MLC Election Result 2021: ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು; ಬಿಜೆಪಿಗೆ ಮುಖಭಂಗ
Karnataka Legislative Council Election 2021 Results Updates: ಜೆಡಿಎಸ್ ಮಾತ್ರ ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಮಕಾಡೆ ಮಲಗಿದೆ. ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್‌ಗೆ ಮುಖಭಂಗವಾಗಿದೆ. ಕುಟುಂಬದ ಕುಡಿಯನ್ನು ಗೆಲ್ಲಿಸಲು ಮಾತ್ರ ಜೆಡಿಎಸ್ ಸಫಲವಾಗಿದೆ.
ಬೆಂಗಳೂರು: 20 ಕ್ಷೇತ್ರಗಳಲ್ಲಿ 25 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 90 ಅಭ್ಯರ್ಥಿಗಳು ಅಖಾಡದಲ್ಲಿದ್ದರು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಪರಿಷತ್ ಚುನಾವಣೆ ಪ್ರತಿಷ್ಠೆಯ ಕದನವಾಗಿತ್ತು. ಮೂರೂ ಪಕ್ಷಗಳ ನಾಯಕರು ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್ ಜೋರಾಗಿದೆ. ಆದರೆ ಜೆಡಿಎಸ್ ಕೇವಲ ಒಂದು ಸ್ಥಾನ ಪಡೆಯುವ ಮೂಲಕ ಭಾರಿ ಮುಖಭಂಗವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳನ್ನ ಹೊತ್ತು ಹೆಗಲ ಮೇಲೆ ಹೊತ್ತು ಸಂಭ್ರಮಿಸುತ್ತಿದ್ದಾರೆ. ಜೆಡಿಎಸ್ ಮಾತ್ರ ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಮಕಾಡೆ ಮಲಗಿದೆ. ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್‌ಗೆ ಮುಖಭಂಗವಾಗಿದೆ. ಕುಟುಂಬದ ಕುಡಿಯನ್ನು ಗೆಲ್ಲಿಸಲು ಮಾತ್ರ ಜೆಡಿಎಸ್ ಸಫಲವಾಗಿದೆ. ಮೈಸೂರು, ಕೋಲಾರ, ತುಮಕೂರು, ಮಂಡ್ಯದಲ್ಲಿ ಸೋಲು ಅನುಭವಿಸಿದೆ. ಕಳೆದ ಬಾರಿ ಸೋತಿದ್ದ ಹಾಸನದಲ್ಲಿ ಈ ಬಾರಿ ಗೆದ್ದಿದೆ.
LIVE NEWS & UPDATES
-
ಬೆಳಗಾವಿ: ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು
ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಲಭಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಆಗಿದೆ. ದ್ವೀತಿಯ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ 408 ಮತಗಳ ಮುನ್ನಡೆ ಕಾಯ್ದುಕೊಂಡು ಲಖನ್ ಜಾರಕಿಹೊಳಿ ಜಯ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ 1143 ಮತ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ 1456 ಮತಗಳನ್ನು ಪಡೆದುಕೊಂಡಿದ್ದಾರೆ.
-
ಸಾಮೂಹಿಕ ನಾಯಕತ್ವದಿಂದ ಜಯ; ವಿಜೇತ ಅಭ್ಯರ್ಥಿ ರಾಜೇಂದ್ರ ಹೇಳಿಕೆ
ತುಮಕೂರು ಜಿಲ್ಲೆಯಲ್ಲಿ ಸಾಮೂಹಿಕ ನಾಯಕತ್ವದಿಂದ ಜಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ. ಅವಕಾಶ ನೀಡಿದ ನಾಯಕರು, ಕಾರ್ಯಕರ್ತರಿಗೆ ಅಭಿನಂದನೆ. ಮುಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಗೊಳಿಸ್ತೇವೆ. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ 3ನೇ ಸ್ಥಾನಕ್ಕೆ ಕುಸಿದಿದೆ. ವಿಧಾನಸಭಾ ಎಲೆಕ್ಷನ್‌ನಲ್ಲಿ 8-9 ಕಾಂಗ್ರೆಸ್ ಶಾಸಕರು ಗೆಲ್ತಾರೆ ಅಂತ ಟಿವಿ9ಗೆ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಆರ್.ರಾಜೇಂದ್ರ ಹೇಳಿಕೆ ನೀಡಿದ್ದಾರೆ.
-
ತುಮಕೂರು ಹಾಗೂ ಬೆಳಗಾವಿಯಲ್ಲಿ ನಿರೀಕ್ಷೆ ಹುಸಿಯಾಗಿದೆ; ಯಡಿಯೂರಪ್ಪ ಹೇಳಿಕೆ
20 ಕ್ಕೆ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇವೆ. 15 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಅನ್ನೋ ವಿಶ್ವಾಸವಿತ್ತು. ತುಮಕೂರು ಹಾಗೂ ಬೆಳಗಾವಿಯಲ್ಲಿ ನಿರೀಕ್ಷೆ ಹುಸಿಯಾಗಿದೆ. ಬೆಳಗಾವಿ ಫಲಿತಾಂಶ ಇನ್ನು ಕಾದು ನೋಡಬೇಕು. ಒಟ್ಟಾರೆ ವಿಧಾನ ಪರಿಷತ್ ಯಾರಿಗೂ ಸ್ಪಷ್ಟ ಬಹುಮತ ಇರಲಿಲ್ಲ. ಈಗ ಸ್ಪಷ್ಟ ಬಹುಮತ ಬಂದಿದೆ. ಯಾರೆಲ್ಲ ನಮಗೆ ಬೆಂಬಲವನ್ನ ಸೂಚಿಸಿದ್ದಾರೆ ಅವರೆಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ. ಬೆಳಗಾವಿ ಚುನಾವಣೆ ಇನ್ನು ನಡೆಯುತ್ತಿದೆ ಕಾದು ನೋಡೋಣ. ನಮಗೆ ಬಹುಮತ ಇದ್ದರು ಜೆಡಿಎಸ್ನ ನಿರ್ಲಕ್ಷ್ಯ ಮಾಡಲ್ಲ ಅಂತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ವಿಧಾನ ಪರಿಷತ್‌ನ 11 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು
ಬೀದರ್, ವಿಜಯಪುರ, ದಕ್ಷಿಣ ಕನ್ನಡ, ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ, ರಾಯಚೂರು, ಬೆಳಗಾವಿ, ಮಂಡ್ಯ, ಮೈಸೂರು, ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಗೆಲುವು
ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಗೆಲುವು ಸಾಧಿಸಿದ್ದಾರೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಜಯ ಗಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ನೃತ್ಯ
ಚಿತ್ರದುರ್ಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ನೃತ್ಯ ಮಾಡಿ ಸಂಭ್ರಮಿಸುತ್ತಿದ್ದಾರೆ.
ಹಾವೇರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಗೆಲುವು
ಹಾವೇರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಗೆಲುವು ಸಾಧಿಸಿದ ಹಿನ್ನೆಲೆ ಜಿಲ್ಲೆಯ ಹಾನಗಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನತ್ತ
ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನತ್ತ ಸಾಗುತ್ತಿದ್ದಾರೆ. ಎರಡನೇ ಪ್ರಾಶಸ್ತ್ಯ ಮತದಲ್ಲಿ 600 ಮತಗಳ ಮೂಲಕ ಮುನ್ನಡೆ ಸಾಧಿಸುತ್ತಿದ್ದಾರೆ.
ಸತೀಶ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಲಕ್ಷ್ಮೀ ಹೆಬ್ಬಾಳ್ಕರ್
ಸಹೋದರ ಗೆಲುತ್ತಿದ್ದಂತೆ ಸತೀಶ್ ಕಾಲಿಗೆ ಬಿದ್ದು ಲಕ್ಷ್ಮೀ ಹೆಬ್ಬಾಳ್ಕರ್ ಆಶೀರ್ವಾದ ಪಡೆದರು. ಕಾಂಗ್ರೆಸ್ ಕಚೇರಿಯಲ್ಲಿ ಲಕ್ಷ್ಮೀ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಗೆಲುವಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ಯಾಪೂರ ಹೇಳಿಕೆ
ನನ್ನ ಗೆಲುವನ್ನ ಕಾರ್ಯಕರ್ತರಿಗೆ, ಮತದಾರರಿಗೆ ಅರ್ಪಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಜನ ಮತ ಹಾಕಿದ್ದಾರೆ. ಜನರ ನಂಬಿಕೆ ಉಳಿಸಿಕೊಳ್ಳುತ್ತೇನೆ. ಗ್ರಾಮ ಪಂಚಾಯತಿಗಳಲ್ಲಿನ ಲೋಪಗಳನ್ನ ಸರಿಪಡಿಸುವ ಕೆಲಸ ಮಾಡುತ್ತೇನೆ. 427 ಮತಗಳ ಅಂತರದಿಂದ ಗೆಲುವಾಗಿದೆ, ಇನ್ನೂ ಹೆಚ್ಚಿನ ಅಂತರದ ನಿರೀಕ್ಷೆಯಿತ್ತು. ಚುನಾವಣೆಯಲ್ಲಿ ಗೆಲುವು ಸೋಲು ಸಹಜ ,ಸೋತವರು ಧೃತಿಗೆಡುವುದು ಬೇಕಿಲ್ಲ ಅಂತ ಗೆಲುವಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ಯಾಪೂರ ಹೇಳಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾವು 12 ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಗಾಯತ್ರಿ ಕೇವಲ 6 ಮತಗಳನ್ನ ಸೋತರು. ಅಲ್ಲಿ 10 ಮಂದಿ ನಾಮಿನೆಟೆಡ್ ಮೆಂಬರ್ ಇದ್ದರು. ಅವರು ವೋಟ್ ಹಾಕಿಲ್ಲ. ಅವರು ವೋಟ್ ಹಾಕಿದರೆ ಗೆಲ್ತಾ ಇದ್ರು. ಬಾಕಿ ಕಡೆ ನಾವು ಉತ್ತಮ ಫೈಟ್ ನೀಡಿದ್ದೇವೆ ಅಂತ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಆಶೀರ್ವಾದ ಪಡೆಯಲು ಏರ್ಪೋಟ್ಗೆ ಹೊರಟ ಎಸ್. ರವಿ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಗೆಲವು ಬಹುತೇಕ ಖಚಿತ ಹಿನ್ನೆಲೆ ಡಿ.ಕೆ.ಶಿವಕುಮಾರ್ ಆಶೀರ್ವಾದ ಪಡೆಯಲು ಏರ್ಪೋಟ್ ಗೆ ತೆರಳಿದ್ದಾರೆ. 746 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಗೆಲುವು
ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ ಕಟೌಟ್ಗೆ ಹಾಲಿನ ಅಭಿಷೇಕ
ಮಂಡ್ಯ ಪರಿಷತ್ ಚುನಾವಣೆ ಹಿನ್ನಲೆ ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದ ಕಾರ್ಯಕರ್ತರು. ಮಂಡ್ಯದ ಮತ ಎಣಿಕೆ ಕೇಂದ್ರದ ಮುಂದೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ರು.
ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿದ ಸೂರಜ್ ರೇವಣ್ಣ
ಹಾಸನದಲ್ಲಿ ಜೆಡಿಎಸ್ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಸೂರಜ್ ರೇವಣ್ಣ ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿದ್ರು. ತಂದೆ ರೇವಣ್ಣ, ತಾಯಿ ಭವಾನಿ, ಸಹೋದರ ಪ್ರಜ್ವಲ್ ರೇವಣ್ಣ ಜೊತೆಗೆ ಆಗಮಿಸಿ ಪ್ರಮಾಣ ಪತ್ರ ಪಡೆದ್ರು.
6 ಮತಗಳ ಅಂತರದಲ್ಲಿ ಬಿಜೆಪಿ ಜಯ, ಮರು ಮತ ಎಣಿಕೆಗೆ ಕೈ ಕಾರ್ಯಕರ್ತರ ಆಗ್ರಹ
ಚಿಕ್ಕಮಗಳೂರು MLC ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ ಆಗ್ರಹಿಸಿ ಕೈ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಮತ ಎಣಿಕೆ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಕೇವಲ 6 ಮತಗಳ ಅಂತರದಲ್ಲಿ ಜಯ ಸಿಕ್ಕ ಹಿನ್ನೆಲೆ ಕೈ ಕಾರ್ಯಕರ್ತರು ಮರು ಮತ ಎಣಿಕೆಗೆ ಆಗ್ರಹಿಸಿದ್ದಾರೆ. ಮತ ಎಣಿಕೆ ಕೇಂದ್ರದ ಒಳಗೆ ಹೋಗಲು ಹೊರಟಿದ್ದ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ನನ್ನು ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. ಮೋಸ, ಮೋಸ, ಮೋಸ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲು
ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ ಎಂದು ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಲಖನ್ ಜಾರಕಿಹೊಳಿ 2412 ಮತಗಳಿಂದ ಮುನ್ನಡೆ
ಬಿಜೆಪಿ ಪಕ್ಷೇತರ ಅಭ್ಯರ್ಥಿ ನಡುವೆ ಮುಂದುವರೆದ ಪೈಪೋಟಿ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ 2412 ಮತಗಳಿಂದ ಮುನ್ನಡೆ. 1900ಮತಗಳಿಂದ ಮೂರನೇ ಸ್ಥಾನದಲ್ಲಿರುವ ಬಿಜೆಪಿ ಅಭ್ಯರ್ಥಿ.
ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ಗೆ ಗೆಲುವು
ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಅವರು 2192 ಮತಗಳನ್ನು ಪಡೆದಿದ್ದಾರೆ. ತೀವ್ರ ಪೈಪೋಟಿ ಒಡ್ಡಿದ್ದ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ 1848 ಮತಗಳನ್ನ ಗಳಿಸಿದ್ದಾರೆ. 344 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಗೆಲುವು ಸಾಧಿಸಿದ್ದಾರೆ. ಇನ್ನು, ಜೆಡಿಯು ಅಭ್ಯರ್ಥಿ ಶಶಿಕುಮಾರ್ ಗೌಡ 3 ಮತಗಳು, ಪಕ್ಷೇತರ ಅಭ್ಯರ್ಥಿ ರವಿ ಅವರು 4 ಮತಗಳನ್ನು ಗಳಿಸಿದ್ದಾರೆ.
ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಆರಂಭದಿಂದಲು ಮುನ್ನಡೆ ಕಾಯ್ದುಕೊಂಡಿದ್ದಾರೆ. 350 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಮಕಾಡೆ ಮಲಗಿದ ಜೆಡಿಎಸ್
ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಜೆಡಿಎಸ್ ಮಕಾಡೆ ಮಲಗಿದೆ. ಹಳೇ ಮೈಸೂರು ಭಾಗದಲ್ಲೇ ಜೆಿಡಿಎಸ್‌ಗೆ ಮುಖಭಂಗವಾಗಿದೆ. ಹಿಂದೆ ಗೆದ್ದಿದ್ದ ನಾಲ್ಕೂ ಸ್ಥಾನಗಳನ್ನೂ ಜೆಡಿಎಸ್ ಕಳೆದುಕೊಂಡಿದೆ. ಮೈಸೂರು, ಕೋಲಾರ, ತುಮಕೂರು, ಮಂಡ್ಯದಲ್ಲಿ ಸೋಲು ಅನುಭವಿಸಿದೆ. ಆದರೆ ಕಳೆದ ಬಾರಿ ಸೋತಿದ್ದ ಹಾಸನದಲ್ಲಿ ಈ ಬಾರಿ ಗೆದ್ದಿದೆ.
ದೇವನಹಳ್ಳಿಯಲ್ಲಿ ಮತ ಎಣಿಕೆ ಕಾರ್ಯ ಮತ್ತೆ ಆರಂಭ
ಅಸಿಂದು ಮತಗಳ ಗೊಂದಲ ನಿವಾರಣೆ ಹಿನ್ನೆಲೆ ದೇವನಹಳ್ಳಿಯಲ್ಲಿ ಮತ ಎಣಿಕೆ ಕಾರ್ಯ ಮತ್ತೆ ಆರಂಭವಾಗಿದೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಯ
ಬೆಳಗಾವಿ ವಿಧಾನ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಗೆಲುವು ಸಾಧಿಸಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಎರಡನೇ ಸ್ಥಾನದಲ್ಲಿದ್ದಾರೆ.
ಕಲಬುರಗಿಯಲ್ಲಿ ಬಿಜೆಪಿಗೆ ಗೆಲುವು
ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿಜಿ ಪಾಟೀಲ್ ಜಯ ಪಡೆದಿದ್ದಾರೆ.
ದೇವನಹಳ್ಳಿ ಮತ ಎಣಿಕೆ ಕೇಂದ್ರದಲ್ಲಿ ಗೊಂದಲ
ದೇವನಹಳ್ಳಿ ಮತ ಎಣಿಕೆ ಕೇಂದ್ರದಲ್ಲಿ ಗೊಂದಲ ಶುರುವಾಗಿದೆ. ಅಧಿಕಾರಿಗಳ ವಿರುದ್ಧ ಏಜೆಂಟ್ಗಳು ಆಕ್ರೋಶ ಹೊರಹಾಕಿದ್ದಾರೆ.
ಡಿಸಿ ಕಾರು ತಡೆದ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಮಗಳೂರು MLC ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಡಿಸಿ K.N.ರಮೇಶ್ ಕಾರು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿ ಗೌಡಗೆ ಗೆಲುವು
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿ ಗೌಡ ಗೆಲುವನ್ನು ಸಾಧಿಸಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮೂಲಕ ಜೆಡಿಎಸ್‌ಗೆ ಮುಖಭಂಗವಾಗಿದೆ.
ರಾಯಚೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
ರಾಯಚೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣುಗೌಡ ಪಾಟೀಲ್ ಜಯ ಬಾರಿಸಿದ್ದಾರೆ.
ಕಲಬುರಗಿ ಯಾದಗಿರಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ
ಕಲಬುರಗಿ ಯಾದಗಿರಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 2,711 ಮತ್ತು ಬಿಜೆಪಿ 2,856 ಮತಗಳನ್ನ ಪಡೆದುಕೊಂಡಿದೆ.ಈ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಜಿ ಪಾಟೀಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಳ್ಳಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎಮ್ ಸತೀಶ್ ಗೆಲುವು
ಬಳ್ಳಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎಮ್ ಸತೀಶ್ 757 ಮತಗಳ ಅಂತದಿಂದ ಗೆಲುವು ಸಾಧಿಸಿದ್ದಾರೆ.
ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹಮದ್ಗೆ ಜಯ
ಧಾರವಾಡದ ಎರಡು ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನ ಪಡೆದಿವೆ. ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹಮದ್ ಮತ್ತು ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಕೇಂದ್ರದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಚಿಕ್ಕಮಗಳೂರಿನಲ್ಲಿ ಮತ ಎಣಿಕೆ ಕೇಂದ್ರದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮರು ಮತಎಣಿಕೆಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.
ಧಾರವಾಡದಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್ ಗೆಲುವು ಬಹುತೇಕ ಖಚಿತ
ಧಾರವಾಡ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಗೆಲುವು ಬಹುತೇಕ ಖಚಿತವಾಗಿದೆ. ಮೊದಲ ಪ್ರಾಶಸ್ತ್ಯ ಮತಗಳಲ್ಲಿಯೇ ಗೆಲುವು ಸಾಧ್ಯತೆಯಿದೆ. ಕಳೆದ ಬಾರಿಯೂ ಕೈ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದಲ್ಲಿಯೇ ಗೆಲುವು ಸಿಕ್ಕಿತ್ತು. ಈ ಬಾರಿಯೂ ಇತಿಹಾಸ ಮರುಳಿಸಬಹುದು.
ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಯ
ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಗೆಲುವು ಸಾಧಿಸಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ಗೆ ಮುನ್ನಡೆ
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಮುನ್ನಡೆ ಇದೆ. ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಇದ್ದಾರೆ.
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಗೆ ತಲಾ ಒಂದು ಸ್ಥಾನ
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಗೆ ತಲಾ ಒಂದು ಸ್ಥಾನ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಗೆಲುವು
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಆಗುತ್ತಿದ್ದಂತೆ ಸಚಿವ ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಬೆಂಬಲಿಗರು ಮತ ಎಣೆಕೆ ಕೇಂದ್ರಕ್ಕೆ ಆಗಮಿಸಿದ್ದರು.
ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಯಬೇರಿ
ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಜಯ ಗಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಜಯ
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗೆ ಗೆಲುವು ಸಿಕ್ಕಿದೆ.
ಚಿಕ್ಕಮಗಳೂರಿನಲ್ಲಿ 6 ಮತಗಳಿಂದ ಬಿಜೆಪಿಗೆ ಗೆಲುವು
ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಗೆ 6 ವೋಟ್ಗಳಿಂದ ಗೆಲುವು ಸಿಕ್ಕಿದೆ. ಎಂ.ಕೆ.ಪ್ರಾಣೇಶ್ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಮುನ್ನಡೆ
ಮೈಸೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದಾರೆ.
ವಿಜಯಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಗೆಲುವು
ವಿಜಯಪುರದ ಎರಡು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್‌ಗೌಡಪಾಟೀಲ್, ಬಿಜೆಪಿ ಅಭ್ಯರ್ಥಿ ಪಿ.ಹೆಚ್.ಪೂಜಾರ್ ಜಯ ಸಾಧಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ
ಚಿಕ್ಕಮಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಜಯ ಗಳಿಸಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಫಿಕ್ಸ್
ಬಿಜೆಪಿ ಅಭ್ಯರ್ಥಿ ವೈಎಮ್ ಸತೀಶ್ಗೆ ಬಹುತೇಕ ಗೆಲುಗು ಫಿಕ್ಸ್ ಆಗಿದೆ. ಸುಮಾರು 800 ಕ್ಕೂ ಅಧಿಕ ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಹಣಬಲದ ಎದುರು ಜನಬಲ ಗೆಲುವು ಸಾಧಿಸಿದೆ; ಕೆಎಸ್ ನವೀನ್
ಚಿತ್ರದುರ್ಗವನ್ನು ಕಾಂಗ್ರೆಸ್ ಟೂರಿಸ್ಟ್ ಪ್ಲೇಸ್ ಮಾಡಿಕೊಂಡಿತ್ತು. ವಲಸಿಗ ಅಬ್ಯರ್ಥಿಗಳನ್ನು ಚುನಾವಣೆಗೆ ಕರೆತರುತ್ತಿತ್ತು. ಕಳೆದ ಸಲ ಮೈಸೂರು ಮೂಲದ ರಘು ಆಚಾರ್ ಗೆ ಕಣಕ್ಕಿಳಿಸಿತ್ತು. ಈ ಸಲ ಬೆಂಗಳೂರು ಮೂಲದ ಬಿ.ಸೋಮಶೇಖರ್ ಗೆ ಕಣಕ್ಕಿಳಿಸಿತ್ತು. ಹಣಬಲದ ಎದುರು ಜನಬಲ ಗೆಲುವು ಸಾಧಿಸಿದೆ. ಸ್ಥಳೀಯ ಸ್ವಾಭಿಮಾನದ ಫಲವಾಗಿ ನಾನು ಗೆದ್ದಿದ್ದೇನೆ. ಸಿಎಂ, ಸಚಿವರು, ಶಾಸಕರ ಶ್ರಮ, ಸರ್ಕಾರದ ಉತ್ತಮ ಆಡಳಿತದಿಂದ ಗೆಲುವು ಸಾಧ್ಯವಾಗಿದೆ ಅಂತ ಕೆ ಎಸ್ ನವೀನ್ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ
ಧಾರವಾಡದಲ್ಲಿ ಎರಡನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಉತ್ತರಕನ್ನಡದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ
ಉತ್ತರಕನ್ನಡ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ವಿಜಯದ ನಗೆ ಬೀರಿದ್ದಾರೆ.
ಮಹಾರಾಷ್ಟ್ರ MLC ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು
ಮಹಾರಾಷ್ಟ್ರ MLC ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 6 ಸ್ಥಾನಗಳ ಪೈಕಿ 4ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜನ ಗಳಿಸಿದ್ದಾರೆ.
ಉತ್ತರಕನ್ನಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭರ್ಜರಿ ಪೈಪೋಟಿ
ಉತ್ತರಕನ್ನಡ ವಿಧಾನ ಪರಿಷತ್ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಒಂದೇ ಸುತ್ತಿನಲ್ಲಿ ಮತ ಏಣಿಕೆ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಸಿಎಂ ಬೊಮ್ಮಾಯಿ ಕೊಟ್ಟಂಥ ಉತ್ತಮ ಆಡಳಿತ; ಸಚಿವ ಶ್ರೀರಾಮುಲು ಹೇಳಿಕೆ
ಸುಮಾರು 14 ಕ್ಷೇತ್ರ ಗೆಲ್ಲುವ ಸನಿಹದಲ್ಲಿದ್ದೇವೆ. ವಿಧಾನ ಪರಿಷತ್ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತೆ. ಸಿಎಂ ಬೊಮ್ಮಾಯಿ ಕೊಟ್ಟಂಥ ಉತ್ತಮ ಆಡಳಿತ. ಇದೆಲ್ಲವನ್ನು ನೋಡಿ ಜನ ಉತ್ತಮ ಪಲಿತಾಂಶ ನೀಡಿದ್ದಾರೆ. ನಮ್ಮ ಸರ್ಕಾರ ಕೊಟ್ಟ ಅಭಿವೃದ್ಧಿ ಕೆಲಸಗಳನ್ನ ಜನ ಮೆಚ್ಚಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. 2022ರಲ್ಲೂ ಕಾಂಗ್ರೆಸ್ ನ ಜನ ತಿರಸ್ಕಾರ ಮಾಡ್ತಾರೆ ಅಂತ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಆಟೋ ಹತ್ತಿ ಹೊರಟ ಕೆಜಿಎಫ್ ಬಾಬು
ಸೋಲು ಸಮೀಪಿಸುತ್ತಿದ್ದಂತೆ ಹೊರಬಂದ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಆಟೋ ಹತ್ತಿ ಹೊರಟಿದ್ದಾರೆ.
ನಾವು ನಿಶ್ಚಿತವಾಗಿ 15 ಪರಿಷತ್ ಸ್ಥಾನಗಳನ್ನು ಗೆಲ್ಲುತ್ತೇವೆ; ಬಿಎಸ್ವೈ
ನಾವು ನಿಶ್ಚಿತವಾಗಿ 15 ಪರಿಷತ್ ಸ್ಥಾನಗಳನ್ನು ಗೆಲ್ಲುತ್ತೇವೆ ಅಂತ ಬೆಳಗಾವಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಮುನ್ನಡೆ
ಶಿವಮೊಗ್ಗದಲ್ಲಿ ಪರಿಷತ್ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಮುನ್ನಡೆ ಸಾಧಿಸುತ್ತಿದ್ದಾರೆ. 382 ಮತಗಳ ಅಂತರದಿಂದ ಮುನ್ನಡೆ ಸಾಗುತ್ತಿದ್ದಾರೆ.
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಕೋಲಾರದಲ್ಲಿ ಕಾಂಗ್ರೆಸ್ ಮುನ್ನಡೆ
ಕೋಲಾರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಗುತ್ತಿದೆ. 80ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸುತ್ತಿದ್ದು, ಮೊದಲನೇ ಸುತ್ತು ಅಂತ್ಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್ ಅನಿಲ್ ಕುಮಾರ್ 51 ಮತಗಳ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗೋಪಿನಾಥ್ ರೆಡ್ಡಿ 400 ಮತಗಳಿಂದ ಗೆಲುವು
ಗೋಪಿನಾಥ್ ರೆಡ್ಡಿ 400 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಗೋಪಿನಾಥ್ ರೆಡ್ಡಿ 1250ಕ್ಕೂ ಹೆಚ್ಚು ಮತ ಪಡೆದಿದ್ದಾರೆ.
ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ
ಧಾರವಾಡ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಪ್ರದೀಪ್ ಶೆಟ್ಟರ್ ಇದ್ದಾರೆ.
ತುಮಕೂರಿನಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ
ತುಮಕೂರಿನಲ್ಲಿ ಮತ ಎಣಿಕೆ ಆರಂಭವಾಗಿದೆ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಮುನ್ನಡೆ ಸಾಧಿಸಿದ್ದಾರೆ.
ಚಿತ್ರದುರ್ಗ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಮುನ್ನಡೆ ಸಾಧಿಸಿದ್ದಾರೆ.
ಕೋಲಾರದಲ್ಲಿ ಬಿಜೆಪಿಗೆ ಮುನ್ನಡೆ
ಕೋಲಾರದಲ್ಲಿ ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 46 ಮತಗಳಿಂದ ಮುನ್ನಡೆ ಸಾಧಿಸಿದೆ.
ಬೀದರ್ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
ಬೀದರ್ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬೀದರ್ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ 1,789 ಮತಗಳ ಮೂಲಕ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ 1,562 ಮತಗಳನ್ನ ಪಡೆದಿದ್ದಾರೆ
ದೇವನಹಳ್ಳಿಯಲ್ಲಿ ಆರಂಭವಾಗದ ಮತ ಎಣಿಕೆ ಕಾರ್ಯ
ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹಿನ್ನೆಲೆ ದೇವನಹಳ್ಳಿಯಲ್ಲಿ ಇನ್ನೂ ಮತ ಎಣಿಕೆ ಕಾರ್ಯ ಪ್ರಾರಂಭವಾಗಿಲ್ಲ. ಮತ ಪೆಟ್ಟಿಗೆಗಳನ್ನ ಎಣಿಕೆ ಕೇಂದ್ರಕ್ಕೆ ತಂದು ಡ್ರಮ್ ಗೆ ಸುರಿದು ಮಿಶ್ರಣ ಮಾಡಲಾಗುತ್ತಿದೆ. ಮತಪತ್ರಗಳ ಮಿಶ್ರಣ ಮಾಡಿ 25 ಪತ್ರಗಳಿಗೆ ಒಂದು ಬಂಡಲ್ ನಂತೆ ಸಿಬ್ಬಂದಿ ಜೋಡಿಸುತ್ತಿದ್ದಾರೆ. ಕಳೆದೊಂದು ಗಂಟೆಯಿಂದ ಇದೇ ಕಾರ್ಯ ನಡೆಯುತ್ತಿದೆ. ಮಿಶ್ರಣ ಮಾಡಿ ಬಂಡಲ್ ಮಾಡಿದ ನಂತರ ಮತ ಎಣಿಕೆ ಕಾರ್ಯ ಶುರುವಾಗಲಿದೆ. ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಮತ ಎಣಿಕೆ ನಡೆಯುತ್ತಿದೆ.
ಬೆಂಗಳೂರು ನಗರ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
ಬೆಂಗಳೂರು ನಗರ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿಗೆ ಮುನ್ನಡೆಯಾಗಿದ್ದು ಕಾಂಗ್ರೆಸ್‌ನ ಯುಸುಫ್ ಷರೀಫ್(ಕೆಜಿಎಫ್ ಬಾಬು)ಗೆ ಹಿನ್ನಡೆಯಾಗಿದೆ.
ಕೌಂಟಿಂಗ್ ಸೆಂಟರ್ನಿಂದ ಹೊರ ನಡೆದ ಬಿಜೆಪಿ ಅಭ್ಯರ್ಥಿ ವೈ.ಎಂ ಸತೀಸ್
ಮತ ಎಣಿಕೆ ವಿಳಂಬ ಹಿನ್ನೆಲೆ ಕೌಂಟಿಂಗ್ ಸೆಂಟರ್ ನಿಂದ ಬಿಜೆಪಿ ಅಭ್ಯರ್ಥಿ ವೈ.ಎಂ ಸತೀಸ್ ಹೊರ ಬಂದಿದ್ದಾರೆ. ಬೆಳಗ್ಗೆ 7.45 ಕ್ಕೆ ಸ್ಟ್ರಾಂಗ್ ರೂಂ ಓಪನ್ ಅದ್ರೂ ಇನ್ನೂ ಮತ ಎಣಿಕೆ ಆರಂಭವಾಗಿಲ್ಲ. 4654 ಮತಗಳ ಎಣಿಕೆಗೆ ಮಾಡಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಇದೀಗ ಮತ ಪತ್ರಗಳ ವಿಂಗಡನೆ ಮುಕ್ತಾಯಗೊಂಡಿದೆ.
ಮಂಡ್ಯದಲ್ಲಿ ಈವರೆಗೂ ಆರಂಭವಾಗದ ಮತ ಎಣಿಕೆ
ಕೊಡಗು, ಹಾಸನದಲ್ಲಿ ಕೌಂಟಿಂಗ್ ಮುಗಿದರೂ ಮಂಡ್ಯದಲ್ಲಿ ಈವರೆಗೂ ಮತ ಎಣಿಕೆ ಆರಂಭವಾಗಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯತೆ, ನಿಧಾನಗತಿಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಮತ ಪತ್ರಗಳ ವಿಂಗಡಣೆಯಲ್ಲೇ ಅಧಿಕಾರಿಗಳು ಕಾಲ ದೂಡುತ್ತಿದ್ದಾರೆ. ಎಣಿಕೆಗೂ ಡಿಸಿಗೂ ಸಂಬಂಧವೇ ಇಲ್ಲದಂತೆ ಕೊಠಡಿಯೊಂದರಲ್ಲಿ ಡಿಸಿ ಎಸ್.ಅಶ್ವತಿ, ಕಾಲಹರಣ ಮಾಡುತ್ತಿದ್ದಾರೆ.
ಕೊಡಗು ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು
ಕೊಡಗು ಪರಿಷತ್ ಚುನಾವಣೆಯಲ್ಲಿ ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪಗೆ ಗೆಲುವು ಸಿಕ್ಕಿದೆ. 102 ಮತಗಳ ಅಂತರದಿಂದ ಸುಜಾ ಕುಶಾಲಪ್ಪ ಗೆದ್ದಿದ್ದಾರೆ. ಕೊಡಗು ಕ್ಷೇತ್ರದಲ್ಲಿ ಒಟ್ಟು 1229 ಮತ ಚಲಾವಣೆಯಾಗಿತ್ತು. ಸುಜಾ ಕುಶಾಲಪ್ಪಗೆ ಜಯ ಸಿಕ್ಕಿದ್ದು ಕೊಡಗು ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡಗೆ ಸೋಲಾಗಿದೆ.
ಬೀದರ್ನಲ್ಲಿ ಮೊದಲ ಸುತ್ತಿನ ಮತ ಎಣಿಕೆ ಆರಂಭ
ಬೀದರ್ನಲ್ಲಿ ಮೊದಲ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಬಿಜೆಪಿ ಕಾಂಗ್ರೆಸ್ ನಡುವೆ ನೇರಾನೇರ ಪೈಟ್ ನಡೆಯುತ್ತಿದೆ. ಮೊಲದ ಸುತ್ತಿನ ಮತ ಎಣಿಕೆಯಲ್ಲಿ ಸಮ ಬಲದ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ, ಕಾಂಗ್ರೆಸ್ ಅಭ್ಯರ್ಥಿ ಭಿಮರಾವ್ ಪಾಟೀಲ್ ಮಧ್ಯೆ ಸಮಬಲದ ಫೈಟ್ ನಡೆಯುತ್ತಿದೆ.
ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್
ಚಿತ್ರದುರ್ಗ ನಗರದ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ. ನಾನು ಗ್ರಾ.ಪಂ ಸದಸ್ಯ ಆಗಿದ್ದೆನು, ನನಗೆ ಉತ್ತಮ ಸ್ಪಂದನೆಯಿದೆ. ಗ್ರಾ.ಪಂ ಯೋಜನೆಗಳು, ಸದಸ್ಯರ ಬಗ್ಗೆ ನನಗೆ ಅರಿವಿದೆ. ಖಂಡಿತ ನನಗೆ ಗೆಲ್ಲುವ ವಿಶ್ವಾಸವಿದೆ, ನಿರಾಳವಾಗಿದ್ದೇನೆ ಅಂತ ತಿಳಿಸಿದ್ದಾರೆ.
ಹಾಸನದಲ್ಲಿ ಒಂದು ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ ಜೆಡಿಎಸ್
ಹಾಸನದಲ್ಲಿ ಒಂದು ಸಾವಿರಕ್ಕೂ ಅಧಿಕ ಮತಗಳಿಂದ ಜೆಡಿಎಸ್ ಗೆಲುವು ಸಾಧಿಸಿದೆ. ಜೆಡಿಎಸ್ 2,242, ಕಾಂಗ್ರೆಸ್ 731, ಬಿಜೆಪಿ 354 ಮತಗಳನ್ನು ಪಡೆದಿದೆ.
ಹಾಸನ ವಿಧಾನ ಪರಿಷತ್ ಚುನಾವಣೆಯಲ್ಲಿ ಸೂರಜ್ ರೇವಣ್ಣಗೆ ಗೆಲುವು
ಹಾಸನ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. 1,000 ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ಗೆದ್ದಿದ್ದಾರೆ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಡಾ.ಸೂರಜ್ ಸಾಧಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣಗೆ ಗೆಲುವು ಬಹುತೇಕ ಖಚಿತ
ಹಾಸನ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ಮುನ್ನಡೆ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಸೂರಜ್ ರೇವಣ್ಣಗೆ ಗೆಲುವು ಬಹುತೇಕ ಖಚಿತವಾಗಿದೆ.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣಗೆ ಮುನ್ನಡೆ
ಹಾಸನದಲ್ಲಿ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಟೇಬಲ್ಗಳಲ್ಲೂ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣ ಮುನ್ನಡೆ ಸಾಧಿಸಿದ್ದಾರೆ.
ಬೀದರ್ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಬೀದರ್ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳಿಗೆ ಢವ ಢವ ಶುರುವಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಪ್ರಬಲವಾಗಿದೆ; ಹೆಚ್.ಎಮ್.ರಮೇಶ್ ಗೌಡ
ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಪ್ರಬಲವಾಗಿದೆ, 08 ತಾಲೂಕುಗಳ ಪೈಕಿ 5 ರಲ್ಲಿ ನಮ್ಮ ಶಾಸಕರಿದ್ದಾರೆ. ಹೀಗಾಗಿ ನನಗೆ ಗೆಲ್ಲುವ ವಿಶ್ವಾಸವಿದೆ. ಜನ ಆಶೀರ್ವಾದ ಮಾಡಿದ್ದಾರೆ ಅನ್ನೂ ವಿಶ್ವಾಸವಿದೆ. ಸೋಲಾಗಲಿ, ಗೆಲುವಾಗಲಿ ಸಮಾನವಾಗಿ ಸ್ವೀಕಾರ ಮಾಡ್ತೀನಿ ಅಂತ ದೇವನಹಳ್ಳಿಯ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಹೇಳಿಕೆ ನೀಡಿದ್ದಾರೆ
ಮಡಿಕೇರಿಯಲ್ಲಿ ಬಿಜೆಪಿಗೆ ಗೆಲುವು
ಮಡಿಕೇರಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. 105 ಮತಗಳ ಅಂತರದಿಂದ ಸುಜಾ ಕುಶಾಲಪ್ಪ ಗೆದ್ದಿದ್ದಾರೆ.
ಕೊಡಗು ಪರಿಷತ್ ಕ್ಷೇತ್ರದಲ್ಲಿ ಬಹುತೇಕ ಬಿಜೆಪಿಗೆ ಗೆಲುವು
ಕೊಡಗು ಪರಿಷತ್ ಕ್ಷೇತ್ರದಲ್ಲಿ ಬಹುತೇಕ ಬಿಜೆಪಿಗೆ ಗೆಲುವು ಸಿಗಲಿದೆ. 94 ಮತಗಳಿಂದ ಬಿಜೆಪಿಯ ಸುಜಾ ಕುಶಾಲಪ್ಪ ಮುನ್ನಡೆ ಸಾಧಿಸಿದ್ದಾರೆ.
ಕೊಡಗಿನಲ್ಲಿ ಚಲಾವಣೆಯಾದ ಒಟ್ಟು ಮತಗಳು 1,224
ಕೊಡಗಿನಲ್ಲಿ ಒಟ್ಟು 1,224 ಮತಗಳು ಚಲಾವಣೆಯಾಗಿದೆ. ಮೊದಲ ಸುತ್ತು ಮತ ಎಣಿಕೆ ಬಳಿಕ 94 ಮತಗಳಿಂದ ಬಿಜೆಪಿಯ ಸುಜಾ ಕುಶಾಲಪ್ಪ ಮುನ್ನಡೆ ಸಾಧಿಸಿದ್ದಾರೆ. ಸದ್ಯ ಬಿಜೆಪಿಯ ಸುಜಾ ಕುಶಾಲಪ್ಪ 639 ಮತ್ತು ಕಾಂಗ್ರೆಸ್ ಮಥರ್ ಗೌಡ 546 ಮತಗಳನ್ನು ಪಡೆದುಕೊಂಡಿದ್ದಾರೆ.
ಮಡಿಕೇರಿಯಲ್ಲಿ ಬಿಜೆಪಿಗೆ ಮುನ್ನಡೆ
ಈಗಾಗಲೇ ಪತಗಳ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮಡಿಕೇರಿಯಲ್ಲಿ ಬಿಜೆಪಿಗೆ ಮುನ್ನಡೆಯಿದೆ. 94 ಮತಗಳಿಂದ ಬಿಜೆಪಿಯ ಸುಜಾ ಕುಶಾಲಪ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ.
ದೊಡ್ಡ ಅಂತರದ ಗೆಲುವಿನ ನಿರೀಕ್ಷೆಯಿದೆ; ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್
ಈಗಾಗಲೇ ಐದಾರು ಸುತ್ತಿನ ಪ್ರಕ್ರಿಯೆ ಆರಂಭಗೊಂಡಿದೆ. ಡಿಸಿ ನೇತೃತ್ವದಲ್ಲಿ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ. ಈ ಬಾರಿಯ ಎಣಿಕೆ ಸ್ವಲ್ಪ ವಿಭಿನ್ನವಾಗಿದೆ. ಮೊದಲ ಪ್ರಾಶಸ್ತ್ಯ ದ ಮತ ಎಣಿಕೆ ನಡೆದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ದೊಡ್ಡ ಅಂತರದಿಂದ ಗೆಲುವು ಸಾಧ್ಯತೆಯಿದೆ. ನನಗೆ ಆಸೆಯಿದ್ದ ಕ್ಷೇತ್ರ ಇದು. ತಂದೆ ಪದವೀಧರರ ಕ್ಷೇತ್ರವನ್ನು 30 ವರ್ಷ ಪ್ರತಿನಿಧಿಸಿದ್ದರು. ನನಗೆ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಸಿಕ್ಕಿದೆ. ಗ್ರಾಮಿಣ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಯೋಜನೆಗಳಿವೆ ಅಂತ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್ ಹೇಳಿಕೆ ನೀಡಿದ್ದಾರೆ.
ಮತ ಎಣಿಕೆ ಆರಂಭ ಬ್ಯಾಲೆಟ್ ಪೇಪರ್ ವಿಂಗಡಣೆ ಅಂತ್ಯ
ವಿಧಾನಪರಿಷತ್‌ನ 25 ಸ್ಥಾನಗಳ ಮತ ಎಣಿಕೆ ಆರಂಭವಾಗಿದ್ದು, ಬಹುತೇಕ ಎಲ್ಲ ಕಡೆ ಬ್ಯಾಲೆಟ್ ಪೇಪರ್ ವಿಂಗಡಣೆ ಅಂತ್ಯವಾಗಿದೆ. ಸಿಂಧು, ಅಸಿಂಧು ಮತಗಳನ್ನು ಸಿಬ್ಬಂದಿ ಪ್ರತ್ಯೇಕಿಸಿದೆ.
ಚಿತ್ರದುರ್ಗದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಚಿತ್ರದುರ್ಗ ನಗರದ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಬಿಜೆಪಿ ಅಬ್ಯರ್ಥಿ ಕೆಎಸ್ ನವೀನ್ ಆಗಮಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಕಳೆದ ಸಲ ಬಿಜೆಪಿ ಆಡಳಿತ, ಹೆಚ್ಚಿನ ಸಂಖ್ಯೆಯ ಶಾಸಕರು ಇರಲಿಲ್ಲ. ಈ ಸಲ ನಮ್ಮ ಸರ್ಕಾರವಿದೆ, ಹೆಚ್ಚಿನ ಸಂಖ್ಯೆಯ ಬಿಜೆಪಿ ಶಾಸಕರಿದ್ದಾರೆ. ಅಮಾನ್ಯ ಮತಗಳಗಾದಂತೆ ಜಾಗೃತಿ ಮೂಡಿಸಲಾಗಿದೆ. ಸ್ಥಳೀಯ ಅಬ್ಯರ್ಥಿಗೆ ಮತದಾರರು ಆದ್ಯತೆ ನೀಡಿದ್ದಾರೆ. ಗ್ರಾ.ಪಂ ಸದಸ್ಯರಾಗಿದ್ದರೆ ಅದೇ ಭಾಗದಲ್ಲಿ ಚುನಾವಣೆ ನಿಲ್ಲಬೇಕಿತ್ತು. ಕಾಂಗ್ರೆಸ್ ಅಬ್ಯರ್ಥಿ ಸೋಮಶೇಖರ್ ಬೆಂಗಳೂರಿನಿಂದ ಬಂದವರು. ಕಳೆದ ಸಲ ಆಯ್ಕೆ ಆಗಿದ್ದ ರಘು ಆಚಾರ್ ಜಿಲ್ಲೆಯತ್ತ ಸುಳಿಯಲಿಲ್ಲ ಅಂತ ನವೀನ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಮತ ಪತ್ರಗಳ ವಿಂಗಡಣೆ ಕಾರ್ಯ ಮುಕ್ತಾಯ
ಬಳ್ಳಾರಿಯಲ್ಲಿ ಮತ ಪತ್ರಗಳ ವಿಂಗಡಣೆ ಕಾರ್ಯ ಮುಕ್ತಾಯವಾಗಿದೆ. ಇದೀಗ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಮುಂದಿನ ರಾಜಕೀಯ ಲೆಕ್ಕಾಚಾರ ಹಾಕಿರುವ ಜೆಡಿಎಸ್
ರಾಜ್ಯದಲ್ಲಿ ಇಂದು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಜೆಡಿಎಸ್ ಪರಿಷತ್ ಫಲಿತಾಂಶದ ಬಗ್ಗೆ ಮುಂದಿನ ರಾಜಕೀಯ ಲೆಕ್ಕಾಚಾರ ಹಾಕಿದೆ. ಆರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ನಾಲ್ಕರಿಂದ ಐದು ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ. ಹಾಸನ,ಮಂಡ್ಯ, ಮೈಸೂರು, ಕೋಲಾರ,ತುಮಕೂರಿನಲ್ಲಿ ಗೆಲ್ಲುವ ವಿಶ್ವಾಸವನ್ನು ಮಾಜಿ ಸಿಎಂ ಕುಮಾರಸ್ವಾಮಿ ಹೊಂದಿದ್ದಾರೆ. ಅದರಲ್ಲೂ ಮಂಡ್ಯ, ಮೈಸೂರು, ಕೋಲಾರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಪ್ರಚಾರ ನೆಡೆಸಿದ್ದಾರೆ.
ಎಂಎಲ್‌ಸಿ ಚುನಾವಣೆಯಲ್ಲಿ ಒಳ್ಳೆ ಫಲಿತಾಂಶ ನಿರೀಕ್ಷೆ; ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ಎಂಎಲ್‌ಸಿ ಚುನಾವಣೆಯಲ್ಲಿ ಒಳ್ಳೆ ಫಲಿತಾಂಶ ನಿರೀಕ್ಷೆಯಿದೆ ಅಂತ ಕಾಶಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಮತ ಎಣಿಕೆ ಆರಂಭ
ಹಾಸನದಲ್ಲಿ ಮತ ಎಣಿಕೆ ಆರಂಭವಾಗಿದೆ. ಎಲ್ಲಾ ಮತ ಪೆಟ್ಟಿಗೆ ತೆರೆದು ಸಿಬ್ಬಂದಿ ಬಂಡಲ್ ಮಾಡುತ್ತಿದೆ. 25 ಮತಗಳ ಬಂಡಲ್ ಮಾಡಿದ ಬಳಿಕ ಎಣಿಕೆ ಆರಂಭ ಅಗಲಿದೆ. ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ.
ಮಡಿಕೇರಿಯಲ್ಲಿ ಆರು ಭಾಗಗಳಾಗಿ ಮತ ಪತ್ರಗಳ ವಿಂಗಡಣೆ
ಒಟ್ಟು 1224 ಮತದಾನವಾದ ಪತ್ರಗಳನ್ನ ವಿಂಗಡಣೆ ಮಾಡಲಾಗಿದೆ. ಆರು ಭಾಗಗಳಾಗಿ ಮತ ಪತ್ರಗಳ ವಿಂಗಡಣೆ ಮಾಡಲಾಗಿದ್ದು, ಆರು ಟೇಬಲ್ನಲ್ಲಿ ಮತ ಪತ್ರಗಳ ಏಣಿಕೆ ಮಾಡಲಾಗುತ್ತದೆ. ಟೇಬಲ್ಗೆ ಬಂದ ಮತ ಪತ್ರಗಳನ್ನು ಬಂಡಲ್ಗಳಾಗಿ ಮಾಡಿ ಮತ ಏಣಿಕೆ ಮಾಡಲಾಗುತ್ತದೆ.
ಬೆಳಗಾವಿಯಲ್ಲಿ ಮತ ಎಣಿಕೆಗೂ ಮುನ್ನವೇ ಎರಡು ಮತಗಳು ರಿಜೆಕ್ಟ್
ಬೆಳಗಾವಿ ವಿಧಾನಪರಿಷತ್ ಕ್ಷೇತ್ರದ ಎರಡು ಮತಗಳನ್ನ ರಿಜೆಕ್ಟ್ ಮಾಡಲಾಗಿದೆ. ಮತದಾನದ ಬಳಿಕ ಫೋಟೋ ತೆಗೆದಿದ್ದ ಹಿನ್ನೆಲೆ ರಿಜೆಕ್ಟ್ ಮಾಡಲಾಗಿದೆ. ಫೋಟೋದಲ್ಲಿದ್ದ ಕ್ರಮ ಸಂಖ್ಯೆ ಪರಿಶೀಲಿಸಿ 2 ಮತಗಳನ್ನು ರಿಜೆಕ್ಟ್ ಮಾಡಲಾಗಿದೆ.
ಮರು ಮತದಾನದ ಭೂತ್ಗಳ ಪರಿಶೀಲನೆ ಮುಕ್ತಾಯ
ಮರು ಮತದಾನದ ಭೂತ್ಗಳ ಪರಿಶೀಲನೆ ಮುಕ್ತಾಯವಾಗಿದೆ. ದೇವನಹಳ್ಳಿಯಲ್ಲಿ ಇದೀಗ ಮತ ಎಣಿಕೆ ಕಾರ್ಯಕ್ಕೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ ಎಣಿಕೆ ವಿಳಂಬ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ ಎಣಿಕೆ ವಿಳಂಬವಾಗಿದೆ. ಒಂದು ಮತಗಟ್ಟೆಯಲ್ಲಿ ನಿನ್ನೆ ಮರುಮತದಾನವಾಗಿದ್ದ ಹಿನ್ನೆಲೆ ಮತ ಎಣಿಕೆ ಅರ್ಧ ಗಂಟೆ ವಿಳಂಬವಾಗುವ ಸಾಧ್ಯತೆಯಿದೆ.
ಪರಿಷತ್‌ನ 25 ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಆರಂಭ
ಪರಿಷತ್‌ನ 25 ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರು, ಚಿಕ್ಕೋಡಿ, ಹಾಸನ, ತುಮಕೂರು, ಬೀದರ್, ಮೈಸೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಮಡಿಕೇರಿ, ಮಂಗಳೂರು, ದೇವನಹಳ್ಳಿ, ಬಳ್ಳಾರಿ, ರಾಯಚೂರು, ಧಾರವಾಡ, ವಿಜಯಪುರ ಸೇರಿ ರಾಜ್ಯದ ಒಟ್ಟು 20 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
ವಿಜಯನಗರದಲ್ಲಿ ಮತ ಎಣಿಕೆ ಕಾರ್ಯ ಆರಂಭ
ನಗರದ ದರಬಾರ ಹೈಸ್ಕೂಲ್ನಲ್ಲಿ ಎಣಿಕಾ ಕಾರ್ಯ ನಡೆಯುತ್ತಿದೆ. ಚುನಾವಣಾ ವೀಕ್ಷಕ ಎಲ್ ಕೆ ಅತೀಕ್, ಚುನಾವಣಾಧಿಕಾರಿ ಪಿ ಸುನಿಲ್ ಕುಮಾರ್ ಎಸ್ಪಿ ಆನಂದ್ ಕುಮಾರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದಾರೆ.
ಕೊಡಗಿನಲ್ಲಿ ಮತ ಎಣಿಕೆಗೆ ಸಿದ್ಧತೆ
ಕೊಡಗಿನಲ್ಲಿ ವಿಧಾನ ಪರಿಷತ್ ಚುನಾವಣೆಯ ಒಟ್ಟು ಮತದಾರರು 1229. ಆದರೆ 1224 ಮತಗಳು ಚಲಾವಣೆಯಾಗಿದೆ. ಮತ ಎಣಿಕೆಗೆ ಸಿದ್ಧತೆ ನಡೆಯುತ್ತಿದ್ದು, ಮೊದಲು ತಲಾ 25 ಮತ ಪತ್ರಗಳ ಬಂಡಲ್ ಮಾಡಲಾಗುತ್ತದೆ. ಬಳಿಕ ಮತ ಪತ್ರಗಳ ಬಂಡಲ್ಗಳನ್ನು ಡ್ರಂನಲ್ಲಿ ಮಿಶ್ರಣ ಮಾಡಲಾಗುತ್ತದೆ. ಬಳಿಕ ಮತ ಪತ್ರಗಳ ಬಂಡಲ್ಗಳನ್ನು 6 ಟೇಬಲ್ಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುವುದು.
ಮತ ಎಣಿಕೆ ಕೇಂದ್ರದತ್ತ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ
ಚಿಕ್ಕಮಗಳೂರು ನಗರದ ಎಸ್.ಟಿ.ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಕೇಂದ್ರದತ್ತ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಆಗಮಿಸುತ್ತಿದ್ದಾರೆ.
ಸ್ಟ್ರಾಂಗ್ ರೂಂ ಓಪನ್ ವೇಳೆ ಹಾಜರಾದ ಕಾಂಗ್ರೆಸ್ ನ ಯೂಸುಫ್ ಶರೀಫ್ ಕೆಜಿಎಫ್ ಬಾಬು
ಬೆಂಗಳೂರು ನಗರ ಮತ ಎಣಿಕೆ ಕೇಂದ್ರಕ್ಕೆ ಬಿಜೆಪಿ ಗೋಪಿನಾಥ್ ರೆಡ್ಡಿ ಆಗಮಿಸಿದ್ದಾರೆ. ಹಾಗೂ ಸ್ಟ್ರಾಂಗ್ ರೂಂ ಓಪನ್ ವೇಳೆ ಕಾಂಗ್ರೆಸ್ ನ ಯೂಸುಫ್ ಶರೀಫ್ ಕೆಜಿಎಫ್ ಬಾಬು ಹಾಜರಿದ್ರು.
ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಜೆಡಿಎಸ್ ಪಕ್ಷ 1.ಮಂಡ್ಯ ಕ್ಷೇತ್ರ-ಅಪ್ಪಾಜಿಗೌಡ 2.ತುಮಕೂರು ಕ್ಷೇತ್ರ-ಅನಿಲ್ ಕುಮಾರ್ 3.ಮೈಸೂರು ಕ್ಷೇತ್ರ-ಸಿ.ಎನ್.ಮಂಜೇಗೌಡ 4.ಕೋಲಾರ ಕ್ಷೇತ್ರ-ವಕ್ಕಲೇರಿ ರಾಮು 5.ಬೆಂಗಳೂರು ಗ್ರಾಮಾಂತರ-ಹೆಚ್.ಎಂ.ರಮೇಶ್ ಗೌಡ 6.ಕೊಡಗು ಕ್ಷೇತ್ರ- 7.ಹಾಸನ ಕ್ಷೇತ್ರ-ಸೂರಜ್ ರೇವಣ್ಣ
ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
1. ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸಪೂಜಾರಿ. 2. ಚಿಕ್ಕಮಗಳೂರು – ಎಂ.ಕೆ. ಪ್ರಾಣೇಶ್. 3. ಶಿವಮೊಗ್ಗ – ಡಿ.ಎಸ್.ಅರುಣ್. 4. ಧಾರವಾಡ – ಪ್ರದೀಪ್ ಶೆಟ್ಟರ್. 5. ಬೆಳಗಾವಿ – ಮಹಾಂತೇಶ್ ಕವಟಗಿಮಠ್. 6. ಕಲ್ಬುರ್ಗಿ – ಬಿ.ಜಿ.ಪಾಟೀಲ್. 7. ಚಿತ್ರದುರ್ಗ – ಕೆ.ಎಸ್.ನವೀನ್. 8.ಮೈಸೂರು – ರಘು ಕೌಟಿಲ್ಯ. 9. ಹಾಸನ – ವಿಶ್ವನಾಥ್. 10. ಉತ್ತರ ಕನ್ನಡ – ಗಣಪತಿ ಉಲ್ವೇಕರ್. 11. ಬೀದರ್ – ಪ್ರಕಾಶ್ ಖಂಡ್ರೆ. 12. ಬೆಂಗಳೂರು – ಹೆಚ್.ಎಸ್. ಗೋಪಿನಾಥ್ ರೆಡ್ಡಿ. 13. ಮಂಡ್ಯ – ಮಂಜು ಕೆ.ಆರ್. ಪೇಟೆ. 14. ಕೋಲಾರ – ಡಾ.ಕೆ.ಎನ್. ವೇಣುಗೋಪಾಲ್. 15. ರಾಯಚೂರು – ವಿಶ್ವನಾಥ್ ಎ.ಬನಹಟ್ಟಿ. 16. ಬೆಂಗಳೂರು ಗ್ರಾಮಾಂತರ – ಬಿ.ಎಂ.ನಾರಾಯಣಸ್ವಾಮಿ. 17. ಬಳ್ಳಾರಿ – ವೈ.ಎಂ.ಸತೀಶ್. 18. ತುಮಕೂರು – ಎನ್. ಲೋಕೇಶ್. 19. ವಿಜಯಪುರ – ಪಿ.ಹೆಚ್. ಪೂಜಾರ್. 20. ಕೊಡಗು – ಸುಜಾ ಕುಶಾಲಪ್ಪ.
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
1.ಕಲಬುರಗಿ-ಶಿವಾನಂದ ಪಾಟೀಲ್ ಮರ್ತೂರು 2.ಬೆಳಗಾವಿ(ದ್ವಿಸದಸ್ಯ ಸ್ಥಾನ)-ಚನ್ನರಾಜ ಹಟ್ಟಿಹೊಳಿ 3.ಉತ್ತರ ಕನ್ನಡ-ಭೀಮಣ್ಣ ನಾಯ್ಕ್ 4.ಧಾರವಾಡ(ದ್ವಿಸದಸ್ಯ ಸ್ಥಾನ)-ಸಲೀಂ ಅಹ್ಮದ್ 5.ಕೊಪ್ಪಳ, ರಾಯಚೂರು-ಶರಣಗೌಡ ಪಾಟೀಲ್ 6.ಚಿತ್ರದುರ್ಗ-ಬಿ.ಸೋಮಶೇಖರ್ 7.ಶಿವಮೊಗ್ಗ-ಪ್ರಸನ್ನ ಕುಮಾರ್ 8.ದಕ್ಷಿಣಕನ್ನಡ-ಉಡುಪಿ(ದ್ವಿಸದಸ್ಯ ಸ್ಥಾನ)-ಮಂಜುನಾಥ ಭಂಡಾರಿ 9.ಚಿಕ್ಕಮಗಳೂರು-ಗಾಯತ್ರಿ ಶಾಂತೇಗೌಡ 10.ಹಾಸನ-ಎಂ.ಶಂಕರ್ 11.ತುಮಕೂರು-ಆರ್.ರಾಜೇಂದ್ರ 12.ಮಂಡ್ಯ-ದಿನೇಶ್ ಗೂಳಿಗೌಡ 13.ಬೆಂಗಳೂರು ಗ್ರಾಮಾಂತರ-ಎಸ್.ರವಿ 14.ಕೊಡಗು-ಮಂಥರ್ ಗೌಡ 15.ವಿಜಯಪುರ-ಬಾಗಲಕೋಟೆ(ದ್ವಿಸದಸ್ಯ ಸ್ಥಾನ)-ಸುನಿಲ್‌ಗೌಡ 16.ಮೈಸೂರು-ಚಾಮರಾಜನಗರ(ದ್ವಿಸದಸ್ಯ ಸ್ಥಾನ)-ತಿಮ್ಮಯ್ಯ 17.ಬಳ್ಳಾರಿ-ಕೆ.ಸಿ.ಕೊಂಡಯ್ಯ 18.ಬೀದರ್-ಭೀಮರಾವ್ ಬಿ.ಪಾಟೀಲ್ 19.ಕೋಲಾರ-ಎಂ.ಎನ್.ಅನಿಲ್ ಕುಮಾರ್ 20.ಬೆಂಗಳೂರು ನಗರ-ಯೂಸುಫ್ ಷರೀಫ್
ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಎಂಟ್ರಿ
ಹಾಸನ ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಆಗಮಿಸಿದ್ದಾರೆ. ತಮ್ಮ ಅಭ್ಯರ್ಥಿ ಎಂ.ಶಂಕರ್ ಪರ ಏಜೆಂಟ್ ಆಗಿ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ.
ಪರಿಷತ್‌ನ 25 ಕ್ಷೇತ್ರಗಳ ಮತ ಎಣಿಕೆ ಆರಂಭ
ಪರಿಷತ್‌ನ 25 ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದ್ದು ವಿಧಾನಪರಿಷತ್‌ನ 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಡಿಸೆಂಬರ್ 10ರಂದು 25 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಬಿಜೆಪಿ 20, ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಾಗೂ 6 ವಿಧಾನಪರಿಷತ್ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಿತ್ತು.
ಸ್ಟ್ರಾಂಗ್ ರೂಮ್‌ಗಳನ್ನು ಓಪನ್ ಮಾಡಿದ ಅಧಿಕಾರಿಗಳು
ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಾಂಗ್ ರೂಮ್‌ಗಳನ್ನು ಅಧಿಕಾರಿಗಳು ಓಪನ್ ಮಾಡಿದ್ದು ಕೆಲವೇ ಕ್ಷಣಗಳಲ್ಲಿ ಪರಿಷತ್‌ನ 25 ಕ್ಷೇತ್ರಗಳ ಮತ ಎಣಿಕೆ ಆರಂಭಗೊಳ್ಳಲಿದೆ. ವಿಧಾನ ಪರಿಷತ್‌ನ 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮತ ಎಣಿಕೆ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ವೈ.ಎಮ್. ಸತೀಶ್ ಆಗಮನ
ಮತ ಎಣಿಕೆ ಕೇಂದ್ರಕ್ಕೆ ಬಳ್ಳಾರಿ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ವೈ.ಎಮ್. ಸತೀಶ್ ಭೇಟಿ ನೀಡಿದ್ದಾರೆ. ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ಗೆ ಆಗಮಿಸಿದ್ದು ಬಿಜೆಪಿ ಅಭ್ಯರ್ಥಿಗೆ ಶಾಸಕ ಸೋಮಶೇಖರ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ಅಧಿಕಾರಿಗಳು ಅಭ್ಯರ್ಥಿ ತಪಾಸಣೆ ಮಾಡಿ ಒಳಗಡೆ ಬಿಟ್ಟಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ. ಡಿ.ತಿಮ್ಮಯ್ಯ
ಕಾಂಗ್ರೆಸ್ ಅಭ್ಯರ್ಥಿ ಡಾ. ಡಿ.ತಿಮ್ಮಯ್ಯ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣವಾಗಿದೆ. ಅವರು ಮಾಡಿರುವ ಸಾಧನೆ ನನಗೆ ಗೆಲುವು ತಂದು ಕೊಡಲಿದೆ. ಶಾಸಕ ಜಿ.ಟಿ. ದೇವೇಗೌಡರ ಬೆಂಬಲ ಸಹಾ ಸಹಕಾರಿಯಾಯಿತು. ನನಗೆ ಯಾವ ಪಕ್ಷದಿಂದಲೂ ಪೈಪೋಟಿ ಎದುರಾಗಿಲ್ಲ. ನಿರಾಯಾಸವಾಗಿ ನಾನು ಗೆಲ್ಲುತ್ತೇನೆ. ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನಹರಿಸುತ್ತೇನೆ ಎಂದು ಟಿವಿ9ಗೆ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಡಾ. ಡಿ.ತಿಮ್ಮಯ್ಯ ತಿಳಿಸಿದ್ದಾರೆ.
25 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಸಿದ್ಧತೆ
ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆದಿತ್ತು. ಸದ್ಯ ಇಂದು ವಿಧಾನಪರಿಷತ್‌ನ 25 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆ 25 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದೆ. ಈಗಾಗ್ಲೇ 25 ಕ್ಷೇತ್ರಗಳ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ ನಡೆದಿದೆ.
Published On - Dec 14,2021 7:06 AM