
ಬೆಂಗಳೂರು, ಅಕ್ಟೋಬರ್ 13: ರಾಜ್ಯದ ಇಂಗಾಲದ ದಾಸ್ತಾನನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ, ಭಾರತದಲ್ಲೇ ಮೊದಲ ಬಾರಿಗೆ ‘ನೆಟ್-ಜೀರೋ’ (ಇಂಗಾಲದ ಶೂನ್ಯ ಹೊರಸೂಸುವಿಕೆ) ಗುರಿಯನ್ನು ತಲುಪುವ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ನೆಟ್-ಜೀರೋ ರಾಜ್ಯ ಕಾರ್ಯಪಡೆಯ ಉಪಾಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ತಿಳಿಸಿದ್ದಾರೆ.
ಕರ್ನಾಟಕವು ಪ್ರತಿವರ್ಷ ಅಂದಾಜು 175 ಮಿಲಿಯನ್ ಟನ್ ಹಸಿರುಮನೆ ಅನಿಲಗಳನ್ನು ಉತ್ಪಾದಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಯೋಜನೆಯೊಂದಿಗೆ ಕೈಜೋಡಿಸಲು ಪ್ರಮುಖ ಕಂಪನಿಗಳಿಗೆ ಮನವರಿಕೆ ಮಾಡುವ ಮೂಲಕ ಸರ್ಕಾರವು ಇದನ್ನು ಮಾರುಕಟ್ಟೆಗೆ ತರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ 25 ದೊಡ್ಡ ಕಂಪನಿಗಳು ಮುಖ್ಯಮಂತ್ರಿಯವರ 50 ಲಕ್ಷ ಟನ್ ಕಾರ್ಬನ್ ಅನ್ನು ಮೊನಿಟೈಸ್ ಮಾಡುವ ಗುರಿಗೆ ಬದ್ಧವಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಕಾರ್ಬನ್ ಯೋಜನೆಗಳಿಗೆ ಹಣಕಾಸು ವ್ಯವಸ್ಥೆ ಮಾಡಲು ಬ್ಯಾಂಕ್‌ಗಳನ್ನು ಸಂಪರ್ಕಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಸಂಪೂರ್ಣ 175 ಮಿಲಿಯನ್ ಟನ್‌ಗಳನ್ನು ಹಣಗಳಿಸುವ ಗುರಿ ಹೊಂದಲಾಗಿದೆ ಎಂದು ಉಪೇಂದ್ರ ತ್ರಿಪಾಠಿ ವಿವರಿಸಿದ್ದಾರೆ.
ರಾಜ್ಯದಲ್ಲಿ ಜಾಗೃತಿಯ ಕೊರತೆಯಿಲ್ಲ ಎಂದಿರುವ ತ್ರಿಪಾಠಿ, ಸಕಾರಾತ್ಮಕ ಬದಲಾವಣೆಗಾಗಿ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳು, ಭೂಮಿ, ಶ್ರಮ ಮತ್ತು ಬಂಡವಾಳವನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ಕಾರ್ಬನ್ ಈಗ ಉದಯೋನ್ಮುಖ ಕ್ಷೇತ್ರವಾಗಿದ್ದು (ಸನ್ ರೈಸ್ ಸೆಕ್ಟರ್), ನೆಟ್-ಜೀರೋ ತಲುಪುವ ಭಾರತದ ಮೊದಲ ರಾಜ್ಯವಾಗಿ ಕರ್ನಾಟಕ ಮುಂಚೂಣಿ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಶ್ರೀನಿವಾಸುಲು ಮಾತನಾಡಿ, ಸರ್ಕಾರವು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯು ಅವೆಲ್ಲವನ್ನೂ ಒಂದೆಡೆ ತರಲು ಪ್ರಯತ್ನಿಸಿದೆ ಎಂದಿದ್ದಾರೆ. ಸಂರಕ್ಷಣೆ ಯಶಸ್ವಿಯಾಗಲು ನಮ್ಮ ಧಾಟಿಯಲ್ಲಿ ಬದಲಾವಣೆಯಾಗಬೇಕು ಮತ್ತು ಜನರ ಕಲ್ಯಾಣದ ಮೇಲೆ ಇದು ಬೀರುವ ಸಕಾರಾತ್ಮಕ ಪರಿಣಾಮವನ್ನು ನಾವು ಬಿಂಬಿಸಬೇಕು ಎಂದರು.
‘ಸ್ಕೆಲ್ ಸಿಸ್ಟಮ್ಸ್ ಥಿಂಕಿಂಗ್’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕ್ರಮ್ ಭಟ್ ಮಾತನಾಡಿ, ಬಂಡವಾಳದ ಅತ್ಯುತ್ತಮ ಬಳಕೆಯೆಂದರೆ ವ್ಯವಸ್ಥಿತವಾದ ವಿಧಾನವನ್ನು ಅಳವಡಿಸಿಕೊಳ್ಳುವುದು ಹಾಗೂ ಪ್ರಾಜೆಕ್ಟ್ ಆಧಾರಿತ ವಿಧಾನದಿಂದ ದೂರ ಸರಿಯುವುದು ಎಂದಿದ್ದಾರೆ. ಜನರು ಬಂಡವಾಳಶಾಹಿಯ ಅಂತ್ಯದ ಬಗ್ಗೆ ಯೋಚಿಸದಿದ್ದರೂ ವಿಶ್ವದ ಬಗ್ಗೆ ಯೋಚಿಸಲು ಸಿದ್ಧರಿರುವುದು ಬಂಡವಾಳಶಾಹಿಯ ಯಶಸ್ಸಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ