Bengaluru Stampede: ಪೊಲೀಸ್ ಆಯುಕ್ತ ದಯಾನಂದ್ ಮಾಡಿದ ತಪ್ಪೇನು?; ಅಮಾನತಿಗೆ ಕಾರಣ ನೀಡಿದ ಸರ್ಕಾರ

ಜೂನ್ 3 ಕರ್ನಾಟಕದ ಪಾಲಿಗೆ ಅತ್ಯಂತ ಸಂಭ್ರಮದ ಕ್ಷಣ. 18 ವರ್ಷಗಳ ಬಳಿಕ ಆರ್​ಸಿಬಿ ಐಪಿಎಲ್ ಕಪ್ ಗೆದ್ದಿದ್ದಕ್ಕೆ ಇಡೀ ರಾಜ್ಯವೇ ಸಂಭ್ರಮಿಸಿತ್ತು. ಆದರೆ, ಜೂನ್ 4 ಕರ್ನಾಟಕದ ಪಾಲಿಗೆ ಕರಾಳ ದಿನವಾಗಿ ಹೋಯಿತು. ಆರ್​ಸಿಬಿ ವಿಜಯೋತ್ಸವವನ್ನು ಕಣ್ತುಂಬಿಕೊಳ್ಳಲು ಬಂದಿದ್ದ 11 ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಈ ಘಟನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದಕ್ಕೆ ಕಾರಣ ಇಲ್ಲಿದೆ.

Bengaluru Stampede: ಪೊಲೀಸ್ ಆಯುಕ್ತ ದಯಾನಂದ್ ಮಾಡಿದ ತಪ್ಪೇನು?; ಅಮಾನತಿಗೆ ಕಾರಣ ನೀಡಿದ ಸರ್ಕಾರ
B Dayanand Ips

Updated on: Jun 05, 2025 | 11:16 PM

ಬೆಂಗಳೂರು, ಜೂನ್ 5: ಜೂನ್ 4ರ ಬುಧವಾರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinna Swamy Stadium) ಆಯೋಜಿಸಿದ್ದ ಆರ್​ಸಿಬಿ ವಿಜಯಯಾತ್ರೆಯನ್ನು ನೋಡಲು ಆಗಮಿಸಿದ್ದ ಲಕ್ಷಾಂತರ ಜನರ ನಡುವೆ ಕಾಲ್ತುಳಿತ ಉಂಟಾಗಿ 11 ಜನರು ಸಾವನ್ನಪ್ಪಿದ್ದರು. 50 ಜನರಿಗೆ ಗಾಯಗಳಾಗಿವೆ. ಅವರಲ್ಲಿ ಇನ್ನೂ ಅನೇಕ ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್​ಸಿಬಿಯ (RCB Victory Parade) ಸಂಭ್ರಮಾಚರಣೆಯನ್ನು ಮಾಡಬೇಕಾಗಿದ್ದ ಕರ್ನಾಟಕದಲ್ಲಿ ಸೂತಕದ ಛಾಯೆ ಆವರಿಸಿತ್ತು. ಇದಾದ ನಂತರ ಕರ್ನಾಟಕ ಸರ್ಕಾರದ ವೈಫಲ್ಯದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ನಿನ್ನೆ ನಡೆದ ದುರಂತದ ಬಗ್ಗೆ ಸಿದ್ದರಾಮಯ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಹಾಗೇ, ಸಿಐಡಿ ತನಿಖೆಗೂ ಆದೇಶಿಸಿದೆ. ಇದೆಲ್ಲದರ ನಡುವೆ ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳುವ ಪ್ರಯತ್ನ ಮಾಡಿರುವ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ (B Dayanand) ಸೇರಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ ಎನಿಸಿಕೊಂಡಿರುವ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರನ್ನು ಅಮಾನತು ಮಾಡಿದ್ದರ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆ ರಾಜ್ಯ ಸರ್ಕಾರ ತನ್ನ ನಿರ್ಧಾರಕ್ಕೆ ಸ್ಪಷ್ಟನೆ ನೀಡಿದೆ. ದಯಾನಂದ್ ಅವರನ್ನು ಪೊಲೀಸ್ ಕಮಿಷನರ್ ಹುದ್ದೆಯಿಂದ ಅಮಾನತು ಮಾಡಿದ್ದಕ್ಕೆ ಕಾರಣವನ್ನು ನೀಡಿದೆ.

ಇದನ್ನೂ ಓದಿ: RCB Fans Death: ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಆರ್​ಸಿಬಿ

ರಾಜ್ಯ ಸರ್ಕಾರದ ಪ್ರಕಟಣೆಯಲ್ಲೇನಿದೆ?:

ನಿನ್ನೆ ನಡೆದ ಆರ್​ಸಿಬಿ ವಿಜಯ ಯಾತ್ರೆಯನ್ನು ಕರ್ನಾಟಕ ಸರ್ಕಾರ ಆಯೋಜಿಸಿದ್ದು ಎಂದೇ ಎಲ್ಲರೂ ಭಾವಿಸಿದ್ದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್​ಸಿಬಿ ಆಟಗಾರರಿಗೆ ಸನ್ಮಾನ ಮಾಡಿದ್ದರಿಂದ ಇದು ಸರ್ಕಾರಿ ಕಾರ್ಯಕ್ರಮ ಎಂದೇ ಭಾವಿಸಲಾಗಿತ್ತು. ಆದರೆ, ತನ್ನ ಪ್ರಕಟಣೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ ಜೂನ್ 3ರಂದು ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯಯಾತ್ರೆ ಮತ್ತು ಸಂಭ್ರಮಾಚರಣೆ ಆಯೋಜಿಸುತ್ತೇವೆ ಎಂದು ಆರ್​ಸಿಬಿಯ ಸಿಇಒ ತಿಳಿಸಿದ್ದರು. ಆದರೆ, ಈ ಬಗ್ಗೆ ದಯಾನಂದ್ ಅವರು ಆಯೋಜಕರಿಗೆ ಲಿಖಿತ ಉತ್ತರ ನೀಡಿ ಅನುಮತಿ ನಿರಾಕರಿಸಲು ವಿಫಲರಾಗಿದ್ದಾರೆ. ಸಮಯಾವಕಾಶ ಸಾಕಾಗುವುದಿಲ್ಲ ಎಂದು ಅವರು ಅನುಮತಿ ನಿರಾಕರಿಸಬೇಕಿತ್ತು ಎಂದು ಪ್ರಕಟಣೆಯಲ್ಲಿ ಕಾರಣ ನೀಡಲಾಗಿದೆ. ಆದರೆ, ಅರ್ಧ ದಿನದಲ್ಲಿ ಸಿದ್ಧತೆ ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಲಿಖಿತವಾಗಿ ಅನುಮತಿ ನಿರಾಕರಿಸಿದ್ದಾರೆ ಎಂಬ ಕಾರಣ ನೀಡಿ ದಯಾನಂದ್ ಅವರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಕೇಸ್ ಸಿಐಡಿಗೆ, ಬೆಂಗಳೂರು ಕಮಿಷನರ್, ಎಸಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಬಿ. ದಯಾನಂದ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್‌.ಟಿ.ಶೇಖರ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್‌, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್‌.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್‌ ಇನ್ಸ್‌ಪೆಕ್ಟರ್‌ ಗಿರೀಶ್‌.ಎ.ಕೆ ಅವರನ್ನು ಅಮಾನತು ಮಾಡಲಾಗಿದೆ.

ಈ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಿದ್ದೇವೆ. ಎಫ್​ಐಆರ್ ಆಧಾರದ ಮೇಲೆ ಸಿಐಡಿ ತನಿಖೆ ನಡೆಸಲಿದೆ. 30 ದಿನದಲ್ಲಿ ನ್ಯಾಯಾಂಗ ತನಿಖೆ ಮುಗಿಸಲು ಸೂಚಿಸಲಾಗಿದೆ. ಗುಪ್ತಚರ ಇಲಾಖೆಯ ಲೋಪವೂ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗೇ, ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಲಾಗಿದ್ದು, ಈ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ಹಾ ಅವರ ಅಧ್ಯಕ್ಷತೆಯಲ್ಲಿ, ನಾವು ಏಕವ್ಯಕ್ತಿ ಆಯೋಗವನ್ನು ನೇಮಿಸಿದ್ದೇವೆ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:10 pm, Thu, 5 June 25