ಬಿಜೆಪಿ ಸುಳ್ಳಿನ ಫ್ಯಾಕ್ಟರಿ ನಡೆಸಲು ಜೀತದಾಳು, ಬಾಡಿಗೆ ಭಾಷಣಕಾರರನ್ನು ಇಟ್ಟುಕೊಂಡಿದೆ; ಪ್ರಿಯಾಂಕ್ ಖರ್ಗೆ ಟೀಕೆ

| Updated By: ಸುಷ್ಮಾ ಚಕ್ರೆ

Updated on: Nov 08, 2024 | 6:23 PM

ಸುಳ್ಳು ಸುದ್ದಿ ಹಬ್ಬಿಸುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಬಿಜೆಪಿ ಶಾಸಕರು, ಸಂಸದರು ಸುಳ್ಳುಗಳನ್ನೇ ಹರಡುತ್ತಿದ್ದಾರೆ. ಬಿಜೆಪಿಯ ಸಂಸದರು, ಶಾಸಕರು ಮೋದಿಯ ಸುಳ್ಳಿನ ಫ್ಯಾಕ್ಟರಿಯಲ್ಲಿ ಇದ್ದಾರೆ ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

ಬಿಜೆಪಿ ಸುಳ್ಳಿನ ಫ್ಯಾಕ್ಟರಿ ನಡೆಸಲು ಜೀತದಾಳು, ಬಾಡಿಗೆ ಭಾಷಣಕಾರರನ್ನು ಇಟ್ಟುಕೊಂಡಿದೆ; ಪ್ರಿಯಾಂಕ್ ಖರ್ಗೆ ಟೀಕೆ
ಸಚಿವ ಪ್ರಿಯಾಂಕ್​ ಖರ್ಗೆ
Follow us on

ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ಸುಳ್ಳಿನ ಫ್ಯಾಕ್ಟರಿ ಓಪನ್ ಮಾಡಿದ್ದಾರೆ. ಸುಳ್ಳಿನ ಫ್ಯಾಕ್ಟರಿ ಮೋದಿ ಮತ್ತು ಅಮಿತ್ ಶಾ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಈ ಕಾರ್ಖಾನೆಯನ್ನು ನಡೆಸಲು ಹಲವು ಜೀತದಾಳುಗಳನ್ನು ಇಟ್ಟುಕೊಂಡಿದ್ದಾರೆ, ಬಾಡಿಗೆ ಭಾಷಣಕಾರರನ್ನೂ ಇಟ್ಟುಕೊಂಡಿದ್ದಾರೆ. ಬಿಜೆಪಿ ಸಂಸದರು, ಶಾಸಕರು ಕೂಡ ಈ ಸುಳ್ಳಿನ ಫ್ಯಾಕ್ಟರಿಯಲ್ಲಿ ಇದ್ದಾರೆ. ಸುಳ್ಳು ಸುದ್ದಿ, ವದಂತಿ ಹಬ್ಬಿಸಲು ಇವರನ್ನೆಲ್ಲಾ ಇಟ್ಟುಕೊಂಡಿದ್ದಾರೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾವೃದ್ಧಿ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆ ನೀಡಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸುವುದು ಸಮಾಜಕ್ಕೆ ಧಕ್ಕೆ ತಂದಂತೆ, ಸುಳ್ಳು ಸುದ್ದಿ ಹಬ್ಬಿಸುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಬಾಡಿಗೆ ಭಾಷಣಕಾರರಾಗಿದ್ದಾರೆ. ನಿನ್ನೆ ವಕ್ಫ್ ನೋಟಿಸ್​ನಿಂದ ರೈತರು ಆತ್ಮಹತ್ಯೆ ಅಂತ ತೇಜಸ್ವಿ ಸೂರ್ಯ ಟ್ವೀಟ್​ ಮಾಡಿದ್ದರು. ಬಳಿಕ ಅದು ಸುಳ್ಳು ಸುದ್ದಿ ಅಂತ ಗೊತ್ತಾಗಿ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಸುಳ್ಳು ಕೇಸ್ ಹಾಕಿಸೋದೇ ಕೆಲಸ ಅಂದಿದ್ದಾರೆ. ನಾನು ಎಷ್ಟು ಸುಳ್ಳು ಕೇಸ್​ಗಳನ್ನು ಹಾಕಿಸಿದ್ದೀನಿ ಅಂತ ಅವರು ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ರೈತ ಆತ್ಮಹತ್ಯೆ: ತಮ್ಮ ವಿರುದ್ಧ ದಾಖಲಾದ FIRಗೆ ತೇಜಸ್ವಿ ಸೂರ್ಯ ಸ್ಪಷ್ಟನೆ

ನೀವೆಲ್ಲರೂ ಎದೆ ತಟ್ಟಿ ಹಿಂದೂಗಳ ಸಂರಕ್ಷಣೆ ಮಾಡ್ತೀವಿ ಅಂತೀರಲ್ಲ, ಸುಳ್ಳು ಸುದ್ದಿ ಹಬ್ಬಿಸಿದ್ದನ್ನು ಒಪ್ಪಿಕೊಳ್ಳಿ. ಈಗ ಎಲ್ಲಿ ಹೋಯಿತು ನಿಮ್ಮ ಧೈರ್ಯ? ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ?:

ಕುಟುಂಬ ರಾಜಕೀಯದ ಬಗ್ಗೆ ತೇಜಸ್ವಿ ಸೂರ್ಯ ಮಾತನಾಡುತ್ತಾರೆ. ಅವರೇ ರಾಜಕೀಯದ ಕುಟುಂಬದ ಹಿನ್ನೆಲೆಯಿಂದ ಬಂದವರು ಎಂಬುದು ವಿಪರ್ಯಾಸ. ಅವರಿಗೆ ಯಡಿಯೂರಪ್ಪನ ಮಗ ವಿಜಯೇಂದ್ರ, ರಾಘವೇಂದ್ರ ನೆನಪಾಗುವುದಿಲ್ಲವೇ? ಟ್ವೀಟ್ ಮಾಡೋದು ನಂತರ ಡಿಲೀಟ್ ಮಾಡೋದು ಸಂಸದ ತೇಜಸ್ವಿ ಸೂರ್ಯನಿಗೆ ಅಭ್ಯಾಸ ಆಗಿಹೋಗಿದೆ. ತೇಜಸ್ವಿ ಸೂರ್ಯ ವಿರುದ್ಧ ಮಹಿಳಾ ಶೋಷಣೆಯ ಕೇಸ್ ಇದೆ, ಸುದ್ದಿ ಪ್ರಸಾರ ಮಾಡದಂತೆ 49 ಮಾಧ್ಯಮಗಳ ವಿರುದ್ಧ ತೇಜಸ್ವಿ ಸೂರ್ಯ ತಡೆ ತಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದವರು ರಕ್ತ ಪಿಪಾಸುಗಳು. ಬಿಜೆಪಿಯವರು ಅಮಾಯಕರ ಹೆಸರಲ್ಲಿ ರಾಜಕೀಯ ಲಾಭ ಪಡೆಯುವವರು.

ಇದನ್ನೂ ಓದಿ: ವಕ್ಫ್ ವಿವಾದ: ಸಿಎಂ ಕೇವಲ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ ಎಂದ ತೇಜಸ್ವಿ ಸೂರ್ಯ

ಕಪ್ಪು ಹಣದ ಕತೆ ಏನಾಯ್ತು?:

ಮಾಧ್ಯಮಗಳ ಮುಂದೆ ಹಾಗಾಗಿದೆ, ಹೀಗಾಗಿದೆ ಎಂದು ಹೇಳಿಕೆ ಕೊಡುತ್ತಾರೆ. ನಿಮ್ಮಿಂದ ತಪ್ಪಾದಾಗಲೂ ಹಾಗೆಯೇ ಬಂದು ಮಾತನಾಡಬೇಕಲ್ವಾ? ಇಂದು ನವೆಂಬರ್ 8, ನೋಟು ಅಮಾನ್ಯೀಕರಣದ ವರ್ಷಾಚರಣೆ. ಬಿಜೆಪಿಯವರು ಇದರ ಸಂಭ್ರಮಾಚರಣೆ ಮಾಡಿದ್ದೀರಾ? ಇಲ್ಲ. ಕಪ್ಪು ಹಣ ವಾಪಸ್ ತರಲು ನೋಟು ಅಮಾನ್ಯೀಕರಣ ಮಾಡಿದ್ದೇವೆ ಎಂದು ಅವರು ಹೇಳಿದ್ದರು. ಕಪ್ಪು ಹಣ ವಾಪಸ್ ಬಂತಾ ಎಂದು ಬಿಜೆಪಿಯವರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ನೋಟು ಅಮಾನ್ಯೀಕರಣದ ವೇಳೆ ಬ್ಯಾಂಕ್, ಎಟಿಎಂ ಮುಂದೆ ಸರತಿ ಸಾಲಿನಲ್ಲಿ ನಿಂತವರು ಎಷ್ಟು ಜನ ಸತ್ತರು ಎಂದು ಲೆಕ್ಕ ಇಟ್ಟಿದ್ದೀರಾ? ನರೇಂದ್ರ ಮೋದಿಯವರಷ್ಟು ದೊಡ್ಡ ಸುಳ್ಳುಗಾರ ಮತ್ತೊಬ್ಬರಿಲ್ಲ. ನರೇಂದ್ರ ಮೋದಿ, ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ. 2022ರಲ್ಲಿ ಹಾವೇರಿ ಜಿಲ್ಲೆಯ ರೈತ ಆತ್ಮಹತ್ಯೆಗೆ ಶರಣಾಗಿದ್ದರು. ಆಗ ಬಿಜೆಪಿ ಅಧಿಕಾರದಲ್ಲಿತ್ತು, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಅಂದು ಸಿಎಂ ಆಗಿದ್ದ ಬೊಮ್ಮಾಯಿ ತವರು ಜಿಲ್ಲೆಯ ರೈತ ಆತ್ಮಹತ್ಯೆ ಮಾಡಿಕೊಂಡಾಗ ಬಿಜೆಪಿ ಏನು ಮಾಡಿತು? ಬಿಜೆಪಿಯವರು ಕುರ್ಚಿಗಾಗಿ ಮುಸ್ಲಿಮರನ್ನಷ್ಟೇ ಬಲಿ ಕೊಡುವುದಿಲ್ಲ, ಬೇರೆ ಸಮುದಾಯದವರನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ