Independence Day 2026: ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ; ಮನವಿಯಂತೆ ಜಮೀರ್ ಹೆಸರನ್ನ ಕೈಬಿಟ್ಟ ಸಿಎಂ ಡಿ.ಕೆ.ಶಿವಕುಮಾರ್
80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಜವಾಬ್ದಾರಿಯಿಂದ ತಮಗೆ ವಿನಾಯಿತಿ ನೀಡುವಂತೆ ಕೋರಿ ಸಚಿವ ಜಮೀರ್ ಅಹ್ಮದ್ ಖಾನ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಚುನಾವಣೆ ಹಾಗೂ ಪಕ್ಷ ಸಂಘಟನೆಯ ಕಾರಣ ನೀಡಿರುವ ಅವರ ಮನವಿಯನ್ನು ಪುರಸ್ಕರಿಸಲಾಗಿದ್ದು, ಜಮೀರ್ ಬದಲಿಗೆ ಉಡುಪಿಗೆ ಸಚಿವ ರಿಜ್ವಾನ್ ಅರ್ಷದ್ ಹಾಗೂ ವಿಜಯನಗರಕ್ಕೆ ಸಚಿವ ಬಸವಂತಪ್ಪ ಅವರನ್ನು ನಿಯೋಜಿಸಿ ಹೊಸ ಆದೇಶ ಹೊರಡಿಸಲಾಗಿದೆ.

ಮುಖ್ಯಾಂಶಗಳು
- ಚುನಾವಣೆ, ಪಕ್ಷ ಸಂಘಟನೆ ಕಾರಣ ನೀಡಿ ಸಿಎಂಗೆ ಜಮೀರ್ ಪತ್ರ.
- ಉಡುಪಿಗೆ ಸಚಿವ ರಿಜ್ವಾನ್, ವಿಜಯನಗರಕ್ಕೆ ಬಸವಂತಪ್ಪ ಹೊಸದಾಗಿ ನಿಯೋಜನೆ.
- ವಿಜಯನಗರ ಬರ ಅಧ್ಯಯನ ವರದಿಯನ್ನು ಈಗಾಗಲೇ ಸಲ್ಲಿಸಿದ್ದೇನೆ ಎಂದ ಜಮೀರ್.
ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆಯ (Independence Day) ಹಿನ್ನೆಲೆ ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಲು ನಿಯೋಜನೆಗೊಂಡಿದ್ದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮಗೆ ಈ ಜವಾಬ್ದಾರಿಯಿಂದ ವಿನಾಯಿತಿ ನೀಡುವಂತೆ ಕೋರಿ ಮುಖ್ಯಮಂತ್ರಿಯವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಜಮೀರ್ ಅವರ ಮನವಿಯನ್ನು ಪುರಸ್ಕರಿಸಿರುವ ಮುಖ್ಯಮಂತ್ರಿಗಳು, ಅವರ ಬದಲಿಗೆ ಸಚಿವ ರಿಜ್ವಾನ್ ಅರ್ಷದ್ ಹಾಗೂ ಸಚಿವ ಬಸವಂತಪ್ಪ ಅವರಿಗೆ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಬರೆದ ಪತ್ರದಲ್ಲೇನಿದೆ?
“‘ದಿನಾಂಕ 11.08.2026 ರ ಆದೇಶದನ್ವಯ ನನ್ನನ್ನು ವಿಜಯನಗರ ಜಿಲ್ಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಹೊಣೆಗಾರಿಕೆಯನ್ನು ನೀಡಿರುವುದು ಸರಿಯಷ್ಟೇ. ಆದರೆ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಬಿಎಂಪಿ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ ಉಪಚುನಾವಣೆ ಹಾಗೂ ಪಕ್ಷ ಸಂಘಟನೆಯ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನಿಭಾಯಿಸಲು ಸಮಯದ ಅಭಾವ ಇರುತ್ತದೆ. ಆದುದರಿಂದ ನನಗೆ ರಾಜ್ಯದ ಯಾವುದೇ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನೀಡದಂತೆ ತಮ್ಮಲ್ಲಿ ಕೋರುತ್ತೇನೆ.
ಮುಂದುವರೆದಂತೆ ದಿನಾಂಕ: 15.08.2026 ರಂದು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಹೊಣೆಗಾರಿಕೆ ನೀಡಿದ್ದು, ನಾನು ಹಾಜರಾಗಲು ಸಾಧ್ಯವಾಗದ ಕಾರಣ ಅದರಿಂದ ವಿನಾಯಿತಿ ನೀಡಲು ತಮ್ಮಲ್ಲಿ ಕೋರಲಾಗಿದೆ. ಇನ್ನು ಸದರಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ನೀಡಲಾಗಿದ್ದು, ಈಗಾಗಲೇ ಈ ಸಂಬಂಧ ವರದಿಯನ್ನು ಸಲ್ಲಿಸಲಾಗಿರುತ್ತದೆ” ಎಂದು ಜಮೀರ್ ಅವರು ತಮ್ಮ ಪತ್ರದಲ್ಲಿ ಸವಿಸ್ತಾರವಾಗಿ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಮತ್ತು ಹೊಸ ಆದೇಶ
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಲಿಖಿತ ಮನವಿಗೆ ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಯವರು, ಅವರ ಕೋರಿಕೆಯಂತೆ ಧ್ವಜಾರೋಹಣ ನೆರವೇರಿಸುವ ಸಚಿವರ ಪಟ್ಟಿಯಿಂದ ಜಮೀರ್ ಹೆಸರನ್ನು ಕೈಬಿಟ್ಟಿದ್ದಾರೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆಯಂತಹ ಪ್ರಮುಖ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಪರ್ಯಾಯ ಆದೇಶ ಹೊರಡಿಸಿದ್ದಾರೆ.
ಹೊಸ ಆದೇಶದ ಪ್ರಕಾರ, ಈ ಹಿಂದೆ ಉಡುಪಿ ಜಿಲ್ಲೆಯ ಧ್ವಜಾರೋಹಣಕ್ಕೆ ನಿಯೋಜನೆಗೊಂಡಿದ್ದ ಸಚಿವ ಬಸವಂತಪ್ಪ ಅವರನ್ನು ವಿಜಯನಗರ ಜಿಲ್ಲೆಗೆ ಬದಲಾಯಿಸಲಾಗಿದೆ. ಇನ್ನು ಬಸವಂತಪ್ಪ ಅವರ ಬದಲಾವಣೆಯಿಂದ ತೆರವಾದ ಉಡುಪಿ ಜಿಲ್ಲೆಯ ಧ್ವಜಾರೋಹಣದ ಜವಾಬ್ದಾರಿಯನ್ನು ಸಚಿವ ರಿಜ್ವಾನ್ ಅರ್ಷದ್ ಅವರಿಗೆ ನೀಡಿ ಮುಖ್ಯಮಂತ್ರಿಯವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 am, Fri, 14 August 26




