KPSC Scam: ‘ನಾನ್ MLA ಆಗ್ತೀನಿ, ಪೇಪರ್ ಡೀಲ್ ಮಾಡಿ ದುಡ್ಡು ಮಾಡೋಣ’ ಎಂದಿದ್ದ ಬಸವರಾಜ್ !

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ ಕನ್ನಾಳೆಯನ್ನು CID ಬಂಧಿಸಿದೆ. 29 ಅಭ್ಯರ್ಥಿಗಳಿಗೆ ಕೋಟ್ಯಂತರ ರೂಪಾಯಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿ, ರೆಸಾರ್ಟ್‌ಗಳಲ್ಲಿ ಪರೀಕ್ಷೆ ಬರೆಸಲಾಗಿತ್ತು. ಇದೀಗ 10 ಅಭ್ಯರ್ಥಿಗಳು ತಮ್ಮ ತಪ್ಪೊಪ್ಪಿಕೊಂಡು ಅಪ್ರೂವರ್ ಆಗಲು ಮುಂದಾಗಿದ್ದಾರೆ. CID ತನ್ನ ರಿಮಾಂಡ್ ಅರ್ಜಿಯಲ್ಲಿ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ರನ್ನು A1 ಹಾಗೂ ಜ್ಞಾನೇಂದ್ರ ಅವರನ್ನು A5 ಎಂದು ಉಲ್ಲೇಖಿಸಿದೆ.

KPSC Scam: ನಾನ್ MLA ಆಗ್ತೀನಿ, ಪೇಪರ್ ಡೀಲ್ ಮಾಡಿ ದುಡ್ಡು ಮಾಡೋಣ ಎಂದಿದ್ದ ಬಸವರಾಜ್ !
'ನಾನ್ MLA ಆಗ್ತೀನಿ, ಪೇಪರ್ ಡೀಲ್ ಮಾಡಿ ದುಡ್ಡು ಮಾಡೋಣ' ಎಂದಿದ್ದ ಬಸವರಾಜ್ !
Edited By:

Updated on: Sep 01, 2026 | 12:24 PM

ಮುಖ್ಯಾಂಶಗಳು

  • KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಬಂಧನ.
  • 29 ಅಭ್ಯರ್ಥಿಗಳಿಗೆ 80 ಲಕ್ಷ ರೂ.ವರೆಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಬಸವರಾಜ್.
  • ರೆಸಾರ್ಟ್‌ಗಳಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು; ತಪ್ಪೊಪ್ಪಿಕೊಂಡು ಅಪ್ರೂವರ್ ಆಗಲು ಸಿದ್ಧ.

ಬೆಂಗಳೂರು, ಸೆಪ್ಟೆಂಬರ್ 01: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಬೃಹತ್ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ (CID) ತೀವ್ರಗೊಳಿಸಿದ್ದು, ಸ್ಫೋಟಕ ವಿಚಾರಗಳು ಹೊರಬಿದ್ದಿವೆ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ (A5) ಹಾಗೂ ಮಧ್ಯವರ್ತಿ ಬಸವರಾಜ ಕನ್ನಾಳೆಯನ್ನು ಸಿಐಡಿ ಬಂಧಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ.

ಸ್ನೇಹದ ದುರ್ಬಳಕೆ ಹಾಗೂ ಕೋಟಿ ಕೋಟಿ ಡೀಲ್

ಬೀದರ್‌ನ ಭಾಲ್ಕಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಿಂದಲೂ ಜ್ಞಾನೇಂದ್ರ ಹಾಗೂ ಬಸವರಾಜ್ ಕನ್ನಾಳೆ ನಡುವೆ ಆಪ್ತ ಸ್ನೇಹವಿತ್ತು. ‘ನಾನು ಮುಂದೆ ರಾಜಕೀಯ ನಾಯಕರ ನಂಟಿನಿಂದ ಎಂಎಲ್‌ಎ ಆಗುತ್ತೇನೆ, ನಮಗೆ ಹಣದ ಅಗತ್ಯವಿದೆ’ ಎಂದು ಆಮಿಷವೊಡ್ಡಿದ್ದ ಬಸವರಾಜ್, ಜ್ಞಾನೇಂದ್ರನಿಂದ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡಿದ್ದ. ಬಳಿಕ, ಪ್ರತಿ ಹುದ್ದೆಗೆ 40 ಲಕ್ಷದಿಂದ 80 ಲಕ್ಷ ರೂ.ವರೆಗೆ ಬೇಡಿಕೆಯಿಟ್ಟು 29ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಮುಂಗಡ ಹಣ ವಸೂಲಿ ಮಾಡಿ ಪೇಪರ್ ಲೀಕ್ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ರೆಸಾರ್ಟ್‌ಗಳಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು

ಬೆಂಗಳೂರಿನ ರಾಜಾಜಿನಗರದ ಕಚೇರಿಯೊಂದರಲ್ಲಿ ಡೀಲ್ ಕುದುರಿಸಿ, ವಾಟ್ಸಾಪ್ ಮೂಲಕ ಮುಂಗಡ ಹಣ ಪಡೆದು ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ಸಾಮಾನ್ಯ ಪರೀಕ್ಷಾ ಕೇಂದ್ರಗಳ ಬದಲಿಗೆ ಬೆಂಗಳೂರು, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿ ಅಭ್ಯರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಲಾಗಿತ್ತು ಎಂಬ ಸತ್ಯ ತನಿಖೆಯಲ್ಲಿ ಹೊರಬಿದ್ದಿದೆ.

ಸಾಕ್ಷಿ ಹೇಳಲು ಅಭ್ಯರ್ಥಿಗಳು ಮುಂದು

ಪ್ರಕರಣದಲ್ಲಿ ಸಿಐಡಿ ವಿಚಾರಣೆ ಚುರುಕುಗೊಳಿಸುತ್ತಿದ್ದಂತೆ, ಸುಹೇಲ್ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ತಮ್ಮ ತಪ್ಪೊಪ್ಪಿಗೆ ಹೇಳಿಕೆ ನೀಡಿ ‘ಅಪ್ರೂವರ್’ (ಸಾಕ್ಷಿ) ಆಗಲು ಮುಂದಾಗಿದ್ದಾರೆ. ಈಗಾಗಲೇ 6 ಅಭ್ಯರ್ಥಿಗಳ ಹೇಳಿಕೆ ದಾಖಲಾಗಿದ್ದು, ಇವರನ್ನು ಅಪ್ರೂವರ್ ಮಾಡಿಕೊಳ್ಳುವ ಬಗ್ಗೆ ಸಿಐಡಿ ಕಾನೂನು ತಜ್ಞರ ಸಲಹೆ ಪಡೆಯುತ್ತಿದೆ.

ಇದನ್ನೂ ಓದಿ KPSC Recruitment Scam: ಸಿಐಡಿ ಮುಂದೆ ತಪ್ಪೊಪ್ಪಿಕೊಂಡ 6 ಅಭ್ಯರ್ಥಿಗಳು!

ಸಿಐಡಿ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು A1, ಆಯೋಗದ ಸದಸ್ಯರನ್ನು A2, ಅಧಿಕಾರಿಗಳನ್ನು A3, 29 ಅಭ್ಯರ್ಥಿಗಳನ್ನು A4 ಹಾಗೂ ಜ್ಞಾನೇಂದ್ರ ಕುಮಾರ್ ಅವರನ್ನು A5 ಎಂದು ಉಲ್ಲೇಖಿಸಲಾಗಿದೆ. ಸದ್ಯ ಬ್ಯಾಂಕ್ ಖಾತೆಗಳು, ಮೊಬೈಲ್ ಸಾಧನಗಳ ಡಿಜಿಟಲ್ ಪುರಾವೆಗಳ ಪರಿಶೀಲನೆ ನಡೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us