KPSC Recruitment Scam: ಸಿಐಡಿ ಮುಂದೆ ತಪ್ಪೊಪ್ಪಿಕೊಂಡ 6 ಅಭ್ಯರ್ಥಿಗಳು!
KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸುಹೇಲ್ ಸೇರಿದಂತೆ 6 ಅಭ್ಯರ್ಥಿಗಳು ಸಿಐಡಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. 40 ಲಕ್ಷ ರೂ.ಗೆ ಡೀಲ್ ನಡೆಸಿ ಬೆಂಗಳೂರು, ತುಮಕೂರು ಹಾಗೂ ಆಂಧ್ರದ ರೆಸಾರ್ಟ್‌ಗಳಲ್ಲಿ ಪರೀಕ್ಷೆ ಬರೆದಿರುವುದಾಗಿ ಸ್ಫೋಟಕ ಮಾಹಿತಿ ನೀಡಿದ್ದಾರೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಸಿಐಡಿ ತನಿಖೆ ತೀವ್ರಗೊಂಡಿದೆ.
ಬೆಂಗಳೂರು, ಸೆಪ್ಟೆಂಬರ್ 01: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲಿ ಸಿಐಡಿ (CID) ಅಧಿಕಾರಿಗಳಿಗೆ ಮಹತ್ವದ ಯಶಸ್ಸು ಸಿಕ್ಕಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಿಖೆಯ ವೇಳೆ ಸುಹೇಲ್ ಸೇರಿದಂತೆ ಒಟ್ಟು 6 ಜನ ಅಭ್ಯರ್ಥಿಗಳು ಹಣ ನೀಡಿ ಅಕ್ರಮವಾಗಿ ಪರೀಕ್ಷೆ ಬರೆದಿರುವುದಾಗಿ ಸಿಐಡಿ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಸುಮಾರು 400 ಹುದ್ದೆಗಳಿಗೆ ನಡೆದಿದ್ದ ಈ ನೇಮಕಾತಿ ಪರೀಕ್ಷೆಯಲ್ಲಿ, ಒಂದು ಹುದ್ದೆಗೆ ಬರೋಬ್ಬರಿ 40 ಲಕ್ಷ ರೂಪಾಯಿಗೆ ಡೀಲ್ ಕುದುರಿಸಲಾಗಿತ್ತು. ಬೆಂಗಳೂರಿನ ರಾಜಾಜಿನಗರದಲ್ಲಿದ್ದ ಕಚೇರಿಯೊಂದರಲ್ಲಿ ಈ ಡೀಲ್ ನಡೆದಿದ್ದು, ವಾಟ್ಸಾಪ್ ಮೂಲಕ ವ್ಯವಹಾರ ನಡೆಸಿ ಮುಂಗಡವಾಗಿ 20 ಲಕ್ಷ ರೂ. ಹಣ ಪಾವತಿಸಲಾಗಿತ್ತು ಎಂದು ಅಭ್ಯರ್ಥಿ ಸುಹೇಲ್ ಬಾಯಿಬಿಟ್ಟಿದ್ದಾನೆ.
ಪರೀಕ್ಷೆಗೂ ಮುಂಚೆಯೇ ಅಭ್ಯರ್ಥಿಗಳ ಕೈಗೆ ಪ್ರಶ್ನೆಪತ್ರಿಕೆ ತಲುಪಿತ್ತು. ಅಭ್ಯರ್ಥಿಗಳು ಸಾಮಾನ್ಯ ಪರೀಕ್ಷಾ ಕೇಂದ್ರಗಳ ಬದಲಾಗಿ ಬೆಂಗಳೂರಿನ ರೆಸಾರ್ಟ್, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿ ಕುಳಿತು ಪರೀಕ್ಷೆ ಬರೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಸಮಗ್ರ ಅಕ್ರಮ ಜಾಲದಲ್ಲಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಅಭ್ಯರ್ಥಿಗಳು ಸಿಐಡಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಯಾರಿಗೆ ಎಷ್ಟು ಹಣ ನೀಡಲಾಗಿದೆ, ಡೀಲ್ ಎಲ್ಲೆಲ್ಲಿ ನಡೆದಿದೆ ಎಂಬ ಸ್ಪೋಟಕ ವಿವರಗಳು ಲಭ್ಯವಾಗಿದ್ದು, ಸಿಐಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 01, 2026 09:14 AM
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?

