ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ದೆಹಲಿಯ ಮೋತಿಲಾಲ್ ನೆಹರು ಮಾರ್ಗ್ನಲ್ಲಿರುವ ಜೆ.ಪಿ.ನಡ್ಡಾ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಂಪುಟ ರಚನೆ ಬಗ್ಗೆ ನಡ್ಡಾ ಜೊತೆ ಸಿಎಂ ಬೊಮ್ಮಾಯಿ ಚರ್ಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ನಡ್ಡಾ ಭೇಟಿಯಾಗಿದ್ದಾರೆ.
ಸಚಿವ ಸಂಪುಟ ರಚನೆ ಸಂಬಂಧ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಭಾನುವಾರ ಮಧ್ಯರಾತ್ರಿವರೆಗೂ ಸಿಎಂ ದೆಹಲಿಯ ಅಜ್ಞಾತ ಸ್ಥಳದಲ್ಲಿದ್ದರು. ಬೆಂಗಾವಲು ಪಡೆ ಬಿಟ್ಟು ಬೊಮ್ಮಾಯಿ ತೆರಳಿದ್ದರು. ಸೋಮವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಬೊಮ್ಮಾಯಿ ಚರ್ಚಿಸಿದ್ದಾರೆ. ದೆಹಲಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರ ಪಟ್ಟಿಯೊಂದಿಗೆ ರಾಜ್ಯಕ್ಕೆ ವಾಪಸ್ ಆಗುವ ಸಾಧ್ಯತೆಯಿದೆ.
ಜೆ.ಸಿ.ನಗರ ಠಾಣೆ ಬಳಿ ಆಫ್ರಿಕಾ ಪ್ರಜೆಗಳ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಡ್ರಗ್ಸ್ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದೊಡ್ಡಮಟ್ಟದಲ್ಲಿ ಪೊಲೀಸರು ಡ್ರಗ್ಸ್ ಜಪ್ತಿ ಮಾಡಿದ್ದರು. ಡ್ರಗ್ಸ್ ಧಂದೆ ಪ್ರಕರಣದಲ್ಲಿ ಆಫ್ರಿಕಾ ಪ್ರಜೆ ಬಂಧಿಸಿದ್ದರು ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಪೊಲೀಸರ ವಶದಲ್ಲಿದ್ದ ವ್ಯಕ್ತಿ ಮೃತಪಟ್ಟ ಬಗ್ಗೆ ಸಿಐಡಿ ತನಿಖೆ ನಡೆಯಲಿದೆ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಾರೆ. ಆಫ್ರಿಕನ್ ಪ್ರಜೆಗಳು ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ವಿಟ್ ಎನ್ಡಿಪಿಎಸ್ ಕಾಯ್ದೆಯಡಿ ಹಲವರನ್ನು ಬಂಧಿಸಿದ್ದೆವು. ಠಾಣೆ ಎದುರು ಬಹಳ ಅಮಾನವೀಯವಾಗಿ ವರ್ತಿಸಿದ್ದಾರೆ. ನಮ್ಮ ಪೊಲೀಸರು ಬಹಳ ತಾಳ್ಮೆಯಿಂದ ವರ್ತಿಸಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದರಿಂದ ಲಘುಲಾಠಿ ಪ್ರಹಾರ ಮಾಡಲಾಗಿದೆ. ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಜೆ.ಪಿ.ನಡ್ಡಾ ನಿವಾಸದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಭವನಕ್ಕೆ ತೆರಳಿದ್ದಾರೆ. ಸಂಪುಟ ರಚನೆ ಬಗ್ಗೆ ಚರ್ಚೆ ನಂತರ ಕರ್ನಾಟಕ ಭವನಕ್ಕೆ ಸಿಎಂ ತೆರಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜತೆ ಸಿಎಂ ಬೊಮ್ಮಾಯಿ ತೆರಳಿದ್ದಾರೆ.
ಜೆ.ಪಿ. ನಡ್ಡಾ ಜೊತೆ ಸಂಪೂರ್ಣವಾಗಿ ಚರ್ಚೆ ನಡೆಸಿದ್ದೇವೆ. ಬಿಜೆಪಿ ಅಧ್ಯಕ್ಷರು ಕೆಲವೊಂದು ಸಲಹೆ ನೀಡಿದ್ದಾರೆ. ಹೈಕಮಾಂಡ್ ಒಳ್ಳೆಯ ತೀರ್ಮಾನ ಮಾಡುವ ವಿಶ್ವಾಸವಿದೆ. ನಾಳೆ ಸಂಜೆ ನೂತನ ಸಚಿವರ ಪಟ್ಟಿ ಪ್ರಕಟಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಯಾರು, ಎಷ್ಟು ಜನ ಸಚಿವರಾಗುತ್ತಾರೆಂದು ನಾಳೆ ಗೊತ್ತಾಗುತ್ತೆ. ಡಿಸಿಎಂ ಸ್ಥಾನಗಳ ಬಗ್ಗೆಯೂ ನಾಳೆಯೇ ಅಂತಿಮವಾಗುತ್ತೆ. 2-3 ಪಟ್ಟಿ ಕೊಟ್ಟಿದ್ದೇವೆ, ವರಿಷ್ಠರಿಂದ ಅಂತಿಮ ತೀರ್ಮಾನ ಎಂದು ನಡ್ಡಾ ಭೇಟಿ ನಂತರ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ಧಾರೆ.
ಡಿಸಿಎಂ ಆಗಲು ಬಯಸಿಲ್ಲ, ಅವಕಾಶ ಕೊಟ್ರೆ ನಿಭಾಯಿಸುವೆ. ನಾನು ನೂರಕ್ಕೆ ನೂರರಷ್ಟು ಸಚಿವನಾಗುತ್ತೇನೆ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಶಾಸಕ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಬಿಜೆಪಿ ಘಟಕದಲ್ಲಿ ಯಾವುದೇ ಭಿನ್ನಮತವಿಲ್ಲ. ಪೂರ್ಣಾವಧಿಗೆ ಸಿಎಂ ಆಗಿ ಬೊಮ್ಮಾಯಿ ಮುಂದುವರೀತಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಿಎಂ ಆಗಿ ಕೊಡುಗೆ ಕೊಡ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ನಾನು ಜೆ.ಪಿ.ನಡ್ಡಾ, ಅಮಿತ್ ಶಾರನ್ನು ಭೇಟಿಯಾಗಿದ್ದು ನಿಜ. ಅವಕಾಶ ನೀಡಿದ್ರೆ ಸಚಿವನಾಗುವೆ, ಇಲ್ಲದಿದ್ರೆ ಶಾಸಕನಾಗಿರುವೆ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಎಂಬ ಸಾಧ್ಯತೆಗಳ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸಂಪುಟ ರಚನೆ ಚರ್ಚೆ ಅಂತಿಮವಾದರೆ ಗುರುವಾರ ಪದಗ್ರಹಣ ನಡೆಯಲಿದೆ. ಸಚಿವರಾಗಿ 24 ಕ್ಕೂ ಹೆಚ್ಚು ಶಾಸಕರು ಪ್ರಮಾಣವಚನ ಸಾಧ್ಯತೆ ಇದೆ. ಮುನಿರತ್ನ ಸೇರಿ 10 ವಲಸಿಗರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ದೆಹಲಿಯ ಮೋತಿಲಾಲ್ ನೆಹರು ಮಾರ್ಗ್ನಲ್ಲಿರುವ ಜೆ.ಪಿ.ನಡ್ಡಾ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಂಪುಟ ರಚನೆ ಬಗ್ಗೆ ನಡ್ಡಾ ಜೊತೆ ಸಿಎಂ ಬೊಮ್ಮಾಯಿ ಚರ್ಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಆಗಮಿಸಿದ್ದಾರೆ.
ಸಂಪುಟ ರಚನೆ ಬಗ್ಗೆ ವರಿಷ್ಠರ ಜತೆ ಸಿಎಂ ಚರ್ಚಿಸುತ್ತಿದ್ದಾರೆ. ಯಾರನ್ನು ಸೇರಿಸಿಕೊಳ್ತಾರೋ, ಬಿಡ್ತಾರೋ ನಿರ್ಧಾರವಾಗಿಲ್ಲ. ಸಂಪುಟಕ್ಕೆ ಸೇರುವುದಿಲ್ಲವೆಂದು ನಾನು ನಿರ್ಧಾರ ಮಾಡಿದ್ದೇನೆ. ಬಿಜೆಪಿಯಲ್ಲಿ ನಾನೊಬ್ಬ ಹಿರಿಯ ನಾಯಕ, ಮಾಜಿ ಸಿಎಂ ಆಗಿದ್ದೇನೆ. ನಾನು ಬೊಮ್ಮಾಯಿ ಸಂಪುಟ ಸೇರಲ್ಲವೆಂಬ ನಿಲುವು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಪಕ್ಷ ಸಂಘಟನೆಗಾಗಿ ಯಾವುದೇ ವಿಶೇಷ ಜವಾಬ್ದಾರಿ ಬೇಡ ಎಂದು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ವರಿಷ್ಠರ ಭೇಟಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬ್ಯುಸಿ ಆಗಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕ ಸಿದ್ದು ಸವದಿ ಜೊತೆ ಕುಮಾರಕೃಪಾ ಅತಿಥಿಗೃಹದ ಆವರಣದಲ್ಲಿ ವಾಕಿಂಗ್ ಮಾಡಿರುವುದು ಗಮನ ಸೆಳೆದಿದೆ. ಸಚಿವ ಸಂಪುಟ ಕಸರತ್ತಿನ ನಡುವೆ ಶಾಸಕರಿಬ್ಬರ ಸಂಜೆ ವಾಕಿಂಗ್ ಗಮನ ಸೆಳೆದಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಸಚಿವಾಲಯದ ಸಿಬ್ಬಂದಿ ಮತ್ತು ನೌಕರರು ಕರ್ತವ್ಯದಿಂದ ಬಿಡುಗಡೆ ಆಗಿದ್ದಾರೆ. ನಿಯೋಜನೆ ಮತ್ತು ಗುತ್ತಿಗೆ ಆಧಾರದಲ್ಲಿ ಸಿಎಂ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮತ್ತು ನೌಕರರನ್ನು ಬಿಡುಗಡೆಗೊಳಿಸಲಾಗಿದೆ. ಗ್ರೂಪ್ ಬಿ ಹುದ್ದೆಯ 3 ಅಧಿಕಾರಿಗಳು ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ. ಗ್ರೂಪ್ ಸಿ ಹುದ್ದೆಯ 7 ಸಿಬ್ಬಂದಿ ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿದ್ದ 123 ಸಹಾಯಕರು, ಗುತ್ತಿಗೆ ಆಧಾರದಲ್ಲಿದ್ದ 18 ವಾಹನ ಚಾಲಕರು, 47 ಗ್ರೂಪ್ ಡಿ ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ದೆಹಲಿಗೆ ಹೋದರೆ ಸಚಿವ ಸ್ಥಾನ ಸಿಗುತ್ತೆ ಎಂಬುದು ತಪ್ಪು. ನನಗೆ ಸಚಿವ ಸ್ಥಾನದ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಕ್ಷೇತ್ರದಲ್ಲಿದ್ದು ಒಳ್ಳೆಯ ಕೆಲಸ ಮಾಡಲು ಸೂಚನೆ ಬಂದಿದೆ. ಹೀಗಾಗಿ ಕ್ಷೇತ್ರದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ. ನಿನ್ನೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ನಾವೆಲ್ಲರೂ ಒಟ್ಟಾಗಿ ಪಕ್ಷ ಕಟ್ಟೋಣ ಎಂದು ಹೇಳಿದ್ದಾರೆ. ಮುಂದೆ ಬಿಜೆಪಿ ಸರ್ಕಾರ ತರಬೇಕು ಎಂದು ಹೇಳಿದ್ದಾರೆ. ನನಗೆ ವಯಸ್ಸಾಗಿದೆ, ನಿಮಗೆ ಭವಿಷ್ಯ ಇದೆ ಎಂದಿದ್ದಾರೆ. 2023ಕ್ಕೆ ನನಗೆ 74 ವರ್ಷ ವಯಸ್ಸಾಗುತ್ತೆ ಎಂದು ಹೇಳಿದ್ರು. ಬಿಜೆಪಿಯಲ್ಲಿ ಎಲ್ಲರಿಗೂ ಒಂದೇ ಕಾನೂನು ಇರುತ್ತದೆ. ಪಕ್ಷದ ಋಣ ತೀರಿಸಲು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದ್ದಾರೆ. ಕೆ.ಎಸ್.ಈಶ್ವರಪ್ಪ ನನಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ. ಪಕ್ಷಕ್ಕೆ ಹಾನಿ ಆಗದಂತೆ ನೋಡಿಕೊಳ್ಳೋಣ ಎಂದಿದ್ದಾರೆ. ಪಕ್ಷದ ನಿಷ್ಠಾವಂತರಲ್ಲೇ ಸೇರಿ ಕೆಲಸ ಮಾಡೋಣ ಎಂದಿದ್ದಾರೆ ಎಂದು ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ಧಾರೆ.
ಬಿಎಸ್ವೈ ಸಂಪುಟದಲ್ಲಿ ಸಚಿವನಾಗಲ್ಲ ಎಂದು ಹೇಳಿದ್ದೆ. ನಾನು ಹೇಳಿದಂತೆಯೇ ನಡೆದುಕೊಂಡಿದ್ದೇನೆ. ನಾನು ಎರಡ್ಮೂರು ಸಂಕಲ್ಪ ಮಾಡಿದ್ದೆ, ಅದೆಲ್ಲಾ ಈಡೇರಿದೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನೀಡಿದ್ದಾರೆ. ದೆಹಲಿಗೆ ಹೋದಾಗ ನಾನು ಎಂದೂ ನನ್ನ ಬಗ್ಗೆ ಹೇಳಿಲ್ಲ. ಪಕ್ಷದ ಹಿತದೃಷ್ಟಿಯಿಂದ ಮಾತ್ರ ನಾನು ಮಾತಾಡಿದ್ದೇನೆ. ಸಂಪುಟ ರಚನೆಯಲ್ಲಿ ವಿಜಯಪುರ ಜಿಲ್ಲೆಯನ್ನ ಕಡೆಗಣಿಸಲ್ಲ ಎಂಬ ವಿಶ್ವಾಸವಿದೆ. ಇದು ಶಿವಾಜಿ ಮಹಾರಾಜ ಶಿಕ್ಷಣ ಪಡೆದ ಪವಿತ್ರ ಭೂಮಿ. ಗೋ ಹತ್ಯೆಯ ವಿರುದ್ಧ ಪ್ರಥಮ ಬಾರಿಗೆ ಇಲ್ಲೇ ಕ್ರಾಂತಿ ಆಗಿತ್ತು. ಶಿವಾಜಿ ಮಹಾರಾಜರು ಕ್ರಾಂತಿ ಮಾಡಿದ್ದು ಗೊತ್ತಿದೆ. ಇಂಥ ಜಿಲ್ಲೆಯನ್ನ ಕಡೆಗಣಿಸಲ್ಲ ಅಂದುಕೊಂಡಿದ್ದೇನೆ.ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದರೆ ಮತ್ತೊಮ್ಮೆ ಕ್ರಾಂತಿ. ಕ್ರಾಂತಿಯ ಬಗ್ಗೆ ನಾನು ಹೇಳುವುದಕ್ಕೆ ಹೋಗುವುದಿಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ.
ಬ್ಲ್ಯಾಕ್ಮೇಲ್ ಮಾಡಿದವರು ಮಂತ್ರಿಗಳಾಗುತ್ತಾರೆ. ಟೀ ಪಾರ್ಟಿ ಮಾಡಿದವರು ಕೂಡ ಮಂತ್ರಿಯಾಗಿದ್ದಾರೆ. ಆದರೆ ಬಿಜೆಪಿಯಲ್ಲಿ ನನಗೆ ಗಾಡ್ಫಾದರ್ಗಳು ಇಲ್ಲ ಎಂದು ಚಿತ್ರದುರ್ಗದಲ್ಲಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ ನೀಡಿದ್ದಾರೆ. ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿ ಸ್ಥಾನದ ನಿರೀಕ್ಷೆ ಇದೆ. ಕೇಂದ್ರದ ಮಾದರಿಯಲ್ಲಿ ಸಂಪುಟ ರಚನೆ ಮಾಡಲಿ. ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಶಾಸಕ ಎಲ್. ನಾಗೇಂದ್ರಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಶಾಸಕ ಎಲ್. ನಾಗೇಂದ್ರ ಬೆಂಬಲಿಗರು ಧರಣಿ ನಡೆಸಿದ್ದಾರೆ. ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಇತ್ತ ಬಿಜೆಪಿ ಹೈಕಮಾಂಡ್ನಿಂದ ಇಂದು ಸಚಿವರ ಪಟ್ಟಿ ಫೈನಲ್ ಆಗಲಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಸಿಎಂ ಬೊಮ್ಮಾಯಿ ಇಂದು ಬಿಜೆಪಿ ವರಿಷ್ಠರನ್ನು ಭೇಟಿ ಆಗಲಿದ್ದಾರೆ. ಸಂಜೆ ಜೆ.ಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಭೇಟಿ ಸಾಧ್ಯತೆ ಇದೆ. ವರಿಷ್ಠರೊಂದಿದೆ ಚರ್ಚೆ ನಡೆಸಿ ಸಚಿವರ ಪಟ್ಟಿ ಫೈನಲ್ ಆಗಲಿದೆ ಎಂದು ತಿಳಿದುಬಂದಿದೆ.
ಎಚ್.ಡಿ. ದೇವೇಗೌಡರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಭೇಟಿ ಮಾಡಿದ ವಿಚಾರವಾಗಿ ಎಚ್.ಡಿ. ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಒಳ್ಳೆಯ ಕೆಲಸ ಮಾಡುವವರ ಜೊತೆಯಲ್ಲಿರಬೇಕಾಗುತ್ತೆ. ನಮಗೇನು ರಾಜ್ಯ ಸರ್ಕಾರವನ್ನು ತೆಗೆಯಬೇಕೆಂದು ಇಲ್ಲ. ನಮ್ಮ ಕೆಲಸ ಆಗದಿದ್ದರೂ, ಜನರಿಗೆ ಸಹಾಯವಾಗಬೇಕು. ಎಸ್.ಆರ್.ಬೊಮ್ಮಾಯಿಯವರು ದೇವೇಗೌಡರ ಜೊತೆಗಿದ್ದವರು. ಹೀಗಾಗಿ ಸಿಎಂ ಬೊಮ್ಮಾಯಿ ನಿನ್ನೆ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿದ್ರು. ಈ ವೇಳೆ ಒಳ್ಳೆ ಕೆಲಸ ಮಾಡಿ ಎಂದು ದೇವೇಗೌಡ ಹೇಳಿದ್ದಾರೆ ಎಂದು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.
ಚುನಾವಣೆ ಬಂದಾಗ ರಾಜಕೀಯದ ಬಗ್ಗೆ ನೋಡೋಣ. ನಿಮ್ಮ ಕಷ್ಟ ಕಾಲದಲ್ಲಿ ನಾವು ಜೊತೆಗಿದ್ದೇವೆ ಎಂದು ದೇವೇಗೌಡರು ಹೇಳಿದ್ದಾರೆ. ಈಗ ನಿಮಗೆ ಜತೆಯಾಗಿರುತ್ತೇವೆಂದಿದ್ದಾರೆ. 2023ರ ಚುನಾವಣೆಯಲ್ಲಿ ಒಟ್ಟಾಗಿರುತ್ತೇವೆಂದು ಹೇಳಿದ್ದಾರಾ? ಎಂದು ಎಚ್.ಡಿ.ರೇವಣ್ಣ ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ದಿಢೀರ್ ದೆಹಲಿಗೆ ತೆರಳಿದ್ದಾರೆ. ಬೆಳಗೆ 11 ಗಂಟೆ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಅವರು ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ಉನ್ನತ ಮಟ್ಟದ ವರಿಷ್ಠರ ಬಳಿ ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಡಲು ಅವರು ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ನ ಭೇಟಿಯಾಗಿದ್ದಾರೆ. ಸಂಸದರಾದ ಶಿವಕುಮಾರ ಉದಾಸಿ, ಎಸ್.ಮುನಿಸ್ವಾಮಿ,
ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ಉಪಸ್ಥಿತರಿದ್ದರು.
ಅಮಿತ್ ಶಾರನ್ನು ಭೇಟಿ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಸಂಸತ್ ಭವನಕ್ಕೆ ತೆರಳಿದರು. ಅಮಿತ್ ಶಾ ಜೊತೆ ಮೊದಲ ಹಂತದ ಮಾತುಕತೆ ನಡೆಸುತ್ತಾರೆ. ರಾಜ್ಯ ಸಚಿವ ಸಂಪುಟದ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಬಳಿಕ ಜೆ.ಪಿ.ನಡ್ಡಾ ಜೊತೆ ಚರ್ಚಿಸಲಿದ್ದಾರೆ.
ಸಚಿವ ಸಂಪುಟದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಬುಧವಾರ ಅಥವಾ ಗುರುವಾರ ಸಂಪುಟ ವಿಸ್ತರಣೆಯಾಗಬಹುದು ಅಂತ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಶಾಸಕ ಬಿ.ಸಿ.ಪಾಟೀಲ್ ಹೇಳಿದರು. ಶಾಸಕ ಹಿರೇಕೆರೂರು ಕ್ಷೇತ್ರ ವ್ಯಾಪ್ತಿಯ ಖಂಡೇಬಾಗೂರು, ಸತ್ತಿಗೆಹಳ್ಳಿ, ಕುಡುಪಲಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು.
ಸವದತ್ತಿ ಶಾಸಕ ಆನಂದ ಮಾಮನಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ, ಬೆಳಗಾವಿ ಜಿಲ್ಲೆ ಯರಗಟ್ಟಿಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಸಚಿವ ಸ್ಥಾನಕ್ಕೆ ಬಹಿರಂಗವಾಗಿ ಬೇಡಿಕೆ ಇಟ್ಟಿರುವ ಆನಂದ ಮಾಮನಿ, ಸಚಿವ ಸ್ಥಾನ ನೀಡದಿದ್ರೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಹೇಳಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಬಳಿಕ, ಶಾಸಕ ನೆಹರು ಓಲೇಕಾರ್ ಮಾಜಿ ಡಿಸಿಎಂ ಗೋವಿಂದ ಕಾರಜೋಳರನ್ನು ಭೇಟಿ ಮಾಡಿದ್ದಾರೆ. ತಮ್ಮ ಬೆಂಬಲಿಗರ ಜತೆ ಕಾರಜೋಳರನ್ನು ಶಾಸಕ ಓಲೇಕಾರ್ ಭೇಟಿ ಮಾಡಿದ್ದಾರೆ.
ಸವದತ್ತಿ ಶಾಸಕ ಆನಂದ ಮಾಮನಿಗೆ ಸಚಿವ ಸ್ಥಾನ ನೀಡುವಂತೆ ಬೆಳಗಾವಿ ಜಿಲ್ಲೆ ಯರಗಟ್ಟಿಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಮಂತ್ರಿಗಿರಿಗಾಗಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಲಾಬಿ ನಡೆಸುತ್ತಿದ್ದಾರೆ. ಬೆಂಬಲಿಗರ ಸಮೇತ ಬೆಂಗಳೂರಲ್ಲಿ ಬೀಡು ಬಿಟ್ಟಿದ್ದಾರೆ. ಬೆಂಬಲಿಗರ ಸಮೇತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ. ದೊಡ್ಡನಗೌಡ ಪಾಟೀಲ್ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಷ್ಟು ದಿನ ನಾವು ನಿಮ್ಮ ಬಳಿ ಅಭಿವೃದ್ಧಿ ಕಾರ್ಯಕ್ಕಾಗಿ ಬರುತ್ತಿದ್ದೆವು. ಆದರೆ ಈ ಬಾರಿ ಸಚಿವ ಸ್ಥಾನಕ್ಕಾಗಿ ಬಂದಿದ್ದೇವೆ. ನಮ್ಮ ಶಾಸಕರಿಗೆ ಸಚಿವ ಸ್ಥಾನ ಕೊಡಿಸಿ ಎಂದು ಬಿ.ಎಸ್. ಯಡಿಯೂರಪ್ಪನವರ ಬಳಿ ಮನವಿ ಮಾಡಿದ್ದಾರೆ.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಆಗಸ್ಟ್ 5ರಂದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಮಾಜಿ ಶಾಸಕ ನಂಜುಂಡಸ್ವಾಮಿ ವಿರೋಧ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು ನಂಜುಂಡಸ್ವಾಮಿ ಜೊತೆಯೂ ನಿನ್ನೆ ಚರ್ಚಿಸಿದ್ದೇನೆ. ಬಿಜೆಪಿ ಸೇರ್ಪಡೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಎಂಎಲ್ಸಿ ರುದ್ರೇಗೌಡಗೆ ಸಚಿವ ಸ್ಥಾನ ಕೊಡಿಸಲು ಮಾಚೇನಹಳ್ಳಿ ಕೈಗಾರಿಕಾ ಸಂಘ ಸುತ್ತೂರುಶ್ರೀಗೆ ಮನವಿ ಮಾಡಿದೆ. ಶಿವಮೊಗ್ಗ ತಾಲೂಕಿನ ಮಾಚೇನಹಳ್ಳಿ ಕೈಗಾರಿಕಾ ಸಂಘ, ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶ್ರೀಗಳಿಗೆ ಮನವಿ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರ.ಕಾರ್ಯದರ್ಶಿ ಬಿ.ಎಲ್.ಸಂತೋಷ್ರನ್ನು ಸಿಎಂ ಬೊಮ್ಮಾಯಿ ಬೇಟಿಯಾದರು. ದೆಹಲಿಯ ಕೇಂದ್ರ ಬಿಜೆಪಿ ಕಚೇರಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಂಪುಟ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಸಚಿವ ಸ್ಥಾನಾಕಾಂಕ್ಷಿಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಶಾಸಕ ರಾಜಕುಮಾರ್ ಪಾಟೀಲ್ ಬೆಂಗಳೂರಿಗೆ ಆಗಮಿಸುತ್ತಿದ್ದು, ಬಿಜೆಪಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಇನ್ನು ಮಂಗಳೂರಿನಿಂದ ಶಾಸಕ ಸುನಿಲ್ ಕುಮಾರ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ನಾನೊಬ್ಬ ಪಕ್ಷ ನಿಷ್ಟೆಯುಳ್ಳ ಕಾರ್ಯಕರ್ತ. ಪಕ್ಷದ ನಿಷ್ಟಾವಂತರನ್ನು ಪಕ್ಷ ಗುರುತಿಸುತ್ತದೆ. ಇವತ್ತು ಸ್ವಾಮೀಜಿಗಳು ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಸ್ವಾಮೀಜಿಗಳು ಕೇಳುವುದರಲ್ಲಿ ತಪ್ಪೇನಿಲ್ಲ. ಬೇರೆ ಬೇರೆ ಸ್ವಾಮೀಜಿಗಳು ಕೇಳಿದ್ದಾರೆ. ನನಗೂ ಕೊಟ್ಟರೂ ಸಂತೋಷ, ಕೊಡದಿದ್ದರೂ ಸಂತೋಷ. ಎಲ್ಲರಿಗೂ ಅವಕಾಶ ಸಿಗಬೇಕಲ್ಲ. ನಾನು ಹೋರಾಟದ ಮೂಲಕವೇ ಬಂದವನು. ಸಂಘದಿಂದ ಬಂದವರನ್ನು ಗುರ್ತಿಸಲಾಗುತ್ತದೆ. ನನಗೆ ಕೊಟ್ಟರೂ ಸರಿ, ಇಲ್ಲದಿದ್ದರೂ ನೋವಿಲ್ಲ ಅಂತ ಎಂಎಲ್ಸಿ ಎನ್.ರವಿಕುಮಾರ್ ಹೇಳಿದರು.
ಬೊಮ್ಮಾಯಿ ಸಂಪುಟ ಸೇರಲು ಶಾಸಕರು ಸರ್ಕಸ್ ನಡೆಸುತ್ತಿದ್ದಾರೆ. ಶಕ್ತಿಕೇಂದ್ರ ಕಾವೇರಿಗೆ ಆಗಮಿಸುತ್ತಿರುವ ಶಾಸಕರ ದಂಡು,
ಸಂಪುಟ ಸೇರಲು ಬಿಎಸ್ವೈರನ್ನು ಭೇಟಿ ಮಾಡುತ್ತಿದ್ದಾರೆ. ಬೊಮ್ಮಾಯಿ ಸಂಪುಟ ಸೇರಲು ಬಿಎಸ್ ವೈ ಮೂಲಕ ಶಾಸಕರು ಒತ್ತಡ ಹೇರುತ್ತಿದ್ದಾರೆ.
ಕಳೆದ ಸಲ ಮುಂದೆ ಅವಕಾಶ ಕೊಡುವ ಭರವಸೆ ಕೊಟ್ಟಿದ್ರು. ಬಿಎಸ್ವೈ ಕೊಟ್ಟ ಭರವಸೆ ಈಡೇರಿಸುವ ನಂಬಿಕೆ ಇದೆ ಅಂತ ಟಿವಿ9ಗೆ ಶಾಸಕ ನೆಹರು ಓಲೇಕಾರ್ ಹೇಳಿಕೆ ನೀಡಿದ್ಧಾರೆ. ನಾನು ಹಿರಿಯ ಶಾಸಕ. ಅವಕಾಶ ಕೊಡಲೇಬೇಕು ಅಂತ ಬೆಂಬಲಿಗರು ಹೇಳುತ್ತಿದ್ದಾರೆ ಎಂದು ನೆಹರು ಓಲೇಕಾರ್ ತಿಳಿಸಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತರಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗ ನಗರದ ಪ್ರಸಿದ್ಧ ಗುಡ್ಡೆಕಲ್ಲು ಶ್ರೀ ಸುಬ್ರಮಣ್ಯ ಸ್ವಾಮಿ ದೇವರ ಜಾತ್ರಾ ಉತ್ಸವದಲ್ಲಿ ಈಶ್ವರಪ್ಪ ಭಾಗಿಯಾಗಿದ್ದಾರೆ. ಸಚಿವ ಸಂಪುಟ ರಚನೆಯ ಒತ್ತಡದ ನಡುವೆ ಮಾಜಿ ಸಚಿವ ಈಶ್ವರಪ್ಪ ದೇವರ ಮೊರೆ ಹೋಗುತ್ತಿದ್ದಾರೆ.
ಮಾಜಿ ಸಚಿವ, ಬಿಜೆಪಿ ಸೊರಬ ಶಾಸಕ ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ಸಿಗಲೆಂದು ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇಗುಲದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರ ಅಭಿಮಾನಿಗಳಿಂದ ಪೂಜೆ ನೆರವೇರುತ್ತಿದೆ. ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಭಾಗಿಯಾಗಿದ್ದಾರೆ.
ಯಾದಗಿರಿ ಕ್ಷೇತ್ರದ ಬಿಜೆಪಿ ಶಾಸಕ ವೆಂಕಟರಡ್ಡಿ ಮುದ್ನಾಳ್ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅಭಿಮಾನಿಗಳು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಂ ಅವರು ಶಾಸಕ ಮುದ್ನಾಳ್ಗೆ ಸಚಿವ ಸ್ಥಾನ ನೀಡಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಹತ್ತಾರು ಮಂದಿ ಮುಖಂಡರಿಂದ ಶಾಸಕ ಮುದ್ನಾಳ್ ಪರ ಘೋಷಣೆ ಕೂಗುತ್ತಿದ್ದಾರೆ. ಸಚಿವ ಸ್ಥಾನ ನೀಡದಿದ್ದರೆ ಬಿಜೆಪಿ ಸಂಕಷ್ಟ ಅನುಭವಿಸಬೇಕಾಗುತ್ತೆ ಅಂತ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.
ನೂರಕ್ಕೆ ನೂರರಷ್ಟು ಬೊಮ್ಮಾಯಿ ಸಂಪುಟದಲ್ಲಿರುತ್ತೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಬಾರಿ ನನ್ನನ್ನು ಸಂಪುಟದಿಂದ ಕೈಬಿಡಲು ಸಾಧ್ಯವಿಲ್ಲ. ಬಿ.ಎಸ್.ಯಡಿಯೂರಪ್ಪಗೆ ನನ್ನ ಮೇಲೆ ಅನುಕಂಪವಿದೆ. ಯಡಿಯೂರಪ್ಪ ಜತೆಯೇ ನಾನು ಪಕ್ಷವನ್ನು ಕಟ್ಟಿದ್ದೇನೆ. ನಾನು 40 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ನನ್ನನ್ನು ಖಂಡಿತವಾಗಿ ಗುರುತಿಸುತ್ತಾರೆ ಎಂದು ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬಿಜೆಪಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಪ್ರೀತಂ ಗೌಡ, ಮಸಾಲೆ ಜಯರಾಂ, ಮಾಜಿ ಶಾಸಕ ಸುರೇಶ್ಗೌಡ ಯಡಿಯೂರಪ್ಪರನ್ನು ಭೇಟಿಯಾಗಿದ್ದಾರೆ. ಸಿಎಂ ಭೇಟಿಗೆ ಆಗಮಿಸಿದ ತುಮಕೂರು ಬಿಜೆಪಿ ನಾಯಕರು, ಕರ್ನಾಟಕ ಭವನದಲ್ಲಿ ಕಾದು ಕುಳಿತಿದ್ದಾರೆ.
ನಾನು ಎಂದೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ನಿನ್ನೆ ಸಿಎಂ ಬೊಮ್ಮಾಯಿಯನ್ನು ಭೇಟಿ ಮಾಡಿದ್ದೆ. ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದೇನೆ. ಬಿ.ಎಸ್.ಯಡಿಯೂರಪ್ಪಗೂ ಮನವಿ ಮಾಡಿದ್ದೇನೆ. ಪ್ರಯತ್ನ ಮಾಡುವುದಾಗಿ ಬಿಎಸ್ವೈ ತಿಳಿಸಿದ್ದಾರೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಅವರು ಯಾವುದೇ ಕೆಲಸ ಕೊಟ್ಟರೂ ನಿಭಾಯಿಸುವೆ. ಪಕ್ಷದ ನಿರ್ಣಯಕ್ಕೆ ನಾನು ಬದ್ಧ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಸನ್ಯಾಸಿ ಅಲ್ಲ. ಸಚಿವ ಸ್ಥಾನ ಕೊಡದೇ ಇದ್ದರೂ ಕೆಲಸ ಮಾಡುವೆ ಎಂದು ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಜನ ಆಶೀರ್ವಾದ ಮಾಡಿ ಶಾಸಕರನ್ನಾಗಿ ಮಾಡಿದ್ದಾರೆ. ಹಿರಿಯರು ಆಶೀರ್ವಾದ ಮಾಡಿ ಮಂತ್ರಿ ಮಾಡಿದ್ರೆ ನಿಭಾಯಿಸೋದು ದೊಡ್ಡ ಮಾತಲ್ಲ ಎಂದು ಕೊಪ್ಪಳದಲ್ಲಿ ಟಿವಿ9 ಗೆ ಶಾಸಕ ಹಾಲಪ್ಪ ಆಚಾರ್ ಹೇಳಿಕೆ ನೀಡಿದ್ದಾರೆ. ಮಾಧ್ಯಮದಲ್ಲಿ ಹೆಸರು ಬರ್ತಿದೆ. ಮಂತ್ರಿ ಮಂಡಲ ರಚನೆ ವೇಳೆ ಪ್ರಾದೇಶಿಕವಾಗಿ ಹೆಸರು ತೋರಿಸೋದು ಸಹಜ. ಆ ಸಹಜ ಪ್ರಕ್ರಿಯೆಯಲ್ಲಿ ನಾನು ಒಬ್ಬ. ಮುಖ್ಯಮಂತ್ರಿ ದೆಹಲಿಗೆ ಹೋದ ಬಂದ ನಂತ್ರ ತೀರ್ಮಾನ ಮಾಡ್ತಾರೆ. ಇದುವರೆಗೂ ಯಾವ ಕರೆನೂ ನನಗೆ ಬಂದಿಲ್ಲ. ಸಂಪುಟ ಪುನಾರಚನೆ ಹಿಂದಿನ ದಿನ ಕರೆ ಬರೋದು ಹಿಂದಿನಿಂದ ಬಂದಂತಹ ರೂಢಿ. ನಮಗೆ ಹೈಕಮಾಂಡ ಇದೆ. ನಾಯಕರ ನಿರ್ಣಯಕ್ಕೆ ನಾವು ಬದ್ದ. ಇದು ಸಹಜ ಕ್ರೀಯೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ಇನ್ನೆರಡು ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತೆ. ಎಲ್ಲವೂ ದೇವರು, ಬಿಜೆಪಿ ಹೈಕಮಾಂಡ್ಗೆ ಬಿಟ್ಟಿದ್ದು. ಲಾಬಿ, ಒತ್ತಡಕ್ಕಲ್ಲ ಹೈಕಮಾಂಡ್ ಮಣಿಯುವುದಿಲ್ಲ. ವಲಸೆ ಬಂದ ಕೆಲವರಿಗೆ ಸ್ಥಾನ ಸಿಗದೇ ಇರಬಹುದು. ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳ ಭವಿಷ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳ ಹೇಳಿಕೆಯ ಬಗ್ಗೆ ಏನೂ ಹೇಳಲಾರೆ. ಅದು ಸತ್ಯವೂ ಆಗಬಹುದು, ಸುಳ್ಳೂ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಇಂದು ಸಂಜೆ ದೆಹಲಿಯಲ್ಲಿ ಪಕ್ಷದ ಸಭೆ ನಡೆಯಲಿದೆ. ಸಭೆಯ ಬಳಿಕ ಸಚಿವ ಸಂಪುಟದ ಬಗ್ಗೆ ಚರ್ಚೆ ಮಾಡುತ್ತಾರೆ. ಅದಾದ ಬಳಿಕ ರಾಜ್ಯ ಸಚಿವ ಸಂಪುಟದ ಬಗ್ಗೆ ಮಾಹಿತಿ ಪಡೆಯುತ್ತೇನೆ. ದೆಹಲಿಗೆ ಬಂದ ಶಾಸಕರ ಜೊತೆಯೂ ಚರ್ಚಿಸುತ್ತಾರೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಾಗುವುದು. ಎಲ್ಲ ಶಾಸಕರು ಸಚಿವರಾಗುವುದಕ್ಕೆ ಆಗುವುದಿಲ್ಲ. ಈ ವಿಚಾರ ನಮ್ಮ ಶಾಸಕರಿಗೂ ಗೊತ್ತಿದೆ ಎಂದು ಹೇಳಿಕೆ ನೀಡಿದ ಬೊಮ್ಮಾಯಿ, ಪ್ರಾದೇಶಿಕ ಸಮತೋಲನ ಮಾಡಬೇಕಾಗಿದೆ ಎಂದರು. ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ. ಪ್ರಾದೇಶಿಕವಾರು ಗಮನದಲ್ಲಿಟ್ಟುಕೊಂಡು ಸಂಪುಟ ರಚನೆ ಮಾಡಲಾಗುವುದು. ನಡ್ಡಾ ಭೇಟಿಗೂ ಮುನ್ನ ಸಂಸತ್ ಭವನಕ್ಕೆ ಹೋಗುತ್ತಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಪ್ರಯತ್ನಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಚಿವ ಸ್ಥಾನಕ್ಕಾಗಿ ಶಾಸಕರು ಯಡಿಯೂರಪ್ಪರನ್ನು ಭೇಟಿಯಾಗುತ್ತಿದ್ದಾರೆ. ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ದೊಡ್ಡನಗೌಡ ಪಾಟೀಲ್, ಎಂಎಲ್ಸಿ ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಶಾಸಕರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡುತ್ತಿದ್ದಾರೆ.
ಸೂಕ್ತ ಸ್ಥಾನಮಾನ ನೀಡುವುದಾಗಿ ಬಿಎಸ್ವೈ ಹೇಳಿದ್ದಾರೆ. ನಮ್ಮ ಪಕ್ಷ ಇದುವರೆಗೆ ಚೆನ್ನಾಗಿ ನಡೆಸಿಕೊಂಡು ಬಂದಿದೆ. ಮುಂದೆಯೂ ಚೆನ್ನಾಗಿ ನಡೆಸಿಕೊಳ್ಳುತ್ತೆ ಎಂಬ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ ಬಿ.ಸಿ.ಪಾಟೀಲ್, ಮೈಲಾರದ ಧರ್ಮದರ್ಶಿ ಭವಿಷ್ಯವಾಣಿ ನುಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಭವಿಷ್ಯವನ್ನು ನುಡಿಯುವವರು ಪ್ರಜೆಗಳು, ಸ್ವಾಮೀಜಿಗಳು, ಧರ್ಮದರ್ಶಿಗಳಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದು ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ ಎಂದು ಟಿವಿ9ಗೆ ಉನ್ನತ ಮುೂಲಗಳಿಂದ ಮಾಹಿತಿ ಸಿಕ್ಕಿದೆ. ಇಂದು ಹೈಕಮಾಂಡ್ ಗ್ರೀನ್ ನೀಡಿದರೆ ಬುಧವಾರ ಪದಗ್ರಹಣ ಹುತೇಕ ಫಿಕ್ಸ್ ಆಗುವ ಸಾಧ್ಯತೆಯಿದೆ.
ಸಿಎಂ ಬೊಮ್ಮಾಯಿ ಸಚಿವ ಸಂಪುಟ ರಚನೆ ವಿಚಾರದ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಈ ವೇಳೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ದೆಹಲಿಯ ಕರ್ನಾಟಕ ಭವನದಲ್ಲಿ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ.
ತಮ್ಮ ಕ್ಷೇತ್ರದ ಶಾಸಕನಿಗೆ ಸಚಿವ ಸ್ಥಾನ ಕೊಡುವಂತೆ ದೊಡ್ಡನಗೌಡ ಪಾಟೀಲ್ ಬೆಂಬಲಿಗರು ಲಾಬಿ ನಡೆಸುತ್ತಿದ್ದಾರೆ. ಯಡಿಯೂರಪ್ಪ ನಿವಾಸದ ಬಳಿ ಆಗಮಿಸಿದ ಬೆಂಬಲಿಗರು ಸಚಿವ ಸ್ಥಾನ ಕೊಡುವಂತೆ ಒತ್ತಾಯಿಸಿದ್ದಾರೆ.
ಸಿಎಂ ರೇಸ್ನಲ್ಲಿದ್ದ ಅರವಿಂದ್ ಬೆಲ್ಲದ್ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಲ್ಲದ್ ದೆಹಲಿಯಲ್ಲೇ ಇದ್ದಾರೆ. ಬೆಲ್ಲದ್ಗೆ ಸಚಿವ ಸ್ಥಾನ ನೀಡದಂತೆ ಹೈಕಮಾಂಡ್ಗೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ದೆಹಲಿಯಲ್ಲೇ ಸಚಿವ ಸ್ಥಾನಕ್ಕಾಗಿ ಬೆಲ್ಲದ್ ಲಾಬಿ ನಡೆಸುತ್ತಿದ್ದಾರೆ.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಗಬೇಕೆಂದು ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ. ಭೈರವೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಪ್ರಾರ್ಥಿಸಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಮೂರು ಭಾರಿ ಶಾಸಕರಾಗಿ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.
ಶಾಸಕ ಅರವಿಂದ ಬೆಲ್ಲದ್ಗೆ ಸಚಿವ ಸ್ಥಾನ ಸಿಗಬೇಕೆಂದು ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಧಾರವಾಡದ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬೆಂಬಲಿಗರು, ಬೆಲ್ಲದ ಭಾವಚಿತ್ರ ಹಿಡಿದು ದೇವರಿಗೆ ಅಭಿಷೇಕ ಮಾಡಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ಗೆ ಸಚಿವ ಸ್ಥಾನ ನೀಡಬೇಕೆಂದು ಮಠಾಧೀಶರು ಒತ್ತಾಯಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಒತ್ತಾಯಿಸುತ್ತಿದ್ದಾರೆ. ಒತ್ತಾಯಿಸಲು ಯಡಿಯೂರಪ್ಪ ಮನೆಗೆ ಶ್ರೀಗಳ ಒತ್ತಾಯ ಬೆಂಬಲಿಗರು ಆಗಮಿಸಿದ್ದಾರೆ.
ಸಚಿವ ಸ್ಥಾನಕ್ಕೆ ಎಲ್ಲರ ಗಮನ ದೆಹಲಿಯತ್ತ ಇದೆ. ಆದರೆ ನನ್ನ ಗಮನ ಹಳ್ಳಿಯತ್ತವಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ಕಾರ್ಯಕರ್ತರಿಗೆ ಹೇಳಿದರು. ಹೊನ್ನಾಳಿ ಪಟ್ಟಣದ ತಮ್ಮ ಸ್ವಗೃಹದಲ್ಲಿ ತಿಂಡಿ ತಿನ್ನುತ್ತಲೇ ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ. ನಿಮ್ಮ ಗ್ರಾಮಗಳಿಗೆ ನಾನು ಬರುವೆ ಎಂದು ರೇಣುಕಾಚಾರ್ಯ ಹೇಳಿದರು.
ಶಾಸಕ ಎಸ್.ಎ.ರಾಮದಾಸ್ಗೆ ಸಚಿವ ಸ್ಥಾನ ನೀಡಲು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಮೈಸೂರಿನ ವಿವಿಧ ದೇವಾಲಯಗಳಲ್ಲಿ ಪೂಜು ಸಲ್ಲಿಸುತ್ತಿದ್ದಾರೆ. ಶಾಸಕ ರಾಮದಾಸ್ ಭಾವಚಿತ್ರ ಹಿಡಿದು ಸಚಿವ ಸ್ಥಾನ ನೀಡುವಂತೆ ಪ್ರಾರ್ಥಿಸುತ್ತಿದ್ದಾರೆ. ಹಳೆ ಮೈಸೂರು ಭಾಗದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಭೇಟಿಯಾಗಿದ್ದಾರೆ. ‘ಕಾವೇರಿ’ ನಿವಾಸದಲ್ಲಿ ಎಂಟಿಬಿ ನಾಗರಾಜ್ ಬಿಎಸ್ವೈನ ಭೇಟಿಯಾಗಿದ್ದಾರೆ.
ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ದೆಹಲಿಗೆ ಹೋಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗುವ ಸಾಧ್ಯತೆಯಿತ್ತು. ಆದರೆ ಭೇಟಿ ಇನ್ನಷ್ಟು ವಿಳಂಬವಾಗಿದೆ. ಸಂಜೆ ಹೊತ್ತಿಗೆ ನಡ್ಡಾರನ್ನು ಸಿಎಂ ಭೇಟಿಯಾಗಲಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಶಾಸಕರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸುತ್ತಿದ್ದಾರೆ. ಸಿ.ಸಿ.ಪಾಟೀಲ್, ಲಕ್ಷ್ಮಣ ಸವದಿ, ರಾಜುಗೌಡ, ಸತೀಶ್ ರೆಡ್ಡಿ ಜತೆ ಚರ್ಚೆ ನಡೆಸುತ್ತಿದ್ದಾರೆ.
ನಾನು ಹಿರಿಯನಿದ್ದೇನೆ, ಹೀಗಾಗಿ ಸಚಿವ ಸ್ಥಾನ ಕೇಳಿದ್ದೇನೆ. ಆದ್ರೆ ಈವರೆಗೂ ಹೈಕಮಾಂಡ್, ಸಿಎಂರಿಂದ ಕರೆ ಬಂದಿಲ್ಲ ಎಂದು ಟಿವಿ9ಗೆ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಹೇಳಿಕೆ ನೀಡಿದ್ದಾರೆ. ನಾನು ಮೂಲ ಬಿಜೆಪಿಯವ, ನನಗೆ ಎಲ್ಲ ಅರ್ಹತೆ ಇದೆ. ಕೊಟ್ಟವರಿಗೇ ಪದೇಪದೆ ಸಚಿವ ಸ್ಥಾನ ಬೇಡ, ನಮಗೆ ಕೊಡಿ. ಎಲ್ಲರಿಗೂ ಅವಕಾಶ ಸಿಗಲಿ ಎಂಬುದನ್ನ ಬಿಟ್ರೆ ಬೇರೆ ಏನಿಲ್ಲ. ಕ್ಷೇತ್ರದ ಜನರ ಖುಷಿಗಾದರೂ ಸಚಿವ ಸ್ಥಾನ ನೀಡಬೇಕು. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಕೊನೇ ಉಸಿರು ಇರುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ. ದೆಹಲಿಗೆ ಹೋಗುವುದು, ಲಾಬಿ ಮಾಡುವುದು ಮಾಡಲ್ಲ. ನಮಗೆ ಯಾವುದೇ ಹೈಕಮಾಂಡ್ ಇಲ್ಲ. ನಾನು ಹೈಕಮಾಂಡ್ನಿಂದ ಬೆಳೆದಿಲ್ಲ. ನಾವು ಒತ್ತಡವನ್ನು ಹಾಕಿ ಸಚಿವ ಸ್ಥಾನವನ್ನು ಪಡೆಯುವುದಿಲ್ಲ ಎಂದು ಹೇಳಿದರು.
ಸಚಿವ ಸಂಪುಟಕ್ಕೆ ಸೇರಲು ಶಾಸಕರು ಕೊನೇ ಹಂತದ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನು ಬೆಂಬಲಿಗರ ಸಮೇತ M.P.ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಭೇಟಿಯಾಗುವ ಸಾಧ್ಯತೆಯಿದೆ. ದೆಹಲಿಯ ಮೋತಿಲಾಲ್ ನೆಹರು ಮಾರ್ಗ್ನಲ್ಲಿರುವ ಮನೆಗೆ ಮುಖ್ಯಮಂತ್ರಿ ಹೋಗಿ ಭೇಟಿಯಾಗುವ ಸಾಧ್ಯತೆ ಹೆಚ್ಚಿದೆ.
ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಶಾಸಕರಿಂದ ಲಾಬಿ ನಡೆಯುತ್ತಿದೆ. ಶಾಸಕರಾದ ಎಸ್.ಅಂಗಾರ, ರಾಜುಗೌಡ, ಪಿ.ರಾಜೀವ್, ಚಂದ್ರಪ್ಪ ಸೇರಿದಂತೆ ಹಲವು ಶಾಸಕರಿಂದ ಲಾಬಿ ನಡೆಯುತ್ತಿದೆ.
ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯನ್ನು ಸವದಿ, ಸಿ.ಸಿ.ಪಾಟೀಲ್ ಭೇಟಿಯಾಗಿದ್ದಾರೆ. ಸಚಿವ ಸ್ಥಾನ ಕೈತಪ್ಪುವ ಆತಂಕದಿಂದ ಬೊಮ್ಮಾಯಿಯನ್ನು ಶಾಸಕರು ಭೇಟಿಯಾಗಿದ್ದಾರೆ. ಸಚಿವ ಸ್ಥಾನಕ್ಕಾಗಿ ಶಾಸಕರಿಂದ ಕೊನೇ ಹಂತದ ಕಸರತ್ತು ನಡೆಸುತ್ತಿದ್ದಾರೆ.
ಶಾಸಕ ನೆಹರು ಓಲೇಕಾರ್ಗೆ ಸಚಿವ ಸ್ಥಾನ ನೀಡಬೇಕು ಅಂತ ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಮನೆ ಮುಂದೆ ಘೋಷಣೆ ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ. ನೆಹರು ಒಲೇಕರ್ ಚಿತ್ರವಿರುವ ಪ್ಲೇ ಕಾರ್ಡನ್ನು ಕುತ್ತಿಗೆಗೆ ಹಾಕಿಕೊಂಡು
‘ಕಾವೇರಿ’ ನಿವಾಸದ ಬಳಿ ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ.
ಸಚಿವ ಸ್ಥಾನಕ್ಕಾಗಿ ಚಿತ್ರದುರ್ಗ ಶಾಸಕರಿಂದ ತೀವ್ರ ಪೈಪೋಟಿ ನಡೆಯುತ್ತಿದೆ. ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಶಾಸಕ ಗೂಳಿಹಟ್ಟಿ ಶೇಖರ್ರಿಂದ ಸಚಿವ ಸ್ಥಾನಕ್ಕಾಗಿ ಯತ್ನಿಸುತ್ತಿದ್ದಾರೆ. ಮಹಿಳೆ, ಗೊಲ್ಲ ಸಮುದಾಯದ ಕೋಟಾದಡಿ ಪೂರ್ಣಿಮಾ, ಹಿಂದುಳಿದ ಸಮುದಾಯ, ಹಿರಿತನದ ಆಧಾರದಲ್ಲಿ ತಿಪ್ಪಾರೆಡ್ಡಿ, ಬಿಎಸ್ವೈ ಆಪ್ತ ಬಳಗದಲ್ಲಿರುವ ಶಾಸಕ ಎಂ.ಚಂದ್ರಪ್ಪ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಇಬ್ಬರು ಶಾಸಕರಿಂದ ಮಂತ್ರಿಗಿರಿಗೆ ಲಾಬಿ ನಡೆಯುತ್ತಿದೆ. ನಿನ್ನೆ ರಾತ್ರಿಯೇ ಇಬ್ಬರು ಶಾಸಕರು ಬೆಂಗಳೂರಿಗೆ ತೆರಳಿದ್ದಾರೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ್ ದಡೇಸಗೂರುಗೆ ಯಾವುದೇ ಕರೆ ಬಾರದಿದ್ರೂ ಬೆಂಗಳೂರಿಗೆ ತೆರಳಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿ ಕಲಬುರಗಿ ಜಿಲ್ಲೆ ನಿರ್ಲಕ್ಷ್ಯಕ್ಕೊಳಗಾಗಿತ್ತು. ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಸ್ಥಾನಕ್ಕಾಗಿ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ. ದತ್ತಾತ್ರೇಯ ಪಾಟೀಲ್, ರಾಜಕುಮಾರ ಪಾಟೀಲ್, ಬಸವರಾಜ್ ಮತ್ತಿಮೂಡ್, ಸುಭಾಷ್ ಗುತ್ತೇದಾರ್ರಿಂದ ಸಚಿವ ಸ್ಥಾನಕ್ಕೆ ಲಾಬಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಶಾಸಕರು ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಪ್ರಾದೇಶಿಕ ಪ್ರಾತಿನಿಧ್ಯ ಹಿನ್ನೆಲೆಯಲ್ಲಿ ಈ ಸಲ ಜಿಲ್ಲೆಗೆ ಮಂತ್ರಿ ಸ್ಥಾನ ನಿರೀಕ್ಷೆಯಲ್ಲಿ ಶಾಸಕೆರಿದ್ದಾರೆ.
ನಿನ್ನೆಯಿಂದ ಶಾಸಕ ರೇಣುಕಾಚಾರ್ಯ ಹೊನ್ನಾಳಿಯಲ್ಲಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿ ಆಗಿರುವ ರೇಣುಕಾಚಾರ್ಯ, ಸಿಎಂ ಕಚೇರಿಯಿಂದ ಕರೆ ಬರುವ ನಿರೀಕ್ಷೆಯಲ್ಲಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಐದು ಜನ ಬಿಜೆಪಿ ಶಾಸಕರಿದ್ದೇವೆ. ಯಾರಿಗಾದ್ರು ಒಬ್ಬರಿಗೆ ಸಚಿವ ಸ್ಥಾನ ನೀಡಿ ಎಂದು ಸಿಎಂಗೆ ಶಾಸಕರು ಮನವಿ ಮಾಡಿದ್ದಾರೆ.
ತೆರೆ ಮರೆಯಲ್ಲಿ ಮೈಸೂರಿನ ಮೂವರು ಶಾಸಕರು ಮಂತ್ರಿಪಟ್ಟಕ್ಕೆ ಲಾಬಿ ನಡೆಸುತ್ತಿದ್ದಾರೆ. ಕೆ ಅರ್ ಕ್ಷೇತ್ರದ ಶಾಸಕ ಎಸ್.ಎಸ್.ರಾಮದಾಸ್, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಜೆ.ಪಿ.ನಡ್ಡಾರನ್ನು ಸಿಎಂ ಭೇಟಿಯಾಗುತ್ತಾರೆ. ಸಚಿವ ಸಂಪುಟಕ್ಕೆ ಇಂದೇ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿದ್ದು, ನೂತನ ಸಚಿವ ಸಂಪುಟಕ್ಕೆ ಅಸ್ತು ಅಂದರೆ ಬುಧವಾರ ಪದಗ್ರಹಣ ಕಾರ್ಯಕ್ರಮ ನಡೆಯಬಹುದು.
ರಾಜ್ಯದ ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಹೊಸಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಎಸ್.ಎ.ರಾಮದಾಸ್, ರಾಜುಗೌಡ, ದತ್ತಾತ್ರೇಯ ಪಾಟೀಲ್, ಎಂ.ಪಿ.ರೇಣುಕಾಚಾರ್ಯ, ಸುನಿಲ್ ಕುಮಾರ್, ಮುನಿರತ್ನ, ಜಿ.ಹೆಚ್. ತಿಪ್ಪಾರೆಡ್ಡಿ, ಎಂ.ಪಿ.ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ಹಾಲಪ್ಪ ಆಚಾರ್, ವೀರಣ್ಣ ಚರಂತಿಮಠ ಸೇರಿ ಹಲವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.
Published On - 8:48 am, Mon, 2 August 21