
ಬೆಂಗಳೂರು, ಜೂನ್ 09: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಗಳನ್ನು ಕೊಡಿಸುವುದಾಗಿ ನಂಬಿಸಿ 40ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಒಟ್ಟು 5.30 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪದಡಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ತಂದೆ-ಮಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ (Bengaluru) ನಿವಾಸಿಗಳಾದ ಎಂ.ಎ. ಮನ್ಸೂರ್ ಅಹ್ಮದ್ ಹಾಗೂ ಅವರ ಪುತ್ರಿ ಶಂಶಾದ್ ಬೇಗಂ ಎಂ.ಎಂ. ಎಂದು ಗುರುತಿಸಲಾಗಿದೆ. ತಮಗೆ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕವಿದ್ದು, ಅವರ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರನ್ನು ನಂಬಿಸಿ ಇವರು ಹಣ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ ಆರೋಪಿಗಳು, ನಕಲಿ ನೇಮಕಾತಿ ಆದೇಶಗಳನ್ನು ನೀಡಿ, ಬೆಂಗಳೂರಿನ ಜೊತೆಗೆ ಮುಂಬೈ ಮತ್ತು ಕೊಲ್ಕತ್ತಾದಲ್ಲಿಯೂ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ತಮ್ಮ ವಂಚನೆ ಜಾಲವನ್ನು ನೈಜವೆಂಬಂತೆ ಬಿಂಬಿಸಿದ್ದರು. 2025ರ ನವೆಂಬರ್ 17ರಂದು ವಿಜಯಪುರ ಜಿಲ್ಲೆಯ ನಿವಾಸಿಯೊಬ್ಬರು ಈ ಬಗ್ಗೆ ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ, ಜೂನ್ 4ರಂದು ಆರೋಪಿಗಳನ್ನು ಬಂಧಿಸಿದೆ.
ಇದನ್ನೂ ಓದಿ: ಆವಲಹಳ್ಳಿ ಬಳಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆ; 225 ಜಿಲೆಟಿನ್ ಕಡ್ಡಿ, 50 ಡಿಟೋನೇಟರ್ ವಶ
ದೂರುದಾರರಿಗೆ ವಿಜಯಪುರ ಜಿಲ್ಲೆಯ ರೈಲ್ವೆ ನೌಕರ ಮಹೇಶ್ ಎಂಬಾತನ ಮೂಲಕ ಆರೋಪಿಗಳ ಪರಿಚಯವಾಗಿತ್ತು. ಅವರ ಮೂಲಕವೇ ಹಲವರು ಆರೋಪಿಗಳ ಸಂಪರ್ಕಕ್ಕೆ ಬಂದು ಸರ್ಕಾರಿ ಉದ್ಯೋಗದ ಆಸೆಯಿಂದ ಹಣ ಪಾವತಿಸಿದ್ದರು . ಈ ವಂಚನೆ ಪ್ರಕರಣದಲ್ಲಿ ಸುಮಾರು 40ರಿಂದ 45 ಮಂದಿ ಮೋಸ ಹೋಗಿರುವ ಸಾಧ್ಯತೆಯಿದ್ದು, ಪ್ರತಿ ಅಭ್ಯರ್ಥಿಯಿಂದ 5 ಲಕ್ಷದಿಂದ 10 ಲಕ್ಷದವರೆಗೆ ಹಣ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. 2023ರಿಂದ 2025ರ ಅವಧಿಯಲ್ಲಿ ಹೆಚ್ಚಿನ ಹಣ ಆನ್‌ಲೈನ್ ವಹಿವಾಟಿನ ಮೂಲಕ ಪಡೆದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಸಂಶಯ ಮೂಡದಂತೆ ಹಾಗೂ ನಂಬಿಕೆ ಉಳಿಸಿಕೊಳ್ಳುವ ಉದ್ದೇಶದಿಂದ ಕೆಲ ಅಭ್ಯರ್ಥಿಗಳಿಗೆ ನಾಲ್ಕು ತಿಂಗಳವರೆಗೆ ಸಂಬಳವನ್ನೂ ನೀಡಲಾಗಿತ್ತು. ಈ ತಂತ್ರದ ಮೂಲಕ ಮತ್ತಷ್ಟು ಜನರನ್ನು ಸೆಳೆದು ದೀರ್ಘಕಾಲ ವಂಚನೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಅಭ್ಯರ್ಥಿಗಳಿಗೆ ನೀಡಲಾದ ನೇಮಕಾತಿ ಆದೇಶಗಳು ನಕಲಿ ಎಂಬುದು ಬೆಳಕಿಗೆ ಬಂದ ನಂತರ ಅನುಮಾನ ಮೂಡಿತ್ತು. ಬಳಿಕ ಸಂತ್ರಸ್ತರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶಗಳನ್ನು ನೀಡಿರುವುದು ದೃಢಪಟ್ಟಿದೆ. ಆರೋಪಿಗಳು ಒಟ್ಟು 5.30 ಕೋಟಿಗೂ ಅಧಿಕ ಹಣ ಸಂಗ್ರಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಆರೋಪಿಗಳ ಪರಿಚಯ ಮಾಡಿಕೊಟ್ಟ ಮಹೇಶ್ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.