ಬೆಂಗಳೂರು, ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ (Karnataka Bandh) ಬೆಂಗಳೂರಿನಲ್ಲಿ ಶಾಂತಿಯುತವಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ (B Dayanand) ತಿಳಿಸಿದರು. ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕೆಲವು ಸಂಘಟನೆ, ರಾಜಕೀಯ ಪಕ್ಷಗಳು ಇವತ್ತಿನ ಬಂದ್ಗೆ ಕರೆ ಕೊಟ್ಟಿದ್ದವು. ಬೆಂಗಳೂರಿನಲ್ಲಿ ಶಾಂತಿಯುತವಾಗಿ ನಡೆದಿದೆ. ಗುರುವಾರ ರಾತ್ರಿಯಿಂದಲೇ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಡೀ ದಿನ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಬೆಂಗಳೂರಿನಲ್ಲಿ ನಡೆದಿಲ್ಲ ಎಂದು ತಿಳಿಸಿದರು.
ಕೆಲವು ಭಾಗಗಳಲ್ಲಿ ರ್ಯಾಲಿ, ಪ್ರತಿಭಟನೆ ಮಾಡಿದಾಗ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಯಲ್ಲಿ ಇದ್ದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಹಲವರನ್ನು ಬಂಧಿಸಲಾಗಿದೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ವಿವಿಧ ಸಂಘಟನೆಗಳ ಸುಮಾರು ಒಂದೂವರೆ ಸಾವಿರದಷ್ಟು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾ ರ್ಯಾಲಿಗೆ ಮುಂದಾಗಿದ್ದ 785 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದರು.
ಈ ಮಧ್ಯೆ, ಸಂಜೆಯಾಗುತ್ತಿದ್ದಂತೆಯೇ ಬೆಂಗಳೂರು ನಗರದ ಬಹುತೇಕ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಮಲ್ಲೇಶ್ವರಂ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದಿವೆ. ಹೂವಿನ ಮಾರುಕಟ್ಟೆ ಓಪನ್ ಇದ್ದರೂ ವ್ಯಾಪಾರ ಇಲ್ಲ ಎಂದು ಮಾಲೀಕರು ಅಳಲುತೋಡಿಕೊಂಡಿದ್ದಾರೆ. ನೀರು ಬೇಕು ವ್ಯಾಪಾರವೂ ಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ವಾದಕ್ಕಿಲ್ಲ ಕಿಂಚಿತ್ತೂ ಕಿಮ್ಮತ್ತು: ತಮಿಳುನಾಡಿಗೆ ಪ್ರತಿ ದಿನ 3000 ಕ್ಯೂಸೆಕ್ ನೀರು ಹರಿಸುವಂತೆ ಮತ್ತೆ ಆದೇಶ
ರಾಜ್ಯದ ಇತರ ನಗರಗಳಾದ ಮೈಸೂರು, ಹಾಸನಗಳಲ್ಲಿಯೂ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಹಾಸನದಲ್ಲಿ ಬಂದ್ ಅವದಿ ಮುಗಿಯುತ್ತಲೇ ವರ್ತಕರು ವ್ಯಾಪಾರ ವಹಿವಾಟು ಆರಂಬಿಸಿದರು. ಹಾಸನದ ಮುಖ್ಯ ರಸ್ತೆಗಳು ಸಹಜ ಸ್ಥಿತಿಯತ್ತ ಮರಳಿವೆ. ಸಾರಿಗೆ ಬಸ್ ಸಂಚಾರ ಕೂಡ ಸಹಜ ಸ್ಥಿತಿಗೆ ಮರಳಿದೆ. ಮೈಸೂರಿನಲ್ಲಿ ಕೂಡ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ವರ್ತಕರು ಅಂಗಡಿ ಮುಂಗಟ್ಟುಗಳನ್ನು ತೆರೆಯುತ್ತಿದ್ದಾರೆ. ಮೈಸೂರು ಹಾಗೂ ಬೆಂಗಳೂರು ಮಧ್ಯೆ ಬಸ್ ಸಂಚಾರವೂ ಆರಂಭಗೊಂಡಿದೆ.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ