ಲಾಡ್ಲೆ ಮಶಾಕ್ ದರ್ಗಾ ವಿವಾದದ ಕೇಸ್​​ಗಳು ಸೇರಿ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ: ಬಿಜೆಪಿ ವಿರೋಧ

ಕನ್ನಡ ಪರ ಹೋರಾಟಗಾರರು, ರೈತರು ಹಾಗೂ ಆಳಂದದ ಲಾಡ್ಲೆ ಮುಷ್ತಾಕ್ ದರ್ಗಾ ವಿವಾದದ ಕೇಸ್ ಸೇರಿದಂತೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಡೆಗೆ ವಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಕ್ರಿಮಿನಲ್ ಪರ ಎಂಬ ಕೆಟ್ಟ ಸಂದೇಶ ಕೂಡಲು ಸರ್ಕಾರ ಹೊರಟಿದೆ ಎಂದು ದೂರಿದೆ.

ಲಾಡ್ಲೆ ಮಶಾಕ್ ದರ್ಗಾ ವಿವಾದದ ಕೇಸ್​​ಗಳು ಸೇರಿ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ: ಬಿಜೆಪಿ ವಿರೋಧ
52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ

Updated on: May 22, 2026 | 10:40 AM

ಬೆಂಗಳೂರು, ಮೇ 22: ಕನ್ನಡ ಪರ ಹೋರಾಟಗಾರರ ವಿರುದ್ಧದವು ಸೇರಿದಂತೆ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನಿಸಿದೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧದ 10 ಪ್ರಕರಣಗಳು, ಕಾವೇರಿ ಹೋರಾಟಗಾರರ ವಿರುದ್ಧದ ಪ್ರಕರಣಗಳು, ಕನ್ನಡ ಪರ ಹೋರಾಟ, ಕಳಸಾ-ಬಂಡೂರಿ ಯೋಜನೆ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ರೈತರು ಹಾಗೂ ದಲಿತ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳೂ ಇವುಗಳಲ್ಲಿ ಸೇರಿವೆ. ಅಲ್ಲದೆ ಆಳಂದದಲ್ಲಿನ ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ ಏಳು ಪ್ರಕರಣಗಳನ್ನು ಹಿಂಪಡೆಯಲು ಕೂಡ ಸರ್ಕಾರ ತೀರ್ಮಾನಿಸಿದ್ದು, ಈ ನಿರ್ಧಾರವೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಮುಖ್ಯಾಂಶಗಳು

  • 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ
  • ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ ಕೇಸ್​​ಗಳೂ ವಾಪಸ್​​
  • ಸರ್ಕಾರದ ನಿರ್ಧಾರಕ್ಕೆ ಬಿಜೆಪಿಗರಿಂದ ತೀವ್ರ ವಿರೋಧ, ವಾಗ್ದಾಳಿ

ಸರ್ಕಾರದ ನಿರ್ಣಯದ ವಿರುದ್ಧ ಸಿ.ಟಿ. ರವಿ ಕಿಡಿ

ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ಕಿಡಿ ಕಾರಿರುವ ಬಿಜೆಪಿ ಎಂಎಲ್​​ಸಿ ಸಿ.ಟಿ. ರವಿ, ರಾಜ್ಯ ಸರ್ಕಾರ ಒಂದು ಕಡೆ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿ ಸುಳ್ಳು ಮೊಕದ್ದಮೆ ದಾಖಲಿಸುವ ಜೊತೆಗೆ ರೌಡಿಶೀಟ್ ತೆರೆದು ಪೊಲೀಸ್ ಇಲಾಖೆಯ ಮೂಲಕ ಕಿರುಕುಳ ಕೊಡುವ ಕೆಲಸ ಮಾಡುತ್ತಿದೆ. ಮತ್ತೊಂದು ಕಡೆ ಮುಸ್ಲಿಮರ ಮೇಲಿನ ಕ್ರಿಮಿನಲ್​​ ಕೇಸ್​​ ವಾಪಸ್​​ ಪಡೆಯುವ ಕೆಲಸ ಮಾಡುತ್ತಿದೆ. ಕೆಲವು ಬೆಂಕಿ ಹಚ್ಚಿದ ಪ್ರಕರಣ, ಆಸ್ತಿ-ಪಾಸ್ತಿ ನಷ್ಟ ಮಾಡಿದ ಪ್ರಕರಣ ಸೇರಿದಂತೆ ಗಂಭೀರ ಕೇಸ್ ವಾಪಸ್ ಪಡೆದುಕೊಂಡು ನಾವು ಕ್ರಿಮಿನಲ್ ಪರ ಎಂಬ ಕೆಟ್ಟ ಸಂದೇಶ ಕೂಡಲು ಸರ್ಕಾರ ಹೊರಟಿದೆ ಎಂದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ; ಸಚಿವ ಸಂಪುಟದ ತೀರ್ಮಾನಗಳು

ಗೃಹ ಸಚಿವರ ಸ್ಪಷ್ಟನೆ

52 ಪ್ರಕರಣ ಹಿಂಪಡೆಯಲು ಸಂಪುದಲ್ಲಿ ನಿರ್ಧಾರ ವಿಚಾರ ಸಂಬಂಧ ಗೃಹ ಸಚಿವ ಡಾ.ಜಿ‌.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಂಘಟನೆಗಳು, ರೈತರ ಮೇಲೆ ಇದ್ದ ಕೇಸ್ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಕಾನೂನಾತ್ಮಕವಾಗಿ ಕೇಸ್ ಹಿಂಪಡೆಯಲು ತೀರ್ಮಾನ ‌ಆಗಿದೆ ಎಂದವರು ತಿಳಿಸಿದ್ದಾರೆ. ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಹಿಂಪಡೆಯುವ ಬಗ್ಗೆಯೂ ಉತ್ತರಿಸಿದ ಅವರು, ಅದರ ಬಗ್ಗೆ ಡಿಟೈಲ್ಸ್ ಹೇಳಲು ಹೋಗಲ್ಲ. ಎಲ್ಲವೂ ಚರ್ಚೆ ಮಾಡಿಯೇ ತೀರ್ಮಾನ ಮಾಡಲಾಗಿದೆ. ಇದು ಏಕಾಏಕಿ ತೀರ್ಮಾನವಲ್ಲ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us