ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಕೋಕ್​​: ಇವಿಷ್ಟೇ ಸಾಂಗ್​​ಗಳಿಗೆ ಮಾತ್ರ ಇನ್ಮುಂದೆ ಅವಕಾಶ

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ನಿಷೇಧಿಸಿದೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.ಇದಲ್ಲದೆ, ವೇಷಭೂಷಣ ಆಯ್ಕೆಯಲ್ಲೂ ಶಿಕ್ಷಕರು ಗಮನಹರಿಸಬೇಕು. ವಿದ್ಯಾರ್ಥಿಗಳು ಶಿಸ್ತಿನ ಉಡುಪಿನಲ್ಲಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಕೋಕ್​​: ಇವಿಷ್ಟೇ ಸಾಂಗ್​​ಗಳಿಗೆ ಮಾತ್ರ ಇನ್ಮುಂದೆ ಅವಕಾಶ
ಸಾಂದರ್ಭಿಕ ಚಿತ್ರ
Image Credit source: AI Image

Updated on: Apr 28, 2026 | 8:50 PM

ಬೆಂಗಳೂರು, ಏಪ್ರಿಲ್​​ 28: ಶಾಲಾ ವಾರ್ಷಿಕೋತ್ಸವ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ಶಾಲಾ ಶಿಕ್ಷಣ ಇಲಾಖೆ ನಿಷೇಧಿಸಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ, ರಾಜ್ಯದ ಎಲ್ಲಾ ಶಾಲೆಗಳು (ಖಾಸಗಿ ಶಾಲೆಗಳೂ ಸೇರಿ) ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಅಸಭ್ಯ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸಿದರೆ, ಸಂಬಂಧಿತ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲೆ ನಿರ್ವಹಣೆ ಮಾಡುವವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಯಾವೆಲ್ಲ ಹಾಡುಗಳಿಗೆ ಅವಕಾಶ?

ದೇಶಭಕ್ತಿ, ಪ್ರೇರಣಾದಾಯಕ ಹಾಗೂ ಸಕಾರಾತ್ಮಕ ಸಂದೇಶ ಹೊಂದಿರುವ ಹಾಡುಗಳನ್ನು ಮಕ್ಕಳ ನೃತ್ಯಕ್ಕೆ ಬಳಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ, ಮೌಲ್ಯಗಳನ್ನು ಉತ್ತೇಜಿಸುವ ಗೀತೆಗಳಿಗೆ ಆದ್ಯತೆ ನೀಡಬೇಕು. ಹಾಡುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯ ಶಿಕ್ಷಕರು ಸ್ವತಃ ಮುತುವರ್ಜಿವಹಿಸಬೇಕೆಂದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಕ್ಕಳಿಗೆ ಅನರ್ಹವಾಗಿರುವ ಅಶ್ಲೀಲ ಪದಗಳಿರುವ ಹಾಡುಗಳಿಗೆ ನೃತ್ಯ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮಕ್ಕಳ ತಪ್ಪಲ್ಲ, ಶಿಕ್ಷಕರು ಹಾಡಿನ ವಿಷಯವನ್ನು ಪರಿಶೀಲಿಸಿ ನಂತರವೇ ಅನುಮತಿ ನೀಡಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಇಟಿ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಪ್ರಕರಣ; ಕೃಪಾನಿಧಿ ಕಾಲೇಜಿಗೆ ಬಿಗ್​​ ಶಾಕ್​

ಬೆಂಗಳೂರಿನ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಮದ್ಯಪಾನ, ಧೂಮಪಾನ ಇತ್ಯಾದಿ ವಿಷಯಗಳನ್ನು ಒಳಗೊಂಡ ಹಾಡುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೆ, ವೇಷಭೂಷಣ ಆಯ್ಕೆಯಲ್ಲೂ ಶಿಕ್ಷಕರು ಗಮನಹರಿಸಬೇಕು. ವಿದ್ಯಾರ್ಥಿಗಳು ಶಿಸ್ತಿನ ಉಡುಪಿನಲ್ಲಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೆಲವು ಖಾಸಗಿ ಶಾಲೆಗಳು ಈಗಾಗಲೇ ಈ ನಿಯಮವನ್ನು ಅನುಸರಿಸಿ, ವಾರ್ಷಿಕೋತ್ಸವಗಳಲ್ಲಿ ಚಿತ್ರಗೀತೆಗಳನ್ನು ಬಳಸುವುದನ್ನು ತಪ್ಪಿಸುತ್ತಿವೆ. ಪ್ರತಿ ವರ್ಷ ವಿಭಿನ್ನ ಥೀಮ್‌ಗಳನ್ನು ಆಯ್ಕೆ ಮಾಡುತ್ತೇವೆ. ಚಿಕ್ಕ ಮಕ್ಕಳಿಗೆ ಹೂವು, ಪ್ರಾಣಿ, ಸಂಗೀತದಂತಹ ವಿಷಯಗಳ ಗೀತೆ ಬಳಸುತ್ತೇವೆ. ಹೈಸ್ಕೂಲ್ ವಿದ್ಯಾರ್ಥಿಗಳು ದೇಶಭಕ್ತಿ, ಇತಿಹಾಸ ಮತ್ತು ಜನಪದ ಗೀತೆಗಳಿಗೆ ನೃತ್ಯ ಮಾಡುತ್ತಿದ್ದಾರೆ ಎಂದು ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us