ಎಂಜಿನ್ ಕೆಟ್ಟಿರುವ ಸರ್ಕಾರ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ಎಂಜಿನ್ ಕೆಟ್ಟಿರುವ ಸರ್ಕಾರ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ

ಸ್ನೇಹ ಬೇರೆ, ರಾಜಕಾರಣ ಬೇರೆ, ಸಿದ್ಧಾಂತ ಬೇರೆ. ನೀವು ಆರ್​ಎಸ್ಎಸ್ ನಿಂದ ಬಂದವರು, ನಿಮ್ಮ ವೈಚಾರಿಕ ಸಿದ್ದಾಂತ ಬೇರೆ, ನಮ್ಮ ಸಿದ್ದಾಂತ ಬೇರೆ. ಹೊರಗೆ ಸ್ನೇಹ ಇದ್ದೇ ಇರುತ್ತದೆ, ಇಲ್ಲಿ ರಾಜಕಾರಣ ಇದ್ದೇ ಇರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 07, 2022 | 12:45 PM


ಬೆಂಗಳೂರು: ಕರ್ನಾಟಕ ವಿಧಾನ ಮಂಡಳದ ಬಜೆಟ್ ಅಧಿವೇಶನ ಸೋಮವಾರ ಪುನರಾರಂಭಗೊಂಡಿದೆ. ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramiah), ಚರ್ಚೆಯ ಆರಂಭದಲ್ಲಿಯೇ ರಾಜ್ಯ ಸರ್ಕಾರದ ಕಾರ್ಯವೈಖರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರನ್ನು ಟೀಕಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ‘ಬೊಮ್ಮಾಯಿ ಅವರನ್ನು ನಿಮ್ಮ ಫ್ರೆಂಡ್ ಎಂದು ಹೇಳುತ್ತಾ, ಏಕೆ ಹೀಗೆಲ್ಲಾ ಟೀಕಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸ್ನೇಹ ಬೇರೆ, ರಾಜಕಾರಣ ಬೇರೆ, ಸಿದ್ಧಾಂತ ಬೇರೆ. ನೀವು ಆರ್​ಎಸ್ಎಸ್ ನಿಂದ ಬಂದವರು, ನಿಮ್ಮ ವೈಚಾರಿಕ ಸಿದ್ದಾಂತ ಬೇರೆ, ನಮ್ಮ ಸಿದ್ದಾಂತ ಬೇರೆ. ಹೊರಗೆ ಸ್ನೇಹ ಇದ್ದೇ ಇರುತ್ತದೆ, ಇಲ್ಲಿ ರಾಜಕಾರಣ ಇದ್ದೇ ಇರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಇದು ಡಬಲ್ ಎಂಜಿನ್ ಸರ್ಕಾರ ಎಂದು ಬಿಜೆಪಿಯವರು ಹೇಳುತ್ತಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗವೇ ನಿರ್ಮಾಣ ಆಗುತ್ತದೆ ಎಂದು ಇವರು ಹೇಳುತ್ತಿದ್ದರು. ಆದರೆ ಎಂಜಿನ್ ಕೆಟ್ಟಿರುವುದರಿಂದ ಇದು ಡಬ್ಬಾ ಸರ್ಕಾರ ಆಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಸದನದಿಂದ ತೆರಳಲು ಸಚಿವರಾದ ಆರ್.ಅಶೋಕ್, ಮುನಿರತ್ನ ಮುಂದಾದರು. ಈ ವೇಳೆ ‘ಹೇ ಮುನಿರತ್ನ, ಅಶೋಕ್ ಕುಳಿತುಕೊಳ್ಳಿ’ ಎಂದು ಸಿದ್ದರಾಮಯ್ಯ ಕೂಗಿ ಹೇಳಿದರು. ‘ನೀರು ಕುಡಿಯಲು ಹೋಗ್ತಿದ್ದೇನೆ’ ಎಂದು ಅಶೋಕ್ ಪ್ರತಿಕ್ರಿಯಿಸಿದಾಗ, ‘ಇಲ್ಲಿಗೇ ನೀರು ಕೊಡ್ತಾರೆ ಕುಳಿತುಕೊಳ್ಳಪ್ಪಾ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯಪ್ರವೇಶಿದರು. ಅವರು ಸುಮ್ಮನೆ ಎದ್ದು ಹೋಗ್ತಿದ್ರು, ನೀವು ಹೇಳಿದ ಮೇಲೆ ಕೂತ್ಕೊಂಡ್ರು‌ ಎಂದರು ಬಿಎಸ್‌ವೈ. ಹೌದು, ನೀವು ಹಿಂದೆ ಕುಳಿತಿದ್ದೀರಾ, ಇಂತಹದ್ದನ್ನೆಲ್ಲಾ ಗಮನಿಸುತ್ತೀರಾ ಎಂದುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ದೇಗುಲಗಳಿಗೆ ಅನುದಾನ

ದೇಗುಲಗಳಿಗೆ ಅನುದಾನ ನೀಡುವ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ನಮ್ಮ ಕ್ಷೇತ್ರದಲ್ಲಿರುವ ದೇವಾಲಯಗಳಿಗೆ ಅನುದಾನ ನೀಡಿದರೆ ದೇವರು ನಿಮಗೆ ಆಶೀರ್ವಾದ ಮಾಡುತ್ತಾನೆ ಎಂದು ಶಾಸಕ ಆನಂದ್ ನ್ಯಾಮಗೌಡ ಹೇಳಿದರು. ‘ಸಚಿವರಿಗಷ್ಟೇ ಆಶೀರ್ವಾದವೋ, ಎಲ್ಲರಿಗೂ ಒಳ್ಳೆಯದು ಆಗುತ್ತೋ? ಅನುದಾನದ ಮೇಲೆ ಆಶೀರ್ವಾದದ ಪ್ರಮಾಣ ನಿರ್ಧಾರವಾಗುತ್ತೋ’ ಎಂದು ಸ್ಪೀಕರ್ ಪ್ರಶ್ನಿಸಿದರು. ‘ಅನುದಾನ ಕೊಟ್ಟರೆ ಸಚಿವರಿಗೆ ಒಳ್ಳೆಯದು ಆಗುತ್ತದೆ’ ಎಂದು ನ್ಯಾಮಗೌಡ ಹೇಳಿದರು. ‘ಎಲ್ಲಾ ಶಾಸಕರು ಕ್ಷೇತ್ರದ ಪಟ್ಟಿ ಕೊಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ. ಮುಂದಿನ ದಿನಗಳಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ದೇವಸ್ಥಾನಗಳಿಗೆ ಅನುದಾನ ನೀಡಿರುವ ವಿವರಗಳನ್ನು ನ್ಯಾಮಗೌಡ ಕೇಳಿದ್ದರು. ನನ್ನ ಕ್ಷೇತ್ರದಲ್ಲಿ ಕೂಡಾ ಸಾಕಷ್ಟು ಪ್ರಭಾವ ಇರುವ ದೇವಸ್ಥಾನಗಳಿವೆ. ಅನುದಾನ ಕೊಟ್ಟರೆ ನಿಮಗೆ ಆಶೀರ್ವಾದ ಸಿಗುತ್ತದೆ ಎಂದರು. ಎಲ್ಲ ಶಾಸಕರು ಕ್ಷೇತ್ರದ ಪಟ್ಟಿ ಕೊಟ್ಟಿದ್ದಾರೆ. ಇದನ್ನು ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಒಳ್ಳೆಯ ಸ್ಪಂದನೆ ಸಿಕ್ಕಿದೆ ಎಂದು ಸಚಿವರು ಉತ್ತರ ನೀಡಿದರು.

ವಿಧಾನಸಭೆಯಲ್ಲಿ ನಿಗದಿಯಂತೆ ಪ್ರಶ್ನೋತ್ತರ ಕಲಾಪ ಆರಂಭವಾದಾಗ ಸುಮಾರು 50 ಸದಸ್ಯರು ಕಲಾಪಕ್ಕೆ ಗೈರು ಹಾಜರಾಗಿದ್ದಾರೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸಾಲಿನಲ್ಲಿಯೂ ಖಾಲಿ ಕುರ್ಚಿಗಳು ಕಾಣಿಸುತ್ತಿವೆ.

ಇದನ್ನೂ ಓದಿ: ನನಗೆ ಯಡಿಯೂರಪ್ಪ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ: ಶಿಕಾರಿಪುರದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ

ಇದನ್ನೂ ಓದಿ: ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ; ಸಚಿವ ವಿ.ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Follow us on

Related Stories

Most Read Stories

Click on your DTH Provider to Add TV9 Kannada