Independence Day Celebration 2024 Highlights; ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ: ಸ್ವಾತಂತ್ರ್ಯ ಭಾಷಣದಲ್ಲಿ ಸಿದ್ದರಾಮಯ್ಯ ಘೋಷಣೆ
Independence Day Parade 2024 Updates: ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ-ಸಡಗರ ಗರಿಗೆದರಿದೆ. ಸ್ವಾತಂತ್ರ್ಯೋತ್ಸವದ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗ್ತಿದೆ. ಎಲ್ಲೆಲ್ಲೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇಡೀ ದೇಶವೇ ಸಡಗರದ ಅಲೆಯಲ್ಲಿ ಮಿಂದೇಳುತ್ತಿದೆ. ರಾಜ್ಯ ಹಾಗೂ ದೇಶದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಲೈವ್ ಅಪ್ಡೇಟ್ಸ್ ಇಲ್ಲಿ ತಿಳಿಯಿರಿ.
Independence Day 2024: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ. ದೆಹಲಿಯ ಕೆಂಪುಕೋಟೆ ಮೇಲೆ ಪಿಎಂ ನರೇಂದ್ರ ಮೋದಿ 11ನೇ ಬಾರಿ ಧ್ವಜಾರೋಹಣ ಮಾಡಲಿದ್ದಾರೆ. ಪ್ರಧಾನಿ ಮೋದಿ ಬೆಳಗ್ಗೆ 7:30 ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ 140 ಕೋಟಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಐತಿಹಾಸಿಕ ಕೆಂಪುಕೋಟೆ 11ನೇ ಬಾರಿ ಪ್ರಧಾನಿ ಮೋದಿ ಭಾಷಣ ಮಾಡ್ತಿದ್ದು ಇಡೀ ದೇಶದ ಜನರ ಚಿತ್ತ ನೆಟ್ಟಿದೆ. ಜವಾಹರ್ಲಾಲ್ ನೆಹರು & ಇಂದಿರಾಗಾಂಧಿ ಅವರ ಬಳಿಕ ಕೆಂಪುಕೋಟೆಯಲ್ಲಿ ಸತತ 11ನೇ ಬಾರಿ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿರುವ 3ನೇ ಪ್ರಧಾನಿ ಆಗಿದ್ದಾರೆ. ವಿಕಸಿತ್ ಭಾರತ್-2047ರ ಥೀಮ್ ಅಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಗ್ತಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನ ಕೂಡ ನಡೆಸಲಾಗುತ್ತಿದೆ.
ಇನ್ನು ಮತ್ತೊಂದೆಡೆ ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಎಲ್ಲಾ ರೀತಿಯ ಸಿದ್ದತೆ ಮಾಡಲಾಗಿದೆ. ಬೆಳಿಗ್ಗೆ 8.58 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ತ್ರಿವರ್ಣ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ತೆರೆದ ವಾಹನದಲ್ಲಿ ರಾಜ್ಯ ಪೊಲೀಸರ ವಿಭಾಗಗಳಿಂದ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ದೇಶದ ಸ್ವಾತಂತ್ರ್ಯ ಸಂಭ್ರಮಾಚರಣೆಯ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ಪಡೆಯಿರಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
LIVE NEWS & UPDATES
-
CM Siddaramaiah Speech: 11,512 ಹುದ್ದೆಗಳ ಭರ್ತಿಗೆ ಕ್ರಮ ವಹಿಸುವುದಾಗಿ ಸಿಎಂ ಹೇಳಿಕೆ
ಸರ್ಕಾರದ ವಿವಿಧ ಇಲಾಖೆಗಳ 11,512 ಹುದ್ದೆಗಳ ಭರ್ತಿಗೆ ಕ್ರಮ ವಹಿಸುವುದಾಗಿ ಸಿಎಂ ಹೇಳಿದರು. ಜಾತಿ-ಮತದ ಆಧಾರದಲ್ಲಿ ವಿಭಜನೆಯ ರಾಜಕಾರಣ ಮಾಡುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು. ಬಾಬಾಸಾಹೇಬ್ ಅಂಬೇಡ್ಕರ್ರು ಅಂದೇ ಮುನ್ನೆಚ್ಚರಿಕೆ ನೀಡಿದ್ದರು. ಸಾಂವಿಧಾನಿಕ ಸಂಸ್ಥೆಗಳು ಮತ್ತು ಆಶಯಗಳನ್ನ ಬುಡಮೇಲು ಮಾಡುವ ಮನಸ್ಥಿತಿ ವ್ಯಕ್ತಿಗಳನ್ನು ಅಧಿಕಾರದಿಂದ ಮುಲಾಜಿಲ್ಲದೆ ದೂರ ಇಡಬೇಕು. ದೇಶದ ಚಲನಶೀಲ, ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ಸಂವಿಧಾನವೇ ಶ್ರೀರಕ್ಷೆ.
ಜಾತಿ, ಮತ, ಧರ್ಮ, ಭಾಷೆಯ ಆಧಾರದಲ್ಲಿ ಭೇದ-ಭಾವಗಳನ್ನು ಮರೆತು ದೇಶದ ವೈವಿಧ್ಯತೆಯನ್ನು ಗೌರವಿಸುತ್ತ, ಅಖಂಡತೆಯನ್ನು ಪಾಲಿಸುತ್ತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಾಗಿದೆ. ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ದೊರಕಿಸುವ ಮೂಲಕ ರಾಜಕೀಯ ಸ್ವಾತಂತ್ರ್ಯ ಅಬಾಧಿತವಾಗುವಂತೆ ಶ್ರಮಿಸಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ದುಡಿಯೋಣ, ಸ್ವಸ್ಥ, ಸಮ-ಸಮಾಜದ ನಾಡು ಕಟ್ಟೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
-
CM Siddaramaiah Speech: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 463.11 ಕೋಟಿ -ಸಿಎಂ
ಬರಪೀಡಿತ ಜಿಲ್ಲೆಗಳ ಪ್ರತಿ ರೈತರಿಗೆ $2000ನಂತೆ 636.45 ಕೋಟಿ ಮಧ್ಯಂತರ ಪರಿಹಾರ ನೀಡಿದ್ದೇವೆ. ಪಶ್ಚಿಮ ಘಟ್ಟಗಳ ಜಿಲ್ಲೆಗಳ ಪರಿಸರ ಅಭಿವೃದ್ಧಿ ಸಮತೋಲನಕ್ಕೆ 100 ಕೋಟಿ ಮೊತ್ತದಲ್ಲಿ ಉಪಶಮನ ಕ್ರಮಗಳ ಜಾರಿ ಮಾಡಿದ್ದೇವೆ. ನಮ್ಮ ಸರ್ಕಾರ ಕೇವಲ ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ. ಮೈತ್ರಿ ಯೋಜನೆಯಡಿ ಪಿಂಚಣಿ ಮೊತ್ತ ಹೆಚ್ಚಿಸಲಾಗಿದೆ. ಹಾಲು ಉತ್ಪಾದಕರ ಖಾತೆಗೆ ಪ್ರೋತ್ಸಾಹ ಹಣ ನೀಡಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 463.11 ಕೋಟಿ ನೀಡಿದ್ದೇವೆ ಎಂದು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
-
CM Siddaramaiah Speech: ವಸತಿ ಯೋಜನೆಯಡಿ 2.38 ಲಕ್ಷ ಮನೆಗಳ ನಿರ್ಮಾಣ -ಸಿಎಂ
ಮೇಕೆದಾಟು ಯೋಜನೆ, ಕುಡಿಯುವ ನೀರಿನ ಯೋಜನೆ ಹಾಗೂ ಕಾಮಗಾರಿ ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಬೇರೆಡೆ ಕಚೇರಿ ಸ್ಥಾಪನೆ ಮಾಡಲಾಗುವುದು. ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಜೊತೆಗೆ ಮನೆ ಹಂಚಿಕೆ. ಮಾನವ-ವನ್ಯ ಜೀವಿಗಳ ಸಂಘರ್ಷ ತಡೆಗಟ್ಟಲು 120 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ. 7 ಆನೆ ಟಾಸ್ಕ್ ಫೋರ್ಸ್, 2 ಚಿರತೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ.
ವಸತಿ ಯೋಜನೆಯಡಿ 2.38 ಲಕ್ಷ ಮನೆಗಳನ್ನ ಪೂರ್ಣಗೊಳಿಸಲಾಗಿದೆ. ಅರ್ಧಕ್ಕೆ ನಿಂತಿದ್ದ ಮನೆಗಳ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದೆ. ಬರ ಪರಿಹಾರದ ವಿಚಾರದಲ್ಲಿ ಕೇಂದ್ರದ ತಾರತಮ್ಯ ಖಂಡಿಸಿದ ಸಿಎಂ, ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಪರಿಹಾರದ ಹಣ ತಡವಾಗಿ ನೀಡಿದೆ. ಆದರೆ ಅದಕ್ಕೂ ಮೊದಲು ರಾಜ್ಯ ಸರ್ಕಾರವೇ ಅಗತ್ಯ ಕ್ರಮ ವಹಿಸಿದೆ ಎಂದರು.
CM Siddaramaiah Speech: ಫೆರಿಫೆರಲ್ ರಿಂಗ್ ರೋಡ್ ಅನುಷ್ಠಾನಗೊಳಿಸಲು ಸಿಎಂ ದೃಢ ಸಂಕಲ್ಪ
ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಫೆರಿಫೆರಲ್ ರಿಂಗ್ ರೋಡ್ ಅನುಷ್ಠಾನಗೊಳಿಸಲು ಸಿಎಂ ದೃಢ ಸಂಕಲ್ಪ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದು 100 ವರ್ಷಗಳಾಗಿವೆ. ಅಂಬೇಡ್ಕರ್ ಬಹಿಷ್ಕೃತ ಹಿತಕಾರಣಿ ಸಭಾ ಸ್ಥಾಪನೆಗೂ 100 ವರ್ಷ. ಹೀಗಾಗಿ ಶತಮಾನೋತ್ಸವವನ್ನು ಆಚರಿಸುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 371ಜೆ ಜಾರಿಗೆ ದಶಮಾನೋತ್ಸವ ಸಂಭ್ರಮ. 5000 ಕೋಟಿ ಹಣ ನೀಡಿ ವಿವಿಧ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
CM Siddaramaiah Speech: ಪಂಚ ಯೋಜನೆ ಯಶಸ್ಸು ಬಿಚ್ಚಿಟ್ಟ ಸಿಎಂ
ಗೃಹಲಕ್ಷ್ಮೀ ಯೋಜನೆಯಡಿ 1.20 ಕೋಟಿ ಮಹಿಳೆಯರಿಗೆ ಅನುಕೂಲ ಆಗಿದೆ. ಈವರೆಗೆ 25,258 ಕೋಟಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡೋದಾಗಿ ಘೋಷಿಸಲಾಗಿತ್ತು. ಆದರೆ ಕೇಂದ್ರದ ಅಸಹಕಾರದಿಂದ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗಿದೆ. ಈವರೆಗೆ 4.08 ಕೋಟಿ ಫಲಾನುಭವಿಗಳಿಗೆ 7,763 ಕೋಟಿ ನೆರವು. ಉಚಿತವಾಗಿ 200 ಯೂನಿಟ್ವರೆಗೆ ನೀಡುವ ಗೃಹಜ್ಯೋತಿ ಯೋಜನೆಯಡಿ ರಾಜ್ಯದ 1.60 ಕೋಟಿ ಕುಟುಂಬಗಳು ಈ ಯೋಜನೆ ಪಡೆದುಕೊಳ್ಳುತ್ತಿವೆ. ಶಕ್ತಿ 8,844 ಕೋಟಿ ರೂ. ವೆಚ್ಚ ಮಾಡಲಾಗಿದೆ. ಯುವನಿಧಿ ಯೋಜನೆಯಡಿ 1.31 ಲಕ್ಷ ಪದವಿ/ಡಿಪ್ಲೊಮಾ ನಿರುದ್ಯೋಗಗಳಿಗೆ ನೆರವು ನೀಡಲಾಗುತ್ತಿದೆ. ಇದಕ್ಕಾಗಿ 91 ಕೋಟಿ ರೂ. ಗಳನ್ನ ಭರಿಸಲಾಗಿದೆ. ಈ ಯೋಜನೆಗಳು ಮುಂದುವರಿಯಲಿದೆ ಎಂದು ಎರಡೆರೆಡು ಬಾರಿ ಸಿಎಂ ಒತ್ತಿ ಒತ್ತಿ ಹೇಳಿದರು.
CM Siddaramaiah Speech: ಕೇಂದ್ರದ ವಿರುದ್ಧ ಸಿಎಂ ಆಕ್ರೋಶದ ಭಾಷಣ
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ, ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಈ ಸಂದರ್ಭದಲ್ಲಿ ಸಮಸ್ತ ನಾಡ ಬಂಧುಗಳ ಪರವಾಗಿ ಒತ್ತಾಯಿಸುತ್ತೇನೆ. ಸಂವಿಧಾನದ ಆಶಯಗಳನ್ನು ನಿರ್ಲಕ್ಷಿಸಿ ರಾಜ್ಯಗಳಿಗೆ ದೊರೆಯಬೇಕಾದ ಹಣಕಾಸಿನ ಪಾಲನ್ನು ನೀಡಲು ಮೀನಾಮೇಷ ಎಣಿಸಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿದ್ದಾರೆ ಮತದಾರರು. ಪ್ರಜಾಪ್ರಭುತ್ವ ಯಾರ ಕೈಗೊಂಬೆಯಾಗಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ. ಜನತೆಯ ತೀರ್ಪನ್ನು ಧಿಕ್ಕರಿಸಿ ನಡೆಸುವ ಹಿಂಬಾಗಲ ರಾಜಕಾರಣವನ್ನು ಇತಿಹಾಸದಲ್ಲಿ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಸಿಎಂ ಹೇಳಿದರು.
CM Siddaramaiah Speech: ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ವಿಚಾರ ಪ್ರಸ್ತಾಪ
ಕೇಂದ್ರ ರಾಜ್ಯ ಸಂಬಂಧದ ಸವಾಲುಗಳು ಎಂಬಡಿ ಕೇಂದ್ರ ಸರ್ಕಾರದ ತಾರತಮ್ಯ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶದ ಭಾಷಣ ಮಾಡಿದರು. ಜನಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ರಾಜ್ಯದ ಜವಬ್ದಾರಿಯಾದರೆ. ಇವುಗಳಿಗೆ ಪೂರಕ ಸಂಪನ್ಮೂಲ ಒದಿಗಿಸುವುದು ಕೇಂದ್ರದ ಹೊಣೆಗಾರಿಕೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಆಶಯದಿಂದ ದೂರ ಸರಿಯುತ್ತಿದೆ. ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. ಸಂವಿಧಾನದ ಆಶಯಗಳನ್ನು ನಿರ್ಲಕ್ಷಿಸಿ ರಾಜ್ಯಗಳಿಗೆ ದೊರೆಯಬೇಕಾದ ಹಣಕಾಸಿನ ಪಾಲನ್ನು ನೀಡಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರದಿಂದ ಪರಿಹಾರ ಮೊತ್ತ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ. ಇದು ಜನಹಿತಕ್ಕೆ ಒಳ್ಳೆಯದಲ್ಲ ಎಂದರು.
CM Siddaramaiah Speech: ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ -ಸಿಎಂ
ಗ್ಯಾರಂಟಿಯಿಂದ ಪ್ರತಿಯೊಬ್ಬ ಫಲಾನುಭವಿಗೆ ಅನುಕೂಲ ಆಗಿದೆ. ಸುಮಾರು 4 ರಿಂದ 5 ಸಾವಿರ ರೂಪಾಯಿ ಲಭಿಸುತ್ತಿದೆ. ಇದರಿಂದ ಅನೇಕ ಬಡಕುಟುಂಬಗಳಿಗೆ ಅನುಕೂಲವಾಗಿದೆ. ಈ ಯೋಜನೆಗಳು ರಾಜ್ಯದಲ್ಲಿ ಮುಂದುವರೆಯುತ್ತಿದೆ. ಇದರಿಂದ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ಉತ್ತರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣೆಗಯನ್ನ ಸಾಧಿಸಿ ಉತ್ತರ ನೀಡುತ್ತೇವೆ ಎಂದರು.
CM Siddaramaiah Speech: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಬಲಿದಾನಕ್ಕೆ ಬೆಲೆಕಟ್ಟಲಾಗದು -ಸಿಎಂ
ಮಾಣೆಕ್ ಪರೇಡ್ ಷಾ ಮೈದಾನದಲ್ಲಿ ಧ್ವಜಾರೋಹಣ ಬಳಿಕ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಮೆರೆಯಲಾಗದು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಬಲಿದಾನಕ್ಕೆ ಬೆಲೆಕಟ್ಟಲಾಗದು ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
Independence Day Celebration 2024 Live; ತೆರೆದ ಜೀಪಿನಲ್ಲಿ ಸಿಎಂ ಸಿದ್ದರಾಮಯ್ಯ ಪರಿವೀಕ್ಷಣೆ
ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ತೆರೆದ ಜೀಪಿನಲ್ಲಿ ಪರಿವೀಕ್ಷಣೆ ಮಾಡಿದರು. ಪೋಡಿಯಂ ಮೇಲಿದ್ದ ಬುಲೆಟ್ ಪ್ರೂಫ್ ತೆರವು ಮಾಡಲು ಸಿಎಂ ಸೂಚಿಸಿದ್ದು ಸಿಎಂ ಸೂಚನೆ ಮೇರೆಗೆ ಬುಲೆಟ್ ಪ್ರೂಫ್ ತೆರವು ಮಾಡಲಾಗಿದೆ.
Independence Day Celebration 2024 Live; ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹೇಗಿದೆ ಗೊತ್ತಾ ಭದ್ರತೆ?
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹೇಗಿದೆ ಗೊತ್ತಾ ಭದ್ರತೆ?
PM Modi Speech: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಹತ್ಯೆ ಖಂಡಿಸಿದ ಪ್ರಧಾನಿ ಮೋದಿ
ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮೀಸಲಿಟ್ಟಿದ್ದೇವೆ. ಸ್ತ್ರೀಯರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ದೇಶದ ಮಹಿಳೆಯರು ಹಲವು ಕ್ಷೇತ್ರಗಳನ್ನು ಮುನ್ನಡೆಸುತ್ತಿದ್ದಾರೆ ಎಂದರು. ಇದೆ ವೇಳೆ ಮೋದಿಯವರು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಹತ್ಯೆ ಖಂಡಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ನಡೆಸುವ ಅಪರಾಧಿಗಳಿಗೆ ಶಿಕ್ಷೆ ಆಗಲಿ. ಮಹಿಳೆ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ರಾಕ್ಷಸಿ ಕೃತ್ಯಗಳು. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ದೌರ್ಜ್ಯವೆಸಗುವ ಅಪರಾಧಿಗಳಿಗೆ ಭಯದ ವಾತಾವರಣ ನಿರ್ಮಿಸುತ್ತೇವೆ. ಮಹಿಳೆಯರು, ಬಾಲಕಿಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತೆ ಎಂದರು.
PM Modi Speech: ಮುಂದಿನ ದಿನಗಳಲ್ಲಿ 75,000 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಲಭ್ಯ -ಮೋದಿ
ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ನಳಂದ ವಿವಿಯ ಪರಂಪರೆಯನ್ನು ಪ್ರಬಲಗೊಳಿಸುತ್ತೇವೆ. ಪ್ರತಿ ಕ್ಷೇತ್ರದ ಸ್ಕಿಲ್ಗೆ ಹೊಸ ರೂಪ ನೀಡಿ ಅಭಿವೃದ್ಧಿ ಮಾಡ್ತೇವೆ. ಸಂಶೋಧನೆಗೆ ಕೇಂದ್ರ ಸರ್ಕಾರ ಹೊಸ ಒತ್ತು ನೀಡುತ್ತಿದೆ. ದೇಶದ ಮಕ್ಕಳು ಮೆಡಿಕಲ್ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗ್ತಾರೆ. ಅದನ್ನು ತಪ್ಪಿಸಲು ದೇಶದಲ್ಲಿ ಹಲವು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುತ್ತೆ. ಮುಂದಿನ ದಿನಗಳಲ್ಲಿ 75,000 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಲಭ್ಯವಾಗಲಿದೆ. ಮೂರನೇ ಬಾರಿಗೆ ದೇಶದ ಜನರು ನನಗೆ ಆಶೀರ್ವಾದ ಮಾಡಿದ್ದೀರಿ. ದೇಶದ ಜನರ ಸೇವೆಯ ನನ್ನ ಪ್ರಾಥಮಿಕ ಆದ್ಯತೆ ಎಂದರು.
Independence Day Celebration 2024 Live; ಹೇಗಿದೆ ನೋಡಿ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ಸಂಭ್ರಮ
78ನೇ ಧ್ವಜಾರೋಹಣ ನಡೆಯುವ ದೆಹಲಿ ಕೆಂಪುಕೋಟೆ ಹೇಗಿದೆ ನೋಡಿ
PM Modi Speech Live; ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ ಸಾಕಾರಗೊಂಡಿದೆ -ಮೋದಿ
ಆಯುಷ್ಮಾನ್ ಯೋಜನೆಯಿಂದ ಬಡವರಿಗೆ ಬಹಳ ಅನುಕೂಲವಾಗಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ ಸಾಕಾರಗೊಂಡಿದೆ. ಅನಾವಶ್ಯಕ ಕಾನೂನುಗಳನ್ನು ನಾವು ತೆಗೆದು ಹಾಕಿದ್ದೇವೆ. ಹೊಸ ಅಪರಾಧಗಳ ಮೂಲದಲ್ಲೇ ನಿಯಂತ್ರಿಸುವ ಕೆಲಸ ಆಗುತ್ತಿದೆ. ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡಿ ಗೊಂದಲ ನಿವಾರಣೆ ಮಾಡಿದ್ದೇವೆ. ಗ್ರಾ.ಪಂ ಮಟ್ಟದಲ್ಲಿ ಪ್ರತಿ 2 ವರ್ಷಗಳಿಗೆ ಪುನಶ್ಚೇತನಗೊಳಿಸುತ್ತಿದ್ದೇವೆ. ದೇಶದ ಪ್ರತಿ ವ್ಯಕ್ತಿಯ ಆದಾಯ ದ್ವಿಗುಣಗೊಳ್ಳುತ್ತಿದೆ. ನಿಮ್ಮ ಆಶೀರ್ವಾದದಿಂದ ದೇಶ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇವೆ ಎಂದರು.
PM Modi Speech Live; ವಿಶ್ವದಲ್ಲಿ ಭಾರತಕ್ಕೆ ಈಗ ಸುವರ್ಣ ಸಮಯಾವಕಾಶ ಇದೆ -ಮೋದಿ
ಕೇವಲ ಭರವಸೆ ನೀಡಿ ನಾವು ಸುಮ್ಮನಿರಲ್ಲ, ಅದನ್ನು ಈಡೇರಿಸುತ್ತೇವೆ. ಭಾರತವನ್ನು ಬಲಿಷ್ಠವಾಗಿ ನಿರ್ಮಿಸುವುದು ನಮ್ಮ ಕೆಲಸ. ನಮ್ಮ ಸರ್ಕಾರ ಕನಸು & ಸಂಕಲ್ಪದ ಜೊತೆಗೆ ಮುನ್ನಡೆಯುತ್ತಿದ್ದೇವೆ. ಭಾರತದಲ್ಲಿ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ವಿಶ್ವದಲ್ಲಿ ಭಾರತಕ್ಕೆ ಈಗ ಸುವರ್ಣ ಸಮಯಾವಕಾಶ ಇದೆ. ದೇಶದ 10 ಕೋಟಿ ಮಹಿಳೆಯರು ಸ್ವಾವಲಂಬನೆ ಸಾಧಿಸಿದ್ದಾರೆ. ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬನೆ ಸಾಧಿಸಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಸ್ಟಾರ್ಟ್ಅಪ್ ಆರಂಭಗೊಂಡಿದೆ. ಭಾರತ ಪ್ರತಿ ಕ್ಷೇತ್ರದಲ್ಲೂ ಆಧುನಿಕ ಉನ್ನತೀಕರಣದತ್ತ ಸಾಗುತ್ತಿದೆ. ಎಲ್ಲರ ಅಭಿವೃದ್ಧಿ ನಮ್ಮ ಕಾರ್ಯಶೈಲಿಯಲ್ಲಿ ಅಳವಡಿಸಿಕೊಂಡಿದ್ದೇವೆ ಎಂದರು.
PM Modi Speech Live; ದೇಶ ಮೊದಲು ಇದು ನಮ್ಮ ಸಂಕಲ್ಪ -ಮೋದಿ
ಬಾಹ್ಯಾಕಾಶ ಹಾಗೂ ಸೇನೆಯಲ್ಲೂ ಅಗಾಧ ಬದಲಾವಣೆ ತರಲಾಗಿದೆ. ಭಾರತೀಯ ಸೇನೆ ಸರ್ಜಿಕಲ್ ಹಾಗೂ ಏರ್ ಸ್ಟ್ರೈಕ್ ಮಾಡುವಷ್ಟು ಬೆಳೆದಿದೆ. ಭಾರತೀಯ ಸೇನೆ ಉಗ್ರರ ತಾಣಗಳಿಗೆ ನುಗ್ಗಿ ಹೊಡೆಯುತ್ತೆ. ದೇಶ ಮೊದಲು ಇದು ನಮ್ಮ ಸಂಕಲ್ಪ. ಭಾರತದ ಶಕ್ತಿ ಏನೆಂದು ಇಡೀ ಜಗತ್ತಿಗೆ ಗೊತ್ತಿದೆ. ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಬಲ ಬಂದಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು.
PM Modi Speech Live; ‘ವೋಕಲ್ ಫಾರ್ ಲೋಕಲ್’ ಆರ್ಥಿಕತೆಯ ಹೊಸ ಮಂತ್ರ -ಮೋದಿ
ಮಾಧ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವಂತೆ ಸಲಹೆ ನೀಡಿದ ಪಿಎಂ ಮೋದಿ, ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವಂತೆ ಆಗಲಿ. ಆತ್ಮನಿರ್ಭರ್ದಿಂದ ದೇಶ ಮತ್ತಷ್ಟು ಅಭಿವೃದ್ಧಿ ಆಗುತ್ತಿದೆ. ಆದಷ್ಟು ಬೇಗ ಭಾರತ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ‘ವೋಕಲ್ ಫಾರ್ ಲೋಕಲ್’ ಯೋಜನೆ ಮೂಲಕ ಅಭಿವೃದ್ಧಿಯಾಗಿದೆ. ಗುಡಿ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ಕೊಟ್ಟಿದ್ದೇವೆ. ‘ವೋಕಲ್ ಫಾರ್ ಲೋಕಲ್’ ಆರ್ಥಿಕತೆಯ ಹೊಸ ಮಂತ್ರ. ಯೋಜನೆಯಿಂದ ಬುಡಕಟ್ಟು ಸಮುದಾಯಕ್ಕೆ ಲಾಭ ಆಗಿದೆ ಎಂದು ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
PM Modi Speech Live; ಎಲ್ಲರೂ ಒಟ್ಟಾಗಿ ಒಂದೇ ದಿಕ್ಕಿನಲ್ಲಿ ಸಾಗಿದರೆ ವಿಕ್ಷಿತ್ ಭಾರತ್ ಆಗಬಹುದು
ಕೆಂಪು ಕೋಟೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಿಂದ ವಸಾಹತುಶಾಹಿ ಆಡಳಿತವನ್ನು ಕಿತ್ತೊಗೆದ 40 ಕೋಟಿ ಜನರ ರಕ್ತವನ್ನು ನಾವು ಒಯ್ಯುತ್ತೇವೆ ಎಂಬ ಹೆಮ್ಮೆ ನಮಗೆ ಇದೆ. ನಾವು ಇಂದು 140 ಕೋಟಿ ಜನರಿದ್ದೇವೆ, ನಾವೆಲ್ಲ ಸಂಕಲ್ಪ ಮಾಡಿ ಒಂದೇ ದಿಕ್ಕಿನಲ್ಲಿ ಸಾಗಿದರೆ ನಾವು 2047 ರ ವೇಳೆಗೆ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ‘ವಿಕ್ಷಿತ್ ಭಾರತ್’ ಆಗಬಹುದು ಎಂದರು.
PM Modi Speech Live; ಎಲ್ಲರೂ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ -ಮೋದಿ
ಮೋದಿ ತಮ್ಮ ಭಾಷಣದಲ್ಲಿ ದೇಶದ ವೈವಿಧ್ಯತೆಯ ಕುರಿತು ಚರ್ಚೆ ನಡೆಸಿದ್ದಾರೆ. ದೇಶದ ಸ್ವಾತಂತ್ರ್ಯದಲ್ಲಿ ದಲಿತರು, ಮಹಿಳೆಯರು, ಆದಿವಾಸಿಗಳು ಸೇರಿದಂತೆ ಪ್ರತಿಯೊಬ್ಬರ ಕೊಡುಗೆ ಇದೆ. 1857ಕ್ಕೂ ಮುನ್ನವೇ ದೇಶದ ಬುಡಕಟ್ಟು ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿತ್ತು ಎಂದರು.
PM Modi addresses the nation from Red Fort, he says, "Today is the day to pay tributes to the uncountable 'Azaadi ke deewane' who made sacrifices for the nation. This country is indebted to them."
(Photo source: PM Modi/YouTube) pic.twitter.com/CoKKawoPLp
— ANI (@ANI) August 15, 2024
Independence Day Celebration 2024 Live; ‘2047ರ ವೇಳೆಗೆ ವಿಕಸಿತ ಭಾರತ’ ನಮ್ಮ ಗುರಿಯಾಗಿದೆ-ಮೋದಿ
ದೇಶದಲ್ಲಿ ಪ್ರಕೃತಿ ವಿಕೋಪದಿಂದ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬ ಹಾಗೂ ಸಂತ್ರಸ್ತರ ಜೊತೆ ಸದಾ ನಾವಿರುತ್ತೇವೆ. ‘2047ರ ವೇಳೆಗೆ ವಿಕಸಿತ ಭಾರತ’ ನಮ್ಮ ಗುರಿಯಾಗಿದೆ. ದೇಶದ 140 ಕೋಟಿ ಜನರಿಂದ ಹೊಸ ಭಾರತ ನಿರ್ಮಾಣವಾಗಲಿದೆ ಎಂದು ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Independence Day Celebration 2024 Live; ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ
ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಇಂದು ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸುವ ಪರ್ವ. ರಾಷ್ಟ್ರದ ನಿರ್ಮಾಣಕ್ಕಾಗಿ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯ ಸೇನಾನಿಗಳಿಗೆ ಹೃದಯಪೂರ್ವಕ ನಮನ. ಭಾರತದ ಸ್ವಾತಂತ್ರ್ಯ ಸೇನಾನಿಗಳಿಗೆ ನಾವು ಋಣಿಯಾಗಿದ್ದೇವೆ. ರಾಷ್ಟ್ರದ ರಕ್ಷಣೆಗೆ ಯೋಗದಾನ ನೀಡಿದವರಿಗೂ ನನ್ನ ನಮನಗಳು ಎಂದರು.
Independence Day Celebration 2024 Live; ಸ್ವಾತಂತ್ರ್ಯ ಸಂಭ್ರಮದಲ್ಲಿ ಗಣ್ಯರು ಭಾಗಿ
ದೆಹಲಿಯ ಕೆಂಪುಕೋಟೆ ಮೇಲೆ 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಹೆಚ್ಡಿ ಕುಮಾರಸ್ವಾಮಿ, ಅಶ್ವಿನಿ ವೈಷ್ಣವ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ, ಶಿವರಾಜ್ ಸಿಂಗ್ ಚವ್ಹಾಣ್, ಜೈಶಂಕರ್, ವಿಪಕ್ಷ ನಾಯಕ ರಾಹುಲ್ ಗಾಂಧಿ, ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದಾರೆ.
Independence Day Celebration 2024 Live; 11ನೇ ಬಾರಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ಸತತ 11ನೇ ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ.
PM Modi hoists the national flag at Red Fort on 78th Independence Day
(Photo source: PM Narendra Modi/YouTube) pic.twitter.com/xPmKcWUIIL
— ANI (@ANI) August 15, 2024
Independence Day Celebration 2024 Live; ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆ ಶುಭಕೋರಿದ ಮೋದಿ
ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ಮೋದಿಯವರು ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆ ಶುಭಕೋರಿದ್ದಾರೆ. ಟ್ವೀಟ್ ಮೂಲಕ ಸ್ವಾತಂತ್ರ್ಯ ದಿನಾಚರಣೆ ಶುಭಕೋರಿದ್ದಾರೆ.
सभी देशवासियों को स्वतंत्रता दिवस की ढेरों शुभकामनाएं। जय हिंद!
Independence Day greetings to my fellow Indians. Jai Hind! 🇮🇳
— Narendra Modi (@narendramodi) August 15, 2024
Independence Day Celebration 2024 Live; ಕೆಲವೇ ಕ್ಷಣಗಳಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವ ಪ್ರಧಾನಿ ಮೋದಿ
ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ಸತತ 11ನೇ ಬಾರಿ ಧ್ವಜಾರೋಹಣ ನೆರವೇರಿಸಲಿದ್ದು ಕೆಲವೇ ಕ್ಷಣಗಳಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
Published On - Aug 15,2024 7:13 AM