ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಮತ್ತೆ ಪ್ರಿಯಾಂಕ್ ಖರ್ಗೆ ಕಿಡಿ: RSSಗೆ ಗೃಹ ಸಚಿವರಿಂದ ಸಾಲು ಸಾಲು ಪ್ರಶ್ನೆ
ಆರ್‌ಎಸ್‌ಎಸ್ ನೋಂದಣಿ ಮತ್ತು ಆರ್ಥಿಕ ಪಾರದರ್ಶಕತೆ ಕುರಿತು ಎಕ್ಸ್ ಪೋಸ್ಟ್ ಮಾಡಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಕೌಂಟರ್ ನೀಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್‌ಗೆ ಎಲ್ಲಿಂದ ಫಂಡ್ ಬರುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ನಿಮಗೆ ತಾಕತ್ತಿದ್ದರೆ ಈ ಬಗ್ಗೆ ನಿಮ್ಮ ಸಿಎಂ ಡಿಕೆಶಿ ಮಾತಾನಾಡಲಿ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರು, ಅಕ್ಟೋಬರ್ 25: ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ಕ್ಕೆ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಕುಟುಕಿದ್ದಾರೆ. ಆರ್‌ಎಸ್‌ಎಸ್ ಎಲ್ಲಕ್ಕಿಂತ ಹೆಚ್ಚಾಗಿ ನೋದಾಯಿತ ಎಂಬ ಚಿಹ್ನೆಗೆ ಭಯ ಪಡುತ್ತದೆ. ಏಕೆಂದರೆ, ಅಧಿಕೃತ ನೋಂದಣಿಯಾದರೆ ಕಾನೂನು ಪರಿಶೀಲನೆ, ಹಣಕಾಸಿನ ವಿವರಗಳ ಬಹಿರಂಗಪಡಿಸುವಿಕೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅನಿವಾರ್ಯವಾಗುತ್ತವೆ ಎಂದವರು ವ್ಯಂಗ್ಯವಾಡಿದ್ದಾರೆ. ಆರ್‌ಎಸ್‌ಎಸ್ ಪಥಸಂಚಲನದ ವಿಚಾರವಾಗಿ ಇತ್ತೀಚೆಗೆ ಪ್ರಿಯಾಂಕ್ ನೀಡಿದ್ದ ಹೇಳಿಕೆ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿಗರು ಗೃಹ ಸಚಿವರ ಮೇಲೆ ಮುಗಿಬಿದ್ದಿದ್ದರು ಎನ್ನುವುದು ಇಲ್ಲಿ ಗಮನಾರ್ಹ.
ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ನಲ್ಲೇನಿದೆ?
There is one symbol the RSS seems to fear more than anything else: ®
————————————-
® stands for Registered.
This is what truly frightens the RSS.
Because formal registration invites legal scrutiny, financial disclosures, transparency and accountability.
Who funds the RSS? Where does the money come from? How is it spent? Who audits the accounts? And who is ultimately accountable?
If the RSS has nothing to hide, why not open its books to public scrutiny?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 25, 2026
ಆರ್‌ಎಸ್‌ಎಸ್‌ಗೆ ಹಣ ನೀಡುವವರು ಯಾರು? ಹಣ ಎಲ್ಲಿಂದ ಬರುತ್ತದೆ? ಅದನ್ನು ಹೇಗೆ ಖರ್ಚು ಮಾಡಲಾಗುತ್ತದೆ? ಲೆಕ್ಕಪತ್ರಗಳನ್ನು ಯಾರು ಲೆಕ್ಕಪರಿಶೋಧನೆ ಮಾಡುತ್ತಾರೆ? ಅಂತಿಮವಾಗಿ, ಇದಕ್ಕೆ ಹೊಣೆಗಾರರು ಯಾರು? ಎಂದು ಕೇಳಿರುವ ಅವರು, ಮುಚ್ಚಿಡಲು ಏನೂ ಇಲ್ಲದಿದ್ದರೆ, ಆರ್‌ಎಸ್‌ಎಸ್ ತನ್ನ ಲೆಕ್ಕಪತ್ರಗಳನ್ನು ಸಾರ್ವಜನಿಕ ಪರಿಶೀಲನೆಗೆ ಮುಕ್ತಗೊಳಿಸಲು ಏಕೆ ಹಿಂಜರಿಯಬೇಕು? ಎಂದೂ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶೈಕ್ಷಣಿಕ ವರ್ಷದ ಅರ್ಧವಾರ್ಷಿಕ ಪರೀಕ್ಷೆ ಮುಗಿದರೂ ಹಲವೆಡೆ ಮಕ್ಕಳಿಗಿಲ್ಲ ಶೂ ಭಾಗ್ಯ!: ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ
‘ಕಾಂಗ್ರೆಸ್‌ಗೆ ಎಲ್ಲಿಂದ ಫಂಡ್ ಬರ್ತಿದೆ?’
ಇನ್ನು ಆರ್‌ಎಸ್‌ಎಸ್‌ಗೆ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆ ವಿಚಾರ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದು, ಕಾಂಗ್ರೆಸ್‌ಗೆ ಎಲ್ಲಿಂದ ಫಂಡ್ ಬರ್ತಿದೆ, ಪಾಕ್ನಿಂದ ಬರ್ತಿದೆಯಾ? ಅಮೆರಿಕದಿಂದ ಫಂಡ್ ಬರ್ತಾ ಇದ್ಯಾ? ನೀವೂ ಹೇಳಿ ಎಂದಿದ್ದಾರೆ. ನಾವು ನಿಮ್ಮ ತರಹ ಕಾಕ್ರೋಚ್ ಜನತಾ ಪಕ್ಷದ ಜೊತೆ ಸೇರಿ ಫಂಡ್ ಪಡೆಯುತ್ತಿಲ್ಲ. RSSಗೆ ಫಂಡ್ ಎಲ್ಲಿಂದ ಬರುತ್ತೆಂದು ಸ್ವಯಂ ಸೇವಕರೇ ಹೇಳ್ತಾರೆ. ನೀನು ಮಂತ್ರಿ ಆಗಿ ಎಷ್ಟುದಿನ ಆಯ್ತಪ್ಪ, ಅಧಿಕಾರ ಎಷ್ಟುದಿನ ಇರಲಿದೆ? ಎಂದು ಕಿಡಿ ಕಾರಿರುವ ಅಶೋಕ್, ಇನ್ನೂ 1 ವರ್ಷ ನಿನ್ನ ಅಧಿಕಾರ ಇರಲಿದೆ. ನೀನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾತನಾಡ್ತೀಯಾ? ನಿಮಗೆ ತಾಕತ್ತಿದ್ದರೆ ಈ ಬಗ್ಗೆ ನಿಮ್ಮ ಸಿಎಂ ಡಿಕೆಶಿ ಮಾತಾನಾಡಲಿ ಎಂದು ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿಗಳು ಯಾಕೆ ಮೌನ ಆಚರಣೆಯಲ್ಲಿದ್ದಾರೆ ಎಂದೂ ಪ್ರಶ್ನಿಸಿದ್ದಾರೆ.
ದೇಶದ ಎಲ್ಲಾ ಕಡೆ RSS ಪಥಸಂಚಲನ ಮಾಡಲಾಗುತ್ತೆ. ರಾಜ್ಯದಲ್ಲಿ ನಾವು ವಿಜಯದಶಮಿ ಸಮಯದಲ್ಲಿ ಮಾಡುತ್ತೇವೆ.ಇಂದಿರಾ ಗಾಂಧಿ ಇದ್ದ ಸಂದರ್ಭದಲ್ಲಿ ಅನುಮತಿ ಸಿಕ್ತಾ ಇತ್ತು. ಆದರೆ ಈಗ ಅನುಮತಿ ಪಡೆಯಲು ಸಮಸ್ಯೆ ಆಯ್ತು. ಸಂಘವಾಗಿ ದೇಶಕ್ಕಾಗಿ ನಾವು ಪಥಸಂಚಲನ ಮಾಡುತ್ತೇವೆ. ಈ ಹಿಂದೆಯಿಂದಲೂ ಕೂಡ ಪಥಸಂಚಲನ ಮಾಡಿಕೊಂಡು ಬಂದಿದ್ದೇವೆ ಎಂದು ಅಶೋಕ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




