ನೀರಾವರಿ ಯೋಜನೆ ಪೂರ್ಣಗೊಳ್ಳಲು 1 ಲಕ್ಷ ಕೋಟಿ ಬೇಕು, ಅನುದಾನದ ಸಮಸ್ಯೆಯಿದೆ: ಗೋವಿಂದ ಕಾರಜೋಳ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ₹ 1 ಲಕ್ಷ ಕೋಟಿ ಬೇಕಿದೆ ಎಂದು ವಿಧಾನ ಪರಿಷತ್ನಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು
ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು (Irrigation Department) ಪೂರ್ಣಗೊಳಿಸಲು ₹ 1 ಲಕ್ಷ ಕೋಟಿ ಬೇಕಿದೆ ಎಂದು ವಿಧಾನ ಪರಿಷತ್ನಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು. ಸಚಿವರ ಈ ನೇರ ಉತ್ತರದ ಬಗ್ಗೆ ಹಲವು ಸದಸ್ಯರಲ್ಲಿ ಅಚ್ಚರಿ ಮೂಡಿತು. ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಒಟ್ಟು ₹ 9998 ಕೋಟಿ ಬಿಲ್ ಪಾವತಿಸಬೇಕಿದೆ. ಕಳೆದ ವರ್ಷ ₹ 17,410 ಕೋಟಿ ಅನುದಾನ ಘೋಷಣೆಯಾಗಿತ್ತು. ಈ ಪೈಕಿ ₹ 10,967 ಕೋಟಿ ಬಿಡುಗಡೆಯಾಗಿತ್ತು. ಗಮನ ಸೆಳೆಯುವ ಸೂಚನೆ ವೇಳೆ ಸದಸ್ಯ ಬಿ.ಎಂ.ಫಾರೂಖ್ ವಿವಿಧ ನೀರಾವರಿ ಯೋಜನೆಗಳ ಬಿಲ್ ಬಾಕಿ ಇರುವ ಬಗ್ಗೆ ಪ್ರಸ್ತಾಪಿಸಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲ ನೀರಾವರಿ ಯೋಜನೆಗಳಿಗೆ ₹ 1 ಲಕ್ಷ ಕೋಟಿ ಬೇಕಿತ್ತು ಎಂದರು.
ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಟೋಕನ್ ಅಮೌಂಟ್ ಇಡುತ್ತಾರೆ. ಕಾಮಗಾರಿಗೆ ₹ 3 ಸಾವಿರ ಕೋಟಿ ರೂಪಾಯಿ ಬೇಕಿದ್ದರೆ ಬಜೆಟ್ ಭಾಷಣದಲ್ಲಿ ಕೇವಲ ₹ 200 ಕೋಟಿ ಟೋಕನ್ ಅಮೌಂಟ್ ಇಡುತ್ತಾರೆ. ನೀರಾವರಿ ಇಲಾಖೆಯಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಮೇಕೆದಾಟು, ಮಹದಾಯಿ, ನವಲೆ ಸೇರಿದಂತೆ ಎಲ್ಲ ಯೋಜನೆಗಳಲ್ಲೂ ಸಮಸ್ಯೆ ಇದೆ. ಇಂಥ ಯೋಜನೆಗಳಿಗೆ ಟೋಕನ್ ಅಮೌಂಟ್ ಇಟ್ಟರೆ ಕಾರ್ಯಭಾರ ಜಾಸ್ತಿ. ನಮ್ಮಲ್ಲಿ ನೀರಿನ ಕೊರತೆ ಇಲ್ಲ, ಅನುದಾನದ ಕೊರತೆ ಇದೆ. ಲಕ್ಷ ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಜನಪ್ರತಿನಿಧಿಗಳ ಒತ್ತಡದಿಂದ ಕೆಲವು ಪೇಮೆಂಟ್ ಮಾಡ್ತಿದ್ದೇವೆ ಎಂದು ಸಚಿವ ಕಾರಜೋಳ ಸತ್ಯ ಒಪ್ಪಿಕೊಂಡರು.
ಬಯಲುಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಗಿತವಾಗಿರುವ ಬಗ್ಗೆ ಸದಸ್ಯ ರಾಜೇಂದ್ರ ರಾಜಣ್ಣ ಮಾಡಿದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ ಉತ್ತರ ನೀಡಿದರು. ಎತ್ತಿನಹೊಳೆ ಮತ್ತು ಇತರ ಪಶ್ಚಿಮಕ್ಕೆ ಹರಿಯುವ 24.1 ಟಿಎಂಸಿ ನೀರು ಬಳಸಿಕೊಂಡು ಜಾರಿ ಮಾಡುವ ಯೋಜನೆ ಇದು. ಈಗಾಗಲೇ ಶೇ 70ರಷ್ಟು ಕಾಮಗಾರಿ ಪೂರ್ಣವಾಗಿದೆ. ಕೊರಟಗೆರೆ, ದೊಡ್ಡಬಳ್ಳಾಪುರ ಎರಡು ತಾಲೂಕು ನಡುವಿನ ಭೂಮಿಯ ಬೆಲೆಯಲ್ಲಿ ವ್ಯತ್ಯಾಸ ಇರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ಸಚಿವರು ಹೇಳಿದರು. ಭೂ ಸ್ವಾಧೀನಪಡಿಸಿಕೊಂಡರೂ ರೈತರಿಗೆ ಅನುದಾನ ನೀಡಿಲ್ಲ ಎಂದು ರಾಜೇಂದ್ರ ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಸವಾಲು ಹಾಕಿದರು. ₹ 22 ಸಾವಿರ ಕೋಟಿ ಖರ್ಚಾದರೂ ಯೋಜನೆಯನ್ನು ಮುಗಿಸಲು ಆಗುವುದಿಲ್ಲ. ₹ 50 ಸಾವಿರ ಕೋಟಿ ಖರ್ಚು ಮಾಡಿದರೂ ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಆಗುವುದಿಲ್ಲ. ಎತ್ತಿನಹೊಳೆ ಯೋಜನೆ ಕೆಲವರ ಪಾಲಿಗೆ ಕಾಮಧೇನು ಆಗಿದೆ. ಇದನ್ನು ಕಾಮಧೇನು ಮಾಡಿಕೊಂಡಿರುವವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಣ್ಣೆ, ನೀರು ಇದ್ದಂತೆ ಅವರಿಬ್ಬರು ಎಂದಿಗೂ ಸೇರುವುದಿಲ್ಲ: ಸಚಿವ ಕಾರಜೋಳ
Published On - 3:09 pm, Mon, 7 March 22