ಮಠಗಳಿಗೆ ಜಾಗ, ಉದ್ಯೋಗಾಕಾಂಕ್ಷಿಗಳಿಗೂ ಸುಯೋಗ: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಗೆ ಒಪ್ಪಿಗೆ ನೀಡಲಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಅಲೆಮಾರಿ/ಅರೆ ಅಲೆಮಾರಿ ಸಮುದಾಯಕ್ಕೆ 100 ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣಕ್ಕೂ ಸಮ್ಮತಿ ದೊರೆತಿದೆ. ಜೊತೆಗೆ, 22 ಹಿಂದುಳಿದ ಮಠಗಳಿಗೆ ಜಮೀನು ಮಂಜೂರು ಮಾಡುವ ನಿರ್ಧಾರವೂ ಅಂಗೀಕರಿಸಲ್ಪಟ್ಟಿದೆ.

ಬೆಂಗಳೂರು, ಜನವರಿ 22: ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಮತ್ತು ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಲಾಗಿದೆ. ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಗೆ ಕ್ಯಾಬಿನೆಟ್ ಒಪ್ಪಿದ್ದರೆ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮಾಜದ ಜನರಿಗೆ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಹಲವು ಮಹತ್ವದ ನಿರ್ದಾರಗಳು ಕ್ಯಾಬಿನೆಟ್ ಸಭೆಯಲ್ಲಿ ಆಗಿವೆ
ವಯೋಮಿತಿ ಸಡಿಲಿಕೆ
ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈವರೆಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ವಯೋಮಿತಿ ಇದ್ದರೆ, SC, ST ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿತ್ತು. ಆದರೀಗ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಆಗಲಿದ್ದು, ಡಿ.31 2027 ವರೆಗೆ ಹೊರಡಿಸಲಾಗಿರುವ ಎಲ್ಲ ಅಧಿಸೂಚನೆಗಳಿಗೆ ಇದು ಅನ್ವಯ ಆಗಲಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ; ಕಾಂಗ್ರೆಸ್ ಭವನಕ್ಕೆ ಜಮೀನು, ಬಿ-ಖಾತಾದಾರರಿಗೆ ಜಾಮೂನು
ಮನೆ ನಿರ್ಮಾಣಕ್ಕೆ ಸಹಾಯ ಹಸ್ತ
ಅಲೆಮಾರಿ/ ಅರೆ ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸಕರಕಾರ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲು ನಿರ್ಧರಿಸಿದೆ. 100 ಕೋಟಿ ಮೊತ್ತದಲ್ಲಿ, 1200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿಗಳ ವಿಸ್ತೀರ್ಣದ ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹಿಂದುಳಿದ, ದಲಿತ ಮಠಗಳಿಗೆ ಜಾಗ ಮಂಜೂರು
22 ಹಿಂದುಳಿದ, ದಲಿತ ಮಠಗಳಿಗೆ ಜಾಗ ಮಂಜೂರಿಗೂ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದ್ದು, ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯಲ್ಲಿ ಜಾಗ ಮಂಜೂರಿಗೆ ನಿರ್ಧರಿಸಲಾಗಿದೆ. ಆ ಪ್ರಕಾರ ರಾವುತ್ತನಹಳ್ಳಿ ಗ್ರಾಮದ ಸರ್ವೆ ನಂ. 57 ಮತ್ತು 58ರಲ್ಲಿರುವ ಸರ್ಕಾರಿ ಜಮೀನು ಮಠಗಳಿಗೆ ಸಿಗಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:01 pm, Thu, 22 January 26