ಸಚಿವ ಕೆ. ಹೆಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಆಟೋ ಚಾಲಕರು ! ಸಚಿವ ಹೇಳಿದ್ದೇನು?

ಬೆಂಗಳೂರಿನಲ್ಲಿ LPG ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಗ್ಯಾಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಇಂದು ಚಾಲಕರು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಸಚಿವರು ಪೂರೈಕೆಯಲ್ಲಿ ವ್ಯತ್ಯಾಸವಿಲ್ಲ, ಆದರೆ ಖಾಸಗಿ ಬಂಕ್‌ಗಳಲ್ಲಿ ಹೆಚ್ಚಿನ ದರದ ಬಗ್ಗೆ ಮಾಹಿತಿ ಇದೆ ಎಂದಿದ್ದು, ಏಪ್ರಿಲ್ 10ರಂದು ಸಭೆ ನಡೆಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಸಚಿವ ಕೆ. ಹೆಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಆಟೋ ಚಾಲಕರು ! ಸಚಿವ ಹೇಳಿದ್ದೇನು?
ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಹೆಚ್​​.ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಿದ ಆಟೋ ಚಾಲಕರು

Updated on: Apr 06, 2026 | 10:46 AM

ಬೆಂಗಳೂರು, ಏಪ್ರಿಲ್ 06: ನಗರದಲ್ಲಿ ಎಲ್​ಪಿಜಿ ಗ್ಯಾಸ್ ಸಮಸ್ಯೆ (LPG gas crisis) ಹೋಟೆಲ್ ಉದ್ಯಮಕ್ಕಷ್ಟೆ ಅಲ್ಲದೆ ಇದೀಗ ಆಟೋ ಚಾಲಕರ ದುಡಿಮೆ ಮೇಲೂ ಹೊಡೆತ ಕೊಟ್ಟಿದೆ. ಗಂಟೆಗಟ್ಟಲೆ ಆಟೋಗೆ ಗ್ಯಾಸ್ ತುಂಬಿಸಲು ಕಾದು ಕಾದು ಸುಸ್ತಾಗಿರುವ ಚಾಲಕರು ಇಂದು ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಗ್ಯಾಸ್ ಕೊಡಿಸಲೇಬೇಕು ಎಂದ ಚಾಲಕರು

ಹೆಬ್ಬಾಳದ ಸಂಜಯನಗರದಲ್ಲಿರುವ ಸಚಿವರ ಮನೆ ಎದುರು ಜಮಾಯಿಸಿದ ಆಟೋ ಚಾಲಕರು ಗ್ಯಾಸ್ ಕೊಡಬೇಕು ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹಲವೆಡೆ ಆಟೋಗಳಿಗೆ ಅಗತ್ಯವಾದ LPG ಗ್ಯಾಸ್ ಲಭ್ಯವಾಗದೇ ಇರುವುದರಿಂದ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದ ಸಚಿವ

ಪ್ರತಿಭಟನಾಕಾರರ ಜೊತೆ ಮಾತನಾಡಿದ ಸಚಿವ ಮುನಿಯಪ್ಪ, ಕೇಂದ್ರ ಸರ್ಕಾರದಿಂದ ಪ್ರತಿದಿನ ಸುಮಾರು 3 ಸಾವಿರ ಸಿಲಿಂಡರ್‌ಗಳನ್ನು ಒದಗಿಸಲಾಗುತ್ತಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಖಾಸಗಿ ಗ್ಯಾಸ್ ಬಂಕ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಸಂಬಂಧಪಟ್ಟ ಬಂಕ್ ಮಾಲೀಕರನ್ನು ಕರೆದು ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ ಕಿಲೋಮೀಟರ್‌ಗೆ ಕೇವಲ 50 ಪೈಸೆ ಖರ್ಚು! ಎಲ್‌ಪಿಜಿ ಬೆಲೆ ಏರಿಕೆ ನಡುವೆ ಗಮನ ಸೆಳೆಯುತ್ತಿದೆ ಎಲೆಕ್ಟ್ರಿಕ್ ಆಟೋಗಳ ಮ್ಯಾಜಿಕ್

ಆಟೋ ಚಾಲಕರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ಏಪ್ರಿಲ್ 10ರಂದು ಅಧಿಕಾರಿಗಳು ಮತ್ತು ಪೊಲೀಸರ ಜೊತೆ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಇದೇ ವೇಳೆ, ಇಂದು ಮಧ್ಯಾಹ್ನದ ನಂತರವೂ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದರು. ಪ್ರತಿಭಟನೆ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ. ವಿವಿಧ ಆಟೋ ಚಾಲಕರ ಸಂಘಟನೆಗಳು ಈ ಸಮಸ್ಯೆ ಪರಿಹಾರವಾಗದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.

ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಚಿವರು ತೆರಳುವ ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹಾಗೂ ತೇಜಸ್ವಿ ಸೂರ್ಯ ಸೇರಿದಂತೆ ಸಂಸದರ ಮನೆಗಳಿಗೂ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us