ಅಸೆಂಬ್ಲಿ ಚುನಾವಣೆ ಸಮ್ಮುಖದಲ್ಲಿ ಜ 23ರಿಂದ 3 ದಿನ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ
ಜನವರಿ 23ರಿಂದ ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಲಿದೆ. ಎಲ್ಲಾ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದರ ನಡುವೆಯೇ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೂ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದೇ ಜನವರಿ 23ರಿಂದ ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಲಿದೆ.
ಎಲ್ಲಾ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಜ.23, 24 & 25ರಂದು 3 ದಿನ ಬಜೆಟ್ ಪೂರ್ವಭಾವಿ ಸಭೆ ನಿಗದಿಯಾಗಿದ್ದು 30ಕ್ಕೂ ಹೆಚ್ಚು ಇಲಾಖೆಗಳ ಜೊತೆ ಚರ್ಚಿಸಿ ಫೆ.17ರಂದು ಬಜೆಟ್ ಮಂಡಿಸಲು ಸಿಎಂ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ.
ಇನ್ನು ಬಜೆಟ್ ಪೂರ್ವಭಾವಿ ಸಭೆಯ ನಿತ್ಯ ಬೆಳಗ್ಗೆ 10.30ರಿಂದ ಸಂಜೆ 6 ಗಂಟೆವರೆಗೂ ನಡೆಯಲಿವೆ. ಸಭೆಗೆ ನಿಗದಿತ ದಿನ ಹಾಗೂ ಸಮಯದಲ್ಲಿ ಆಯಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಅವಶ್ಯಕ ಮಾಹಿತಿಗಳು ಹಾಗೂ ಪ್ರಾತ್ಯಕ್ಷಿಕೆಯೊಂದಿಗೆ ಹಾಜರಾಗಲು ಆರ್ಥಿಕ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: Karnataka Elections 2023 Highlights: ಸಿಎಂ ಬೊಮ್ಮಾಯಿರವರೇ ನಿಮ್ಮ ಪಾಪದ ಕೊಡ ತುಂಬಿದೆ ಎಂದ ಸಿದ್ಧರಾಮಯ್ಯ
ಇನ್ನು ಈ ಸಭೆಯ ವೇಳಾಪಟ್ಟಿ ಪ್ರಕಾರ, ಜ.23ರಂದು ಲೋಕೋಪಯೋಗಿ, ಕೌಶಲ್ಯಾಭಿವೃದ್ಧಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಸಣ್ಣ ನೀರಾವರಿ, ಸಹಕಾರ, ವಸತಿ, ಒಳಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಚರ್ಚೆ ನಡೆಯಲಿದೆ.
ಜ.24ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮುಜರಾಯಿ, ವೈದ್ಯಕೀಯ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ, ಇಂಧನ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಸಮಾಜ ಕಲ್ಯಾಣ, ವಾಣಿಜ್ಯ ಮತ್ತು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಅರಣ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗಳು, ಹಾಗೂ ಜ.25ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಯೋಜನೆ, ಕಾರ್ಯಕ್ರಮ ಮತ್ತು ಸಾಂಖ್ಯಿಕ, ಯುವ ಸಬಲೀಕರಣ ಮತ್ತು ಕ್ರೀಡಾ, ಸಾರಿಗೆ, ಕಾರ್ಮಿಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಆಹಾರ ಮತ್ತು ನಾಗರಿಕ ಸರಬರಾಜು, ಕಂದಾಯ, ಮೂಲಭೂತ ಸೌಲಭ್ಯ ಮತ್ತು ಬಂದರು, ಒಳನಾಡು ಜಲಸಾರಿಗೆ ಇಲಾಖೆಗಳೊಂದಿಗೆ ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅವರು ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:20 am, Fri, 20 January 23