Karnataka Assembly Elections: ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಸ್​ಗಳು ನಾಪತ್ತೆ; ಜನಜೀವನ ಹೈರಾಣ

ಯಾವುದೇ ಡಿಪೊದ ಒಟ್ಟು ಬಸ್​ಗಳಲ್ಲಿ ಶೇ 10ರಷ್ಟನ್ನು ಬಾಡಿಗೆಗೆ ಕೊಟ್ಟರೆ ನಿತ್ಯದ ಮಾರ್ಗಸೂಚಿಗಳನ್ನು (ರೂಟ್) ಹೇಗೋ ನಿರ್ವಹಿಸಬಹುದು. ಹೆಚ್ಚು ಬಸ್​ಗಳನ್ನು ನಿಯೋಜಿಸಿದರೆ ನಿಭಾಯಿಸುವುದು ಕಷ್ಟ.

Karnataka Assembly Elections: ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಸ್​ಗಳು ನಾಪತ್ತೆ; ಜನಜೀವನ ಹೈರಾಣ
ಕೆಂಪೇಗೌಡ ಬಸ್​ ನಿಲ್ದಾಣ ಬೆಂಗಳೂರು (ಸಂಗ್ರಹ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jan 20, 2023 | 12:30 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಹತ್ತಿರವಾಗುತ್ತಿದ್ದಂತೆಯೇ ಕರ್ನಾಟಕ ಸಾರಿಗೆ ನಿಗಮದ (KSRTC, NEKRTC, NWKRTC, BMTC) ಬಸ್​ಗಳು ವೇಳಾಪಟ್ಟಿ ಮೀರಿ ಸಂಚರಿಸುವುದು, ಕೆಲವೊಮ್ಮೆ ಮಾರ್ಗಸೂಚಿಗಳನ್ನೇ (ರೂಟ್​) ರದ್ದು ಮಾಡುವುದು ಸಾಮಾನ್ಯ ಎನಿಸುತ್ತಿದೆ. ಖಾಸಗಿ ಬಸ್​ಗಳ ಸಂಚಾರ ಇರುವ ಹಾಗೂ ಮನೆಗಳಲ್ಲಿ ಸ್ವಂತ ವಾಹನಗಳಿರುವ ಪ್ರದೇಶಗಳಲ್ಲಿ ಈ ಸಮಸ್ಯೆಯು ಜನರನ್ನು ಅಷ್ಟಾಗಿ ಕಾಡುತ್ತಿಲ್ಲ. ಸರ್ಕಾರಿ ಬಸ್​ಗಳ ಸಂಚಾರ ಏಕಸ್ವಾಮ್ಯ ಇರುವ ರಾಷ್ಟ್ರೀಕರಣಗೊಂಡ ಮಾರ್ಗಗಳಲ್ಲಿ, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೈರಾಣಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ತಲುಪಲು, ಕೆಲಸಕ್ಕೆ ಹೋಗಲು ಬಸ್​ಗಳನ್ನೇ ನೆಚ್ಚಿಕೊಂಡವರು ಬಾರದ ಬಸ್​ಗಳಿಗೆ ಕಾದು ಬೇಸತ್ತು ನಿಗಮದ ಅಧಿಕಾರಿಗಳು ಮತ್ತು ರಾಜಕಾರಿಣಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತಿಭಟನೆಗಳಂತೂ ಸಾಮಾನ್ಯ ಸಂಗತಿಗಳಾಗಿವೆ.

ಪ್ರತಿ ಬಾರಿ ಯಾವುದೇ ಪಕ್ಷದ ಸಮಾವೇಶವಾದರೂ ನೂರರಿಂದ ಹಲವು ಸಾವಿರಗಳಷ್ಟು ಬಸ್​ಗಳನ್ನು ರಾಜಕಾರಿಣಿಗಳು ಬಾಡಿಗೆಗೆ ಪಡೆಯುತ್ತಾರೆ. ಹೀಗೆ ಏಕಾಏಕಿ ದೊಡ್ಡ ಸಂಖ್ಯೆಯಲ್ಲಿ ಬಸ್​ಗಳನ್ನು ಬಾಡಿಗೆಗೆ ಒದಗಿಸುವುದು ಯಾವುದೇ ನಿಗಮಕ್ಕೆ ದೊಡ್ಡ ಸವಾಲು. ಸಹಜವಾಗಿಯೇ ನಿತ್ಯದ ಪ್ರಯಾಣಕ್ಕೆ ಬಸ್​ಗಳನ್ನು ನೆಚ್ಚಿಕೊಂಡವರು ಇಂಥ ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ. ‘ನಮ್ಮಲ್ಲಿರುವ ಒಟ್ಟು ಬಸ್​ಗಳಲ್ಲಿ ಶೇ 10ರಷ್ಟನ್ನು ಬಾಡಿಗೆಗೆ ಕೊಟ್ಟರೆ ಉಳಿದ ಬಸ್​ಗಳಲ್ಲಿ ನಿತ್ಯದ ಮಾರ್ಗಸೂಚಿಗಳನ್ನು ಹೇಗೋ ನಿರ್ವಹಿಸಬಹುದು. ಆದರೆ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಸ್​ಗಳನ್ನು ನಿಯೋಜಿಸಿದರೆ ನಿಭಾಯಿಸುವುದು ಕಷ್ಟ’ ಎಂದು ನಿಗಮದ ಅಧಿಕಾರಿಗಳು ಹೆಸರು ಬಹಿರಂಗಪಡಿಸಬಾರದು ಎನ್ನುವ ಷರತ್ತಿನ ಮೇಲೆ ಒಪ್ಪಿಕೊಳ್ಳುತ್ತಾರೆ.

‘ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳ ಸಂಚಾರ ಪ್ರಮಾಣ ಕಡಿಮೆಯಾದರೂ ಆಟೊ, ಓಲಾ, ರಾಪಿಡೊದಂಥ ಬದಲಿ ವ್ಯವಸ್ಥೆಯ ಮೂಲಕ ಹೇಗೋ ಜೀವನ ಸಾಗುತ್ತದೆ. ಆದರೆ ಗ್ರಾಮೀಣ, ರಾಷ್ಟ್ರೀಕೃತ (ಸರ್ಕಾರಿ ಬಸ್ ಮಾತ್ರ) ಮಾರ್ಗಗಳಲ್ಲಿ ಪರಿಸ್ಥಿತಿ ಹದಗೆಡುತ್ತದೆ. ಎಷ್ಟೋ ಜನರಿಗೆ ಕೆಲಸದ ಸ್ಥಳಗಳನ್ನು ತಲುಪಲು ಆಗುವುದಿಲ್ಲ. ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ’ ಎಂದು ಅವರು ಅಸಹಾಯತೆ ವ್ಯಕ್ತಪಡಿಸುತ್ತಾರೆ.

ಸಾರಿಗೆ ನಿಗಮಗಳು ಈಗಾಗಲೇ ಹಳೆಯ ಬಸ್, ಸಿಬ್ಬಂದಿ ಕೊರತೆ, ಆದಾಯ ನಷ್ಟದಿಂದ ಹೈರಾಣಾಗಿವೆ. ಕೆಲ ಡಿಪೊಗಳಲ್ಲಿ ಬಸ್​ಗಳಿದ್ದರೂ ಅಗತ್ಯ ಸಂಖ್ಯೆಯ ಸಿಬ್ಬಂದಿ ಇಲ್ಲದ ಕಾರಣ ಎಲ್ಲ ಬಸ್​ಗಳನ್ನೂ ರಸ್ತೆಗೆ ಇಳಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಚುನಾವಣೆ ಹೊರೆಯನ್ನು ನಿಗಮಗಳು ಜನರನ್ನು ಕಾಡದಂತೆ ನಿರ್ವಹಿಸುವುದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಬೆಂಗಳೂರಿನ ಜನಸಂಖ್ಯೆಯ ಅನುಪಾತದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 10,000 ಬಸ್​ಗಳನ್ನು ಹೊಂದಿರಬೇಕಿತ್ತು. ಆದರೆ ಇರುವ ಬಸ್​ಗಳ ಸಂಖ್ಯೆ ಕೇವಲ 6,500. ಈ ಪೈಕಿ ದಿನನಿತ್ಯ ರಸ್ತೆಗೆ ಇಳಿಯುತ್ತಿರುವ ಬಸ್​ಗಳ ಸಂಖ್ಯೆ 5,600. ಸಿಬ್ಬಂದಿ ಕೊರತೆಯಿಂದಾಗಿ ಬಾಕಿ 900 ಬಸ್​ಗಳ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ‘ಸುಗಮ ಕಾರ್ಯನಿರ್ವಹಣೆಗಾಗಿ ಬಿಎಂಟಿಸಿಗೆ ತುರ್ತಾಗಿ 4,000 ಸಿಬ್ಬಂದಿ ಹಾಗೂ 2,000 ಬಸ್​ಗಳು ಬೇಕಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕರ್ನಾಟಕದ 17 ಜಿಲ್ಲೆಗಳಲ್ಲಿ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ’ (KSRTC) ಸೇವೆ ಒದಗಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ನಿಗಮಕ್ಕೆ ಒಂದೂ ಹೊಸ ಬಸ್ ಸೇರ್ಪಡೆಯಾಗಿಲ್ಲ. ಸಿಬ್ಬಂದಿ ಕೊರತೆ ಪ್ರಮಾಣ ಸುಮಾರು 2,000ದಷ್ಟು ಮುಟ್ಟಿದೆ. ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ’ (NWKRTC) ಉತ್ತರ ಕರ್ನಾಟಕದ 4,610 ಹಳ್ಳಿಗಳೂ ಸೇರಿದಂತೆ 6 ಜಿಲ್ಲೆಗಳಲ್ಲಿ ಸೇವೆ ಒದಗಿಸುತ್ತದೆ. ‘ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ’ವು (KKRTC) 4,400 ಬಸ್​ಗಳನ್ನು ಹೊಂದಿದೆ. ಆದರೆ ಈ ಪೈಕಿ ಸುಮಾರು ಅರ್ಧದಷ್ಟು (1,800) ಬಸ್​ಗಳು ಈಗಾಗಲೇ 9 ಲಕ್ಷ ಕಿಮೀ ಸಂಚರಿಸಿ ಸುಸ್ತಾಗಿವೆ.

ಕಳೆದ ನವೆಂಬರ್ ತಿಂಗಳಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ 4,000 ಬಸ್​ಗಳನ್ನು ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಸಂಸ್ಥೆಗಳು ನಿಯೋಜಿಸಿದ್ದವು. ಕಳೆದ ಅಕ್ಟೋಬರ್​ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶ, ಆಗಸ್ಟ್​​ನಲ್ಲಿ ನಡೆದ ಸಿದ್ದರಾಮೋತ್ಸವಕ್ಕಾಗಿಯೂ ಸಾವಿರಾರು ಬಸ್​ಗಳನ್ನು ಒದಗಿಸಲಾಗಿತ್ತು. ಈ ಎಲ್ಲ ಸಂದರ್ಭಗಳಲ್ಲಿಯೂ ಬಸ್​ಗಳ ಕೊರತೆ ಎದ್ದು ಕಾಣಿಸುವಂತಿತ್ತು. ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ರಾತ್ರಿ 12 ಗಂಟೆಯಾದರೂ ಜನಜಂಗುಳಿ ಕರಗಿರಲಿಲ್ಲ. ಇತರ ಪ್ರಮುಖ ನಗರಗಳ ಬಸ್​ನಿಲ್ದಾಣಗಳಲ್ಲಿಯೂ ಪರಿಸ್ಥಿತಿ ಬೇರೆ ಆಗಿರಲಿಲ್ಲ.

ಬಸ್​ ವೈಪರಿತ್ಯದಿಂದ ಅನುಭವಿಸಿದ ಸಂಕಷ್ಟಗಳನ್ನು ಜನರು ಸುಲಭಕ್ಕೆ ಮರೆಯುತ್ತಿಲ್ಲ. ‘ನಾನು ತುರ್ತಾಗಿ ಪದ್ಮನಾಭನಗರಕ್ಕೆ ಹೋಗಬೇಕಿತ್ತು. ಗಂಟೆಗಟ್ಟಲೆ ಕಾದರೂ ಬಸ್ ಸಿಗಲಿಲ್ಲ. ಕೊನೆಗೆ ಒಂದು ಬಸ್ ಬಂದಿತಾದರೂ ಅದರಲ್ಲಿ ಹೆಜ್ಜೆ ಇರಿಸಲೂ ಜಾಗವಿರಲಿಲ್ಲ’ ಎಂದು ಪ್ರಧಾನಿ ಕಾರ್ಯಕ್ರಮದ ದಿನ ಬೆಂಗಳೂರಿಗೆ ಬಂದಿದ್ದ ಪ್ರಸಾದ್ ಎನ್ನುವವರು ನೆನಪಿಸಿಕೊಂಡರು. ‘ಹತ್ತಿಸಿಕೊಳ್ಳೋಕೆ ಜಾಗ ಇಲ್ರೀ, ಹಿಂದೆ ಬೇರೆ ಬಸ್ ಬರ್​ಬೋದು ನೋಡ್ರೀ ಎಂದ ಕಂಡಕ್ಟರ್ ನನ್ನನ್ನು ರಸ್ತೆಯಲ್ಲಿಯೇ ಬಿಟ್ಟು ರೈಟ್ ಹೇಳಿದ್ದರು’ ಎಂದು ಅವರು ಹೇಳಿದರು.

ಏಕ ಸದಸ್ಯ ಆಯೋಗ ಶಿಫಾರಸು ನಿರ್ಲಕ್ಷ್ಯ

ಕರ್ನಾಟಕ ಸಾರಿಗೆ ಪರಿಸ್ಥಿತಿ ಸುಧಾರಣೆ ಕುರಿತು ವರದಿ ಪಡೆಯಲು ರಾಜ್ಯ ಸರ್ಕಾರವು ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿತ್ತು. ವಿವಿಧ ಸಾರಿಗೆ ನಿಗಮಗಳ ಸ್ಥಿತಿಗತಿ ಕುರಿತು ಆಯೋಗವು ವರದಿ ಸಲ್ಲಿಸಿದೆ. ಆದರೆ ಆ ಬಗ್ಗೆ ಯಾವುದೇ ಗಂಭೀರ ಕ್ರಮವನ್ನು ಸರ್ಕಾರ ಜರುಗಿಸಿಲ್ಲ. ಎಲ್ಲವೂ ಸರಿಯಾದ ಕ್ರಮದಲ್ಲಿ ನಡೆದಿದ್ದರೆ ಕರ್ನಾಟಕದ ನಾಲ್ಕೂ ಸಾರಿಗೆ ನಿಗಮಗಳ ಬಳಿ ಈ ಹೊತ್ತಿಗೆ 27,500 ಬಸ್​ಗಳಿರಬೇಕಿತ್ತು. ಆದರೆ ಇಂದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲ 13,000 ಬಸ್​ಗಳೂ ಇಲ್ಲ. ರಾಜಕೀಯ ಪಕ್ಷಗಳ ಸಮಾವೇಶಗಳಿಗೆ ಉತ್ತಮ ಗುಣಮಟ್ಟದ ಬಸ್​ಗಳನ್ನೇ ಒದಗಿಸಲಾಗುತ್ತದೆ. ಹೀಗಾಗಿ ಇಂಥ ಸಂದರ್ಭಗಳಲ್ಲಿ ಕಳಪೆ ಬಸ್​ಗಳು ನಿಗದಿತ ಮಾರ್ಗಸೂಚಿಯಲ್ಲಿ ಕಾರ್ಯನಿರ್ವಹಣೆಗೆ ಬರುತ್ತವೆ ಅಥವಾ ಮಾರ್ಗಸೂಚಿಗಳನ್ನೇ ರದ್ದುಪಡಿಸಲಾಗುತ್ತದೆ ಎಂದು ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಗಂಭೀರ ಆರೋಪ ಮಾಡುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ‘ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 600 ಬಸ್​ಗಳ ಖರೀದಿಗೆ ಟೆಂಡರ್​ ಪ್ರಕ್ರಿಯೆ ಆರಂಭಿಸುತ್ತಿದ್ದೇವೆ. ಇತರ ನಿಗಮಗಳಿಗೂ ಹೊಸ ಬಸ್​ಗಳು ಸಿಗಲಿವೆ. ಇತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು’ ಎಂದು ಹೇಳಿದರು. ಈ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ಜಾಲತಾಣವು ವರದಿ ಮಾಡಿದೆ.

ನಡೆಯದ ನೇಮಕಾತಿ

ಸಾರಿಗೆ ನಿಗಮಗಳಲ್ಲಿ 2017ರ ನಂತರ ನೇಮಕಾತಿ ಆಗಿಲ್ಲ. ಆದರೆ ಸಾವಿರಾರು ಕಾರ್ಮಿಕರು ನಿವೃತ್ತರಾಗಿದ್ದಾರೆ. ಇದು ನಿಗಮದ ಒಟ್ಟಾರೆ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಉದಾಹರಣೆಗೆ ದೊಡ್ಡಬಳ್ಳಾಪುರ ಡಿಪೊದಲ್ಲಿ 86 ಬಸ್​ಗಳು ಕಾರ್ಯನಿರ್ವಹಿಸುತ್ತಿವೆ. ಕೆಲಸ ಸಮರ್ಪಕವಾಗಿ ಸಾಗಲು 248 ಸಿಬ್ಬಂದಿ ಬೇಕು. ಆದರೆ ಕೇವಲ 221 ಮಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿಯೂ ವಾರದ ರಜೆ, ಅನಿವಾರ್ಯ ರಜೆಗಳಿಂದ ಕೆಲವರು ಪ್ರತಿದಿನ ಬರಲು ಆಗುವುದಿಲ್ಲ. ಹೊಸ ಬಸ್​ಗಳನ್ನು ಕೊಡುವುದಷ್ಟೇ ಅಲ್ಲ, ಅದಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನೇಮಿಸಿದರೆ ಮಾತ್ರ ಸುಗಮ ಕಾರ್ಯನಿರ್ವಹಣೆ ಸಾಧ್ಯ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ಇದನ್ನೂ ಓದಿ: KSRTC Electric Bus: ರಸ್ತೆಗಿಳಿದ ಕೆಎಸ್​​​ಆರ್​​​ಟಿಸಿ ಎಲೆಕ್ಟ್ರಿಕ್​​​ ಬಸ್​ಗಳು

ಮತ್ತಷ್ಟು ಕರ್ನಾಟಕ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Fri, 20 January 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ