ಬಿಎಂಟಿಸಿ ಎಂಡಿ ಸತ್ಯವತಿ ವಿರುದ್ಧ ಕೆಎಸ್​ಆರ್​​ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘಟನೆ ಅಸಮಾಧಾನ

ಬೆಂಗಳೂರು ಮಹಾನಗರ ಸಾರಿಗೆಯ ವ್ಯಪಸ್ಥಾಪಕ ನಿರ್ದೇಶಕಿ ಸತ್ಯವತಿ ಅವರ ಆಡಳಿತ ವೈಖರಿ ಖಂಡಿಸಿ ಕೆಎಸ್​ಆರ್​​ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘಟನೆ ಅಧ್ಯಕ್ಷ ಅನಂತಸುಬ್ಬರಾವ್ ಬಹಿರಂಗ ಪತ್ರ ಬರೆದಿದ್ದಾರೆ.

ಬಿಎಂಟಿಸಿ ಎಂಡಿ ಸತ್ಯವತಿ ವಿರುದ್ಧ ಕೆಎಸ್​ಆರ್​​ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘಟನೆ ಅಸಮಾಧಾನ
ಪತ್ರ
Follow us
Kiran Surya
| Updated By: ವಿವೇಕ ಬಿರಾದಾರ

Updated on: Dec 25, 2023 | 12:55 PM

ಬೆಂಗಳೂರು, ಡಿಸೆಂಬರ್​ 25: ಬೆಂಗಳೂರು ಮಹಾನಗರ ಸಾರಿಗೆಯ (BMTC) ವ್ಯಪಸ್ಥಾಪಕ ನಿರ್ದೇಶಕಿ ಸತ್ಯವತಿ ಅವರ ಆಡಳಿತ ವೈಖರಿ ಖಂಡಿಸಿ ಕೆಎಸ್​ಆರ್​​ಟಿಸಿ (KSRTC) ಸಿಬ್ಬಂದಿ ಮತ್ತು ನೌಕರರ ಸಂಘಟನೆ ಅಧ್ಯಕ್ಷ ಅನಂತಸುಬ್ಬರಾವ್ ಬಹಿರಂಗ ಪತ್ರ ಬರೆದಿದ್ದಾರೆ. ನೌಕರರ ಸಮಸ್ಯೆಗಳಿಗೆ ಎಂಡಿ ಸತ್ಯವತಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಎಂಡಿಯಾಗಿ ಬಂದ ಬಳಿಕ ಬಿಎಂಟಿಸಿಯಲ್ಲಿ ದರ್ಬಾರ್ ಮಾಡುತ್ತಿದ್ದಾರೆ. ಅಧಿಕಾರಿ ವರ್ಗ ಬಿಟ್ಟು ಬೇರೆ ಸಿಬ್ಬಂದಿಯನ್ನು ಕಚೇರಿಗೆ ಸೇರಿಸುತ್ತಿಲ್ಲ. ಡಿಪೋ ಮ್ಯಾನೇಜರ್​​​​, ಇತರೆ ಅಧಿಕಾರಿಗಳನ್ನು ನಿಂದಿಸುತ್ತಿದ್ದಾರೆ. ಇವರ ವರ್ತನೆಗೆ ನಮ್ಮ ಧಿಕ್ಕಾರವಿದೆ ಅಂತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ಏನಿದೆ

ದಿನಾಂಕ 26/12/2023 ಬೆಳಿಗ್ಗೆ 11.00 ಗಂಟೆಗೆ ವಿಧಾನ ಸೌಧದ ಪೂರ್ವದ್ವಾರದ ಮುಂಭಾಗ ನೂರು ವಿದ್ಯುತ್ ಚಾಲಿತ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಾಜರಾಗಲು ನಮ್ಮ ಫೆಡರೇಷನ್‌ಗೆ ತಾವು ಆಹ್ವಾನ ಪತ್ರಿಕೆ ಕಳುಹಿಸಿದ್ದೀರಿ, ಅದಕ್ಕಾಗಿ ತಮಗೆ ಧನ್ಯವಾದಗಳು. ಈ ಕಾರ್ಯಕ್ರಮ ಯಶಸ್ವಿಯಾಗಲಿ ಹಾಗೂ ಬಿ.ಎಂ.ಟಿ.ಸಿ, ತನ್ನ ಚಟುವಟಿಕೆಗಳನ್ನು ಇನ್ನೂ ಹೆಚ್ಚಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ಕೊಡಲು ಮುಂದಾಗಲಿ ಎಂದು ನಾವು ಹಾರೈಸುತ್ತೇವೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಹಾಗೂ ಹಲವಾರು ಗಣ್ಯರು ಭಾಗವಹಿಸುವುದು ಬಹಳ ಸಂತೋಷದ ವಿಷಯವಾಗಿದೆ. ಈ ಗಣ್ಯರೆಲ್ಲರಿಗೂ ನಮ್ಮ ನಮನಗಳು.

ಆದರೆ ನಮ್ಮ ಫೆಡರೇಷನ್ ವತಿಯಿಂದ ಕೆಳಕಂಡ ಕಾರಣಗಳಿಂದ ನಾವು ಭಾಗವಹಿಸುತ್ತಿಲ್ಲ. ಮೊದಲನೆಯದಾಗಿ ತಾವು ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ತೆಗೆದುಕೊಂಡ ನಂತರ ಈ ವರೆಗೂ ಒಮ್ಮೆಯಾದರೂ ಕಾರ್ಮಿಕ ಸಂಘಟನೆಗಳ ಜೊತೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ. ಸಂಘ ವಿರೋಧಿಯಾದ ನಿಮಗೆ ನಾವು ಬೇಡದಿರುವುದರಿಂದ ನಿಮ್ಮ ಕಾರ್ಯಕ್ರಮಗಳೂ ನಮಗೆ ಬೇಡ.

ಇದನ್ನೂ ಓದಿ: BMTC: ನೋಡಿ ಸ್ವಾಮಿ ನಿಮ್ಮ ಸೇವೆಗೂ ಮುನ್ನ ನಾವು ರೆಡಿಯಾಗೋದು ಹೀಗೆ

ಕಾರ್ಯಕ್ರಮಕ್ಕೆ ತಾವು, ನಿರ್ದೇಶಕರು (ಭ&ಜಾ) ಹಾಗೂ ಬೆಂ.ಮ.ಸಾ.ಸಂಸ್ಥೆ ಸಿಬ್ಬಂದಿ ಹಾಗೂ ಆಡಳಿತ ವರ್ಗದ ಪರವಾಗಿ ಸ್ವಾಗತ ಕೋರಿದ್ದೀರಿ. ನೀವು ನಿಮ್ಮ ಕಚೇರಿಗೆ ಯಾವುದೇ ನೌಕರರನ್ನು ಒಳಗೆ ಕರೆದು ಅವರ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಅವಕಾಶ ಕೊಟ್ಟಿಲ್ಲ. ಈವರೆಗೆ ಕಾರ್ಮಿಕ ಸಂಘಟನೆಗಳೊಡನೆ ಮಾತುಕತೆ ನಡೆಸುವುದಾಗಲಿ ಅಥವಾ ನಾವು ಬರೆದಿರುವ ಪತ್ರಗಳಿಗೆ ಜವಾಬು ಕೊಡುವ ಅಭ್ಯಾಸವಾಗಲಿ ನಿಮ್ಮಲ್ಲಿಲ್ಲ.

ಬಿ.ಎಂ.ಟಿ.ಸಿ.ಗೆ 25 ವರ್ಷಗಳು ಪೂರೈಸಿದ ಸಂದರ್ಭದಲ್ಲಿ ನಮಗೆ ಒಂದು ಪತ್ರವನ್ನು ಕಳಿಸಿದ್ದಿರಿ. ಅದರ ಎರಡನೇ ಪ್ಯಾರಾದಲ್ಲಿ “ಈ ಸುದೀರ್ಘ ಪಯಣದಲ್ಲಿ ಅವಿಭಾಜ್ಯ ಅಂಗವಾಗಿ ಸಂಸ್ಥೆಯನ್ನು ಮತ್ತು ಕಾರ್ಮಿಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದರಲ್ಲಿ ಕಾರ್ಮಿಕ ಸಂಘಟನೆಗಳ ಪಾತ್ರ ಹಿರಿದಿದೆ. ಈ ನಿಟ್ಟಿನಲ್ಲಿ ಸದರಿ ಸಮಾರಂಭಕ್ಕೆ ತಾವು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ” ಎಂದು ಬರೆದಿದ್ದಿರಿ. ಆದರೆ ನಿಮ್ಮ ಆಡಳಿತ ವೈಖರಿಯಲ್ಲಿ ಕಾರ್ಮಿಕರಿಗಾಲಿ ಅವರ ಸಂಘಟನೆಗಳಿಗಾಲಿ ಗೌರವವನ್ನೂ ಕೊಟ್ಟಿಲ್ಲ. ಹಾಗೂ ನಿಮಗೆ ಕಾರ್ಮಿಕ ಸಂಘಗಳೊಡನೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿ ಕೈಗಾರಿಕಾ ಶಾಂತಿ ಕಾಪಾಡಬೇಕೆನ್ನುವ ಮನೋಭಾವನೆ ಇಲ್ಲ ಎನ್ನುವುದು ನಮ್ಮ ಅನುಭವವಾಗಿದೆ. ಬಹುಶಃ ಈ ಹಿಂದಿನ ಪತ್ರವನ್ನು ಬೇರೆ ಯಾರೋ ಬರೆದು ನೀವು ಸಹಿ ಮಾಡಿದಂತಿದೆ.

ನೀವು ಎಂಡಿಯಾಗಿ ಬಂದ ನಂತರ ನಿಮ್ಮ ಆಡಳಿತ ದರ್ಪವನ್ನು ಬಿಟ್ಟು ನೌಕರರ ಬೇರಾವುದೇ ಸಮಸ್ಯೆಗಳಿಗೂ ಸ್ಪಂದಿಸಿಲ್ಲ. ನಿಮ್ಮ ಕೆಲವು ಸಮೀಪವರ್ತಿ ಅಧಿಕಾರಿಗಳನ್ನು ಬಿಟ್ಟರೆಬೇರೆಲ್ಲರೂ ಆಸಮಾಧಾನದಿಂದ ನಿಮ್ಮ ಕಾರ್ಯಕ್ಷಮತೆಯ ಬಗ್ಗೆ ಕುದಿಯುತ್ತಿದ್ದಾರೆ. ಡಿಪೋ ಮ್ಯಾನೇಜರ್​ಗಳಿಂದ ಹಿಡಿದು ಎಲ್ಲ ಅಧಿಕಾರಿಗಳೂರು ಮನಸೋಇಚ್ಚೆ ಕೀಳು ಮತ್ತು ಕೆಟ್ಟ ಭಾಷೆಯಲ್ಲಿ ನೀವು ಸಂಬೋಧಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಿಮ್ಮ ಇಂತಹ ವರ್ತನೆಗೆ ನಮ್ಮ ಧಿಕ್ಕಾರವಿರಲಿ!

ಸಂವಿಧಾನದತ್ತವಾಗಿ ಹಾಗೂ 1926ರಲ್ಲೇ ಬಂದಂತಹ ಇಂಡಿಯನ್​ ಟ್ರೇಡ್​ ಯೂನಿಯನ್ ಆಕ್ಟ್ ಪ್ರಕಾರ ನಮಗೆ ಕಾರ್ಮಿಕ ಸಂಘಗಳನ್ನು ರಚಿಸುವ ಹಕ್ಕಿದೆ. ನಮ್ಮ ಕರಪತ್ರವನ್ನು ನೌಕರರ ನಡುವೆ ಹಂಚಿದ್ದಕ್ಕಾಗಿ ರೆಗ್ಯುಲೇಷನ್ 23ರ ಪ್ರಕಾರ ವಿಚಾರಣೆ ನಡೆಸುತ್ತಿದ್ದೀರಿ. ಮಾಧ್ಯಮದೊಂದಿಗೆ ನ್ಯಾಯವಾಗಿ ಮಾತನಾಡಿದ್ದಕ್ಕೆ ಟ್ರೇಡ್ ಯೂನಿಯನ್ ಕಾರ್ಯಕರ್ತರನ್ನು ಅಮಾನತಿನಲ್ಲಿ ಇಟ್ಟಿದ್ದೀರಿ. ಕೈಗಾರಿಕಾ ಒಪ್ಪಂದಗಳನ್ನು ಉಲ್ಲಂಘಿಸಿ ಸೇಡಿನ ಮನೋಭಾವದಿಂದ ನೌಕರರನ್ನು ಕೆಲಸದಿಂದ ಮಾಡುತ್ತಿದ್ದೀರಿ. ಒಟ್ಟಾರೆ, ಬಿಎಂಟಿಸಿಯಲ್ಲಿ ಕೈಗಾರಿಕಾ ಬಾಂಧವ್ಯವನ್ನೇ ನಾಶ ಮಾಡುವ ಧೂಮಕೇತುವಿನಂತೆ ಕಾಣಿಸುತ್ತಿದ್ದೀರಿ, ಆದರೂ ನಿಮ್ಮಲ್ಲಿ ತಪ್ಪುಗಳನ್ನು ಕಲುಹಿಡಿಯುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ.

ನಿಮ್ಮ ಹಿನ್ನೆಲೆಯನ್ನು ಗೊತ್ತಿರುವ ಸರ್ಕಾರ ಶ್ರಮಸಾಂದ್ರವಿರುವ ಮತ್ತು ಜನಪರವಾದ ಸಾರಿಗೆ ನಿಗಮದಂತಹ ಸೇವಾಸಂಸ್ಥೆಯ ಜವಾಬ್ದಾರಿಯನ್ನು ನಿಮಗೆ ಕೊಡಬಾರದಿತ್ತು. ಈಗಲೂ ಕೂಡ ಸರ್ಕಾರ ಬಿ.ಎಂ.ಟಿ.ಸಿ.ಯ ಕೈಗಾರಿಕಾ ಬಾಂಧವ್ಯವನ್ನು ಸರಿಪಡಿಸಲು ಮಾನವೀಯತೆ ಮತ್ತು ಹೃದಯವಂತಿಕೆ ಇರುವ ಒಬ್ಬ ಅಧಿಕಾರಿಯನ್ನು ನಿಮ್ಮ ಸ್ಥಳಕ್ಕೆ ಹಾಕಿ ಹಳಿ ತಪ್ಪಿರುವ ಬಿಎಂಟಿಸಿಯನ್ನು ಸರಿಪಡಿಸಬೇಕೆಂದು ನಾವು ಸರ್ಕಾರಕ್ಕೆ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ