ಜಯಚಾಮರಾಜೇಂದ್ರ ಒಡೆಯರ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೊ ನಾಪತ್ತೆ: ಸಿಕ್ಕಿದ್ರೆ ಕೊಡಿ ಎಂದು ಮನವಿ ಮಾಡಿದ ದೇವೇಗೌಡ
‘ಫೋಟೊ ಯಾರ ಬಳಿಯೇ ಇದ್ದರೂ ದಯವಿಟ್ಟು ಹಿಂದಿರುಗಿಸಿ. ಪ್ರಿಂಟ್ ಹಾಕಿಸಿ ನಿಮಗೇ ವಾಪಸ್ ಕೊಡುತ್ತೇನೆ’ ಎಂದು ದೇವೇಗೌಡರು ಮನವಿ ಮಾಡಿದ್ದಾರೆ.
ಬೆಂಗಳೂರು: ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರೊಂದಿಗೆ ಹೊಳೆನರಸಿಪುರ ಪ್ರವಾಸಿ ಮಂದಿರದಲ್ಲಿ ತೆಗೆಸಿಕೊಂಡಿದ್ದ ಫೋಟೊ ಕಾಣೆಯಾಗಿದೆ. ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ತಂದುಕೊಡಿ. ಪ್ರಿಂಟ್ ಹಾಕಿಸಿ ವಾಪಸ್ ಕೊಡುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ ಒಡೆಯರ್ ಅವರೊಂದಿಗೆ ಮುಂಜಾನೆಯ ಉಪಹಾರ ಸೇವಿಸಿದ್ದೆ. ಈ ಸಂದರ್ಭ ಅವಿಸ್ಮರಣೀಯ ಫೋಟೊ ತೆಗೆಯಲಾಗಿತ್ತು. ಆದರೆ ಮನೆ ಬದಲಿಸುವಾಗ ಫೋಟೊ ನಾಪತ್ತೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಫೋಟೊ ಯಾರಾದರೂ ತೆಗೆದುಕೊಂಡು ಹೋಗಿದ್ದಾರಾ? ಈಗ ಆ ಫೋಟೊ ಎಲ್ಲಿದೆ? ಹೇಗೆ ಕಾಣೆಯಾಯಿತು ಎಂಬ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ದೇವೇಗೌಡರು ಹೇಳಿರುವುದಾಗಿ ‘ನ್ಯೂಸ್ 18’ ಜಾಲತಾಣವು ವರದಿ ಮಾಡಿದೆ. ‘ಫೋಟೊ ನನ್ನ ಪಾಲಿಗೆ ಅಮೂಲ್ಯ ಮತ್ತು ಅವಿಸ್ಮರಣೀಯ. ಅದು ಯಾರ ಬಳಿಯೇ ಇದ್ದರೂ ದಯವಿಟ್ಟೂ ಹಿಂದಿರುಗಿಸಿ. ಪ್ರಿಂಟ್ ಹಾಕಿಸಿ ನಿಮಗೇ ವಾಪಸ್ ಕೊಡುತ್ತೇನೆ’ ಎಂದು ದೇವೇಗೌಡರು ಮನವಿ ಮಾಡಿದ್ದಾರೆ.
ಫೋಟೊ ಸಿಕ್ಕವರು 94486 53584 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಕೊಡಬಹುದು ಎಂದು ಅವರು ವಿನಂತಿಸಿದ್ದಾರೆ.
ಜೆಡಿಎಸ್ ರಥಯಾತ್ರೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು ರಾಜ್ಯ ರಾಜಕೀಯದಲ್ಲಿ ತಕ್ಕಮಟ್ಟಿಗೆ ಅಲ್ಲಿ ರಾಜಕೀಯ ಚದುರಂಗದಾಟಗಳು ಶುರುವಾಗಿವೆ. ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್ ತಮ್ಮ ತಮ್ಮ ಯಾತ್ರೆಗಳನ್ನು ಕೈಗೊಂಡಿವೆ. ಈ ಮಧ್ಯೆ, ಮತ್ತೊಂದು ಪ್ರಮುಖ ಪಕ್ಷವಾದ ಜಾತ್ಯತೀತ ಜನತಾ ದಳ ಪಕ್ಷವೂ 2023ರ ಚುನಾವಣೆಗೆ (Karnataka Assembly Elections 2023) ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದೆ. ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ಜೆಡಿಎಸ್ ವತಿಯಿಂದ (JDS) ನಾಳೆ ಬುಧವಾರದಿಂದ ಎರಡು ದಿನಗಳ ಕಾಲ ಮಹತ್ವದ ಸಭೆ ಆಯೋಜಿಸಲಾಗಿದೆ. 126 ದಳಪತಿಗಳ (ಅಸೆಂಬ್ಲಿ ಚುನಾವಣೆ ಅಭ್ಯರ್ಥಿಗಳು) ಅಂತಿಮ ಪಟ್ಟಿಯನ್ನು ಪಕ್ಷದ ಹಿರಿಯ ನಾಯಕ ಎಚ್.ಡಿ. ಕುಮಾರಸ್ವಾಮಿ (H D Kumaraswamy) ಅಂತಿಮಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ.
Published On - 2:55 pm, Tue, 18 October 22