ಬೆಂಗಳೂರು, ಜನವರಿ 3: ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ ಜನರ ಮನಗೆದ್ದಿರುವ ನಂದಿನಿ ಬ್ರ್ಯಾಂಡ್ ಇದೀಗ ಮತ್ತೊಂದು ಮೈಲಿಗಲ್ಲು ಬರೆಯಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಕೆಎಂಎಫ್ ಪರಿಚಯಿಸಿದ್ದ ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೇವಲ ಮೂರು ದಿನದಲ್ಲಿ ಬರೋಬ್ಬರಿ 2250 ಮೆಟ್ರಿಕ್ ಟನ್ ಹಿಟ್ಟು ಮಾರಾಟವಾಗಿದೆ. ಸದ್ಯ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ದೋಸೆ ಹಿಟ್ಟಿನ ಮಾರಾಟಕ್ಕೆ ಸಖತ್ ಬೇಡಿಕೆ ಸೃಷ್ಟಿಯಾದ್ದು, ಶೀಘ್ರದಲ್ಲೇ ಇತರೆ ಜಿಲ್ಲೆಗಳಿಗೂ ದೋಸೆ ಹಿಟ್ಟಿನ ವ್ಯಾಪಾರ ವಿಸ್ತರಿಸಲು ಕೆಎಂಎಫ್ ಸಜ್ಜಾಗುತ್ತಿದೆ.
ಸದ್ಯ ಕೆಎಂಎಫ್ ಬೆಂಗಳೂರಿನಲ್ಲಿ ಮಾತ್ರ ಪ್ರಾಯೋಗಿಕವಾಗಿ ದೋಸೆ ಹಿಟ್ಟಿನ ಮಾರಾಟ ಆರಂಭಿಸಿದೆ. ಇದೀಗ ರಾಜಧಾನಿಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದ್ದಂತೆಯೇ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶೀಘ್ರದಲ್ಲೇ ದೋಸೆ-ಇಡ್ಲಿ ಹಿಟ್ಟಿನ ಮಾರಾಟ ಮಾಡಲು ನಿರ್ಧಾರ ಮಾಡಿದೆ. ಇತ್ತ ನಂದಿನಿ ಪರಿಚಯಿಸಿರುವ ದೋಸೆ ಹಿಟ್ಟಿನಲ್ಲಿ ವೇ ಪ್ರೊಟೀನ್ ಕೂಡ ಇರುವುದರಿಂದ ಸದ್ಯ ಜಿಮ್, ಡಯಟ್ ಬಗ್ಗೆ ಗಮನಹರಿಸುವವರು ಕೂಡ ನಂದಿನಿ ಹಿಟ್ಟಿನ ಮೊರೆಹೋಗುತ್ತಿದ್ದಾರೆ.
ಮುಂದಿನ ಒಂದು ವಾರದೊಳಗಾಗಿ ಇತರೆ ಜಿಲ್ಲೆಗಳಲ್ಲೂ ದೋಸೆ, ಇಡ್ಲಿ ಹಿಟ್ಟು ಮಾರಾಟ ಆರಂಭಿಸುವುದಾಗಿ ಕೆಎಂಎಫ್ ಸುಳಿವು ನೀಡಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.
ಸದ್ಯ ಬೆಂಗಳೂರಲ್ಲಿ 450 ಗ್ರಾಂ ಪ್ಯಾಕ್ ದೋಸೆ ಹಿಟ್ಟಿಗೆ 40 ರೂಪಾಯಿ ಹಾಗೂ 900 ಗ್ರಾಂಗೆ 80 ರೂಪಾಯಿ ದರ ನಿಗದಿಪಡಿಸಿರುವ ಕೆಎಂಎಫ್, ಇದೇ ಪ್ರಥಮಬಾರಿಗೆ ದೋಸೆ ಹಿಟ್ಟಿಗೆ ಶೇಕಡ 5 ರಷ್ಟು ವೇ ಪ್ರೊಟೀನ್ ಸೇರಿಸಿ ಜನರಿಗೆ ನೀಡುತ್ತಿದೆ. ಇದರಿಂದಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿದೆ.
ಇದನ್ನೂ ಓದಿ: ಹಾಲು, ಮೊಸರಿನಂತೆ ಮಾರುಕಟ್ಟೆಗೆ ನಂದಿನಿ ಇಡ್ಲಿ, ದೋಸೆ ಹಿಟ್ಟು ಲಗ್ಗೆ, ಬೆಲೆ ಎಷ್ಟು?
ಸದ್ಯ ಈಗಾಗಲೇ ಹಲವು ಉತ್ತಮ ಗುಣಮಟ್ಟದ ಉತ್ಪನ್ನಗಳ ಮೂಲಕ ಜನರ ಮನಗೆದ್ದಿದ್ದ ನಂದಿನಿ, ಇದೀಗ ತನ್ನ ಹೊಸ ಪ್ರಾಡಕ್ಟ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಹೊರಟಿದೆ. ಸದ್ಯ ಜನರ ಮೆಚ್ಚಿನ ಬ್ರ್ಯಾಂಡ್ ಇದೀಗ ಹೊಸ ಮೈಲಿಗಲ್ಲು ಬರೆಯಲು ಹೊರಟಿದ್ದು, ನಂದಿನಿ ದೋಸೆಯ ಸವಿ ಸವಿಯಲು ಇತರ ಜಿಲ್ಲೆಗಳ ಜನರು ಇನ್ನು ಕೆಲವು ದಿನ ಕಾಯಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ