ಬೆಂಗಳೂರು: ಮಾಜಿ ಗೆಳೆಯರಾದ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಅವರ ನಡುವೆ ಭಾರೀ ಕಂದಕ ಏರ್ಪಟ್ಟಿದೆ. ಅವರಿಬ್ಬರ ನಡುವಿನ ಗಲಾಟೆ ಇದೀಗ ಬೇರೆ ಆಯಾಮ ತೆಗೆದುಕೊಂಡಿದೆ. ಡಿ.ಕೆ ಶಿವಕುಮಾರ್ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಶ್ರೀರಾಮುಲು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಟೀಕಿಸಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಶ್ರೀರಾಮುಲು ಅವರಿಗೆ ಈಗ ಯಾವುದೇ ಆಹ್ವಾನ ನೀಡಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಆಹ್ವಾನ ನೀಡಿದ ಬಗ್ಗೆ ಜನಾರ್ದನ ರೆಡ್ಡಿಯ ಹೇಳಿಕೆಗೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಶ್ರೀರಾಮುಲು ಅವರನ್ನು ಭೇಟಿಯಾಗಿಲ್ಲ, ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ವಿಧಾನಸಭೆ ಚುನಾವಣೆಗೂ ಮೊದಲು ನಾನು ಪಕ್ಷಕ್ಕೆ ಬರಲು ಕೇಳಿದ್ದೆ. ಆಗ ಶ್ರೀರಾಮುಲು ಅವರು ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದ್ದರು. ಆಗ ಶ್ರೀರಾಮುಲು ಮಾತ್ರವಲ್ಲ 50 ಶಾಸಕರನ್ನು ಕೂಡ ಸಂಪರ್ಕ ಮಾಡಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ಹಳೇ ದೋಸ್ತಿಯ ರಾಜಕೀಯ ಗುಟ್ಟು ಬಿಚ್ಚಿಟ್ಟ ರೆಡ್ಡಿ
ವಿಧಾನಸಭಾ ಚುನಾವಣೆಗೂ ಮುನ್ನ ನಾನು ಬೇರೆ ಶಾಸಕರನ್ನು ಸಂಪರ್ಕಿಸಿದ್ದೆ. ಈಗ ನಾನು ಯಾರನ್ನೂ ಸಂಪರ್ಕ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರು ಬಾಯಿಚಪಲಕ್ಕೆ ಮಾತಾಡಿದರೆ ಅದಕ್ಕೆ ನಾನು ಉತ್ತರ ಕೊಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಶ್ರೀರಾಮುಲು ಅವರನ್ನು ಡಿಕೆಶಿ ಸಂಪರ್ಕ ಮಾಡಿದ್ದಾರೆ ಅನ್ನೋ ವಿಚಾರದಲ್ಲಿ ಹುರುಳಿಲ್ಲ. ಅವರು ಬಾಯಿ ಚಪಲಕ್ಕೆ ಮಾತಾಡ್ತಾರೆ. ಅವರು ಪಾರ್ಟಿಯಲ್ಲೇ ಇರಲಿಲ್ಲ. ಈಗ ಪಾರ್ಟಿಗೆ ಕಾಲಿಟ್ಟು ಮನೆ ಒಡೆಯೋ ಕೆಲಸ ಮಾಡ್ತಿದ್ದಾನೆ. ನಾನ್ಯಾಕೆ ಅವನನ್ನು ದೊಡ್ಡವನನ್ನಾಗಿ ಮಾಡಲಿ? ಅವನು ನನ್ನ ಹೆಸರು ತಗೊಂಡರೆ ನಾನು ದೊಡ್ಡವನಾಗುತ್ತೇನಾ? ಅವನು ಯಾರ ಸಂಪರ್ಕದಲ್ಲಿದ್ದ ಅಂತ ಚರ್ಚೆ ಬೇಡ. ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ನನಗೆ ಶ್ರೀರಾಮುಲು ಸಿಕ್ಕಿಲ್ಲ, ಮಾತಾಡಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ: ಶ್ರೀರಾಮುಲು, ಜನಾರ್ದನ ರೆಡ್ಡಿ ಸಮರ ನಿಯಂತ್ರಣಕ್ಕೆ ಬಿಜೆಪಿ ಹೈಕಮಾಂಡ್ ಎಂಟ್ರಿ: ವಿಜಯೇಂದ್ರಗೆ ಬಂತು ಖಡಕ್ ಸೂಚನೆ
ಇನ್ನು, ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭಾರತೀಯ ಜನತಾ ಪಕ್ಷ ಒಡೆದ ಮನೆಯಾಗಿದೆ. ಬಿಜೆಪಿಯ ಒಳಜಗಳವನ್ನು ಕಾಂಗ್ರೆಸ್ ಪಕ್ಷಕ್ಕೆ ಏಕೆ ತರುತ್ತೀರಾ? ನಾನು ಯಾರನ್ನೂ ಸಂಪರ್ಕಿಸಿಲ್ಲವೆಂದು ಶ್ರೀರಾಮುಲು ಅವರೇ ಹೇಳಿದ್ದಾರೆ. ಜನಾರ್ದನ ರೆಡ್ಡಿ ನಡೆಯಿಂದ ಬಿಜೆಪಿ ನಾಯಕರು ಆತನನ್ನು ಯಾಕಾದರೂ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೋ ಎಂದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಿರಿಯರು, ಕಿರಿಯರು ಯಾರೇ ಬಂದರೂ ಸ್ವಾಗತ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ