Kolkata Doctor Murder Case: ಸೇವೆ ಸ್ಥಗಿತಗೊಳಿಸಿ ಕರ್ನಾಟಕ ಜೂನಿಯರ್ ವೈದ್ಯರ ಪ್ರತಿಭಟನೆ
Karnataka Doctors Protest: ಕೊಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇತ್ತ ಕರ್ನಾಟಕ ರಾಜ್ಯದ ಜೂನಿಯರ್ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾದರೆ, ಸೀನಿಯರ್ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಬೆಂಗಳೂರು, ಆಗಸ್ಟ್.12: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯೆ ವಿದ್ಯಾರ್ಥಿ ಮೇಲಿನ ಅತ್ಯಾಚಾರ, ಹತ್ಯೆ ಕೇಸ್ಗೆ (Kolkata Doctor Rape and Murder) ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ವಿರುದ್ಧ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಪ್ರತಿಭಟನೆಗೆ ಕರೆ ನೀಡಿದ್ದು ಇಂದಿನಿಂದ ದೇಶಾದ್ಯಂತ ವೈದ್ಯರು ಪ್ರತಿಭಟನೆಗೆ ತಿಳಿದಿದ್ದಾರೆ. ಇನ್ನು ಕರ್ನಾಟಕದಲ್ಲೂ ಜೂನಿಯರ್ ವೈದ್ಯರು (Junior Doctor Network) ಸೇವೆ ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದು ಇತ್ತ ಸೀನಿಯರ್ ವೈದ್ಯರು ಕಪ್ಪು ಪಟ್ಟಿ ಕಟ್ಟಿಕೊಂಡು ರೋಗಿಗಳ ಚಿಕಿತ್ಸೆ ಮುಂದುವರೆಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜೂನಿಯರ್ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ತುರ್ತು ಸೇವೆಯಲ್ಲಿ ಕೊಂಚ ವ್ಯತ್ಯಯವಾಗಿದೆ. ಸದ್ಯ ಸೀನಿಯರ್ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು ಆಸ್ಪತ್ರೆಗೆ ಹಾಜರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿ ದಿನ ಆಸ್ಪತ್ರೆಗೆ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಎಲ್ಲಾ ವೈದ್ಯರು ಪ್ರತಿಭಟನೆಗೆ ಇಳಿಯುವುದರಿಂದ ರೋಗಿಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ವೈದ್ಯರು ಸದ್ಯ ಪ್ರತಿಭಟನೆ ಬಗ್ಗೆ ಸಭೆ ನಡೆಸಿ ಚರ್ಚಿಸಿ ಪ್ರತಿಭಟನೆ ಕೈಗೊಳ್ಳಲಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತೀಯ ವೈದ್ಯಕೀಯ ಸಂಘದ (IMA) ಕರ್ನಾಟಕ ಘಟಕದ ಅಧ್ಯಕ್ಷರಾದ ಡಾ. ಶ್ರೀನಿವಾಸ್ ಎಸ್., ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಘಟನೆ ತುಂಬಾ ದುಃಖ ತಂದಿದೆ. ಘಟನೆಗೆ ನಮ್ಮ ಖಂಡನೆ ಇದೆ. ಈಗಾಗಲೇ ಜೂನಿಯರ್ ಡಾಕ್ಟರ್ಸ್ ಪ್ರತಿಭಟನೆ ನಡೆಸುತ್ತಿದ್ದಾರೆ. ಸೀನಿಯರ್ ಡಾಕ್ಟರ್ ಕೂಡ ಪ್ರತಿಭಟನೆಗೆ ತಿಳಿದರೆ ರೋಗಿಗಳ ಚಿಕಿತ್ಸೆಗೆ ಸಮಸ್ಯೆ ಆಗುತ್ತೆ, ಹೀಗಾಗಿ ನಾವು ಸಭೆ ನಡೆಸಿ ಎರಡು-ಮೂರು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ರಾಜ್ಯದಲ್ಲಿ ಡೆಂಗ್ಯೂ ಸೇರಿದಂತೆ ನಾನಾ ರೋಗ ಸಮಸ್ಯೆಗಳು ತಾಂಡವವಾಡುತ್ತಿದೆ. ಇದೆಲ್ಲವನ್ನೂ ನೋಡಿಕೊಂಡು ತೀರ್ಮಾನ ಮಾಡಲಾಗುತ್ತೆ ಎಂದರು.
ಏನಿದು ಪ್ರಕರಣ?
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿಯೇ ಸ್ನಾತಕೋತ್ತರ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಪ್ರಾಥಮಿಕ ಶವಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಸ್ನಾತಕೋತ್ತರ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಕಿರಿಯ ವೈದ್ಯೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗ್ಗೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಕೆಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು.
ಶವಪರೀಕ್ಷೆಯಲ್ಲಿ ಆಕೆಯ ಕೈಕಾಲು, ಬಾಯಿ ಮತ್ತು ಕಣ್ಣುಗಳಿಂದ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ. ದೇಹದ ಹಲವೆಡೆ ಗಾಯಗಳೂ ಕಂಡುಬಂದಿವೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಬ್ಲೂಟೂತ್ ಆಧಾರದ ಮೇಲೆ ಪೊಲೀಸರು ಈಗಾಗಲೇ ಓರ್ವನನ್ನು ಬಂಧಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:54 am, Mon, 12 August 24