
ಬೆಂಗಳೂರು, ಜೂನ್ 26: ನಮ್ಮ ಮೆಟ್ರೋ (Namma Metro) ಪಿಲ್ಲರ್ಗೆ ಲೈಟಿಂಗ್ಸ್ ಅಳವಡಿಸುವಾಗ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವನ್ನಪ್ಪಿದ್ದಾರೆ (death). ಗುರಪ್ಪ(70) ಮೃತ ಕಾರ್ಮಿಕ. ವೈಟ್‌ಫೀಲ್ಡ್ ಟು ಚಲ್ಲಘಟ್ಟ ಮಾರ್ಗದ ನೇರಳೆ ಮಾರ್ಗದ ಟ್ರಿನಿಟಿ ಮೆಟ್ರೋ ನಿಲ್ದಾಣದ 153ನೇ ಪಿಲ್ಲರ್ ಬಳಿ ಘಟನೆ ನಡೆದಿದೆ. ಘಟನೆ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಆರ್ ಎಲೆಕ್ಟ್ರಿಕಲ್ಸ್ ಎಂಬ ಸಂಸ್ಥೆ ಬಿಎಂಆರ್ಸಿಎಲ್ನಿಂದ ಲೈಟಿಂಗ್ಸ್ ಹಾಕುವ ಟೆಂಡರ್ ಪಡೆದಿತ್ತು. ಹಾಗಾಗಿ ಸಂಸ್ಥೆಯ ಕಾರ್ಮಿಕ ಗುರಪ್ಪ ಮೆಟ್ರೋ ಪಿಲ್ಲರ್ಗೆ ಲೈಟಿಂಗ್ಸ್ ಅಳವಡಿಸುತ್ತಿದ್ದರು. ಲೈಟಿಂಗ್ಗಾಗಿ ಅರ್ಥಿಂಗ್ ಗುಂಡಿ ಅಗೆಯಲಾಗುತಿತ್ತು. ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಗುಂಡಿ ಅಗೆಯುವಾಗ ಅಡಿಯಲ್ಲಿದ್ದ ಕೇಬಲ್ಗೆ ಡ್ರಿಲ್ಲಿಂಗ್ ಮಿಷನ್ ತಾಗಿದೆ.
ಇದನ್ನೂ ಓದಿ: ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ: ಮೆಟ್ರೋನಲ್ಲಿ ತಾಂತ್ರಿಕ ದೋಷಕ್ಕೆ ಸ್ಫೋಟಕ ಕಾರಣ ಬಯಲು
ಈ ವೇಳೆ ವಿದ್ಯುತ್ ಶಾಕ್ನಿಂದ ಗುರಪ್ಪ ಅಸ್ವಸ್ಥರಾಗಿದ್ದಾರೆ. ತಕ್ಷಣ ಸ್ಥಳಿಯರು ಸೇಂಟ್ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಗುರಪ್ಪ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಪ್ರವಹಿಸಿ ಯುವಕ ದುರ್ಮರಣ ಹೊಂದಿರುವಂತ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಕ್ಕುಂದ ಗ್ರಾಮದಲ್ಲಿ ನಡೆದಿದೆ. ಅಭಿಷೇಕ್ ಶೆಟ್ಟಿ(32) ಮೃತ ವ್ಯಕ್ತಿ. ಸದ್ಯ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ಬಾಗಿಲು ಲಾಕ್ ಆಗದೇ ಇದ್ದುದರ ಅಸಲಿ ಕಾರಣ ಬಯಲು
ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿ ಅಭಿಷೇಕ್, ಪತ್ರೊಡೆ ಎಲೆ ಕೀಳಲು ಮರವೇರಿದ್ದಾರೆ. ಈ ವೇಳೆ ಆಕಸ್ಮಿಕವಾಗಿ 11 ಕೆವಿ ವಿದ್ಯುತ್ ತಂತಿ ಸ್ಪರ್ಶಿಸಿ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವಿವಾಹಿತನಾಗಿದ್ದ ಅಭಿಷೇಕ್ ಶೆಟ್ಟಿಗೆ ತಂದೆ-ತಾಯಿ ಇರಲಿಲ್ಲ. ತನ್ನ ಚಿಕ್ಕಮನ ಮಗಳ ಮನೆಯಲ್ಲಿ ವಾಸವಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.