಪಿಸುತ್ತಿರುವುದಾಗಿ ತಿಳಿಸಿದರು. “ಒಂದು ಕಾಲದಲ್ಲಿ ‘ಭಾರತದ ಸಮಯಪಾಲಕ’ ಎಂದು ಪ್ರಖ್ಯಾತಿಯಾಗಿದ್ದ ಎಚ್‌ಎಂಟಿ ಕೈಗಡಿಯಾರಗಳು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿದ್ದವು. ಈ ಐತಿಹಾಸಿಕ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮತ್ತು 30-40 ವರ್ಷಗಳ ಹಿಂದಿನ ರೀತಿಯಲ್ಲಿ ಕಾರ್ಖಾನೆ ಮತ್ತೆ ರಾರಾಜಿಸುವಂತೆ ಮಾಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಭಾವೋದ್ವೇಗದಿಂದ ತಿಳಿಸಿದರು.

ವಾಚ್‌ಗಳ ವಿಶೇಷತೆಗಳು ಮತ್ತು ಬೆಲೆ ವಿವರ

ಎಚ್‌ಎಂಟಿ ಬಿಡುಗಡೆ ಮಾಡಿರುವ ಈ ಹೊಸ ಕನ್ನಡಿಗ ಸರಣಿಯ ವಾಚ್‌ಗಳು ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿವೆ. ಈ ಹೊಸ ವಾಚ್‌ಗಳಲ್ಲಿ ಕನ್ನಡ ಬಾವುಟ, ಕನ್ನಡಿಗ ಪದ ಹಾಗೂ ನಾಡಿನ ಅಸ್ಮಿತೆಯಾದ ‘ಗಂಡಭೇರುಂಡ’ ಲಾಂಛನವನ್ನು ಅಳವಡಿಸಲಾಗಿದೆ. ಅಲ್ಲದೆ, ವಾಚ್‌ಗಳ ಡಯಲ್‌ಗಳು ರೇಡಿಯಮ್ ಹೊಳಪನ್ನು ಹೊಂದಿದ್ದು, ಕತ್ತಲಲ್ಲೂ ಸಮಯ ಸ್ಪಷ್ಟವಾಗಿ ಕಾಣುವಂತೆ ರೂಪಿಸಲಾಗಿದೆ. ಈ ಕೈಗಡಿಯಾರಗಳ ಆರಂಭಿಕ ಬೆಲೆಯು ಅಂದಾಜು 3,500 ರೂ.ನಿಂದ 3,600 ರೂ.ವರೆಗೆ ಇದೆ. ಇವು ಮೆಟಲ್ ಚೈನ್ ಹಾಗೂ ಇಟಲಿಯ ಅಪ್ಪಟ ಲೆದರ್ ಬೆಲ್ಟ್‌ಗಳ ರೂಪದಲ್ಲಿ ಲಭ್ಯವಿವೆ. ಕನ್ನಡಪರ ಹೋರಾಟಗಾರರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದ ಸಂಗೀತ ಸಂಜೆ ಜನಮನ ಸೆಳೆಯಿತು.

ಎಚ್‌ಎಂಟಿ ಕೈಗಡಿಯಾರ ಕಾರ್ಖಾನೆಗೆ ಮರುಜೀವ

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಅವರು ಕನ್ನಡಿಗರ ಹೆಮ್ಮೆಯ ‘ಎಚ್‌ಎಂಟಿ’ (HMT) ಕೈಗಡಿಯಾರ ಕಾರ್ಖಾನೆಗೆ ಮರುಜೀವ ನೀಡಲು ಮತ್ತು ಅದರ ಹಿಂದಿನ ವೈಭವವನ್ನು ಮರಳಿ ತರಲು ವಿಶೇಷ ಮುತುವರ್ಜಿ ವಹಿಸಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದರ ಭಾಗವಾಗಿ ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ‘ಎಚ್‌ಎಂಟಿ ಕನ್ನಡಿಗ’ ನೂತನ ವಾಚ್ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿ ನಾಡಿಗೆ ಸಮರ್ಪಿಸಿದ್ದಾರೆ.

ಇದೇ ಉತ್ಸಾಹ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವ ಸದುದ್ದೇಶದಿಂದ ಅವರು ಗೌರಿ ಗಣೇಶ ಹಬ್ಬದ ದಿನದಂದು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಸ್ವತಃ ಎಚ್‌ಎಂಟಿ ವಾಚ್‌ ಅನ್ನು ಉಡುಗೊರೆಯಾಗಿ ನೀಡಿ ಕೈಗೆ ಕಟ್ಟಿದ್ದರು. ತಂದೆಯ ಈ ಪ್ರೀತಿಯ ಉಡುಗೊರೆಯನ್ನು ಸ್ವೀಕರಿಸಿದ್ದ ನಿಖಿಲ್ ಕುಮಾರಸ್ವಾಮಿ, ದೇಶದ ಹೆಮ್ಮೆಯ ಸಂಕೇತವಾಗಿರುವ ಎಚ್‌ಎಂಟಿ ವಾಚ್‌ಗಳನ್ನು ಪ್ರತಿಯೊಬ್ಬ ಯುವಜನರೂ ಕಡ್ಡಾಯವಾಗಿ ಬಳಸಿ ಪ್ರೋತ್ಸಾಹಿಸಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ನಾಡಿನ ಯುವಕರಿಗೆ ವಿಶೇಷ ಸಂದೇಶ ಹಾಗೂ ಮನವಿ ಕೂಡ ಮಾಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More