ನೀಟ್ ಮರುಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ ಮೆಡಿಕಲ್, ಡೆಂಟಲ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ

ಕರ್ನಾಟಕ ಸರ್ಕಾರವು 2026-27ನೇ ಸಾಲಿನ ವೈದ್ಯಕೀಯ (MBBS) ಮತ್ತು ದಂತ ವೈದ್ಯಕೀಯ (BDS) ಕೋರ್ಸ್‌ಗಳ ಶುಲ್ಕದಲ್ಲಿ ಯಾವುದೇ ಹೆಚ್ಚಳವಿಲ್ಲದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ನೀಟ್ ಮರುಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಭರ್ಜರಿ ರಿಲೀಫ್ ನೀಡಿದೆ. ಖಾಸಗಿ ಕಾಲೇಜುಗಳ ಶುಲ್ಕ ಹೆಚ್ಚಳದ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದ್ದು, ಹಳೆಯ ಶುಲ್ಕ ರಚನೆಯೇ ಈ ವರ್ಷವೂ ಅನ್ವಯಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಘೋಷಿಸಿದ್ದಾರೆ.

ನೀಟ್ ಮರುಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ ಮೆಡಿಕಲ್, ಡೆಂಟಲ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ
ಸಾಂದರ್ಭಿಕ ಚಿತ್ರ
Image Credit source: Tv9 kannada
Edited By:

Updated on: Jun 12, 2026 | 3:20 PM

ಬೆಂಗಳೂರು, ಜೂ.12: ನೀಟ್ (NEET) ಮರುಪರೀಕ್ಷೆಯ ತೀವ್ರ ಒತ್ತಡ ಮತ್ತು ಆತಂಕದಲ್ಲಿರುವ ರಾಜ್ಯದ ವೈದ್ಯಕೀಯ ಸೀಟ್ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ರಾಜ್ಯ ಸರ್ಕಾರವು ಭರ್ಜರಿ ರಿಲೀಫ್ ನೀಡಿದೆ. ಪ್ರಸಕ್ತ ಸಾಲಿನ (2026-27) ವೈದ್ಯಕೀಯ (MBBS) ಮತ್ತು ದಂತ ವೈದ್ಯಕೀಯ (BDS) ಕೋರ್ಸ್‌ಗಳ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡದೆ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕಳೆದ ವರ್ಷ (2025-26ನೇ ಸಾಲು) ನಿಗದಿಪಡಿಸಲಾಗಿದ್ದ ಹಳೆಯ ಶುಲ್ಕ ರಚನೆಯೇ ಈ ವರ್ಷಕ್ಕೂ ಅನ್ವಯಿಸಲಿದೆ ಎಂದು ಸ್ಪಷ್ಟಪಡಿಸಿದರು. ಈ ಮಹತ್ವದ ತೀರ್ಮಾನವು ರಾಜ್ಯದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳೆರಡಕ್ಕೂ ಸಮಾನವಾಗಿ ಅನ್ವಯಿಸಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕವನ್ನು ಗಣನೀಯವಾಗಿ ಹೆಚ್ಚಳ ಮಾಡಬೇಕೆಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದವು ಮತ್ತು ಈ ಸಂಬಂಧ ಮನವಿಯನ್ನೂ ಸಲ್ಲಿಸಿದ್ದವು. ಆದರೆ, ವಿದ್ಯಾರ್ಥಿಗಳು ಮತ್ತು ಪೋಷಕರ ಆರ್ಥಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಸಂಸ್ಥೆಗಳ ಶುಲ್ಕ ಹೆಚ್ಚಳದ ಬೇಡಿಕೆಯನ್ನು ರಾಜ್ಯ ಸರ್ಕಾರವು ಕಠಿಣವಾಗಿ ತಿರಸ್ಕರಿಸಿದೆ. “ಶುಲ್ಕ ಹೆಚ್ಚಳದ ಕುರಿತು ಹರಡುತ್ತಿರುವ ಯಾವುದೇ ರೀತಿಯ ಊಹಾಪೋಹಗಳಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಿವಿಗೊಡಬಾರದು” ಎಂದು ಸಚಿವರು ಇದೇ ವೇಳೆ ಮನವಿ ಮಾಡಿದರು. ಈಗಾಗಲೇ ದೇಶಾದ್ಯಂತ ನೀಟ್ ಗೊಂದಲಗಳಿಂದ ಕಂಗಾಲಾಗಿದ್ದ ವಿದ್ಯಾರ್ಥಿ ವಲಯಕ್ಕೆ ರಾಜ್ಯ ಸರ್ಕಾರದ ಈ ನಿರ್ಧಾರವು ಆರ್ಥಿಕವಾಗಿ ದೊಡ್ಡ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪ್ರಸಕ್ತ ಸಾಲಿನ ಶುಲ್ಕದ ವಿವರ ಇಲ್ಲಿದೆ:

ಎಂಬಿಬಿಎಸ್ (MBBS) ಕೋರ್ಸ್ ಶುಲ್ಕ:

ಸರ್ಕಾರಿ ಕಾಲೇಜುಗಳು: 55,000

ಖಾಸಗಿ ಕಾಲೇಜುಗಳು (ಸರ್ಕಾರಿ ಕೋಟಾ): 11,88,167

ದಂತ ವೈದ್ಯಕೀಯ (BDS) ಕೋರ್ಸ್ ಶುಲ್ಕ:

ಸರ್ಕಾರಿ ಕಾಲೇಜುಗಳು: 40,000

ಖಾಸಗಿ ಕಾಲೇಜುಗಳು (ಸರ್ಕಾರಿ ಕೋಟಾ): 7,32,625

ಇದನ್ನೂ ಓದಿ: ಜೂನ್ 21 ನೀಟ್ ಯುಜಿ ಮರು ಪರೀಕ್ಷೆ, ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯ

ಜೂನ್ 21 ನೀಟ್ ಯುಜಿ ಮರು ಪರೀಕ್ಷೆ:

ಇತ್ತೀಚಿನ ಗೊಂದಲಗಳಿಗೆ ತೆರೆ ಎಳೆದು, ಪ್ರತಿಯೊಬ್ಬ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗೂ ಸಮಾನ ಹಾಗೂ ನ್ಯಾಯಯುತವಾದ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಸರ್ಕಾರ ನೀಟ್ ಯುಜಿ(NEET UG) 2026ರ ಮರು ಪರೀಕ್ಷೆಯು ಜೂನ್ 21ರಂದು ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ವಿದ್ಯಾರ್ಥಿಗಳಿಗಾಗಿ ಎನ್​ಟಿಎ ವಿಶೇಷ ಕ್ರಮಗಳನ್ನು ಘೋಷಿಸಿದೆ. ಅಭ್ಯರ್ಥಿಗಳಿಗೆ ಹೆಚ್ಚುವರಿ 15 ನಿಮಿಷಗಳನ್ನು ನೀಡಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ಪರೀಕ್ಷೆ ನಡೆಯಲಿದೆ. ನೀಟ್ ಯುಜಿ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರಗಳನ್ನು ಜೂನ್ 14 ರಂದು ಬಿಡುಗಡೆ ಮಾಡಲಾಗುವುದು. ರಫ್​ ವರ್ಕ್​ಗೆ ಕೂಡ ಹೆಚ್ಚು ಸ್ಥಳಾವಕಾಶವನ್ನು ಪೇಪರ್​ನಲ್ಲಿ ನೀಡಲಾಗುತ್ತದೆ ಎಂದು ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us