ಬೇಡಿಕೆ ಇಡೇರಬೇಕಾದರೆ ನಮಗೆ ಮತ ನೀಡಿ, ಅಪಾರ್ಟ್ಮೆಂಟ್​ ನಿವಾಸಿಗಳಿಗೆ ಡಿಕೆಶಿ ಬ್ಲ್ಯಾಕ್​ಮೇಲ್: ಬಿಜೆಪಿ ಆಕ್ರೋಶ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್ ಅವರ ಪರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಬೆಂಗಳೂರಿನ ​ಅಪಾರ್ಟ್ಮೆಂಟ್​ವೊಂದರಲ್ಲಿ ಮತಯಾಚನೆ ವೇಳೆ ಅಲ್ಲಿನ ನಿವಾಸಿಗಳಿಗೆ ಬ್ಲ್ಯಾಕ್​ಮೇಲ್ ಮಾಡಿರುವ​​ ವಿಡಿಯೋ ವೈರಲ್​ ಆಗಿದೆ. ಸದ್ಯ ರಾಜ್ಯ ಬಿಜೆಪಿ ಘಟಕ ಈ ವಿಡಿಯೋವನ್ನು ಟ್ವೀಟ್​ ಮಾಡಿ, ಆಕ್ರೋಶ ಹೊರ ಹಾಕಿದೆ.

ಬೇಡಿಕೆ ಇಡೇರಬೇಕಾದರೆ ನಮಗೆ ಮತ ನೀಡಿ, ಅಪಾರ್ಟ್ಮೆಂಟ್​ ನಿವಾಸಿಗಳಿಗೆ ಡಿಕೆಶಿ ಬ್ಲ್ಯಾಕ್​ಮೇಲ್: ಬಿಜೆಪಿ ಆಕ್ರೋಶ
ಡಿಕೆ ಶಿವಕುಮಾರ್​
Follow us
ವಿವೇಕ ಬಿರಾದಾರ
|

Updated on:Apr 17, 2024 | 2:23 PM

ಬೆಂಗಳೂರು, ಏಪ್ರಿಲ್​ 17: ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಕೇವಲ 10 ದಿನಗಳು ಬಾಕಿ ಉಳಿದಿವೆ. ಎಲ್ಲ ರಾಜಕೀಯ ಪಕ್ಷಗಳು ಮತಯಾಚನೆಯಲ್ಲಿ ವ್ಯಸ್ತವಾಗಿವೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್ (DK Suresh)​ ಅವರ ಪರ ಮತಯಾಚಿಸುತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಅಪಾರ್ಟ್ಮೆಂಟ್​ ನಿವಾಸಿಗಳಿಗೆ ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ನಿಮಗೆ ಹಕ್ಕುಪತ್ರ ನೀಡಬೇಕಾದರೆ, ಕಾವೇರಿ ನೀರು ಬೇಕಿದ್ದರೆ ನನ್ನ ತಮ್ಮನಿಗೆ ಮತ ಹಾಕಿ” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮಾತನಾಡಿರುವ 3 ನಿಮಿಷದ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮಾಡಿದೆ.

ಬಿಜೆಪಿ ಟ್ವೀಟ್​

“ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊತ್ವಾಲ್ ಬ್ರದರ್ಸ್‌ಗಳ ಗೂಂಡಾಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ. ರೈತನ ಹೊಲ ಸುಟ್ಟು, ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣವನ್ನು ಭಯಭೀತಗೊಳಿಸಿದ್ದರು. ಇಂದು ಅಪಾರ್ಟ್ಮೆಂಟ್ ನಿವಾಸಿಗಳ ಸಭೆ ನಡೆಸಿ ನೀವು ಡಿಕೆ ಸುರೇಶ್​ಗೆ ವೋಟು ಹಾಕಿಲ್ಲವೆಂದರೆ ನಿಮಗೆ ನೀರು ಕೊಡುವುದಿಲ್ಲ, ಹಕ್ಕುಪತ್ರ ನೀಡುವುದಿಲ್ಲ ಎಂದು ನೇರವಾಗಿಯೇ ಡಿಸಿಎಂ ಡಿಕೆ ಶಿವಕುಮಾರ್​ ಅವರೇ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ.

ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ಜನತೆ ಏಪ್ರಿಲ್ 26 ರಂದು ಅಂತಿಮ ಮೊಳೆ ಹೊಡೆಯುವುದು ಖಚಿತ -ನಿಶ್ಚಿತ-ಖಂಡಿತ” ಎಂದು ಬಿಜೆಪಿ ಟ್ವೀಟ್​ ಮಾಡಿದೆ.

ವಿಡಿಯೋದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು

“ನಿಮಗೆ ನನ್ನೊಂದು ಪ್ರಾಮಾಣಿಕ ಪ್ರಶ್ನೆ ಕೇಳುತ್ತೇನೆ, ನಾನು ಇಲ್ಲಿಗೆ ವ್ಯವಹಾರಕ್ಕಾಗಿ ಬಂದಿದ್ದೇನೆ. ಈ ಅಪಾರ್ಟ್ಮೆಂಟ್​​ನಲ್ಲಿ 2510 ಮನೆಗಳಿವೆ. 6424 ಮತಗಳಿವೆ. ನಿಮ್ಮ ಎರಡು ಸಮಸ್ಯೆಗಳೆಂದರೆ ಒಂದು, ನಿಮ್ಮ ಹಕ್ಕುಪತ್ರ ನಿಮಗೆ ಹಸ್ತಾಂತರವಾಗದಿರುವುದು. ಎರಡನೇಯದ್ದು ಕಾವೇರಿ ನೀರು. ಒಂದು ವೇಳೆ ಈ ಎರಡನ್ನೂ ನಾನು ನಿಮಗೆ ನೀಡಿದರೆ ನೀವು ನನಗೆ ಏನು ಕೊಡುತ್ತೀರಿ?. ನಿಮ್ಮ ಬೂತ್​ ಆರ್​ಆರ್​ ನಗರದಲ್ಲಿದೆ. 2-3 ಬೂತ್​ನಲ್ಲಿ ನಮ್ಮ ಪರವಾದ ಮತಗಳಿವೆ. ಪ್ರಶ್ನಾರ್ಥಕವಾಗಿ ಉಳಿದಿರುವುದು ನಿಮ್ಮ ಬೂತ್​ ಮಾತ್ರ. ಈಗ ಹೇಳಿ ಏನು ಮಾಡುತ್ತೀರಿ”.

ಇದನ್ನೂ ಓದಿ: ‘ಗ್ಯಾರಂಟಿ’ ನಿಷೇಧ ಬಿಜೆಪಿ ಹಣೆಬರದಲ್ಲಿ ಸಾಧ್ಯವಿಲ್ಲ: ಡಿಕೆ ಶಿವಕುಮಾರ್

“ನಾನು ಉಪಮುಖ್ಯಮಂತ್ರಿಯಾಗಿದ್ದೇನೆ, ಬಿಡಿಎ ಸಚಿವ, ಬೆಂಗಳೂರು ನಗರಾಭಿವೃದ್ಧಿ ಸಚಿವ ಮತ್ತು ಬೆಂಗಳೂರು ಜಲಮಂಡಳಿ ಸಚಿವನಿದ್ದೇನೆ. ಈ ಎಲ್ಲವೂ ನಿಮ್ಮ ಪಾಕೆಟ್​ನಲ್ಲಿವೆ. ಏನೆ ಸಮಸ್ಯೆಯಿದ್ದರು ನೀವು ಮುಖ್ಯಮಂತ್ರಿಗಳ ಮನೆಗೆ ಹೋಗಬೇಕಿಲ್ಲ. ನನ್ನ ಮನೆಗೆ ಬನ್ನಿ. ನಾನು ನಿಮಗೆ ಸಹಾಯ ಮಾಡುತ್ತೇನೆ. ನಾನು ನಿಮ್ಮ ಕೈಯಲ್ಲಿದ್ದೇನೆ. ಈಗ ಹೇಳಿ ನನಗೆ ನೀವು ಹೇಗೆ ಸಹಾಯ ಮಾಡುತ್ತೀರಿ? ನಮಗೆ ಭರವಸೆ ನೀಡಿ, ನನಗೆ ಮತ ಹಾಕಿ. ನಾನು ನಿಮಗೆ ಭರವಸೆ ನೀಡುತ್ತೇನೆ 2-3 ತಿಂಗಳಲ್ಲಿ ನಿಮ್ಮ ಈ ಎರಡು ಬೇಡಿಕೆಗಳನ್ನು ಈಡೇರಿಸುತ್ತೇನೆ. ಇದು ನನ್ನ ತಮ್ಮನ ಲೋಕಸಭಾ ಕ್ಷೇತ್ರ, ಅಂದರೆ ನನ್ನ ಕ್ಷೇತ್ರ ಇದ್ದ ಹಾಗೆ” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಪರೋಕ್ಷವಾಗಿ ಬ್ಯ್ಲಾಕ್​ಮೇಲ್​ ಮಾಡಿರುವ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮಾಡಿದೆ.

ಕುಮಾರಸ್ವಾಮಿ ಆರೋಪ

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಸೋಮವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ಮಾಡಿದ್ದರು. ಈ ವೇಳೆ “ಅಪಾರ್ಟ್ಮೆಂಟ್​ಗೆ ಎನ್​ಓಸಿ ನೀಡಬೇಕಾದರೆ ನನ್ನ ತಮ್ಮನಿಗೆ ಮತ ಹಾಕಿ, ನೀರು ಕೊಡಬೇಕಾದರೆ ತಮ್ಮನಿಗೆ ಮತ ಹಾಕಿ ಅಂತ ಡಿಕೆ ಶಿವಕುಮಾರ್​ ಮತಯಾಚಿಸಿದ್ದಾರೆ” ಎಂದು ಆರೋಪ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:10 pm, Wed, 17 April 24