AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Breaking Kannada News Highlights: ಕನ್ನಡ ರಾಜ್ಯೋತ್ಸವಕ್ಕೆ HMT ಮಾರುಕಟ್ಟೆಗೆ ಬಂತು ‘ಗಂಡಬೇರುಂಡ ಕನ್ನಡಿಗ’ ವಾಚ್

Breaking News Today Updates: ಕರ್ನಾಟಕದಲ್ಲಿ ಎಲ್ಲೆಡೆ 71ನೇ ಕನ್ನಡ ರಾಜ್ಯೋತ್ಸವ ಸಂಭಮ ಮನೆ ಮಾಡಿದ್ದು,ಬೆಂಗಳೂರಿನಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಎಂ ಡಿಕೆ ಶಿವಕುಮಾರ್ ಧ್ವಜಾರೋಹಣ ಮಾಡಿ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನೊಂದೆಡೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಬ್ರೇಕಿಂಗ್ ಸುದ್ದಿಗಳ ಲೈವ್ ಅಪ್‌ಡೇಟ್‌ಗಳು ಇಲ್ಲಿ ಲಭ್ಯವಿವೆ.

Karnataka Breaking Kannada News Highlights: ಕನ್ನಡ ರಾಜ್ಯೋತ್ಸವಕ್ಕೆ HMT ಮಾರುಕಟ್ಟೆಗೆ ಬಂತು 'ಗಂಡಬೇರುಂಡ ಕನ್ನಡಿಗ' ವಾಚ್
Dk Shivakumar (22)
ರಮೇಶ್ ಬಿ. ಜವಳಗೇರಾ
| Edited By: |

Updated on:Nov 01, 2026 | 10:58 PM

Share

Breaking News Today Live Updates in Kannada: ಕರ್ನಾಟಕದಲ್ಲಿ ಎಲ್ಲೆಡೆ 71ನೇ ಕನ್ನಡ ರಾಜ್ಯೋತ್ಸವ ಸಂಭಮ ಮನೆ ಮಾಡಿದ್ದು, ಎಲ್ಲಾ ಸರ್ಕಾರಿ, ಖಾಸಗಿ ಕಚೇರಿ, ಸಂಘ ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಎಂ ಡಿಕೆ ಶಿವಕುಮಾರ್ ಅವರು ಧ್ವಜಾರೋಹಣ ಮಾಡಿ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನು ರಾಜ್ಯೋತ್ಸವದ ಅಂಗವಾಗಿ ನಾಡಗೀತೆ ಗಾಯನ, ಪಥಸಂಚಲನ ಆಕರ್ಷಕವಾಗಿದೆ. ಮತ್ತೊಂದೆಡೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರ, ಕಾರ್ಖಾನೆ ಮಾಲೀಕರಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಂದು ಮತ್ತೆ ಗುರ್ಲಾಪುರದಲ್ಲಿ ಜಮಾವಣೆಯಾಗುವ ರೈತ ಮುಖಂಡರು, ನಾಳೆ ಗುರ್ಲಾಪುರದಿಂದ ಜೈಲ್ ಭರೋ ಚಳವಳಿಗೆ ಕರೆ ನೀಡಲು ಚಿಂತನೆ ನಡೆಸಿದ್ದಾರೆ. ಹೀಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE NEWS & UPDATES

The liveblog has ended.
  • 01 Nov 2026 10:32 PM (IST)

    ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಸರಳವಾಗಿ ನಿಶ್ಚಿತಾರ್ಥ

    ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದ ಡಾ. ಶ್ರೀನಿಧಿ ಅವರೊಂದಿಗೆ ನಿಶ್ಚಿತಾರ್ಥ  ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಎರಡೂ ಕುಟುಂಬಗಳ ಆಪ್ತ ಬಳಗದ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಈ ಎಂಗೇಜ್‌ಮೆಂಟ್ ಶುಭ ಸಮಾರಂಭ ನೆರವೇರಿದೆ.

  • 01 Nov 2026 09:17 PM (IST)

    HMTಯಿಂದ ಮಾರುಕಟ್ಟೆಗೆ ‘ಗಂಡಬೇರುಂಡ ಕನ್ನಡಿಗ’ ವಿಶೇಷ ವಾಚ್‌ ಬಿಡುಗಡೆ

    ಕನ್ನಡಿಗರ ಹೆಮ್ಮೆಯ ಹೆಚ್‌ಎಂಟಿ  ಸಂಸ್ಥೆಗೆ ಹಳೆಯ ವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ ಬೆಂಗಳೂರಿನ ಹೆಚ್‌ಎಂಟಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಹೆಚ್‌ಎಂಟಿಯ ನೂತನ 4 ಹೊಸ ಅವತರಣಿಕೆ  ವಾಚ್‌ಗಳನ್ನು ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು.

  • 01 Nov 2026 07:18 PM (IST)

    15 ದಿನಗಳಿಂದ ಸರ್ಕಾರ ಯಾಕೆ ಸುಮ್ಮನಿತ್ತು?: ಕುಮಾರಸ್ವಾಮಿ ಹೆಸರು ಹಿನ್ನೆಲೆ ಸಿಬಿಐ ತನಿಖೆಗೆ ಅಶೋಕ್ ಒತ್ತಾಯ

    ಸ್ಟಿಂಗ್ ಆಪರೇಷನ್‌ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪವಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಪಾತ್ರದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಲಿ. ಅದನ್ನು ಬಿಟ್ಟು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು,” ಎಂದು ಆಗ್ರಹించారు.

  • 01 Nov 2026 07:15 PM (IST)

    ಜಾನಪದ ಕ್ಷೇತ್ರದ 7 ಮಹಾನ್ ಸಾಧಕರಿಗೆ ಪ್ರತಿಷ್ಠಿತ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2026’ ಪ್ರದಾನ

    ನಾಡಿನಾದ್ಯಂತ 71ನೇ ಕನ್ನಡ ರಾಜ್ಯೋತ್ಸವದ ಸಡಗರ ಕಳೆಗಟ್ಟಿರುವ ಬೆನ್ನಲ್ಲೇ, 2026ನೇ ಸಾಲಿನ ಪ್ರತಿಷ್ಠಿತ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಸಮಾರಂಭವು ರಾಜಧಾನಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ ನಾಡಿನ ಕಲೆ ಹಾಗೂ ಸಂಸ್ಕೃತಿಯ ಜೀವನಾಡಿಯಾಗಿರುವ ಜಾನಪದ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ 7 ಮಂದಿ ಹಿರಿಯ ಸಾಧಕರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ನೀಡಿ ಗೌರವಿಸಿದರು.

  • 01 Nov 2026 05:47 PM (IST)

    71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ: ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಂದ ವಿಶೇಷ ಔತಣಕೂಟ

    71ನೇ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ 2026ನೇ ಸಾಲಿನ ಪ್ರತಿಷ್ಠಿತ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನರಾದ 71 ಸಾಧಕರಿಗೆ ರಾಜ್ಯ ಸರ್ಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ (Banquet Hall) ಗೌರವಪೂರ್ವಕ ಸಂತೋಷ ಕೂಟ (ಔತಣಕೂಟ) ಹಾಗೂ ಆತ್ಮೀತ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ, ಶುಭ ಹಾರೈಸಿದರು.

  • 01 Nov 2026 04:21 PM (IST)

    “ಇದು ಬರೀ ಟ್ರೇಲರ್‌, ಇನ್ನು ಪಿಕ್ಚರ್‌ ಬಾಕಿ ಇದೆ”: ಕುಮಾರಸ್ವಾಮಿ ವಿರುದ್ಧ ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್‌ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಹಾಗೂ ಅವರ ದೆಹಲಿ ನಿವಾಸದ ಲಿಂಕ್ ಬೆಳಕಿಗೆ ಬಂದ ಬೆನ್ನಲ್ಲೇ, ಸಚಿವ ಪ್ರಿಯಾಂಕ್ ಖರ್ಗೆ ಅವರು ಎಚ್‌ಡಿಕೆ ವಿರುದ್ಧ ಕಲಬುರಗಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಇವರಿಗೆಲ್ಲ ಎಲ್ಲಿಂದ ಫಂಡ್ ಬಂತು ಎಂಬ ಸಂಪೂರ್ಣ ಮಾಹಿತಿ ನಮ್ಮಲ್ಲಿದೆ. ಈ ಪ್ರಕರಣದಲ್ಲಿ ಸಿಕ್ಕಿಬಿದ್ದವರೆಲ್ಲರೂ ಕುಮಾರಸ್ವಾಮಿ ಜೊತೆ ಇರುವವರೇ ಆಗಿದ್ದಾರೆ. ಇದಕ್ಕೆಲ್ಲ ಸೂಕ್ತ ದಾಖಲೆಗಳಿವೆ. ಕುಮಾರಸ್ವಾಮಿ ಅವರಿಗೆ ಸ್ವಲ್ಪನಾದರೂ ಕಾಮನ್ ಸೆನ್ಸ್ ಇದೆಯಾ?” ಎಂದು ಪ್ರಿಯಾಂಕ್ ಖರ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

  • 01 Nov 2026 03:26 PM (IST)

    ಬೆಳಗಾವಿಯಲ್ಲಿ MES ಪುಂಡರ ಕರಾಳ ದಿನಾಚರಣೆಗೆ ಕರವೇ ಶಿಸ್ತಿನ ಉತ್ತರ

    ನಾಡಿನಾದ್ಯಂತ 71ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದರೆ, ಗಡಿನಾಡು ಬೆಳಗಾವಿಯಲ್ಲಿ ಎಂಇಎಸ್ (MES) ಕಾರ್ಯಕರ್ತರು ಮತ್ತೆ ತಮ್ಮ ಪುಂಡಾಟಿಕೆಯನ್ನು ಮುಂದುವರಿಸಿ ‘ಕರಾಳ ದಿನಾಚರಣೆ’ಗೆ ಯತ್ನಿಸಿದ್ದಾರೆ. ಎಂಇಎಸ್ ಪುಂಡರ ಈ ನಾಡು ವಿರೋಧಿ ನಡವಳಿಕೆಗೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕನ್ನಡಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 01 Nov 2026 01:38 PM (IST)

    ಬುಲೆಟ್ ರೈಲು ಯೋಜನೆ ಮುಗಿದಿದೆ

    ಬುಲೆಟ್ ರೈಲು ಯೋಜನೆ ಮುಗಿದಿದ್ದು, ಬೆಂಗಳೂರು- ಚೆನ್ನೈಗೆ ಈ ಹೈ ಸ್ಪೀಡ್ ರೈಲು ಓಡಾಡಲಿದೆ. 73 ನಿಮಿಷದಲ್ಲಿ ಚೆನ್ನೈಗೆ ತಲುಪಲಿದೆ. 2 ಗಂಟೆ 10 ನಿಮಿಷದಲ್ಲಿ ಹೈದ್ರಾಬಾದ್ ಗೆ ಈ ರೈಲು ತಲುಪಲಿದೆ. ಬೆಂಗಳೂರು ದೊಡ್ಡ ನಗರ, ಹೈ ಸ್ಪೀಡ್ ರೈಲು ಹುಬ್ಬಳ್ಳಿ ಭಾಗಗಳಿಗೆ ತಲುಪಿಸಲಾಗುತ್ತದೆ. ಬೆಂಗಳೂರು – ಮಂಗಳೂರಿಗೂ ವಂದೇ ಭಾರತ್ ಸಂಚಾರಕ್ಕೆ ಎಲ್ಲಾ ಕೆಲಸ ಮುಗಿದಿದ್ದು, ವಿದ್ಯುಚ್ಛಕ್ತಿ ಕೆಲಸ ಅಂತಿಮ ಹಂತದಲ್ಲಿದೆ. ನಾಲ್ಕು ವಾರದಲ್ಲಿ ಸಂಚಾರ ಆರಂಭ ಆಗುತ್ತೆ. ಜಗತ್ತಿನಲ್ಲಿ ಭಾರತವನ್ನು ವಿಶ್ವಾಸ, ಸತ್ಯದಿಂದ ನೋಡ್ತಿದೆ. ಮಿಲಟರಿ, ಎಲೆಕ್ಟ್ರಿಕ್ಸ್ ನಲ್ಲಿ ಭಾರತ ಅಭಿವೃದ್ಧಿ ಯಾಗ್ತಿದೆ. ಇದೆಲ್ಲವೂ ಮೋದಿಯಿಂದ ಸಾಧ್ಯವಾಗಿದ್ದು ಎಂದು ಅಶ್ವಿನಿ ವೈಷ್ಣವ್ ಹೇಳಿದರು.

  • 01 Nov 2026 01:36 PM (IST)

    ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಘೋಷಣೆ

    ವಂದೇ ಭಾರತ್, ನಮೋ ಭಾರತ್ ಉಪಯೋಗ ಎಲ್ಲರಿಗೆ ತಲುಪುತ್ತಿದೆ. ಐಟಿ ನಗರ ಬೆಂಗಳೂರಿನಿಂದ ಆದಾಯ ನಗರ ಮುಂಬೈಗೆ ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರಿನಿಂದ ಹೊರಟು ಆಂಧ್ರಪ್ರದೇಶದ ಅನಂತಪುರ , ಕರ್ನಾಟಕದ ರಾಯಚೂರು, ಕಲ್ಬುರ್ಗಿ ಮೂಲಕ ಮುಂಬೈಗೆ ತಲುಪುತ್ತೆ. ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಕರ್ನಾಟಕಕ್ಕೆ ಸಿಗಲಿದೆ. ಬೆಂಗಳೂರು – ಹುಬ್ಬಳ್ಳಿ ಮೂಲಕ ಪೂಣೆ, ಮುಂಬೈಗೆ ತೆರಳಲಿದೆ. ಇದರೊಂದಿಗೆ ಪ್ರಹ್ಲಾದ್ ಜೋಶಿಯವರ ಬೇಡಿಕೆ ಈಡೇರಿದೆ ಎಂದರು.

  • 01 Nov 2026 01:34 PM (IST)

    ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಹೇಳಿದ ಅಶ್ವಿನಿ ವೈಷ್ಣವ್

    ಬೆಂಗಳೂರು-ಮುಂಬೈ ವಂದೇ ಭಾರತ್ ರೈಲಿಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೊದಲಿಗೆ ರಾಜ್ಯದ ಜನತೆಗೆ ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಹೇಳಿದ್ದು, ನಾನು ಕನ್ನಡ ಕಲಿಯಬೇಕು ಎಂದು ಆಸೆ ವ್ಯಕ್ತಪಡಿಸಿದರು.

  • 01 Nov 2026 01:23 PM (IST)

    ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಇಂದು (ನವೆಂಬರ್ 01) ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮೈತ್ರಿಕೂಟದ ನಾಯರನ್ನು ಭೇಟಿ ಮಾಡಿದ್ದು, ಇದೇ ವೇಳೆ ರಾಹುಲ್ ಗಾಂಧಿಯನ್ನು ಸಹ ಭೇಟಿ ಮಾಡಿದರು.

  • 01 Nov 2026 12:52 PM (IST)

    ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್

    ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನಲ್ಲಿಂದು ಇಂದು (ನವೆಂಬರ್ 1) ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಪ್ರಹ್ಲಾದ್ ಜೋಶಿ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದರು. ಈ ವೇಳೆ ಸಚಿವಾರದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ಹೆಚ್,ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಉಪಸ್ಥಿತರಿದ್ದರು.

  • 01 Nov 2026 12:16 PM (IST)

    ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

    ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಹೀಗಾಗಿ ಬರದ ನಡುವೆ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಇದನ್ನು ಖಂಡಿಸಿ ಬಿಜೆಪಿ ನಾಳೆ (ನವೆಂಬರ್ 01) ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬಹೃತ್ ಪ್ರತಿಭಟನೆಗೆ ಕರೆ ನೀಡಿದೆ.

  • 01 Nov 2026 10:56 AM (IST)

    ರಾಷ್ಟ್ರಧ್ವಜದ ಪಕ್ಕದಲ್ಲೇ ಕನ್ನಡ ಧ್ವಜ ಹಾರಿಸಲು ಚಿಂತನೆ: ಡಿಕೆಶಿ

    ಕನ್ನಡ ಭಾಷೆ ಚಿನ್ನದ ಆಭರಣವಿದ್ದಂತೆ, ಅದನ್ನು ಕಾಪಾಡುವ ಹೊಣೆ ನಿಮ್ಮ ಮೇಲಿದೆ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಹೀಗಾಗಿ ರಾಷ್ಟ್ರಧ್ವಜದ ಪಕ್ಕದಲ್ಲೇ ಕನ್ನಡ ಧ್ವಜ ಹಾರಿಸಲು ಕಡ್ಡಾಯ ಮಾಡಬೇಕೆಂಬ ಚಿಂತನೆಗಳು ನಡೆದಿವೆ. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

  • 01 Nov 2026 09:37 AM (IST)

    ರಾಜ್ಯದ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಸಿಎಂ

    ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕದ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಈ‌ ಭಾಷೆಗೆ ಯಾವುದೇ ಗಡಿ ಇಲ್ಲ/ ಬ್ರಿಟೀಷರಿಗೆ ನಮ್ಮ‌ಮಾತೃಭಾಷೆ ಯಾವುದು ನಮೂದು‌ ಮಾಡಿ ಅಂತಾ ಬಿಟ್ಟು ಹೋದ‌ ಇತಿಹಾಸ ಇದೆ. ಎಲ್ಲಾ ಸರ್ಕಾರಿ‌ ಕಚೇರಿಗಳ ಮೇಲೆ ,‌ ಖಾಸಗಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸಲು ಆದೇಶ ಹೊರಡಿಸಲು ಸಿದ್ಧತೆ ಮಾಡ್ಕೊಂಡಿದೇವೆ. ನಿನ್ನೆ ಮೊನ್ನೆ ಕೂಡ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದೇನೆ. ಈ ಅಧಿವೇಶನದಲ್ಲಿ ಕೆಲವು ವಿಚಾರಗಳನ್ನ ಮಂಡನೆ ಮಾಡ್ತೇವೆ. ನಮ್ಮ ಧ್ವಜವನ್ನು ನಾವು ಎಲ್ಲಾ ಕಡೆ ಬಳಸಲು ಬದ್ಧರಾಗಿರಬೇಕು. ಬೇರೆ ಯಾವ ರಾಜ್ಯದಲ್ಲೂ ಹೀಗೆ ಧ್ವಜ ಬಳಕೆ ಇಲ್ಲ. ಸಾರ್ವಜನಿಕ ಚರ್ಚೆ, ಶಾಸಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆ. ಜೊತೆಗೆ ಕೇಂದ್ರಕ್ಕೆ ನಿರ್ಣಯ ಕಳಿಸಿಕೊಡ್ತೇವೆ. ಇಡೀ ವಿಶ್ವದಲ್ಲಿರುವ ಕನ್ನಡಿಗರು ಸೇರಿದಂತೆ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಗಳು ಕೋರಿದರು. (ಇದನ್ನೂ ಓದಿ)

  • 01 Nov 2026 09:30 AM (IST)

    ಧ್ವಜಾರೋಹಣ ನೆರವೇರಿಸಿದ ಸಿಎಂ ಡಿ.ಕೆ.ಶಿವಕುಮಾರ್​​

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 71ನೇ ಕನ್ನಡ ಕನ್ನಡ ರಾಜ್ಯೋತ್ಸವ ನಡೆಯುತ್ತಿದ್ದು, ಸಿಎಂ ಡಿ.ಕೆ.ಶಿವಕುಮಾರ್​​ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿ ಹಲವು ಗಣ್ಯರು ಉಪಸ್ಥಿತತಿದ್ದರು.

  • 01 Nov 2026 08:15 AM (IST)

    ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಮಧ್ಯೆ ಪ್ರತ್ಯೇಕ ರಾಜ್ಯ ಕೂಗು

    ನಾಡಿನಲ್ಲೆಡೆ ಕರ್ನಾಟಕ ರಾಜ್ಯೋತ್ಸವ ಸಡಗರ ಸಂಭ್ರಮ ಮನೆ ಮಾಡಿದೆ. ಆದ್ರೆ ‌ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯ ಕೂಗು ಕೇಳಿಬಂದಿದೆ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಇಂದು ಕಲಬುರಗಿಯ ಎಸ್ ವಿಪಿ ವೃತ್ತದಲ್ಲಿ ಧ್ವಜಾರೋಹಣಕ್ಕೆ ಮುಂದಾಗಿರುವ ಘಟನೆ ನಡೆದಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮತ್ತು 371(ಜೆ) ಕಲಂ ಸಮರ್ಪಕ ಜಾರಿಗೆ ಒತ್ತಾಯಿಸಿ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ತೆರಳುತ್ತಿದ್ದರು. ಈ ವೇಳೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಮ್ ಎಸ್ ಪಾಟೀಲ್ ಸೇರಿದಂತೆ 20 ಕ್ಕೂ ಅಧಿಕ ಹೋರಾಟಗಾರರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • 01 Nov 2026 08:11 AM (IST)

    :ಬೆಳಗಾವಿಲ್ಲಿ 3000 ಪೊಲೀಸರಿಂದ ಸರ್ಪಗಾವಲು

    ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಕಳೆಗಟ್ಟಿದ್ದು, ಮಧ್ಯರಾತ್ರಿಯಿಂದಲೇ ಸಂಭ್ರಮ ಮನೆ ಮಾಡಿದೆ. ಇನ್ನು ಎಂಇಎಸ್ ಪುಂಡರಿಂದ ಕರಾಳ ದಿನ ಹಿನ್ನೆಲೆಯಲ್ಲಿ ಮುಂಗಾಗ್ರತಾ ಕ್ರಮವಾಗಿ ಬೆಳಗಾವಿ ನಗರದಲ್ಲಿ 3000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬೆಳಗಾವಿ ಪೊಲೀಸ್ ಕಮೀಷನರ್ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಇಬ್ಬರು ಡಿಸಿಪಿ, ಎಸಿಪಿ 6, ಪಿಐ 68, ಪಿಎಸ್ಐ ಮತ್ತು ಎಎಸ್ಐ 304, 1800 ಪೊಲೀಸ್ ಸಿಬ್ಬಂದಿ, 400 ಹೋಮ್ ಗಾರ್ಡ್ ಭದ್ರತೆಗೆ ನಿಯೋಜಿಸಲಾಗಿದೆ.

  • 01 Nov 2026 07:44 AM (IST)

    ಹಾಸನಾಂಬೆ ದರ್ಶನಕ್ಕೆ ಕಿಲೋಮೀಟರ್ ಗಟ್ಟಲೆ ಸಲುಗಟ್ಟಿ ನಿಂತಿ ಭಕ್ತರ ದಂಡು

    ಇಂದು ಮೂರನೇ ದಿನ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ. ತಾಯಿ ದರ್ಶನಕ್ಕೆ ಭಕ್ತರು ರಾತ್ರಿಯಿಂದಲೂ ಕಾದು ನಿಂತಿದ್ದಾರೆ. ಭಾನುವರ ಹಿನ್ನೆಲೆಯಲ್ಲಿ ಹಾಸನಕ್ಕೆ ಜನಸಾಗರವೇ ಹರಿದುಬಂದಿದ್ದು, ಕಿಲೋಮೀಟರ್ ಗಟ್ಟಲೆ ಭಕ್ತರ ದಂಡು ಸಲುಗಟ್ಟಿ ನಿಂತಿದೆ. ಧರ್ಮ ದರ್ಶನ, ಸಾವಿರ ರೂ ಟಿಕೇಟ್, ಮುನ್ನೂರು ರೂ ಟಿಕೇಟ್ ನ ಎಲ್ಲಾ ಸರತಿ ಸಾಲು ಭರ್ತಿಯಾಗಿ ಮುಂದೆ ಸಾಗಿವೆ

  • 01 Nov 2026 07:36 AM (IST)

    ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೇ ಕನ್ನಡ ರಾಜ್ಯೋತ್ಸವ ಆಚರಣೆ

    ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಚನ್ನಮ್ಮ ವೃತ್ತದಲ್ಲಿ ಮೇಯರ್ ಪ್ರೀತಿ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನು ಕನ್ನಡಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

  • 01 Nov 2026 07:34 AM (IST)

    ಹಾಸನದಲ್ಲಿ ಜನಜಂಗುಳಿ

    ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಮೂರನೇ ದಿನವಾದ ಇಂದು (ನವೆಂಬರ್ 01) ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದು, ಸಾರಿಗೆ ಬಸ್ ನಿಲ್ದಾಣದಲ್ಲಿ ಜನಜಂಗುಳಿಯಾಗಿದೆ. ಇನ್ನು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿ ದೇವಿ ದರ್ಶನ ಪಡೆದು ವಾಪಾಸ್ ತಮ್ಮ ಊರುಗಳಿಗೆ ತೆರಳಲು ಬಸ್‌ಗಾಗಿ ಪರದಾಡುತ್ತಿದ್ದಾರೆ. ಹಾಸನ ಬಸ್ ನಿಲ್ದಾಣದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು ಜಮಾಯಿಸಿದ್ದಾರೆ. ಹೀಗಾಗಿ ನೂಕು-ನುಗ್ಗಲು ಮಾಡಿಕೊಳ್ಳಬೇಡಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದಾರೆ.

  • 01 Nov 2026 07:31 AM (IST)

    ಬೆಳಗಾವಿಯಲ್ಲಿ ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ

    ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಎಂಎಸ್​​​ಪಿ ದರ ನಿಗದಿ ಮಾಡುವಂತೆ ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರೈತರು ನೀಡಿದ್ದ ಡೆಡ್​​ಲೈನ್ ಮುಗಿದಿದ್ದು, ಪ್ರತಿಭಟನೆ ತೀವ್ರಗೊಳಿಸಲು ಮುಂದಾಗಿದ್ದಾರೆ. ಇಂದು ಮತ್ತೆ ಗುರ್ಲಾಪುರದಲ್ಲಿ ಜಮಾವಣೆಯಾಗುವ ರೈತ ಮುಖಂಡರು, ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ನಾಳೆ ಗುರ್ಲಾಪುರದಿಂದ ಜೈಲ್ ಭರೋ ಚಳವಳಿಗೆ ಕರೆ ನೀಡಲು ಚಿಂತನೆ ನಡೆಸಿದ್ದಾರೆ.

  • 01 Nov 2026 07:28 AM (IST)

    ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ರಾಜ್ಯೋತ್ಸವ

    ಕರ್ನಾಟಕದಲ್ಲಿ ಎಲ್ಲೆಡೆ 71ನೇ ಕನ್ನಡ ರಾಜ್ಯೋತ್ಸವ ಸಂಭಮ ಮನೆ ಮಾಡಿದ್ದು,ಬೆಂಗಳೂರಿನಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಗ್ಗೆ 9 ಗಂಟೆಗೆ ಸಿಎಂ ಡಿಕೆ ಶಿವಕುಮಾರ್ ಧ್ವಜಾರೋಹಣ ಮಾಡಿ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

Published On - Nov 01,2026 7:25 AM

Follow Us