
ಬೆಂಗಳೂರು, ಮೇ 17: ಬೆಂಗಳೂರು-ಮುಂಬೈ ನಡುವೆ ಸಂಚಾರ ಮಾಡಲಿರುವ ಹೊಸ ಎಕ್ಸ್ಪ್ರೆಸ್ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೇ ನಿಲ್ದಾಣದಲ್ಲಿ ಇಂದು (ಮೇ 17) ಚಾಲನೆ ನೀಡಲಾಗಿದೆ. ದುರ್ದೈವ ಅಂದ್ರೆ ರೈಲ್ವೇ ಇಲಾಖೆಯ ಈ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯವಾಗಿತ್ತು. ಮುಖ್ಯ ವೇದಿಕೆಯಲ್ಲಿ ಹಾಕಿರುವ ಫ್ಲೆಕ್ಸ್ನಲ್ಲಿಇಂಗ್ಲಿಷ್ನಲ್ಲಿ ಮಾತ್ರ ನಾಮ ಫಲಕ ಹಾಕಲಾಗಿದ್ದು, ಕರ್ನಾಟಕದ ಸಂಸದ ವಿ.ಸೋಮಣ್ಣ ಅವರೇ ರೈಲ್ವೇ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದರೂ ಕನ್ನಡದ ಬಗ್ಗೆ ಇಷ್ಟು ನಿರ್ಲಕ್ಷ್ಯ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಇನ್ನು ಕಾರ್ಯಕ್ರಮ ಸಂಬಂಧ ಕನ್ನಡದಲ್ಲಿ ಫ್ಲೆಕ್ಸ್ ಹಾಕಲು ಅಡ್ಡಿಪಡಿಸಿರೋದು ಇಲಾಖೆಯ ಹಿರಿಯ ಅಧಿಕಾರಿಗಳು ಎಂಬ ಮಾತುಗಳೂ ಕೇಳಿಬಂದಿವೆ. ರಾಜ್ಯದ ರೈಲ್ವೆ ಅಧಿಕಾರಿಗಳು ಸ್ಥಳೀಯ ಭಾಷೆಯಾದ ಕನ್ನಡದಲ್ಲಿಯೇ ಫ್ಲೆಕ್ಸ್ ಹಾಕಲು ಮುಂದಾಗಿದ್ದರು. ಆದರೆ ಹಿರಿಯ ರೈಲ್ವೇ ಅಧಿಕಾರಿಗಳು ಈ ಫ್ಲೆಕ್ಸ್ ಅಳವಡಿಸಲು ಅವಕಾಶ ನೀಡಿಲ್ಲವಂತೆ. ಹೀಗಾಗಿ ಕನ್ನಡದಲ್ಲಿ ಪ್ರಿಂಟ್ ಆಗಿದ್ದ ಫ್ಲೆಕ್ಸ್ಗಳನ್ನು ವೇದಿಕೆಯ ಹಿಂಭಾಗದಲ್ಲಿ ಇಟ್ಟಿರುವುದು ಕಂಡುಬಂದಿದೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್ನ್ಯೂಸ್; ಬೆಂಗಳೂರು, ಮುಂಬೈ ಎಕ್ಸ್ಪ್ರೆಸ್ ಟ್ರೈನ್ಗೆ ಹಸಿರು ನಿಶಾನೆ
ಇನ್ನು ಕಾರ್ಯಕ್ರಮದ ಫ್ಲೆಕ್ಸ್ನಲ್ಲಿ ಕನ್ನಡದಲ್ಲಿ ಒಂದೇ ಒಂದು ಪದ ಇಲ್ಲದಿರುವ ಬಗ್ಗೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದು ದಿಢೀರ್ ಕಾರ್ಯಕ್ರಮ. ನಿನ್ನೆ ನಾನು ಬೇರೆ ಕಾರ್ಯಕ್ರಮದಲ್ಲಿ ಇದ್ದೆ. ನಾನು ಸಚಿವನಾದ ಮೇಲೆ ಕನ್ನಡಕ್ಕೆ ಆದ್ಯತೆ ಕೊಟ್ಟಿದ್ದೇನೆಯೋ ಇಲ್ಲವೋ ನೀವೇ ಹೇಳಿ. ಮುಂದೆ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.