2 ವರ್ಷದ ಬಳಿಕ ಬೆಂಗಳೂರಿನಲ್ಲಿ ಅದ್ಧೂರಿ ಕರಗ ಶಕ್ತ್ಯೋತ್ಸವ: ಸಂಪ್ರದಾಯದಂತೆ ದರ್ಗಾಕ್ಕೆ ಭೇಟಿ
ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನೂ ಈ ಬಾರಿ ಅನುಸರಿಸಲಾಯಿತು. ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಬೆಂಗಳೂರು: ಕರ್ನಾಟಕದ ಅತ್ಯಂತ ಪ್ರಮುಖ ಧಾರ್ಮಿಕ ಆಚರಣೆಯಾಗಿರುವ ಬೆಂಗಳೂರಿನ ಐತಿಹಾಸಿಕ ಧರ್ಮರಾಯ ಸ್ವಾಮಿ ಕರಗ (Bengaluru Karaga) ಭಾನುವಾರ (ಏಪ್ರಿಲ್ 17) ನಸುಕಿನಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನೂ ಅನುಸರಿಸಲಾಯಿತು. ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಒಬ್ಬ ಡಿಸಿಪಿ, ಐವರು ಎಸಿಪಿ, 15 ಇನ್ಸ್ಪೆಕ್ಟರ್ಗಳು, 30 ಪಿಎಸ್ಐ, 300 ಕಾನ್ಸ್ಟೆಬಲ್ಗಳು ಮತ್ತು 6 ಕೆಎಸ್ಆರ್ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಎರಡು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅದ್ಧೂರಿ ಕರಗ ಶಕ್ತ್ಯೋತ್ಸವ ನಡೆಯಿತು. ದೇಗುಲ ಆವರಣದಲ್ಲಿ ಧಾರ್ಮಿಕ ವಿಧಿಗಳು ನಡೆದವು. ನಸುಕಿನ ಎರಡು ಗಂಟೆ ವೇಳೆಗೆ ತಾಯಿ ದ್ರೌಪದಿ ದೇವಿಯ ಅಪ್ಪಣೆಯ ನಂತರ ಕರಗವನ್ನು ಭಕ್ತರು ಕಣ್ತುಂಬಿಕೊಂಡರು. ಕರಗ ಉತ್ಸವದಲ್ಲಿ ಪಾಲ್ಗೊಂಡಿದ್ದ ವೀರಕುಮಾರರ ನಡುವೆ ಪುನೀತ್ ರಾಜ್ ಕುಮಾರ್ ಚಿತ್ರಗಳು ಕಾಣಿಸಿದವು. ವೀರಕುಮಾರರು ಅಲಗು ಸೇವೆ (ಎದೆಗೆ ಕತ್ತಿ ತಾಗಿಸಿಕೊಳ್ಳುವುದು) ಮಾಡಿದರು. ಪ್ರತಿಬಾರಿಯಂತೆ ಈ ಬಾರಿಯೂ ಕರಗ ಮಹೋತ್ಸವವು ಮಸ್ತಾನ್ ದರ್ಗಾಕ್ಕೆ ಕರಗ ಪ್ರವೇಶಿಸಿತು. ದರ್ಗಾಕ್ಕೆ ಮುಸ್ಲಿಮರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಕರಗ ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಮುಸ್ಲಿಮರು ಹಿಂದೂಗಳಿಗೆ ಸಿಹಿತಿಂಡಿ, ನೀರು, ಡ್ರೈಫ್ರೂಟ್ಸ್ ನೀಡಿ ಸ್ವಾಗತಿಸಿದರು.
ದರ್ಗಾ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದರ್ಗಾದ ಮುಜಾವರ್ ಮಹಮ್ಮದ್ ಗೌಸ್, ‘ಹಿಂದೂ-ಮುಸ್ಲಿಮರ ಪ್ರೀತಿ ಇದು. ಬೆಂಗಳೂರು ಕರಗ ಕರ್ನಾಟಕದ ದೊಡ್ಡ ಹಬ್ಬ. ಈ ಬಾರಿ ರಂಜಾನ್ ಮತ್ತು ಕರಗ ಒಟ್ಟಿಗೆ ಬಂದಿದೆ. ಎಲ್ಲವೂ ಒಳ್ಳೆಯ ರೀತಿಯಲ್ಲಿ ನಡೆದಿದೆ. ದರ್ಗಾ ಸುತ್ತಲೂ ಮೂರು ಸುತ್ತು ಕರಗ ಪ್ರದಕ್ಷಿಣೆ ಹಾಕಿತು. ಕೆಲವರು ಕರಗ ಬರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಅದೆಲ್ಲಾ ರಾಜಕೀಯ ಅಷ್ಟೇ’ ಎಂದು ಹೇಳಿದರು.
ಕರಗ ನೋಡಲು ದರ್ಗಾ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದರು. ಅವರೂ ಸಹ ‘ಗೋವಿಂದಾ ಗೋವಿಂದಾ’ ಎಂದು ಕೂಗಿದರು. ದರ್ಗಾದಿಂದ ಕರಗ ಗಾಂಧಿನಗರದ ಅಣ್ಣಮ್ಮ ದೇವಸ್ಥಾನ ತಲುಪಿತು.
ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತ ಚಾಲನೆ; ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ
ಇದನ್ನೂ ಓದಿ: ಸಂಚಾರದಟ್ಟಣೆಗೆ ಕಾರಣವಾಗದಂತೆ ಬೆಂಗಳೂರು ಕರಗ ಮೆರವಣಿಗೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ