AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SCSP, TSP ಹಣಕ್ಕಾಗಿ ಹೆಚ್​.ಸಿ. ಮಹದೇವಪ್ಪ ರೆಬೆಲ್​: ಸಚಿವ ಸಂಪುಟ ಸಭೆಯಲ್ಲಿ ಹೈಡ್ರಾಮಾ

ಸಚಿವ ಸಂಪುಟ ಸಭೆಯಲ್ಲಿ ಡಾ. ಹೆಚ್.ಸಿ. ಮಹದೇವಪ್ಪ SCSP, TSP ಅನುದಾನ ಹಂಚಿಕೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಮಹದೇವಪ್ಪ-ಕೆ.ಜೆ.ಜಾರ್ಜ್ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಹಿಂದುಳಿದವರಿಗೆ ಸಿಗಬೇಕಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪದ ನಡುವೆ, ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಸಚಿವರೇ ಹೇಳಿರೋದು ಕುತೂಹಲ ಮೂಡಿಸಿದೆ.

SCSP, TSP ಹಣಕ್ಕಾಗಿ ಹೆಚ್​.ಸಿ. ಮಹದೇವಪ್ಪ ರೆಬೆಲ್​: ಸಚಿವ ಸಂಪುಟ ಸಭೆಯಲ್ಲಿ ಹೈಡ್ರಾಮಾ
ಸಚಿವ ಮಹದೇವಪ್ಪ
Pramod Shastri G
| Updated By: ಪ್ರಸನ್ನ ಹೆಗಡೆ|

Updated on: Oct 30, 2025 | 4:26 PM

Share

ಬೆಂಗಳೂರು, ಅಕ್ಟೋಬರ್​ 30: SCSP, TSP ಹಣ ನೀಡದ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ರೋಷಾವೇಶ ಪ್ರದರ್ಶಿಸಿದ್ದಾರೆ. ಎಸ್​ಸಿಎಸ್​ಪಿ, ಟಿಎಸ್​ಪಿಗೆ ಅನುದಾನ ಹಂಚಿಕೆ ಮಾಡದಿರುವುದು ಯಾಕೆ? ಏನು ಅಂದುಕೊಂಡಿದ್ದೀರಿ? SCSP, TSP ಹಣ ಬೇರೆ ಕಡೆ ಬಳಸುತ್ತಿದ್ದೀರಾ?ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಏರುಧ್ವನಿಯಲ್ಲಿಯೇ ಸಚಿವರು ಪ್ರಶ್ನಿಸಿದ್ದು, ಮಹದೇವಪ್ಪ ಅವರ ಆಕ್ರೋಶ ಕಂಡು ಸಂಪುಟ ಸಹೋದ್ಯೋಗಿಗಳು ಕಕ್ಕಾಬಿಕ್ಕಿ ಆದ ಪ್ರಸಂಗ ನಡೆದಿದೆ.

ಮಹದೇವಪ್ಪ-ಕೆ.ಜೆ.ಜಾರ್ಜ್ ನಡುವೆ ಮಾತಿನ ಚಕಮಕಿ

ಸಚಿವ ಸಂಪುಟ ಸಭೆ ವೇಳೆ ನೇರವಾಗಿ ಸಿಎಂಗೆ ಹೇಳದೆ ಸಂಪುಟ ಸಹೋದ್ಯೋಗಿಗಳ ಮೇಲೆ ಮಹದೇವಪ್ಪ ಅಸಮಾಧಾನ ಹೊರಹಾಕಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ SCSP, TSP ಅನುದಾನದ ಬಗ್ಗೆ ಚರ್ಚೆ ವೇಳೆ ಗಂಗಾಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಸಚಿವ ಕೆ.ಜೆ.ಜಾರ್ಜ್ ಮತ್ತು ಹೆಚ್.ಸಿ.ಮಹದೇವಪ್ಪ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ವೇಳೆ ನಾನು ಎದ್ದು ಹೊರಟೇ ಬಿಡುತ್ತೇನೆಂದು ಸಚಿವ ಮಹದೇವಪ್ಪ ಕೂಗಾಡಿದ್ದಾರೆ.

ಇದನ್ನೂ ಓದಿ: ಸಮರಕ್ಕೂ ಮುನ್ನವೇ ಕೈ ಮುಂದೆ ಶಸ್ತ್ರ ತ್ಯಾಗ: ಭದ್ರಕೋಟೆ ಮಂಡ್ಯದಲ್ಲೇ ಮಂಕಾಯ್ತಾ ಜೆಡಿಎಸ್?

ಎಸ್​ಸಿಎಸ್​ಪಿ ಹಾಗೂ ಟಿಎಸ್​ಪಿ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ರಾಜ್ಯ ಸಕರ್ಕರ ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಈ ಹಿಂದಿನಿಂದಲೂ ವಿಪಕ್ಷಗಳು ಮಾಡುತ್ತಲೇ ಬಂದಿದ್ದವು. ಈ ವಿಚಾರ ವಿಧಾನ ಪರಿಷತ್​ನಲ್ಲೂ ಭಾರಿ ಚರ್ಚೆಗೆ ಕಾರಣವಾಗಿತ್ತು. ಹಣವನ್ನ ಬೆರೆ ಯೋಜನೆಗಳಿಗೆ ಬಳಸಿದ ಪರಿಣಾಮ ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಆಡ್ಡಿಯಾಗಿದೆ ಎಂದು ಸದಸ್ಯರಾದ ಹೇಮಲತಾ ನಾಯಕ್ ಹಾಗೂ ಶರವಣ ಆರೋಪಿಸಿದ್ದರು. ಆದರೆ, ಆರೋಪ ನಿರಾಕರಿಸಿದ್ದ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಗ್ಯಾರಂಟಿ ಯೋಜನೆಗಳಿಗೆ ಈ ಹಣವನ್ನು ಬಳಸಿಲ್ಲ. ಎಸ್​ಸಿ ಎಸ್​ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲು ಆಗುವುದಿಲ್ಲ. ಮೀಸಲಿಟ್ಟ ಹಣವನ್ನು ಆ ಸಮುದಾಯದ ಜನರಿಗೆ ಮಾತ್ರ ಬಳಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಅಂದು ಬೇರೆ ಯೋಜನೆಗಳಿಗೆ SCSP, TSP ಹಣ ಬಳಕೆಯಾಗಿಲ್ಲ ಎಂದು ಸದನದಲ್ಲಿ ಉತ್ತರಿಸಿದ್ದ ಸಚಿವರೇ ಇಂದು ಆ ಹಣದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗರಂ ಆಗಿದ್ದಾರೆ. ಏನು ಅಂದುಕೊಂಡಿದ್ದೀರಿ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿರೋದು ಭಾರೀ ಕುತೂಹಲ ಮೂಡಿಸಿದೆ. ಜೊತೆಗೆ ವಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಇಂಬು ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.