ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ ಲಿಂಗೈಕ್ಯ: ಬೆಳಗಾವಿಯಲ್ಲಿ ಇಂದು ಕ್ರಿಯಾ ಸಮಾಧಿ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಬೆಳಗಾವಿ ಮೂಲದ ಗುರುಲಿಂಗಯ್ಯ (76) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿದ್ದಾರೆ. 1970 ರಿಂದ ಸುಮಾರು 40 ವರ್ಷಗಳ ಕಾಲ ಕೇದಾರನಾಥೇಶ್ವರನ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಇವರ ಕ್ರಿಯಾ ಸಮಾಧಿ ಇಂದು ಸಂಜೆ ಸ್ವಗ್ರಾಮ ಚಿಕ್ಕ ಬಾಗೇವಾಡಿಯಲ್ಲಿ ನಡೆಯಲಿದೆ.

ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ ಲಿಂಗೈಕ್ಯ: ಬೆಳಗಾವಿಯಲ್ಲಿ ಇಂದು ಕ್ರಿಯಾ ಸಮಾಧಿ
ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ ಲಿಂಗೈಕ್ಯ
Edited By:

Updated on: Aug 18, 2026 | 7:49 AM

ಮುಖ್ಯಾಂಶಗಳು

  • ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ ಬೆಂಗಳೂರಿನಲ್ಲಿ ನಿನ್ನೆ ಲಿಂಗೈಕ್ಯ.
  • ಬೆಳಗಾವಿ ಮೂಲದ ಗುರುಲಿಂಗಯ್ಯ ಕೇದಾರನಾಥನಲ್ಲಿ 40 ವರ್ಷಗಳ ಕಾಲ ಅರ್ಚಕರಾಗಿ ಸೇವೆ.
  • ಗುರುಲಿಂಗಯ್ಯ ಅವರ ಕ್ರಿಯಾ ಸಮಾಧಿ ಇಂದು ಸ್ವಗ್ರಾಮ ಚಿಕ್ಕ ಬಾಗೇವಾಡಿಯಲ್ಲಿ ನೆರವೇರಲಿದೆ.

ಬೆಂಗಳೂರು, ಆಗಸ್ಟ್ 18: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯದ ಪವಿತ್ರ ಕೇದಾರನಾಥ ಕ್ಷೇತ್ರಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ (76) ಅವರು ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದು, ಹಿಮಾಲಯದ ಪುಣ್ಯಕ್ಷೇತ್ರದ ಸನ್ನಿಧಿಯಲ್ಲಿ ದಶಕಗಳ ಕಾಲ ಶಿವನ ಆರಾಧನೆ ಮಾಡಿದ್ದ ಶ್ರೇಷ್ಠ ಅರ್ಚಕರೊಬ್ಬರನ್ನು ಧಾರ್ಮಿಕ ಲೋಕ ಇಂದು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ದೇಶಾದ್ಯಂತ ಇರುವ ಅಪಾರ ಭಕ್ತವೃಂದ ತೀವ್ರ ಶೋಕ ವ್ಯಕ್ತಪಡಿಸಿದೆ.

ಗುರುಲಿಂಗಯ್ಯ ಯಾರು?

ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕ ಬಾಗೇವಾಡಿ ಗ್ರಾಮದವರಾದ ಗುರುಲಿಂಗಯ್ಯ ಅವರ ಕುಟುಂಬವು ಕಳೆದ ಮೂರು ತಲೆಮಾರಿನಿಂದ ಉತ್ತರಾಖಂಡದಲ್ಲೇ ನೆಲೆಸಿದೆ. ಇವರು, ಕೇದಾರಪೀಠದ 322ನೇ ಜಗದ್ಗುರು ರಾವಲ್ ಶಾಂತ ಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿ ಅರ್ಚಕರಾಗಿ ಸೇವೆಗೆ ಸೇರಿದ್ದರು. 1970 ರಿಂದ ಸುಮಾರು 40 ವರ್ಷಗಳ ಕಾಲ ಕೇದಾರನಾಥೇಶ್ವರನ ಪ್ರಧಾನ ಅರ್ಚಕರಾಗಿ ನಿಷ್ಠೆ ಹಾಗೂ ಭಕ್ತಿಯಿಂದ ಸುದೀರ್ಘ ಸೇವೆ ಸಲ್ಲಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಕೇದಾರನಾಥ ಪೀಠದ (ಹಿಮವತ್ ಕೇದಾರ ವೈರಾಗ್ಯ ಪೀಠ) ಸಾಂಪ್ರದಾಯಿಕ ನಿಯಮಗಳ ಪ್ರಕಾರ, ದಕ್ಷಿಣ ಭಾರತದ (ವಿಶೇಷವಾಗಿ ಕರ್ನಾಟಕದ) ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮ ಅರ್ಚಕರೇ ಇಲ್ಲಿ ಪೂಜೆ ಸಲ್ಲಿಸುವ ರಾವಲ್ ಅಥವಾ ಪ್ರಧಾನ ಅರ್ಚಕರಾಗುತ್ತಾರೆ. ಗುರುಲಿಂಗಯ್ಯ ಅವರು ಈ ಪವಿತ್ರ ಪರಂಪರೆಯನ್ನು ಮುನ್ನಡೆಸಿದವರಾಗಿದ್ದಾರೆ.

ಇಂದು ಸ್ವಗ್ರಾಮದಲ್ಲಿ ಕ್ರಿಯಾ ಸಮಾಧಿ

ಗುರುಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಅವರ ಸ್ವಗ್ರಾಮವಾದ ಬೆಳಗಾವಿಯ ಚಿಕ್ಕ ಬಾಗೇವಾಡಿಗೆ ತರಲಾಗಿದೆ. ಇಂದು ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸಕಲ ಗೌರವಗಳೊಂದಿಗೆ ಅವರ ಕ್ರಿಯಾ ಸಮಾಧಿ ನೆರವೇರಲಿದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:38 am, Tue, 18 August 26

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us