ಕರ್ನಾಟಕ ಲೋಕ ಅದಾಲತ್‌ನಲ್ಲಿ ಹೊಸ ದಾಖಲೆ: ಶೇ.50 ಟ್ರಾಫಿಕ್‌ ದಂಡದ ಆಫರ್‌ಗೆ 19 ಲಕ್ಷ ಕೇಸ್ ಕ್ಲೋಸ್; ಸರ್ಕಾರಕ್ಕೆ 55 ಕೋಟಿ ಆದಾಯ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಪ್ರಾಯೋಜಿತ 50% ಸಂಚಾರ ದಂಡ ರಿಯಾಯಿತಿಗೆ ಉತ್ತಮ ಸ್ಪಂದನೆ ದೊರೆತಿದೆ. ಈ ಯೋಜನೆಯಡಿ 19 ಲಕ್ಷಕ್ಕೂ ಹೆಚ್ಚು ಚಲನ್‌ಗಳನ್ನು ಇತ್ಯರ್ಥಪಡಿಸಿ ₹55 ಕೋಟಿ ಆದಾಯ ಸಂಗ್ರಹಿಸಲಾಗಿದೆ. ಇತ್ತೀಚಿನ ಮೆಗಾ ಲೋಕ ಅದಾಲತ್‌ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡು 3,017 ಕೋಟಿ ರೂ. ಮೌಲ್ಯದ ವಿವಾದಗಳು ಬಗೆಹರಿದಿವೆ. ಇದು ಸಾರ್ವಜನಿಕರಿಗೆ ಕಾನೂನು ಸೇವೆಗಳನ್ನು ಸುಲಭಗೊಳಿಸುವ KSLSA ಪ್ರಯತ್ನದ ಯಶಸ್ಸು.

ಕರ್ನಾಟಕ ಲೋಕ ಅದಾಲತ್‌ನಲ್ಲಿ ಹೊಸ ದಾಖಲೆ: ಶೇ.50 ಟ್ರಾಫಿಕ್‌ ದಂಡದ ಆಫರ್‌ಗೆ 19 ಲಕ್ಷ ಕೇಸ್ ಕ್ಲೋಸ್; ಸರ್ಕಾರಕ್ಕೆ 55 ಕೋಟಿ ಆದಾಯ
ಸಾಂದರ್ಭಿಕ ಚಿತ್ರ

Updated on: Jul 15, 2026 | 11:40 AM

ಮುಖ್ಯಾಂಶಗಳು

  • ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ
  • ಈ ರಿಯಾಯಿತಿ ಯೋಜನೆಯಡಿ ಒಟ್ಟು 19,13,659 ಸಂಚಾರ ಚಲನ್ ಪ್ರಕರಣಗಳು ಇತ್ಯರ್ಥ
  • ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 55 ಕೋಟಿ ರೂಪಾಯಿ ದಂಡದ ಆದಾಯ

ಬೆಂಗಳೂರು, ಜು.15: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ವಿಶೇಷ ಪ್ರಯತ್ನದ ಫಲವಾಗಿ, ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಪಾವತಿಗೆ ಘೋಷಿಸಿದ್ದ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಈ ರಿಯಾಯಿತಿ ಯೋಜನೆಯಡಿ ಒಟ್ಟು 19,13,659 ಸಂಚಾರ ಚಲನ್ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 55 ಕೋಟಿ ರೂಪಾಯಿ ದಂಡದ ಆದಾಯ ಹರಿದುಬಂದಿದೆ.

ಜುಲೈ 11 ರಂದು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ಈ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರಲ್ಲಿ 2.54 ಲಕ್ಷ ಬಾಕಿ ಇದ್ದ ಪ್ರಕರಣಗಳು ಹಾಗೂ 76.25 ಲಕ್ಷ ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿವೆ.

ಈ ಇಡೀ ಪ್ರಕ್ರಿಯೆಯಲ್ಲಿ ಒಟ್ಟು 3,017 ಕೋಟಿ ರೂಪಾಯಿಗಳಷ್ಟು ಮೊತ್ತದ ವಿವಾದಗಳನ್ನು ಇತ್ಯರ್ಥಪಡಿಸಲಾಗಿದೆ. ಸಂಚಾರ ದಂಡದ ಮೇಲಿನ ಶೇ. 50 ರಷ್ಟು ರಿಯಾಯಿತಿಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಜೂನ್ 21 ರಿಂದ ಜುಲೈ 10 ರವರೆಗೆ ಒಟ್ಟು 20 ದಿನಗಳ ಕಾಲಾವಕಾಶ ನೀಡಲಾಗಿತ್ತು.

ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು ಹಾಗೂ KSLSA ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾರಿಗೆ ಇಲಾಖೆಗೆ ಸಂಬಂಧಿಸಿದ 1,212 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಇಲಾಖೆಗೆ 61.99 ಲಕ್ಷ ರೂಪಾಯಿಗಳನ್ನು ಮರುಪಡೆಯಲಾಗಿದೆ.

ಇದನ್ನೂ ಓದಿ: ಆಲೂಗಡ್ಡೆ ಚಿಪ್ಸ್ ಪ್ರಿಯರೇ ಹುಷಾರ್: ಕೊಳೆತ ಆಲೂಗಡ್ಡೆ, ಗಲೀಜು ನೀರಿಂದ ಚಿಪ್ಸ್ ತಯಾರಿ

ರಾಜ್ಯಾದ್ಯಂತ ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,948 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಅವರಿಗೆ ನೆರವಾಗಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ನಡೆದ ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ ಸಂತ್ರಸ್ತರಿಗೆ ಬರೋಬ್ಬರಿ 2.45 ಕೋಟಿ ರೂಪಾಯಿಗಳ ಭಾರಿ ಮೊತ್ತದ ಪರಿಹಾರವನ್ನು ಒಪ್ಪಂದದ ಮೂಲಕ ಕೊಡಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Wed, 15 July 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us