ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ: ಇಲಾಖೆಯಿಂದ ಕಟ್ಟುನಿಟ್ಟಿನ ನಿಯಮ!

ಕಾಲೇಜು ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಗಳಿಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸದ ಸಮಯದಲ್ಲಿ ಸೆಲ್ಫಿ, ವಿಡಿಯೋ ಹಾಗೂ ರೀಲ್ಸ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಕ್ಕೆ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಅಧ್ಯಾಪಕರಿಗೆ ನಿಗಾವಹಿಸಲು ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ: ಇಲಾಖೆಯಿಂದ ಕಟ್ಟುನಿಟ್ಟಿನ ನಿಯಮ!
ಸಾಂದರ್ಭಿಕ ಚಿತ್ರ
Image Credit source: gettyimages.com
Edited By:

Updated on: Sep 19, 2026 | 11:21 AM

ಮುಖ್ಯಾಂಶಗಳು

  • ಕಾಲೇಜು ಶೈಕ್ಷಣಿಕ ಪ್ರವಾಸಗಳಲ್ಲಿ ವಿದ್ಯಾರ್ಥಿಗಳಿಗೆ ಸೆಲ್ಫಿ ಹಾಗೂ ರೀಲ್ಸ್ ನಿರ್ಬಂಧಿಸಲಾಗಿದೆ.
  • ಪ್ರವಾಸ ಆಯೋಜಿಸಲು ಕಾಲೇಜು ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
  • ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜೊತೆಯಲ್ಲಿರುವ ಅಧ್ಯಾಪಕರಿಗೆ ಸಂಪೂರ್ಣ ಜವಾಬ್ದಾರಿ.

ಬೆಂಗಳೂರು, ಸೆಪ್ಟೆಂಬರ್ 19: ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದಾಗ ಸಂಭವಿಸುವ ಅಪಘಾತಗಳನ್ನು ತಡೆಯಲು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆಯು ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಸುತ್ತೋಲೆಯ ಪ್ರಕಾರ, ಇನ್ಮುಂದೆ ಪ್ರವಾಸದ ಅವಧಿಯಲ್ಲಿ ವಿದ್ಯಾರ್ಥಿಗಳು ಸೆಲ್ಫಿ ಹಾಗೂ ರೀಲ್ಸ್‌ಗಳನ್ನು ಚಿತ್ರೀಕರಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಅಪಾಯಕಾರಿ ರೀಲ್ಸ್‌ ಸಾಹಸಕ್ಕೆ ಬ್ರೇಕ್

ಪ್ರವಾಸದ ಸಂದರ್ಭದಲ್ಲಿ ಪ್ರವಾಸಿ ತಾಣಗಳು, ನದಿಗಳು, ಜಲಪಾತಗಳು ಹಾಗೂ ಎತ್ತರದ ಬೆಟ್ಟ-ಗುಡ್ಡಗಳ ಬಳಿ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಫೋಟೋ, ಸೆಲ್ಫಿ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್‌ಗಳನ್ನು ಮಾಡುವಾಗ ಮೈಮರೆತು ಅಪಾಯಕ್ಕೆ ಸಿಲುಕುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರಾಣರಕ್ಷಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಇಲಾಖೆಯು ಈ ನಿರ್ಣಾಯಕ ಆದೇಶ ಹೊರಡಿಸಿದೆ. ಪ್ರವಾಸ ಆರಂಭವಾಗುವ ಮುನ್ನವೇ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಈ ನಿಯಮದ ಕುರಿತು ಸ್ಪಷ್ಟ ಸೂಚನೆ ನೀಡಬೇಕು ಮತ್ತು ನಿಯಮ ಉಲ್ಲಂಘನೆಯಾಗದಂತೆ ಜೊತೆಯಲ್ಲಿ ತೆರಳುವ ಉಪನ್ಯಾಸಕರು ತೀವ್ರ ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.

ಪೂರ್ವಾನುಮತಿ ಮತ್ತು ಪೋಷಕರ ಸಮ್ಮತಿ ಕಡ್ಡಾಯ

ಯಾವುದೇ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳು ಶಿಕ್ಷಣ ಇಲಾಖೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದೇ ಪ್ರವಾಸ ಆಯೋಜಿಸುವಂತಿಲ್ಲ. ಪ್ರವಾಸಕ್ಕೆ ತೆರಳುವ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಸೂಕ್ತ ಮುಚ್ಚಳಿಕೆ ಪತ್ರ ಮತ್ತು ಅವರ ಪೋಷಕರ ಲಿಖಿತ ಸಮ್ಮತಿ ಪತ್ರವನ್ನು ಪಡೆಯುವುದು ಕಡ್ಡಾಯವಾಗಿದೆ. ಇಷ್ಟೇ ಅಲ್ಲದೆ, ಪ್ರವಾಸಕ್ಕೆ ತೆರಳುವ ಮಾರ್ಗ ಹಾಗೂ ಭೇಟಿ ನೀಡುವ ಸ್ಥಳಗಳ ಮಾಹಿತಿಯನ್ನು ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಠಾಣೆಗೆ ಮುಂಚಿತವಾಗಿಯೇ ಒದಗಿಸಬೇಕಾಗುತ್ತದೆ.

ಅಧ್ಯಾಪಕರ ಉಪಸ್ಥಿತಿ ಮತ್ತು ಉಸ್ತುವಾರಿ

ಅತಿಥಿ ಉಪನ್ಯಾಸಕರನ್ನು ಮಾತ್ರವೇ ನಂಬಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕಳುಹಿಸುವಂತಿಲ್ಲ. ಕನಿಷ್ಠ ಒಬ್ಬರು ಖಾಯಂ ಅಧ್ಯಾಪಕರು ತಂಡದಲ್ಲಿ ಇರುವುದು ಕಡ್ಡಾಯ. ಪ್ರವಾಸದಲ್ಲಿ ನಿಯೋಜನೆಗೊಳ್ಳುವ ಬೋಧಕ ಸಿಬ್ಬಂದಿಯ ಸಂಖ್ಯೆ ನಾಲ್ಕನ್ನು ಮೀರಬಾರದು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಇಬ್ಬರು ಮಹಿಳಾ ಅಧ್ಯಾಪಕಿಯರು ಇರಲೇಬೇಕು. ಅನುಮೋದಿತ ಸ್ಥಳಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡಬಾರದೆಂದು ಇಲಾಖೆ ಕಟ್ಟುನಿಟ್ಟಾಗಿ ಹೇಳಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Sat, 19 September 26

Loading...
Unable to load recommendations.
Follow Us