ಗ್ರಹಣ ಸಮಯದಲ್ಲಿ ದೇವರ ದರ್ಶನದಲ್ಲಿ ಬದಲಾವಣೆ: ಧರ್ಮಸ್ಥಳ, ಮಲೆ ಮಹದೇಶ್ವರ ಬೆಟ್ಟ, ಮಂತ್ರಾಲಯಕ್ಕೆ ಹೋಗುವ ಭಕ್ತರ ಗಮನಕ್ಕೆ

March 3 Lunar Eclipse: ಮಾರ್ಚ್ 3ರ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಪ್ರಮುಖ ದೇವಾಲಯಗಳ ದರ್ಶನ ಹಾಗೂ ಪೂಜಾ ಸಮಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಬೇಲೂರು, ಬೆಂಗಳೂರು, ಧರ್ಮಸ್ಥಳದಂತಹ ದೇಗುಲಗಳು ಗ್ರಹಣದ ಅವಧಿಯಲ್ಲಿ ಮುಚ್ಚಲಿವೆ ಅಥವಾ ಸಮಯ ಬದಲಾಯಿಸಲಿವೆ. ಮಂತ್ರಾಲಯ, ಬಂಡೆ ಮಹಾಂಕಾಳಿ, ಮಲೆ ಮಹದೇಶ್ವರ ದೇವಾಲಯಗಳಲ್ಲಿ ದರ್ಶನಕ್ಕೆ ಅವಕಾಶವಿದೆ. ಗ್ರಹಣ ಮುಕ್ತಾಯದ ನಂತರ ಶುದ್ಧೀಕರಣ ಹಾಗೂ ವಿಶೇಷ ಪೂಜೆಗಳು ನಡೆಯಲಿವೆ.

ಗ್ರಹಣ ಸಮಯದಲ್ಲಿ ದೇವರ ದರ್ಶನದಲ್ಲಿ ಬದಲಾವಣೆ: ಧರ್ಮಸ್ಥಳ, ಮಲೆ ಮಹದೇಶ್ವರ ಬೆಟ್ಟ, ಮಂತ್ರಾಲಯಕ್ಕೆ ಹೋಗುವ ಭಕ್ತರ ಗಮನಕ್ಕೆ
ಚಂದ್ರ ಗ್ರಹಣ

Updated on: Mar 02, 2026 | 10:35 AM

ಬೆಂಗಳೂರು, ಮಾ.2: ಮಾರ್ಚ್ 3ರಂದು ಚಂದ್ರ ಗ್ರಹಣದ ( Lunar Eclipse) ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ ಸಮಯದಲ್ಲಿ ಬದಲಾವಣೆ ಆಗಲಿದೆ. 2026ರ ಮೊದಲು ಗ್ರಹಣ ಆಗಿರುವ ಕಾರಣ ಕೆಲವೊಂದು ದೇವಾಲಯಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಈ ಗ್ರಹಣದ ನಂತರ ಹಲವು ರಾಶಿಗಳಲ್ಲಿ ಬಹುದೊಡ್ಡ ಬದಲಾವಣೆಗಳು ಆಗಲಿದೆ ಎಂದು ದೇವಾಲಯದ ಅರ್ಚಕರು ಹೇಳಿದ್ದಾರೆ. ಇದೀಗ ಯಾವೆಲ್ಲ ದೇವಾಲಯದಲ್ಲಿ ಗ್ರಹಣ ಸಮಯದಲ್ಲಿ ಪ್ರಮುಖ ಬದಲಾವಣೆಗಳು ಆಗಲಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

ಬೇಲೂರು ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ನಾಳೆ ಬಂದ್:

ಹಾಸನ ಜಿಲ್ಲೆಯ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ನಾಳೆ (ಮಾರ್ಚ್ 3) ಗ್ರಹಣದ ಪ್ರಯುಕ್ತ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಗ್ರಹಣ ಕಾಲದ ಶುದ್ಧೀಕರಣ ಮತ್ತು ಸಂಪ್ರೋಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್​​ ಹೇಳಿದ್ದಾರೆ. ಮಾರ್ಚ್ 3ರ ಬೆಳಿಗ್ಗೆ 9 ಗಂಟೆಯೊಳಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಹಾಕಲಾಗುವುದು. ಗ್ರಹಣ ಮುಗಿದ ನಂತರ ಅಂದರೆ ರಾತ್ರಿ 7 ಗಂಟೆಯ ಬಳಿಕ ದೇವಾಲಯದಲ್ಲಿ ಆಲಯ ಅರ್ಚನೆ, ಅಭಿಷೇಕ ಮತ್ತು ಸಂಪ್ರೋಕ್ಷಣೆ ಕಾರ್ಯಗಳು ನಡೆಯಲಿವೆ. ನಂತರ ಮಹಾನೈವೇದ್ಯ ನೆರವೇರಿಸಲಾಗುವುದು. ನಾಳೆ ಕೇವಲ ಗರ್ಭಗುಡಿ ಮಾತ್ರ ಬಂದ್ ಆಗಿರಲಿದ್ದು, ಪ್ರವಾಸಿಗರು ದೇವಾಲಯದ ಹೊರಭಾಗದ ಶಿಲ್ಪಕಲೆಗಳನ್ನು ವೀಕ್ಷಿಸಲು ಅವಕಾಶವಿರುತ್ತದೆ. ಮಾರ್ಚ್ 4ರ ಬುಧವಾರದಂದು ಎಂದಿನಂತೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುವುದು.

ಬೆಂಗಳೂರಿನ ಪ್ರಮುಖ ದೇಗುಲಗಳು ನಾಳೆ ಬಂದ್!

ಈ ಬಾರಿಯ ಹೋಳಿ ಹಬ್ಬದಂದೇ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ಬೆಂಗಳೂರಿನ ಬಹುತೇಕ ದೇವಾಲಯಗಳ ಬಾಗಿಲನ್ನು ನಾಳೆ (ಮಾರ್ಚ್ 3) ಮುಚ್ಚಲಾಗುತ್ತಿದೆ. ಪ್ರಮುಖವಾಗಿ ಐತಿಹಾಸಿಕ ಹಲಸೂರು ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ ಮಹಾಮಂಗಳಾರತಿಯ ನಂತರ, ಸರಿಯಾಗಿ 11 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು. ಗ್ರಹಣ ಮೋಕ್ಷದ ನಂತರ ಸಂಜೆ 7 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದೆ. ಸೋಮೇಶ್ವರ ದೇವಾಲಯವು ವಿಸ್ತಾರವಾಗಿರುವುದರಿಂದ ಪುಣ್ಯಾಹವಾಚನ ಮತ್ತು ಸ್ವಚ್ಛತೆ ಕಾರ್ಯಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಸ್ವಚ್ಛತೆಯ ನಂತರ ರಾತ್ರಿ 9 ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮತ್ತೆ ದೇಗುಲವನ್ನು ಕ್ಲೋಸ್ ಮಾಡಲಾಗುತ್ತದೆ. ಮೋಕ್ಷದ ನಂತರ (ನಾಳೆ ರಾತ್ರಿ) ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಾರ್ಚ್ 4ರ ಬುಧವಾರದಂದು ಎಂದಿನಂತೆ ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಬಹುದಾಗಿದೆ. ರಾಜಧಾನಿಯ ಗವಿ ಗಂಗಾಧರೇಶ್ವರ, ಬನಶಂಕರಿ ಅಮ್ಮನವರ ದೇವಾಲಯ ಸೇರಿದಂತೆ ಇತರ ದೊಡ್ಡ ದೇಗುಲಗಳಲ್ಲೂ ಇದೇ ರೀತಿಯ ಸಮಯದ ಬದಲಾವಣೆ ಇರಲಿದೆ.

ಧರ್ಮಸ್ಥಳ: ನಾಳೆ ಚಂದ್ರಗ್ರಹಣ ಹಿನ್ನೆಲೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ

ನಾಳೆ (ಮಾರ್ಚ್ 3) ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮತ್ತು ಅನ್ನಪ್ರಸಾದದ ಸಮಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಮಧ್ಯಾಹ್ನ 1:30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ ಪೂಜೆಗಳೆಲ್ಲವೂ 1:30ರ ಒಳಗಾಗಿ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನ ದೇವಸ್ಥಾನ ಬಂದ್ ಆದ ನಂತರವೂ, ಅತಿಥಿ ಅಭ್ಯಾಗತರಿಗಾಗಿ ಮಧ್ಯಾಹ್ನ 2:00 ಗಂಟೆಯವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಗ್ರಹಣ ಮುಕ್ತಾಯದ ನಂತರ, ಅಂದರೆ ಸಂಜೆ 7:00 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿಯ ಶುದ್ಧೀಕರಣ ಮತ್ತು ಅಭಿಷೇಕದ ನಂತರ, ರಾತ್ರಿ 7:30ರ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ದೇವರ ದರ್ಶನ ಆರಂಭವಾದ ಬಳಿಕ ಎಂದಿನಂತೆ ರಾತ್ರಿಯ ಅನ್ನಪ್ರಸಾದ ವಿತರಣೆಯೂ ಪ್ರಾರಂಭವಾಗಲಿದೆ.

ಇದನ್ನೂ ಓದಿ: ರಾಜಕೀಯದ 2ನೇ ಇನ್ನಿಂಗ್ಸ್ ಆರಂಭಿಸುವ ಮುನ್ನ ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ

ಚಂದ್ರಗ್ರಹಣವಿದ್ದರೂ ರಾಯರ ದರ್ಶನಕ್ಕೆ ಇಲ್ಲ ನಿರ್ಬಂಧ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜಾ ವಿಧಿವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆದರೆ, ಗ್ರಹಣದ ಸಮಯದಲ್ಲಿ ರಾಯರ ದರ್ಶನ ಪಡೆಯಲು ಭಕ್ತರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.ಮಾರ್ಚ್ 3ರ ಸೂರ್ಯೋದಯದಿಂದ ಗ್ರಹಣ ಮುಕ್ತಾಯದವರೆಗೆ ಭಕ್ತರು ಎಂದಿನಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆಯಬಹುದಾಗಿದೆ. ಮಠದ ನಿಗದಿತ ಸಮಯದಂತೆ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಗ್ರಹಣದ ಅವಧಿಯಲ್ಲಿ ಶ್ರೀ ಮಠದಲ್ಲಿ ಯಾವುದೇ ವಿಶೇಷ ಪೂಜೆಗಳು, ಹರಕೆ ಸೇವೆಗಳು ಅಥವಾ ಪರ್ವಕಾಲದ ವಿಶೇಷ ಕಾರ್ಯಕ್ರಮಗಳು ಇರುವುದಿಲ್ಲ.ಹಣದ ಪ್ರಯುಕ್ತ ರಾಯರ ಮೂಲ ಬೃಂದಾವನಕ್ಕೆ ಯಾವುದೇ ವಿಶೇಷ ಅಲಂಕಾರಗಳನ್ನು ಮಾಡಲಾಗುವುದಿಲ್ಲ. ಕೇವಲ ಜಲಾಭಿಷೇಕ ಮಾತ್ರ ನೆರವೇರಿಸಲಾಗುತ್ತದೆ. ಗ್ರಹಣದ ಹಿನ್ನೆಲೆಯಲ್ಲಿ ಶ್ರೀ ಮಠದಲ್ಲಿ ಅಂದು ಪ್ರಸಾದದ (ಊಟದ) ವ್ಯವಸ್ಥೆ ಇರುವುದಿಲ್ಲ. ಕೇವಲ ತೀರ್ಥ ಪ್ರಸಾದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಗವಿ ಗಂಗಾಧರೇಶ್ವರ ಅರ್ಚಕರ ವಿಶೇಷ ಸೂಚನೆ!

ಹದಿನೈದು ದಿನಗಳ ಹಿಂದಷ್ಟೇ ಸಂಭವಿಸಿದ ಸೂರ್ಯಗ್ರಹಣದ ಬೆನ್ನಲ್ಲೇ ಈಗ ಹೋಳಿ ಮಾಸದ ಪೌರ್ಣಮಿಯಂದು ವಿಶೇಷ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಕುರಿತು ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ಭಕ್ತರಿಗೆ ಪ್ರಮುಖ ಎಚ್ಚರಿಕೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಹೋಳಿ ಮಾಸದ ಪೌರ್ಣಮಿಯಂದು ಬರುವ ಈ ಚಂದ್ರಗ್ರಹಣ ಅತ್ಯಂತ ವಿಶೇಷವಾಗಿದ್ದು, ನಭೋಮಂಡಲದಲ್ಲಿ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಈ ಬಾರಿ ಗ್ರಹಣವು ಸಿಂಹ ರಾಶಿಯಲ್ಲಿ ಸಂಭವಿಸುತ್ತಿದೆ. ಗ್ರಹಣವು ಅಲ್ಪ ಭಾಗ ಕಂಡರೂ ಸಹ ಅದರ ದೋಷ ಮತ್ತು ತೊಂದರೆಗಳು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಬಾಧಿಸಲಿವೆ ಎಂದು ಅರ್ಚಕರು ತಿಳಿಸಿದ್ದಾರೆ.ಗ್ರಹಣದಿಂದ ದೋಷವಿಲ್ಲ ಎಂದು ನಿರ್ಲಕ್ಷಿಸುವಂತಿಲ್ಲ. ಪ್ರಕೃತಿ ಮತ್ತು ಮನುಷ್ಯರ ಮೇಲೆ ಇದು ಸೂಕ್ಷ್ಮ ಪರಿಣಾಮ ಬೀರಲಿದೆ.ಗ್ರಹಣ ಮುಕ್ತಾಯದ ನಂತರ, ಅಂದರೆ ಬುಧವಾರದಂದು ಪ್ರತಿಯೊಬ್ಬರೂ ಕಡ್ಡಾಯವಾಗಿ ಶಿವನ ದರ್ಶನ ಪಡೆಯಬೇಕು. ಶಿವನಿಗೆ ಪ್ರಿಯವಾದ ಅಕ್ಕಿ, ಬೇಳೆ ಮತ್ತು ಎಣ್ಣೆಯನ್ನು ದಾನವಾಗಿ ನೀಡುವುದರಿಂದ ಗ್ರಹಣ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದ್ದಾರೆ. ಗ್ರಹಣದ ದಿನ ಗವಿ ಗಂಗಾಧರೇಶ್ವರನಿಗೆ ವಿಶೇಷ ಜಲದ ಅಭಿಷೇಕ ಇರಲಿದೆ. ಮಂಗಳವಾರ 9 ಗಂಟೆ ಬಳಿಕ ದೇವಸ್ಥಾನ ಬಂದ್ ಮಾಡಲಾಗುತ್ತದೆ. ಬುಧವಾರ ಹೋಮ ಹವನ ಇರಲಿದೆ.

ಬಂಡೆ ಮಹಾಂಕಾಳಿ ದೇವಾಲಯದ ಬಾಗಿಲು ಮುಚ್ಚಲ್ಲ;

ಬೆಂಗಳೂರಿನ ಐತಿಹಾಸಿಕ ಬಂಡೆ ಮಹಾಂಕಾಳಿ ದೇವಾಲಯದ ಬಾಗಿಲನ್ನು ಮುಚ್ಚದಿರಲು ನಿರ್ಧರಿಸಲಾಗಿದೆ. ಅನಾದಿಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಂತೆ, ಗ್ರಹಣದ ವೇಳೆಯೂ ತಾಯಿ ಮಹಾಂಕಾಳಿಯ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಹುಣ್ಣಿಮೆ ಮತ್ತು ಚಂದ್ರಗ್ರಹಣವಿರುವುದರಿಂದ ಬೆಳಿಗ್ಗೆ 6:00 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದ್ದು, ರಾತ್ರಿ 9:00 ಗಂಟೆಯವರೆಗೆ ಸತತವಾಗಿ ದರ್ಶನಕ್ಕೆ ಅವಕಾಶವಿರುತ್ತದೆ. ಪೌರ್ಣಮಿಯ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಸತ್ಯನಾರಾಯಣ ಪೂಜೆ ನೆರವೇರಲಿದೆ. ಮಧ್ಯಾಹ್ನ 3:00 ರಿಂದ ಸಂಜೆ 6:00 ಗಂಟೆಯವರೆಗೆ ಚಂದ್ರಗ್ರಹಣದ ದೋಷ ನಿವಾರಣೆಗಾಗಿ ಚಂದ್ರಶಾಂತಿ ಮತ್ತು ಕೇತು ಶಾಂತಿ ಹೋಮಗಳು ನಡೆಯಲಿವೆ.ಹೋಮದ ನಂತರ ಕಳಶಾಭಿಷೇಕ ಮಾಡಲಾಗುವುದು. ಚಂದ್ರ ಮತ್ತು ಕೇತು ಶಾಂತಿ ಕಳಸದ ತೀರ್ಥವನ್ನು ಬಂಡೆ ಮಹಾಂಕಾಳಿಗೆ ಅಭಿಷೇಕ ಮಾಡಲಾಗುತ್ತದೆ. ಈ ಅಭಿಷೇಕದಿಂದ ಗ್ರಹಣದ ಅವಧಿಯಲ್ಲಿ ಭೂಮಿಗೆ ಮತ್ತು ಭಕ್ತರಿಗೆ ಎದುರಾಗುವ ಸಕಲ ಅವಘಡಗಳನ್ನು ತಾಯಿ ಪರಿಹರಿಸುತ್ತಾಳೆ ಎಂಬುದು ಭಕ್ತರ ಗಾಢ ನಂಬಿಕೆ.

ಚಾಮರಾಜನಗರ ಜಿಲ್ಲೆಯ ಪ್ರಮುಖ ದೇಗುಲಗಳ ಪೂಜೆಯಲ್ಲಿ ಬದಲಾವಣೆ:

ನಾಳೆ (ಮಾರ್ಚ್ 3) ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಪೂಜಾ ವಿಧಿವಿಧಾನಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಜಿಲ್ಲೆಯ ಮೂರು ಪ್ರಮುಖ ಬೆಟ್ಟಗಳ ದೇಗುಲಗಳಲ್ಲಿ ಒಂದೊಂದು ರೀತಿಯ ಸಂಪ್ರದಾಯ ಅನುಸರಿಸಲಾಗುತ್ತಿದೆ. “ಮಾದಪ್ಪನಿಗೆ ಯಾವುದೇ ಗ್ರಹಣ ತಾಕಲ್ಲ” ಎಂಬ ಬಲವಾದ ನಂಬಿಕೆಯಿದೆ. ಹೀಗಾಗಿ ಗ್ರಹಣದ ಅವಧಿಯಲ್ಲೂ ಮಲೆ ಮಹದೇಶ್ವರ ದೇವಾಲಯದ ಬಾಗಿಲು ಬಂದ್ ಆಗುವುದಿಲ್ಲ. ಭಕ್ತರು ಎಂದಿನಂತೆ ಮಾದಪ್ಪನ ದರ್ಶನ ಪಡೆಯಬಹುದು. ಗ್ರಹಣ ಕಾಲದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಬಿಳಿಗಿರಿ ರಂಗನಾಥನ ಸನ್ನಿಧಿಯಲ್ಲಿ ಗ್ರಹಣದ ಸೂತಕ ಹಿನ್ನೆಲೆ ನಾಳೆ ಬೆಳಿಗ್ಗೆ 11 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

 

Published On - 10:34 am, Mon, 2 March 26

Follow Us