Bengaluru: ಸೊಸೆ ಮೇಲೆ ಮಾವನಿಂದಲೇ ಲೈಂಗಿಕ ದೌರ್ಜನ್ಯ; ಆಸೆ ಈಡೇರಿಸು ಎಂದು ಪೀಡನೆ

ಮಾವನಾದವನಿಗೆ ಮಗನ ಹೆಂಡತಿ ಅಂದರೆ ಮಗಳ ಸಮಾನ. ಆದ್ರೆ ಇಲ್ಲೊಬ್ಬ ಕಾಮುಕ ಸೊಸೆ ಮೇಲೆಯೇ ಕಣ್ಣು ಹಾಕಿದ್ದಾನೆ. ಆಸೆ ಈಡೇರಿಸು ಎಂದು ಎಲ್ಲೆಂದರಲ್ಲಿ ಲೈಂಕಿಕ ಕಿರುಕುಳ ನೀಡಿದ್ದಾನೆ. ವಿಷಯ ತಿಳಿದ ಮಗ ಅಪ್ಪನಿಗೆ ಬುದ್ಧಿ ಹೇಳಿದ್ರೂ ಈತ ತನ್ನ ಚಾಳಿ ಮಾತ್ರ ಬಿಟ್ಟಿಲ್ಲ. ಮಾವನ ಕಾಟಕ್ಕೆ ಬೇಸತ್ತ ಸೊಸೆ ಅಂತಿಮವಾಗಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ.

Bengaluru: ಸೊಸೆ ಮೇಲೆ ಮಾವನಿಂದಲೇ ಲೈಂಗಿಕ ದೌರ್ಜನ್ಯ; ಆಸೆ ಈಡೇರಿಸು ಎಂದು ಪೀಡನೆ
ಸಾಂದರ್ಭಿಕ ಚಿತ್ರ
Image Credit source: Google

Updated on: Feb 11, 2026 | 12:08 PM

ಬೆಂಗಳೂರು, ಫೆಬ್ರವರಿ 11: ನನ್ನ ಆಸೆ ಈಡೇರಿಸು ಎಂದು ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಥಣಿಸಂಧ್ರದ ಪ್ರತಿಷ್ಟಿತ ಸ್ಕೂಲ್ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ ಆಕೆಯ ಗಂಡನ ತಂದೆ, ಕಾವಲ್ ಬೈರಸಂಧ್ರದ ಶಾಲೆಯೊಂದರ ಫೌಂಡರ್ ಆಗಿರುವ ವ್ಯಕ್ತಿ ಕಿರುಕುಳ ನೀಡಿರುವ ಬಗ್ಗೆ ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ಮಗನಿಗೆ ತಿಳಿಸಿದರೆ ಕೊಲ್ಲೋದಾಗಿ ಆರೋಪಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆಯೂ ದೂರಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲೆಂದರಲ್ಲಿ ಲೈಂಗಿಕ ಕಿರುಕುಳ ಆರೋಪ

2007ರಲ್ಲಿ ಮದುವೆಯಾಗಿದ್ದ ಸಂತ್ರಸ್ತೆಗೆ ಆರಂಭದಲ್ಲಿ ಜೀವನ ಚೆನ್ನಾಗಿಯೇ ಇತ್ತು. ಆದರೆ ಬರ ಬರುತ್ತಾ ಮಾವನ ಕಾಟ ಶುರುವಾಗಿದೆ. 2005ರಲ್ಲಿ ಪತ್ನಿಯ ಸಾವಿನ ಬಳಿಕ ಆರೋಪಿ 2006ರಲ್ಲಿ ಎರಡನೇ ಮದುವೆಯಾಗಿದ್ದ. ಹೀಗಿದ್ದರೂ ಸೊಸೆಯ ಮೇಲೆ ಕಣ್ಣು ಹಾಕಿದ್ದ ಈತ, ಆಕೆಯ ಜೊತೆ ಅನುಚಿತ ವರ್ತನೆ ತೋರಲು ಶುರುಮಾಡಿದ್ದಾನೆ. ಪಕ್ಕದ ಅಪಾರ್ಟ್​​ಮೆಂಟ್​​ನಲ್ಲಿಯೇ ವಾಸವಿದ್ದ ಈತ, ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇರುವ ಸಮಯ ನೋಡಿಕೊಂಡು ಬಂದು ಆಕೆಗೆ ಲೈಂಗಿಕ ದೌರ್ಜನ್ಯ ನೀಡಲಾರಂಭಿಸಿದ್ದ. ಅಸಭ್ಯ ಪದಗಳನ್ನು ಮಾತನಾಡುವ ಜೊತೆಗೆ ಬಲವಂತಾಗಿ ಬಟ್ಟೆ ಬಿಚ್ಚಲು ಯತ್ನಿಸುತ್ತಿದ್ದ. 2020ರಿಂದಲೇ ಮಾವನ ಈ ರೀತಿಯ ವರ್ತನೆಗಳು ಆರಂಭವಾಗಿತ್ತು. ಆದ್ರೆ ಭಯಭೀತಳಾಗಿದ್ದ ಸಂತ್ರಸ್ತೆ ಎಲ್ಲವೂ ಸರಿಹೋಗಬಹುದೆಂದು ಸುಮ್ಮನಿದ್ದಳು. ಆದರೆ ಆಕೆ ಮತ್ಮತು ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಮಹಿಳೆ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಬಳಿಕ ಅಪಾರ್ಟ್​​ಮೆಂಟ್​​ನ ಲಿಫ್ಟ್​​, ಸ್ಕೂಲ್​​ ಕ್ಯಾಬಿನ್​​ನಲ್ಲಿಯೂ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ  ಆರೋಪಿಸಲಾಗಿದೆ.

ಇದನ್ನೂ ಓದಿ: ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ; ತನಿಖೆ ವೇಳೆ ಸ್ಫೋಟಕ ಅಂಶ ಬಯಲಿಗೆ

ಮಾವನ ಕಾಟಕ್ಕೆ ಬೇಸತ್ತ ಈಕೆ ಅಂತಿಮವಾಗಿ ವಿಷಯವನ್ನು ಪತಿಗೆ ತಿಳಿಸಿದ್ದು, ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಅವರೂ ಪ್ರಶ್ನಿಸಿದ್ದರು. ಬಳಿಕ ಹಿರಿಯರಿಂದ ಈ ಬಗ್ಗೆ ಬುದ್ಧಿಯನ್ನೂ ಹೇಳಿಸಲಾಗಿತ್ತು. ಕೆಲ ದಿನ ಸುಮ್ಮನಾಗಿದ್ದ ಆರೋಪಿ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾನೆ. ಸೊಸೆಯ ಸೌಂದರ್ಯದ ಬಗ್ಗೆ ಪತ್ರ ಬರೆದು ತಂದು ಆಕೆಯ ಮುಂದೆಯೇ ಓದ್ತಿದ್ದ ಈತ, ಲೈಂಗಿಕ ಕಿರುಕುಳ ನೀಡಿ ನಂತರ ಆ ಪತ್ರವನ್ನ ತಾನೇ ಇಟ್ಟುಕೊಳ್ಳುತ್ತಿದ್ದ. ಇತ್ತೀಚೆಗ ಸಂತ್ರಸ್ತೆಯ ಮೈಕೈ ಮುಟ್ಟಿ ಆರೋಪಿ ಕಿರುಕುಳ ನೀಡಿದ್ದು, ಈ ವೇಳೆ ಆಕೆ ವಿರೋಧ ವ್ಯಕ್ತಪಡಿಸಿದ ಕಾರಣ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಮಾವನ ವಿರುದ್ಧ ಕೊನೆಗೂ ಸೊಸೆ ಪೊಲೀಸರಿಗೆ ದೂರು ನೀಡಿದ್ದಾಳೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.