ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಹೆಸರು ದುರ್ಬಳಕೆ: BBMP ವಿಶೇಷ ಆಯುಕ್ತರಿಗೆ ಅಸಂಬದ್ಧ ಸಂದೇಶ, ದೂರು ದಾಖಲು
ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ರಾಕೇಶ್ ಸಿಂಗ್ ತಮ್ಮ ಹೆಸರು, ಫೋಟೋ ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರು ದಾಖಲಿಸಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಹೆಸರು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ರಾಕೇಶ್ ಸಿಂಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ದೂರು ದಾಖಲಿಸಿದ್ದಾರೆ.
ರಾಕೇಶ್ ಸಿಂಗ್ ಹೆಸರಿನಲ್ಲಿ BBMP ವಿಶೇಷ ಆಯುಕ್ತ ಹರೀಶ್ಗೆ ಅಸಂಬದ್ಧ ಸಂದೇಶ ರವಾನೆಯಾಗಿದೆ. ಈ ಕುರಿತು ರಾಕೇಶ್ ಸಿಂಗ್ಗೆ ಹರೀಶ್ ಮಾಹಿತಿ ನೀಡಿದ್ದರು. ಹೀಗಾಗಿ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ರಾಕೇಶ್ ಸಿಂಗ್ ತಮ್ಮ ಹೆಸರು, ಫೋಟೋ ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರು ದಾಖಲಿಸಿದ್ದಾರೆ.
ನಕಲಿ ವೆಬ್‌ಸೈಟ್ ತೆರೆದು ಸುಲಿಗೆ
ಇನ್ನು ಮತ್ತೊಂದು ಕಡೆ ಪ್ರತಿಷ್ಟಿತ ಪ್ಯಾಕರ್ಸ್ & ಮೂವರ್ಸ್ ಕಂಪನಿಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮದೇವ್ ಯಾದವ್, ಮುಕೇಶ್ ಕುಮಾರ್ ಯಾದವ್ ಹಾಗೂ ವಿಜಯ್ ಕುಮಾರ್ ಯಾದವ್ ಬಂಧಿತರು. ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ಸಾಗರಕ್ಕೆ ದ್ವಿಚಕ್ರ ವಾಹನ ಸಾಗಿಸಲು ಪ್ಯಾಕರ್ಸ್ & ಮೂವರ್ಸ್ ಮೊರೆ ಹೋಗಿದ್ರು. ನಕಲಿ ವೆಬ್‌ಸೈಟ್ ನಂಬಿ ಆರೋಪಿಗಳನ್ನ ಸಂಪರ್ಕಿಸಿದ್ದರು. 1 ಸಾವಿರ ಮುಂಗಡ ಹಣ ಪಡೆದು ದ್ವಿಚಕ್ರ ವಾಹನ ಪಿಕ್ ಮಾಡಿದ್ದ ಆರೋಪಿಗಳು, ಮಾರನೇ ದಿನ ಡಿಲೆವರಿ ನೀಡಬೇಕೆಂದರೆ 8 ಸಾವಿರ ಕೊಡುವಂತೆ ಬೇಡಿಕೆಯಿಟ್ಟಿದ್ದರು. ಬಳಿಕ ಬೈಕ್ ಮಾಲೀಕ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸಿಇಎನ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ 1 ದ್ವಿಚಕ್ರ ವಾಹನ, 4 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:39 am, Sun, 18 September 22