ತಂದೆ ತಾಯಿಯನ್ನು ಸಲಹದ ಪುತ್ರರ ತಪ್ಪಿಗೆ ಪ್ರಾಯಶ್ಚಿತವೇ ಇಲ್ಲ: ಹೈಕೋರ್ಟ್

| Updated By: Rakesh Nayak Manchi

Updated on: Jul 14, 2023 | 3:58 PM

ವಿವಾಹದ ಹಕ್ಕನ್ನು ಪುನರ್ ಸ್ಥಾಪಿಸಲು ಕಾನೂನಿದೆ. ಆದರೆ ಪುತ್ರರೊಂದಿಗೆ ವಾಸಿಸಲು ಬಯಸದ ತಾಯಿಯನ್ನು ಬಲವಂತವಾಗಿ ವಾಸಿಸುವಂತೆ ಮಾಡಲು ಯಾವುದೇ ಕಾನೂನಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತಂದೆ ತಾಯಿಯನ್ನು ಸಲಹದ ಪುತ್ರರ ತಪ್ಪಿಗೆ ಪ್ರಾಯಶ್ಚಿತವೇ ಇಲ್ಲ: ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು, ಜುಲೈ 14: ತಾಯಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲವೆಂದ ಪುತ್ರರಿಗೆ ಕರ್ನಾಟಕ ಹೈಕೋರ್ಟ್ (Karnataka High Court) ತಪರಾಕಿ ನೀಡಿದ್ದು, ಪ್ರತಿ ತಿಂಗಳು ತಲಾ 10 ಸಾವಿರ ಪಾವತಿಸುವಂತೆ ನಿರ್ದೇಶನ ನೀಡಿದೆ. ಮೈಸೂರಿನ ನಿವಾಸಿಯಾದ 84 ವರ್ಷದ ವೆಂಕಟಮ್ಮ ಗಂಡು ಮಕ್ಕಳಿಂದ ದೂರವಾಗಿ ಪುತ್ರಿಯರ ಮನೆ ಸೇರಿದ್ದರು. ಜೀವನ ನಿರ್ವಹಣೆಗೆ ಇಬ್ಬರು ಪುತ್ರರಿಂದ ಜೀವನಾಂಶ ಕೊಡಿಸುವಂತೆ ಮೈಸೂರಿನ ವಿಭಾಗಾಧಿಕಾರಿಗಳನ್ನು ಕೋರಿದ್ದರು.

ಹಿರಿಯ ನಾಗರಿಕರ ಜೀವನಾಂಶ ಹಾಗೂ ಕಲ್ಯಾಣ ಕಾಯ್ದೆಯಡಿ ತಲಾ 5 ಸಾವಿರ ಜೀವನಾಂಶ ಒದಗಿಸುವಂತೆ ವಿಭಾಗಾಧಿಕಾರಿ ನೀಡಿದ್ದ ಆದೇಶ ಮಾರ್ಪಡಿಸಿದ್ದ ಜಿಲ್ಲಾಧಿಕಾರಿಗಳು ತಲಾ 10 ಸಾವಿರ ರೂಪಾಯಿ ಜೀವನಾಂಶ ಒದಗಿಸುವಂತೆ ಪುತ್ರರಿಗೆ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಪುತ್ರರಾದ ಗೋಪಾಲ್, ಮಹೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೆಣ್ಣುಮಕ್ಕಳ ಚಿತಾವಣೆ ಮೇರೆಗೆ ತಾಯಿ ನಮ್ಮ ಮನೆ ತೊರೆದಿದ್ದಾರೆ. ತಾಯಿಯನ್ನು ನಾವು ಸಲಹುತ್ತೇವೆ, ಜೀವನಾಂಶ ಪಾವತಿಸಲು ಸಾಧ್ಯವಿಲ್ಲವೆಂದು ಕೋರ್ಟ್​ಗೆ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಪುರಾಣ, ಉಪನಿಷತ್​ಗಳನ್ನು ಉಲ್ಲೇಖಿಸಿ ತಾಯಿಯನ್ನು ಸಲಹುವ ಕರ್ತವ್ಯ ಮಕ್ಕಳದ್ದೆಂದು ತೀರ್ಪು ನೀಡಿದ್ದಾರೆ. ನಮ್ಮ ದೇಶದ ಕಾನೂನು, ಸಂಸ್ಕೃತಿ, ಧರ್ಮ, ಪರಂಪರೆ ತಂದೆ ತಾಯಿಯನ್ನು ನೋಡಿಕೊಳ್ಳುವುದು ಪುತ್ರರ ಕರ್ತವ್ಯವೆಂದು ಹೇಳಿದೆ. ರಕ್ಷತಿ ಸ್ಥವೀರೇ ಪುತ್ರ ಎಂದು ಸ್ಮೃತಿಕಾರರು ಹೇಳಿದ್ದಾಗಿ ಉಲ್ಲೇಖಿಸಿದರು.

ಇದನ್ನು ಓದಿ: ನಾಡಗೀತೆಗೆ ಸಂಗೀತ ಸಂಯೋಜನೆ ವಿವಾದ: ಹಾಡಿನ ಮೂಲಕ ಹೈಕೋರ್ಟ್​ಗೆ ವಿವರಣೆ ನೀಡಿದ ಕಿಕ್ಕೇರಿ ಕೃಷ್ಣಮೂರ್ತಿ

ವೃದ್ದಾಪ್ಯದಲ್ಲಿ ತಾಯಿಯ ಯೋಗಕ್ಷೇಮ ನೋಡಿಕೊಳ್ಳುವುದು ಮಗನ ಕರ್ತವ್ಯ. ತೈತ್ತರೀಯ ಉಪನಿಷತ್​ನಲ್ಲಿ ಉಲ್ಲೇಖವಾಗಿರುವಂತೆ ಶಿಕ್ಷಣ ಕಲಿಸಿದ ಗುರು, ಶಿಷ್ಯನನ್ನು ಬೀಳ್ಕೊಡುವಾಗ, ತಾಯಿ, ತಂದೆ, ಗುರು, ಅತಿಥಿಗಳನ್ನು ದೇವರೆಂದು ಭಾವಿಸುವಂತೆ ಉಪದೇಶ ನೀಡುತ್ತಾನೆ. ಬ್ರಹ್ಮಾಂಡ ಪುರಾಣದಲ್ಲಿ ವೃದ್ದಾಪ್ಯದಲ್ಲಿ ತಂದೆ ತಾಯಿಯರನ್ನು ಸಲಹದ ಮಕ್ಕಳ ತಪ್ಪಿಗೆ ಪ್ರಾಯಶ್ಚಿತ್ತವೇ ಇಲ್ಲವೆಂದು ಹೇಳಿದ್ದಾಗಿ ಉಲ್ಲೇಖಿಸಿದರು.

ದೇವರನ್ನು ಆರಾಧಿಸುವ ಮೊದಲು ತಂದೆ ತಾಯಿ, ಗುರು, ಅತಿಥಿಗಳನ್ನು ಗೌರವಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ಪೋಷಕರನ್ನು ಸಲಹಲು ವಿಫಲರಾಗುತ್ತಿದ್ದಾರೆ. ಇಂತಹವರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಇಬ್ಬರೂ ಪುತ್ರರು ದೈಹಿಕವಾಗಿ ಸಮರ್ಥರಾಗಿರುವುದರಿಂದ ತಾಯಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲವೆಂದು ಹೇಳಲಾಗದು. ಪತ್ನಿಯನ್ನು ಸಲಹಲು ಸಮರ್ಥನಿರುವ ಪುರುಷ ಅವಲಂಬಿತ ತಾಯಿಯನ್ನು ನೋಡಿಕೊಳ್ಳಲು ಏಕೆ ಸಾಧ್ಯವಿಲ್ಲ. ಒಬ್ಬ ಮಗನಿಗೆ 3 ಮಳಿಗೆಯ ಬಾಡಿಗೆ ಬರುತ್ತಿದೆ. ತಾಯಿಯನ್ನು ತಾವೇ ನೋಡಿಕೊಳ್ಳುತ್ತೇವೆಂಬ ಪುತ್ರರ ವಾದವನ್ನು ಒಪ್ಪಲು ಸಾಧ್ಯವಿಲ್ಲ. ವಿವಾಹದ ಹಕ್ಕನ್ನು ಪುನರ್ ಸ್ಥಾಪಿಸಲು ಕಾನೂನಿದೆ. ಆದರೆ ಪುತ್ರರೊಂದಿಗೆ ವಾಸಿಸಲು ಬಯಸದ ತಾಯಿಯನ್ನು ಬಲವಂತವಾಗಿ ವಾಸಿಸುವಂತೆ ಮಾಡಲು ಯಾವುದೇ ಕಾನೂನಿಲ್ಲ ಎಂದು ಹೇಳಿದರು.

ಹೆಣ್ಣುಮಕ್ಕಳು ತಾಯಿಗೆ ಚಿತಾವಣೆ ಮಾಡುತ್ತಿದ್ದಾರೆಂಬ ಪುತ್ರರ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಹೆಣ್ಣುಮಕ್ಕಳಿಲ್ಲದಿದ್ದರೆ ಈ ತಾಯಿ ಬೀದಿಗೆ ಬರಬೇಕಾಗುತ್ತಿತ್ತು. ಹೀಗಾಗಿ ತಾಯಿಯನ್ನು ಸಲಹುತ್ತಿರುವ ಪುತ್ರಿಯರ ನಡೆ ಶ್ಲಾಘನೀಯ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಪ್ರಶಂಸಿಸಿದ್ದಾರೆ. ಎಲ್ಲಾ ವಸ್ತುಗಳು ದುಬಾರಿಯಾಗಿರುವ ಈ ಕಾಲದಲ್ಲಿ 10 ಸಾವಿರ ಜೀವನಾಂಶ ಹೆಚ್ಚಾಯಿತೆಂಬ ಪುತ್ರರ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ತಾಯಿಗೆ ತಲಾ 10 ಸಾವಿರ ಪಾವತಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ನೀಡಿರುವ ಆದೇಶವನ್ನು ಎತ್ತಿ ಹಿಡಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ