
ಬೆಂಗಳೂರು, ಆಗಸ್ಟ್ 03: ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಸಂಬಂಧ 20 ಮಂದಿ ಹೆಸರನ್ನು ಹೈಕಮಾಂಡ್ ಪ್ರಕಟಿಸಿತ್ತಾದರೂ 19 ಮಂದಿ ಮಾತ್ರ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಲಿಸ್ಟ್ನಲ್ಲಿದ್ದವರ ಪೈಕಿ ಗಾಯತ್ರಿ ಶಾಂತೇಗೌಡ ಮಾತ್ರ ಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿಲ್ಲ. ಕೊನೇ ಕ್ಷಣದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮಹಿಳಾ ಶಾಸಕರ ನಡುವಿನ ತೀವ್ರ ಪೈಪೋಟಿಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಹೌದು, 20 ಮಂದಿ ನೂತನ ಸಚಿವರ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಆದರೆ ಪ್ರಮಾಣವಚನ ಸ್ವೀಕರಿಸಲು ಸಿಎಂ ಕಡೆಯಿಂದ ಅವರಿಗೆ ಯಾವುದೇ ಕರೆ ಬಂದಿಲ್ಲ. ಪರಿಷತ್ ಸದಸ್ಯೆಯಾಗಿ ಗಾಯತ್ರಿ ಇನ್ನೂ ಪ್ರಮಾಣ ಸ್ವೀಕರಿಸಿದ ಕಾರಣ ಪಕ್ಷದಲ್ಲಿ ಈ ಬಗ್ಗೆ ಅಸಮಾಧಾನ ಭುಗಿಲೆದ್ದ ಕಾರಣ, ಪಕ್ಷ ಈ ತೀರ್ಮಾನ ಕೈಗೊಂಡಿರುವ ಮಾಹಿತಿ ಇದೆ.
ಮಹಿಳಾ ಸಚಿವ ಸ್ಥಾನಕ್ಕೆ ಗಾಯತ್ರಿ ಅವರ ಹೆಸರು ಘೋಷಣೆ ನಡುವೆಯೂ ಲಕ್ಷ್ಮೀ ಹೆಬ್ಬಾಳ್ಕರ್ ಉಮಾಶ್ರೀ ನಡುವೆ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಕೊನೆ ಕ್ಷಣದಲ್ಲಿ ಗಾಯತ್ರಿ ಹೆಸರು ಬಿಡಲೇಬೇಕು ಎಂಬ ರಾಜ್ಯ ನಾಯಕರ ಒತ್ತಡಕ್ಕೆ ಕಾಂಗ್ರೆಸ್ ವರಿಷ್ಠರು ಮಣಿದಿದ್ದಾರೆ. ಈ ನಡುವೆ ದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದ ಸಂಸದ ಇ.ತುಕಾರಾಂ ಪತ್ನಿ ಅನ್ನಪೂರ್ಣ ಪರ ಲಾಬಿ ನಡೆಸಿದ ಪ್ರಸಂಗವೂ ನಡೆದಿದೆ.
ಸಿದ್ದರಾಮಯ್ಯ ಮುಂದೆ ಗಾಯತ್ರಿ ಶಾಂತೇಗೌಡ ಬೇಸರ ವ್ಯಕ್ತಪಡಿಸಿದ್ದು, ತಪ್ಪು ಮಾಡದಿದ್ದರೂ ಪರಿಷತ್ ಸ್ಥಾನದಲ್ಲೂ ತನಗೆ 4 ವರ್ಷ ಅನ್ಯಾಯ ಆಗಿದೆ. ಈಗ ಸಚಿವ ಸ್ಥಾನದ ವಿಚಾರದಲ್ಲಿಯೂ ಹೀಗಾಗಿದ್ದು, ಒಂದು ಅವಕಾಶ ನೀಡುವಂತೆ ಮನವಿ ಮಾಡಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.