AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಚಿರತೆ ಓಡಾಟ: ಭಯದಲ್ಲಿ ಮನೆಯಿಂದ ಹೊರಬರದ ಜನ

ಬೆಂಗಳೂರಿನ ಕೆಂಗೇರಿ ಸಮೀಪದ ಕೆಂಪೇಗೌಡ ಲೇಔಟ್ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಮತ್ತೆ ಭಯ ಶುರುವಾಗಿದೆ. ಸಿಸಿಟಿವಿಗಳಲ್ಲಿ ಚಿರತೆ ಓಡಾಟ ಪತ್ತೆಯಾಗಿದ್ದು, ಹತ್ತಾರು ಕುರಿ, ಮೇಕೆ, ಹಸುಗಳ ಮೇಲೆ ದಾಳಿ ನಡೆಸಿ ಆತಂಕ ಹೆಚ್ಚಿಸಿದೆ. ದೈನಂದಿನ ಕೆಲಸಗಳಿಗೂ ಹೊರಬರಲಾಗದೆ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಬೆಂಗಳೂರಿನಲ್ಲಿ ಚಿರತೆ ಓಡಾಟ: ಭಯದಲ್ಲಿ ಮನೆಯಿಂದ ಹೊರಬರದ ಜನ
ಚಿರತೆ ಓಡಾಟ
ಗಂಗಾಧರ​ ಬ. ಸಾಬೋಜಿ
|

Updated on:Oct 14, 2025 | 5:12 PM

Share

ಬೆಂಗಳೂರು, ಅಕ್ಟೋಬರ್​ 14: ಸುಮಾರು ದಿನಗಳ ಬಳಿಕ ಸಿಲಿಕಾನ್​​ ಸಿಟಿ (bangaluru) ಜನರಿಗೆ ಅದೊಂದು ಭಯ ಶುರುವಾಗಿದೆ. ಅದೇ ಚಿರತೆ (leopard) ಭಯ. ಸೋಮವಾರದಂದು ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಬಳಿಯ ಕೆಂಪೇಗೌಡ ಲೇಔಟ್​ನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಸ್ಥಳೀಯರ ಮೊಬೈಲ್​​ನಲ್ಲಿ ವಿಡಿಯೋ ಸೆರೆಯಾಗಿದೆ. ಜೊತೆಗೆ ಸಿಸಿಟಿವಿಯಲ್ಲೂ ಚಿರತೆ ಓಡಾಟ ಪತ್ತೆಯಾಗಿದೆ. ಸದ್ಯ ಸ್ಥಳೀಯರು ಆತಂಕಗೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಲೇಔಟ್ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿತ್ತು. ಚಿರತೆ ಓಡಾಟದ ಹಿನ್ನೆಲೆ ನಾಗರಿಕರು ಕಂಗೆಟ್ಟಿದ್ದಾರೆ. ಗೇರಿ ಹೋಬಳಿಯ ಹೊಸ ಪಾಳ್ಯ, ಬೆಟ್ಟನ ಪಾಳ್ಯ, ಹುಣಸೆ ಮರದ ಪಾಳ್ಯ, ಭೀಮನ ಕುಪ್ಪೆ ಮತ್ತು ಚಲ್ಲಘಟ್ಟ ಗ್ರಾಮಗಳ ಜನರಲ್ಲಿ ಆತಂಕ ಶುರುವಾಗಿದೆ.

ಇದನ್ನೂ ಓದಿ: ಹುಲಿ, ಮಂಗ ಆಯ್ತು ಈಗ ಚಿರತೆ ಸರದಿ: ಚಾಮರಾಜನಗರ ಕೊತ್ತಲವಾಡಿ ಬಳಿ ಚಿರತೆ ಶವ ಪತ್ತೆ

ಹತ್ತಾರು ಕುರಿ, ಮೇಕೆಗಳು ಚಿರತೆಗೆ ಆಹಾರವಾಗುತ್ತಿದ್ದು, ಹಸು, ಕರು, ದನಗಳ ಮೇಲೆಯೂ ನಿರಂತರ ದಾಳಿ ಮಾಡುತ್ತಿದೆ. ಹೀಗಾಗಿ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವುದಿರಲಿ, ಮನೆಯಿಂದ ಕೂಡ ಹೊರಬರಲು ಗ್ರಾಮಸ್ಥರ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದು, ನಿರೀಕ್ಷಿತ ರೀತಿಯಲ್ಲಿ ಸ್ಪಂದನೆ ಸಿಗದ ಹಿನ್ನೆಲೆ ಅಸಮಾಧಾನಗೊಂಡಿದ್ದಾರೆ. ನಾಲ್ಕೈದು ಗ್ರಾಮಗಳ ಜನರಿಗೆ ಚಿರತೆ ಪ್ರಾಣಭಯ ಇನ್ನೂ ದೂರವಾಗಿಲ್ಲ. ಸದ್ಯ ಗುಂಪು ಗುಂಪಾಗಿ ಜನರು ಓಡಾಡುವಂತಾಗಿದೆ.

ಜಮೀನಿಗೆ ನೀರು ಹಾಯಿಸಲು ಹೋಗಿದ್ದ ಸಹೋದರರ ಮೇಲೆ ಚಿರತೆ ಅಟ್ಯಾಕ್

ಇನ್ನು ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ಸಹೋದರರಿಬ್ಬರು ರಾತ್ರಿ ಊಟ ಮುಗಿಸಿ, ತಮ್ಮ ಜಮೀನಿಗೆ ನೀರು ಹಾಯಿಸಲು ಹೋಗಿದ್ದರು. ಕೈಯಲ್ಲಿ ಟಾರ್ಚ್ ಹಿಡಿದು ತಮ್ಮ ಜಮೀನಿಗೆ ತೆರಳಿದ ಕೆಲವೇ ಹೊತ್ತಿನಲ್ಲಿ ಅಣ್ಣ-ತಮ್ಮನ ಮೇಲೆ ಹೊಂಚುಹಾಕಿ ಕಾಯ್ದು ಕುಳಿತಿದ್ದ ಚಿರತೆ ಅಟ್ಯಾಕ್ ಮಾಡಿತ್ತು. ತಮ್ಮ ಸಾವನಪ್ಪಿದರೆ, ಅಣ್ಣ ಬದುಕುಳಿದಿದ್ದ.

ಇದನ್ನೂ ಓದಿ: ಶಿರಸಿ ಬಳಿ ಚಿರತೆ ಪ್ರತ್ಯಕ್ಷ, ಮನೆಯಲ್ಲಿದ್ದ ನಾಯಿಯನ್ನ ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಗ್ರಾಮದಲ್ಲಿ ಮೆಕ್ಕೆಜೋಳಕ್ಕೆ ನೀರು ಹಾಯಿಸಲು ಹೋದ ಸಹೋದರರ ಮೇಲೆ ಚಿರತೆ ದಾಳಿ‌ ಮಾಡಿತ್ತು. ಘಟನೆಯಲ್ಲಿ ಬೀರೇಶ​ ಬಳಗಾವಿ (28) ಮೃತ ಪಟ್ಟಿದ್ದಾನೆ. ಜೊತೆಗೆ ಗಣೇಶ್​ ಬಳಗಾವಿ (32) ಗಂಭೀರ ಗಾಯಗೊಂಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:53 pm, Tue, 14 October 25