ಕೆಪಿಎಸ್‌ಸಿ ನೇಮಕಾತಿ ಹಗರಣ: ಎಸ್‌ಐಟಿ ಅಧಿಕಾರಿಗಳ ಆಯ್ಕೆಗೆ ಆಕ್ಷೇಪ; ನ.2ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಎಸ್‌ಐಟಿ ರಚನೆ ಕುರಿತು ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಸರ್ಕಾರ ಸೂಚಿಸಿದ ಅಧಿಕಾರಿಗಳ ಬಗ್ಗೆ ಅರ್ಜಿದಾರರು ಆಕ್ಷೇಪ ಎತ್ತಿದ್ದು, ಎಸ್‌ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಲಾಗಿದೆ ಎಂದು ಎಜಿ ಮಾಹಿತಿ ನೀಡಿದರು. ಹೈಕೋರ್ಟ್ ಪೀಠ ನವೆಂಬರ್ 2ಕ್ಕೆ ಆದೇಶ ಕಾಯ್ದಿರಿಸಿದೆ.

ಕೆಪಿಎಸ್‌ಸಿ ನೇಮಕಾತಿ ಹಗರಣ: ಎಸ್‌ಐಟಿ ಅಧಿಕಾರಿಗಳ ಆಯ್ಕೆಗೆ ಆಕ್ಷೇಪ; ನ.2ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಹೈಕೋರ್ಟ್, ಕೆಪಿಎಸ್‌ಸಿ
Edited By:

Updated on: Oct 30, 2026 | 4:10 PM

ಬೆಂಗಳೂರು, ಅಕ್ಟೋಬರ್​​ 30: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ನಡೆದಿರುವ ಹಗರಣ ದೊಡ್ಡ ಸದ್ದು ಮಾಡಿದೆ. ಕೆಪಿಎಸ್‌ಸಿ ಹಗರಣಗಳಲ್ಲಿ ಸ್ವತಹ ಅದರ ಮಾಜಿ ಅಧ್ಯಕ್ಷರೇ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾರೆ. ಸದ್ಯ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡುವ ವಿಚಾರವಾಗಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಿತು. ಈ ವೇಳೆ ಎಸ್‌ಐಟಿಗೆ ನೇಮಕ ಮಾಡಲು ಸರ್ಕಾರ ಸೂಚಿಸಿರುವ ಅಧಿಕಾರಿಗಳ ಬಗ್ಗೆ ಅರ್ಜಿದಾರರ ಪರ ವಕೀಲ ಗಿರೀಶ್ ಭಾರದ್ವಾಜ್ ಆಕ್ಷೇಪಣೆ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದಿಂದ ವಿಚಾರಣೆ

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಿಂದ ವಿಚಾರಣೆ ಮಾಡಲಾಗಿದ್ದು, ‘ಎಸ್‌ಐಟಿಗೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡಲಾಗಿದೆ’ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಈ ವೇಳೆ ‘ರಾಜ್ಯದಲ್ಲಿ ಎಷ್ಟು ಮಂದಿ ಎಡಿಜಿಪಿ ದರ್ಜೆಯ ಅಧಿಕಾರಿಗಳಿದ್ದಾರೆ’ ಎಂದು ಹೈಕೋರ್ಟ್ ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿದೆ.

ಇದನ್ನೂ ಓದಿ: ಕೆಪಿಎಸ್​ಸಿ ಪಶುವೈದ್ಯರ ನೇಮಕಾತಿ ಹಗರಣ: ವರ್ಷದಲ್ಲಿ ₹10 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದ್ದ ಶಿವಶಂಕರಪ್ಪ

ಇನ್ನು ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್, ‘ರಾಜ್ಯದಲ್ಲಿ 16 ಮಂದಿ ಎಡಿಜಿಪಿ ದರ್ಜೆಯ ಅಧಿಕಾರಿಗಳಿದ್ದಾರೆ’ ಎಂದು ತಿಳಿಸಿದರು. ‘ಸುಪ್ರೀಂ ಕೋರ್ಟ್‌ನ ಆದೇಶದಂತೆ ಸರ್ಕಾರ ನಾಲ್ವರು ಅಧಿಕಾರಿಗಳನ್ನು ಸೂಚಿಸಿದ್ದು, ಈ ಪೈಕಿ ಇಬ್ಬರು ಅಧಿಕಾರಿಗಳ ಬಗ್ಗೆ ಅರ್ಜಿದಾರರು ಸಹಮತ ವ್ಯಕ್ತಪಡಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ನವೆಂಬರ್ 2ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್ 

ಎಸ್‌ಐಟಿ ರಚನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಆಕ್ಷೇಪಣೆಗಳು ಹಾಗೂ ವಾದಗಳನ್ನು ಆಲಿಸಿದ ಹೈಕೋರ್ಟ್, ಈ ಪ್ರಕರಣದ ಆದೇಶವನ್ನು ನವೆಂಬರ್ 2ಕ್ಕೆ ಕಾಯ್ದಿರಿಸಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಗ್ ಶಾಕ್: 362 KAS ಅಧಿಕಾರಿಗಳ ಆಯ್ಕೆ ಪಟ್ಟಿ ಊರ್ಜಿತಗೊಳಿಸಿದ್ದ ಕಾಯ್ದೆ ರದ್ದು

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲೋಕ್ ಕುಮಾರ್ ನೇತೃತ್ವದ ಎಸ್‌ಐಟಿ ತನಿಖೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಮಾರ್ಪಡಿಸಿದೆ. ಅಲೋಕ್ ಕುಮಾರ್ ಸೇರಿದಂತೆ ಎಸ್‌ಐಟಿಯ ಇಬ್ಬರು ಅಧಿಕಾರಿಗಳ ಬದಲಿಗೆ ಪರ್ಯಾಯ ಅಧಿಕಾರಿಗಳನ್ನು ನೇಮಿಸುವಂತೆ ಹೈಕೋರ್ಟ್​ಗೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us