ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ಸಮೀಕ್ಷೆ ಬಗ್ಗೆ ಚರ್ಚೆ; ಸಚಿವ ಶಿವರಾಜ ತಂಗಡಗಿ
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಸಮೀಕ್ಷೆ ಬಗ್ಗೆ ಚರ್ಚೆಯ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿಕೆ ನೀಡಿದ್ದಾರೆ. ಸರ್ಕಾರ ಜಾತಿಗಣತಿ ಸಮೀಕ್ಷೆಯ ವರದಿಯನ್ನು ಸ್ವೀಕಾರ ಮಾಡಿದೆ. ಅದನ್ನು ಯಾವಾಗ ಸಂಪುಟದ ಎದುರು ತರಲು ಸಿಎಂ ಹೇಳುತ್ತಾರೋ ಆಗ ತರುತ್ತಾರೆ. ಸದ್ಯಕ್ಕೆ ಜಾತಿಗಣತಿ ಸಮೀಕ್ಷೆಯ ವರದಿ ಖಜಾನೆಯಲ್ಲೇ ಇದೆ ಎಂದು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬೆಂಗಳೂರು: ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಜಾತಿ ಜನಗಣತಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಜಾತಿ ಜನಗಣತಿಯನ್ನು ಸರ್ಕಾರ ಸ್ವೀಕಾರ ಮಾಡಿದೆ. ಆದರೆ, ಮಾಧ್ಯಮಗಳಲ್ಲಿ ಬರುತ್ತಿರುವ ಅಂಕಿ ಅಂಶಗಳು ಸುಳ್ಳು. ಸಿಎಂ ಯಾವಾಗ ಸಂಪುಟಕ್ಕೆ ತೆಗೆದುಕೊಂಡು ಬರೋಕೆ ಹೇಳ್ತಾರೋ ಆಗ ಆ ಬಗ್ಗೆ ಮಾಹಿತಿ ನೀಡುತ್ತೇವೆ. ಅದರ ವರದಿಯನ್ನು ಖಜಾನೆಯಲ್ಲೇ ಇಟ್ಟಿದ್ದೇವೆ. ಅದರ ಬಿಡುಗಡೆಗೂ ಮುನ್ನವೇ ವಿರೋಧ ಬೇಡ. ಗಣತಿಗಾಗಿ 166 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಆ ಗಣತಿಯ ಬಿಡುಗಡೆಗೆ ಯಾವ ಮತ್ತು ಯಾರ ಭಯ, ಆತಂಕವೂ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿ ನಡೆಸಿದ್ದು, ಜನವರಿ 27ರಂದು ವಿಧಾನಸೌಧದ ಆವರಣದಲ್ಲಿ ನಿರ್ಮಿಸಲಾದ ಭುವನೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾನೆ ಕಾರ್ಯಕ್ರಮ ನಡೆಯಲಿದೆ. ಭುವನೇಶ್ವರಿ ದೇವಿ ಪ್ರತಿಮೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅನಾವರಣ ಮಾಡಲಿದ್ದಾರೆ. ಈ ಮೂರ್ತಿ ಪ್ರತಿಷ್ಠಾಪನೆ ಕನ್ನಡಿಗರ ಆಶಯ ಆಗಿತ್ತು, ಅದು ಈಡೇರಿದೆ ಎಂದಿದ್ದಾರೆ.
ಇದನ್ನೂ ಓದಿ: ಶ್ರೀರಾಮುಲು, ಜನಾರ್ದನ ರೆಡ್ಡಿ ಸಮರ ನಿಯಂತ್ರಣಕ್ಕೆ ಬಿಜೆಪಿ ಹೈಕಮಾಂಡ್ ಎಂಟ್ರಿ: ವಿಜಯೇಂದ್ರಗೆ ಬಂತು ಖಡಕ್ ಸೂಚನೆ
ಈ ಭುವನೇಶ್ವರಿ ದೇವಿ 25 ಅಡಿ ಎತ್ತರದ ಕಂಚಿನ ಪ್ರತಿಮೆಯಾಗಿದೆ. ಮೂರ್ತಿಯ ಹಿಂಭಾಗದಲ್ಲಿ 30 ಅಡಿ ಎತ್ತರದ ಕರ್ನಾಟಕ ಮ್ಯಾಪ್ ಇದೆ. ಎರಡೂ ಸೇರಿ 41 ಅಡಿ ಇದೆ. ನಾಲ್ಕು ದಿಕ್ಕುಗಳಿಂದ ರಥಗಳು ಬರಲಿದೆ. ಆಯಾ ಭಾಗದ ಶಾಸಕರು ರಥ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಟ್ಟಿದ್ದೇವೆ. ಆಟೋ ಚಾಲಕರು, ಕನ್ನಡಪರ ಸಂಘಟನೆಗೆ ಆಹ್ವಾನ ಪತ್ರಿಕೆ ಕೊಟ್ಟಿದ್ದೇವೆ. 12 ಗಂಟೆಯಿಂದ ರಥದ ಮೆರವಣಿಗೆ ಕಾರ್ಯ ನಡೆಯಲಿದೆ. ಕಂಚಿನ ಪ್ರತಿಮೆಗೆ ಹೋಲುವ ಬಾವುಟ ತಯಾರು ಮಾಡಲು ಚಿಂತನೆ ಇದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಅಮಿತ್ ಶಾಗೆ ಸುದ್ದಿ ಮುಟ್ಟಿಸಿದ್ದೇವೆ, ನಿಮ್ಮ ಪರ ನಾವಿದ್ದೇವೆ: ಶ್ರೀರಾಮುಲುಗೆ ಭರವಸೆ ಕೊಟ್ರಂತೆ ನಡ್ಡಾ
ಹಾಗೇ, ಬಿಜೆಪಿಯ ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ಕರೆ ತರುವ ವಿಚಾರವಾಗಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಬಿಜೆಪಿ ಮನೆಯೊಂದು 6 ಬಾಗಿಲಾಗಿದೆ. ಹಿಂದೆ ಮೂರು ಬಾಗಿಲಿತ್ತು, ಈಗ 6 ಬಾಗಿಲಾಗಿದೆ. ಶ್ರೀರಾಮುಲು ಅವರನ್ನು ಹೊರಗೆ ಹಾಕಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಅದನ್ನು ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡ್ತಾರೆ. ಜನಾರ್ದನ ರೆಡ್ಡಿ ಸುಳ್ಳು ಹೇಳುತ್ತಿದ್ದಾರೆ. ಅವರು ಸುಳ್ಳಿನ ಮನೆಯನ್ನೇ ಕಟ್ಟುತ್ತಿದ್ದಾರೆ ಅಂತ ನಾನು ಹಲವು ಬಾರಿ ಹೇಳಿದ್ದೆ. ಈಗ ಸ್ವತಃ ಶ್ರೀರಾಮುಲುನೇ ಹೇಳುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ