ಗುತ್ತಿಗೆದಾರರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ: ಪ್ರತಿಭಟನೆ ಎಚ್ಚರಿಕೆ
ಬಾಕಿ ಇರುವ ಬಿಲ್ ಬಿಡುಗಡೆಗೊಳಿಸದೇ ಇದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಉಂಟಾಗುತ್ತದೆ. ಪ್ರತಿಯೊಬ್ಬ ಗುತ್ತಿಗೆದಾರರು ತೀವ್ರ ಸಂಕಷ್ಟ ಹಾಗೂ ಹಣಕಾಸಿನ ತೊಂದರೆಯಿಂದ ಕಾಮಗಾರಿ ಸ್ಥಳಕ್ಕೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ದೂರಿನ ಬಳಿಕ ಮತ್ತೊಂದು ಸಂಘದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ. ಬಾಕಿ ಇರುವ ಬಿಲ್ ಬಿಡುಗಡೆಗೊಳಿಸದೇ ಇದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಉಂಟಾಗುತ್ತದೆ. ಪ್ರತಿಯೊಬ್ಬ ಗುತ್ತಿಗೆದಾರರು ತೀವ್ರ ಸಂಕಷ್ಟ ಹಾಗೂ ಹಣಕಾಸಿನ ತೊಂದರೆಯಿಂದ ಕಾಮಗಾರಿ ಸ್ಥಳಕ್ಕೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿಗಳ ಉಪಕರಣ ನೀಡಿದ ವ್ಯಾಪಾರಿಗಳು, ಕಾರ್ಮಿಕರು, ಸಾಲ ನೀಡಿದ ಸಂಸ್ಥೆಗಳು ತೀವ್ರ ಒತ್ತಡ ಹೇರುತ್ತಿದ್ದಾರೆ. ಕೆಲ ಗುತ್ತಿಗೆದಾರರು ಒತ್ತಡದಿಂದ ಮನ ನೊಂದಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಭೇಟಿ ಮಾಡಿ ಔಪಚಾರಿಕವಾಗಿ ಮಾತುಕತೆ ನಡೆಸಿದ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಕೆಲವರು ಸಾಲಭಾದೆ ತಾಳಲಾರದೇ ಆತ್ಮಹತ್ಯೆಯಂತಹ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಚಾರ ನಮ್ಮ ಸಂಘದ ಗಮನಕ್ಕೆ ಬಂದಿದೆ. ನಮ್ಮ ಸಂಘದ ವತಿಯಿಂದ ಎಲ್ಲಾ ಗುತ್ತಿಗೆದಾರರನ್ನು ಕರೆಸಿ ಸಮಾಧಾನಪಡಿಸಿ ಕಳಿಸಿದ್ದೇವೆ. ಇನ್ನೊಮ್ಮೆ ಕೊನೆಯದಾಗಿ ಮಾನ್ಯ ಮುಖ್ಯಮಂತ್ರಿಯವರನ್ನು, ಮಂತ್ರಿಗಳನ್ನು ಭೇಟಿ ಮಾಡುವುದಾಗಿ ಹೇಳಿ ಕಳಿಸಿದ್ದೇವೆ. ಗುತ್ತಿಗೆದಾರರು ಎಸ್.ಸಿ, ಎಸ್.ಟಿ. ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳ ವಸತಿ ಶಾಲೆಗಳ ಕಟ್ಟಡ ಕಾಮಗಾರಿಗಳನ್ನ ಮಾಡಿದ್ದಾರೆ. ಕಳೆದ ಏಳೆಂಟು ತಿಂಗಳಿದ ಬಾಕಿ ಪಾವತಿ ಬೆಳೆಯುತ್ತಲೇ ಇದೆ. ಸುಮಾರು 1200 ಕೋಟಿಯಷ್ಟು ಮೊತ್ತ ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿದೆ.
ಇದನ್ನೂ ಓದಿ: ACB ರದ್ದು ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ರಾಜ್ಯಾದ್ಯಂತ ಈಗಾಗಲೇ 100ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ನಿರ್ಮಾಣ ಮಾಡಿದ್ದೇವೆ. ನೂರಾರು ಗುತ್ತಿಗೆದಾರರು ತಮ್ಮನ್ನು ಭೇಟಿಯಾಗಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾರ್ಯ ನಿರ್ವಾಹಕ ನಿರ್ದೇಶಕರಿಗೂ ಅಹವಾಲು ಸಲ್ಲಿಸಿದ್ದೇವೆ. ಆದರೆ ಈವರೆಗೂ ನಮಗೆ ಸಕಾರಾತ್ಮಕ ಸ್ಪಂದನೆ ದೊರತಿಲ್ಲ ಎಂದು ಗುತ್ತಿಗೆದಾರರರು ಅಸಮಾಧಾನ ಹೊರಹಾಕಿದ್ದಾರೆ. ಇದು ಹೀಗೆ ಮುಂದುವರೆದರೆ ಪ್ರತಿಭಟನೆ ಮಾಡುವುದಾಗಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:20 am, Wed, 24 August 22